Tuesday, March 5, 2013

ದೇಶದ ಏಕತೆಗೆ ಮೋದಿ ಅಪಾಯಕಾರಿ;ಮಣಿಶಂಕರ್ ಅಯ್ಯರ್ ವಾಗ್ದಾಳಿ


 ದೇಶದ ಏಕತೆಗೆ ಮೋದಿ ಅಪಾಯಕಾರಿ;ಮಣಿಶಂಕರ್ ಅಯ್ಯರ್ ವಾಗ್ದಾಳಿ

ಹೊಸದಿಲ್ಲಿ: ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಲು ಶತಾಯಗತಾಯ ಯತ್ನಿಸುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿಯನ್ನು ಜರ್ಮನಿಯ ನಾಝಿ ಸರ್ವಾಧಿಕಾರಿ ಹಿಟ್ಲರ್‌ಗೆ ಹೋಲಿಸಿರುವ ಅವರು, ಗುಜರಾತ್ ಮುಖ್ಯಮಂತ್ರಿಯ ಒಡೆದು ಆಳುವ ನೀತಿಯು, ಭಾರತದ ಸಂಯುಕ್ತ ಸಂಸ್ಕೃತಿಗೆ ಮಾರಕವೆಂದು ಅವರು ಪ್ರತಿಪಾದಿಸಿದರು.
ಹೊಸದಿಲ್ಲಿಯ ಇಂಡಿಯಾ ಇಸ್ಲಾಮಿಕ್ ಸೆಂಟರ್‌ನಲ್ಲಿ ಬರಹಗಾರ ಡಾ. ಜಾವೇದ್ ಜಾಮಿಲ್ ಅವರ ‘ಮುಸ್ಲಿಮ್ಸ್ ಮೋಸ್ಟ್ ಸಿವಿಲೈಸ್ಡ್, ನಾಟ್ ಯೆಟ್ ಇನಫ್’ ಎಂಬ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅಯ್ಯರ್ ಮಾತನಾಡುತ್ತಿದ್ದರು. ‘‘1930ರ ದಶಕದಲ್ಲಿ ಹಿಟ್ಲರ್ ಜರ್ಮನಿಯಲ್ಲಿ ಜಾರಿಗೊಳಿಸಿದ ನೀತಿಗಳನ್ನೇ ಮೋದಿ ಅನುಸರಿಸುತ್ತಿದ್ದಾರೆ.ಅವರೊಂದು ಹಾವಿದ್ದಂತೆ ಹಾಗೂ ದೇಶದ ಏಕತೆ ಹಾಗೂ ಸ್ಥಿರತೆಗೆ ಅವರು ಅಪಾಯಕಾರಿಯಾಗಿದ್ದಾರೆ’’ ಎಂದು ಟೀಕಿಸಿದರು.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ. ರಹ್ಮಾನ್ ಖಾನ್ ಕೃತಿಯನ್ನು ಬಿಡುಗಡೆಗೊಳಿಸಿದರು. ಕಾಂಗ್ರೆಸ್ ನಾಯಕ ರಶೀದ್ ಮಸೂದ್, ಜಮಿಯತ್ ನಾಯಕ ವೌಲನಾ ಮೆಹಮೂದ್ ಮದ್ನಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಸ್ಲಾಮಿಕ್ ಕೇಂದ್ರದ ವರಿಷ್ಠ ಸಿರಾಜುದ್ದೀನ್ ಖುರೇಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮೋದಿಯ ಪರವಾಗಿ ಮತಚಲಾಯಿಸಿದರೆಂಬ ಬಿಜೆಪಿಯ ವಾದವನ್ನು ಆಯ್ಯರ್ ತಿರಸ್ಕರಿಸಿದರು.
ಸಾವಿರಾರು ಮಂದಿಯ ಮಾರಣಹೋಮಕ್ಕೆ ಕಾರಣವಾದ 2002ರ ಗುಜರಾತ್ ಹಿಂಸಾಚಾರದ ಹೊಣೆಯಿಂದ ಮೋದಿಗೆ ತಪ್ಪಿಸಿಕೊಳ್ಳಲು ಎಂದೂ ಸಾಧ್ಯವಿಲ್ಲವೆಂದು ಅಯ್ಯರ್ ಹೇಳಿದರು. ಬಿಜೆಪಿಯ ಕೋಮುವಾದಿ ಹಾಗೂ ವಿಭಜನವಾದಿ ನೀತಿಗಳನ್ನು ಭಾರತದ ಬಹುತೇಕ ಜನರು ತಿರಸ್ಕರಿಸುತ್ತಿದ್ದಾರೆಂದು ಅವರು ಅಭಿಪ್ರಾಯಿಸಿದರು. ಭಾರತದ ಜಾತ್ಯತೀತ ನೀತಿಯೇ ನಿಜವಾದ ಶಕ್ತಿಯೆಂದು ಮಾಜಿ ಸಚಿವರಾದ ಅಯ್ಯರ್ ಪ್ರತಿಪಾದಿಸಿದರು.
ತನ್ನ ರಾಜ್ಯವು ಪ್ರಗತಿಯಲ್ಲಿ 8 ಶೇಕಡ ಬೆಳವಣಿಗೆ ಸಾಧಿಸಿದೆಯೆಂಬ ಮೋದಿಯ ವಾದವನ್ನು ಅಯ್ಯರ್ ಪ್ರಶ್ನಿಸಿದರು.ಉನ್ನತ ಮಟ್ಟದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿರುವುದು ಗುಜರಾತ್ ಒಂದೇ ಅಲ್ಲ. ತಮಿಳುನಾಡು,ಮಹಾರಾಷ್ಟ್ರ, ಬಿಹಾರ ಸೇರಿದಂತೆ ಹಲವು ರಾಜ್ಯಗಳು ಉನ್ನತ ಮಟ್ಟದ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿವೆಯೆಂದು ಅವರು ತಿಳಿಸಿದರು. ಅಂತಾರಾಷ್ಟ್ರೀಯ ಆರ್ಥಿಕ ಹಿಂಜರಿಕೆಯ ಪರಿಸ್ಥಿತಿಯ ಹೊರತಾಗಿಯೂ 11ನೆ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ, ಭಾರತವು 8 ಶೇಕಡ ಬೆಳವಣಿಗೆಯನ್ನು ಸಾಧಿಸಿತ್ತೆಂದು ಅಯ್ಯರ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಕೆ. ರಹ್ಮಾನ್ ಖಾನ್ ಮುಸ್ಲಿಮರ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಬಗ್ಗೆ ಗಮನಸೆಳೆದರು.

No comments:

Post a Comment