Monday, March 4, 2013

ಬಿಜೆಪಿಯ ಲಾಭ ದೇಶದ ಪಾಲಿನ ನಷ್ಟವಾಗದಿರಲಿಬಿಜೆಪಿಯಲ್ಲಿರುವ ಹಳೆಯ ಉಕ್ಕಿಗೆ ತುಕ್ಕು ಹಿಡಿದಿದೆ. ಆದುದರಿಂದಲೇ ಇರಬೇಕು, ಇದೀಗ ಹೊಸ ಉಕ್ಕಿನ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ಸರ್ವರೀತಿಯಲ್ಲೂ ಸನ್ನದ್ಧವಾಗಿದೆ. ಒಂದು ಕಾಲದಲ್ಲಿ, ಬಿಜೆಪಿಯ ಉಕ್ಕಿನ ಮನುಷ್ಯ ಎಂದು ಗುರುತಿಸಿಕೊಂಡಿರುವ ಎಲ್. ಕೆ. ಅಡ್ವಾಣಿಯ ಸ್ಥಿತಿ ಬಿಜೆಪಿಯಲ್ಲಿ ಚಿಂತಾಜನಕವಾಗಿದೆ. ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನನ್ನು ಸೇನಾಪತಿ ಹುದ್ದೆಯಿಂದ ಕೈ ಬಿಟ್ಟು ದುಶ್ಶಾಸನನಿಗೆ ಸೇನಾಧಿಪತ್ಯ ವಹಿಸಿಕೊಟ್ಟಂತಾಗಿದೆ. ಭೀಷ್ಮ ಯುದ್ಧ ಘೋಷಣೆಗೆ ಮೊದಲೇ ಶರಶಯ್ಯೆ ಸೇರಿದ್ದಾರೆ. ಅವರ ಕಣ್ಮುಂದೆಯೇ ದುಶ್ಶಾಸನನನ್ನು ಹಾಡಿ ಹೊಗಳಲಾಗುತ್ತಿದೆ. ಈ ಮೊದಲು ಮೋದಿಯನ್ನು ಶತಾಯಗತಾಯ ವಿರೋಧಿಸಿದ್ದ ಆರೆಸ್ಸೆಸ್ ಕೂಡ ಅನಿವಾರ್ಯವಾಗಿ ತನ್ನ ಮನಸ್ಸನ್ನು ಬದಲಿಸಿದೆ.
ಮೋದಿ ಪ್ರಧಾನಿಯಾಗುವುದು ಆರೆಸ್ಸೆಸ್‌ಗೆ ಇಷ್ಟದ ಸಂಗತಿಯಾಗಿರಲಿಲ್ಲ. ಆದರೆ ಒಂದೆಡೆ ಬಿಜೆಪಿಯಲ್ಲಿ ಸ್ಪಷ್ಟ ನಾಯಕರಿಲ್ಲ. ಮಗದೊಂದೆಡೆ ಬಿಜೆಪಿಯೊಳಗೆ ಮೋದಿಯ ಜನಪ್ರಿಯತೆ ಹೆಚ್ಚಿದೆ. ಅದರ ವಿರುದ್ಧ ಈಜಲಾಗದೆ ಆರೆಸ್ಸೆಸ್ ಕಟ್ಟ ಕಡೆಯ ಹಂತದಲ್ಲಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲು ಮುಂದೆ ಬಂದಿದೆ.
ಮೋದಿಯಂತೂ ಪ್ರಧಾನಿಯಾಗಿಯೇ ಬಿಟ್ಟ ಸಂಭ್ರಮದಲ್ಲಿದ್ದಾರೆ. ಅದಕ್ಕಾಗಿ ಅವರು ರಾಷ್ಟ್ರಪತಿಗೆ ತನ್ನ ಮೊದಲ ಓಲೈಕೆಯನ್ನೂ ರವಾನಿಸಿದ್ದಾರೆ. ಇಂದು ಪ್ರಣವ್ ಮುಖರ್ಜಿ ಈ ದೇಶದ ಪ್ರಧಾನಿಯಾಗಿದ್ದರೆ, ಇಂತಹ ಸ್ಥಿತಿ ಬರುತ್ತಿರಲಿಲ್ಲ ಎನ್ನುವ ಮೂಲಕ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಕೆಡಹುವ ದೂರಗಾಮಿ ಆಲೋಚನೆ ಅವರದು. ತನ್ನ ಎದುರಾಳಿ ರಾಹುಲ್‌ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಅನರ್ಹ ಎನ್ನುವುದರ ಜೊತೆಗೆ, ರಾಷ್ಟ್ರಪತಿಯಾಗಿರುವ ಪ್ರಣವ್ ಮುಖರ್ಜಿಯನ್ನು ಓಲೈಸುವುದಕ್ಕೆ ಈಗಲೇ ಆರಂಭಿಸಿದ್ದಾರೆ ನರೇಂದ್ರ ಮೋದಿ. ಇದಕ್ಕೆ ಕಾರಣಗಳಿಲ್ಲದಿಲ್ಲ. ಗುಜರಾತ್ ಹತ್ಯಾಕಾಂಡದ ಉರುಳು ಯಾವತ್ತಾದರೂ ಮೋದಿಯನ್ನು ಸುತ್ತಿಕೊಳ್ಳದೇ ಇರದು. ಸಣ್ಣ ಉರುಳೂ ಅವರ ಪ್ರಧಾನಿಯ ಕನಸನ್ನು ಗಲ್ಲಿಗೇರಿಸಬಹುದು. ನಾಳೆ ಯಾವುದೇ ಕಾನೂನು ಅಡಚಣೆಯನ್ನು ಮುಂದಿಟ್ಟು ರಾಷ್ಟ್ರಪತಿ ತಕರಾರು ಎತ್ತಿದರೆ, ಬಿಜೆಪಿ ತಕ್ಷಣ ಮೋದಿಯನ್ನು ಬದಲಿಸಿ, ಸುಷ್ಮಾ ಅಥವಾ ಜೇಟ್ಲಿಯನ್ನು ಪ್ರಧಾನಿಯಾಗಿಸುವುದರಲ್ಲಿ ಅನುಮಾನವಿಲ್ಲ. ಮೋದಿಗೆ ಈ ಭಯವೂ ಇದೆ. ಚುನಾವಣೆಯನ್ನು ಗೆದ್ದರೆ ಸಾಕಾಗುವುದಿಲ್ಲ.
ರಾಷ್ಟ್ರಪತಿಯನ್ನು ಓಲೈಸುವುದೂ ಈ ಕಾರಣಕ್ಕೆ ಅತ್ಯಗತ್ಯವಾಗಿದೆ. ಮೇಲ್ನೋಟಕ್ಕೆ ಅಪ್ಪಟ ಕಾಂಗ್ರೆಸಿಗರಾಗಿ ಕಾಣಿಸಿಕೊಂಡರೂ, ಆಳದಲ್ಲಿ ಬ್ರಾಹ್ಮಣ್ಯವನ್ನು ಮೈಗೂಡಿಸಿಕೊಂಡ ಸಜ್ಜನ ಮನುಷ್ಯ ಪ್ರಣವ್ ಮುಖರ್ಜಿ, ತಿಂಗಳಿಗೊಮ್ಮೆ ತಿರುಪತಿಗೆ ಭೇಟಿ ಕೊಡದೇ ಇದ್ದಲ್ಲಿ ಅವರಿಗೆ ಸಮಾಧಾನವಿಲ್ಲ. ಇತ್ತೀಚೆಗೆ ಅಫ್ಝಲ್ ಗುರು, ಕಸಬ್‌ರನ್ನು ಅತ್ಯಾತುರದಿಂದ ಗಲ್ಲಿಗೇರಿಸುವಲ್ಲಿ ಪ್ರಣವ್ ಪಾತ್ರ ಬಲು ದೊಡ್ಡದು. ಈ ಕಾರಣದಿಂದ, ಮೋದಿಯಂತೆಯೇ ಪ್ರಣವ್‌ಗೂ ಒಂದು ಇಮೇಜ್ ಬಂದಿದೆ. ಮೋದಿಯನ್ನು ಪ್ರಧಾನಿಯಾಗಿಯೂ, ಪ್ರಣವ್‌ರನ್ನು ರಾಷ್ಟ್ರಾಧ್ಯಕ್ಷರಾಗಿಯೂ ಕಲ್ಪಿಸಿಕೊಳ್ಳುವುದೇ ಭಯಾನಕ. ಇರಲಿ. ಇದೀಗ ಮೋದಿ ಪ್ರಣವ್ ಮೂಲಕ ತನ್ನ ಭವಿಷ್ಯದ ಹಾದಿ ಯನ್ನು ಹುಡುಕುತ್ತಿದ್ದಾರೆ. ಆದುದರಿಂದಲೇ, ಈ ದೇಶದ ಪ್ರಧಾನಿಯಾಗಿ ಕಾಂಗ್ರೆಸ್ ಪ್ರಣವ್ ಮುಖರ್ಜಿಯವರನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಮೋದಿ ಘೋಷಿ ಸಿದ್ದಾರೆ. ಇದು ಪರೋಕ್ಷವಾಗಿ ಕಾಂಗ್ರೆಸ್‌ಗೂ ಇರಸು ಮುರಸು ಉಂಟು ಮಾಡುವ ಹೇಳಿಕೆ. ಈ ಮೂಲಕ ರಾಷ್ಟ್ರಾಧ್ಯಕ್ಷ ಮತ್ತು ಸೋನಿಯಾ ನಡುವೆ ವಿರಸ ಕಂಡು ಬಂದರೆ, ಅದರ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವುದು ಮೋದಿಯ ದೂರದ ಉದ್ದೇಶ.
ಆದರೆ ಭವಿಷ್ಯದ ಪ್ರಧಾನಿಯಾಗಬೇಕಾದ ಮೋದಿಗೆ ವಿಶ್ವದ ಬಹುಮುಖ್ಯ ರಾಷ್ಟ್ರವೊಂದು ವೀಸಾ ನಿರಾಕರಿಸುತ್ತದೆ. ವಿಶ್ವವಿದ್ಯಾನಿಲಯವೊಂದು ಮೋದಿಯಿಂದ ಭಾಷಣ ಮಾಡಿಸಲು ಹಿಂಜರಿಯುತ್ತದೆ. ವಿಶ್ವದಲ್ಲಿ ಇಂತಹ ಇಮೇಜನ್ನು ಹೊಂದಿದ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾಗುವುದರಿಂದ ನಷ್ಟವಲ್ಲದೆ, ಯಾವ ಲಾಭವೂ ಇಲ್ಲ. ಗುಹೆಯೊಳಗೆ ಅಮಾಯಕ ಮೊಲದ ಮರಿಗಳನ್ನು ಹಿಗ್ಗಾಮುಗ್ಗ ಕೊಂದು ಸಿಂಹವೆನಿಸಿಕೊಂಡಹಾಗೆ ಅಲ್ಲ, ದೇಶ ನಡೆಸುವುದು. ಅದಕ್ಕೆ ಮುತ್ಸದ್ದಿತನ ಬೇಕು. ಕಾರ್ಪೊರೇಟ್ ವಲಯವನ್ನು ಓಲೈಕೆ ಮಾಡುವುದರಿಂದ ದೇಶ ಉದ್ಧಾರವಾಗುವುದಿಲ್ಲ. ಮುಂದಿನ ದಿನಗಳಲ್ಲಿ ದೇಶ ಭಾರೀ ಆರ್ಥಿಕ ಮುಗ್ಗಟ್ಟನ್ನು ಎದುರಿಸಲಿದೆ. ಇಂತಹ ಸಂದರ್ಭದಲ್ಲಿ ದೇಶವನ್ನು ಶಾಂತಿಯಿಂದ, ಸೌಹಾರ್ದದಿಂದ ಮುಂದೆ ಕೊಂಡೊಯ್ಯಬಲ್ಲ ನಾಯಕನೊಬ್ಬನ ಅಗತ್ಯವಿದೆ. ವಿಶ್ವ ಅಸಹ್ಯದಿಂದ, ಅನುಮಾನದಿಂದ ನೋಡುವ ವ್ಯಕ್ತಿ ನಮ್ಮ ಪ್ರಧಾನಿಯಾದರೆ, ವಿದೇಶಾಂಗ ವ್ಯವಹಾರದ ಬಹುದೊಡ್ಡ ಸೋಲಾಗಿ ಬಿಡುತ್ತದೆ. ಮೋದಿಯ ಇಮೇಜಿನಿಂದ ಬಿಜೆಪಿಗೆ ಲಾಭವಾಗಬಹುದೋ ಏನೋ. ಅದು ಆದರೆ ಈ ದೇಶಕ್ಕೆ ಅವರಿಂದ ಎಳ್ಳಷ್ಟು ಲಾಭವಿಲ್ಲ. ಅವರ ಹೆಗಲಲ್ಲಿರುವ ಸ್ವಾರ್ಥದ ಜೋಳಿಗೆಗೆ ಭಾರತ ಇನ್ನೆಷ್ಟು ನಷ್ಟಗಳನ್ನು ತುಂಬಿಕೊಡಬೇಕೋ ಕಾಲವೇ ಹೇಳಬೇಕು.

No comments:

Post a Comment