Saturday, March 9, 2013

ಶಂಕಿತ ಕೇಸರಿ ಉಗ್ರ ಮಫತ್‌ಲಾಲ್ ಬಂಧನಹೊಸದಿಲ್ಲಿ: 2007ರಲ್ಲಿ ನಡೆದ ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಮಫತ್‌ಲಾಲ್‌ನನ್ನು ಗುಜರಾತ್‌ನ ವಡೋದರಾದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವು ಗುರುವಾರ ಬಂಧಿಸಿದೆ. ಈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಈ ವಾರ ಎನ್‌ಐಎ ಬಂಧಿಸಿದ ಎರಡನೆಯ ಆರೋಪಿ ಈತನಾಗಿದ್ದಾನೆ.ಮಫತ್ ಲಾಲ್ ಯಾನೆ ಮೆಹುಲ್‌ನನ್ನು  ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. 2007ರ ಅಕ್ಟೋಬರ್‌ನಲ್ಲಿ ಅಜ್ಮೀರ್  ದರ್ಗಾದ ಆವರಣದಲ್ಲಿ ನಡೆದ ಸ್ಫೋಟದ ಸಂಚಿನಲ್ಲಿ ಮಫತ್‌ಲಾಲ್ ನಿರ್ಣಾಯಕ ಪಾತ್ರ ವಹಿಸಿದ್ದಾನೆಂದು ಎನ್‌ಐಎ ಹೇಳಿದೆ. ಈ ಸ್ಫೋಟ ಘಟನೆಯದಲ್ಲಿ ಮೂವರು ಮೃತಪಟ್ಟು, ೨೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 
ಅಜ್ಮೀರ್  ದರ್ಗಾ  ಸ್ಫೋಟ ಘಟನೆಗೆ ಸಂಬಂಧಿಸಿ ಎನ್‌ಐಎ ಬುಧವಾರ ಭವೇಶ್ ಪಟೇಲ್‌ನನ್ನು ಬಂಧಿಸಿತ್ತು ಹಾಗೂ ಆತನನ್ನು  ಜೈಪುರದಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಹಾಜರುಪಡಿಸಿತ್ತು. ಪಟೇಲ್‌ಗೆ ನ್ಯಾಯಾಲಯವು ೧೫ ದಿನಗಳ  ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.
ಈ ಇಬ್ಬರೂ ಆರೋಪಿಗಳನ್ನು ಅಜ್ಮೀರ್  ಸ್ಫೋಟ ಸಂಚು ಹಾಗೂ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೊಳಪಡಿಸಲಾಗುವುದೆಂದು ಎನ್‌ಐಎ ಮೂಲಗಳು ಹೇಳಿವೆ.
ಸಂಜಯ್ ಜೋಶಿ ಕೊಲೆ, ಸಂಜೋತಾ ರೈಲು ಸ್ಫೋಟ, ಮಾಲೆಗಾಂವ್ ಹಾಗೂ ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿ ಎನ್‌ಐಎ ಈತನಕ ಕನಿಷ್ಠ ೯ ಮಂದಿಯನ್ನು ಬಂಧಿಸಿದೆ.
ಈ ಇಬ್ಬರು ಆರೋಪಿಗಳ ಬಂಧನದೊಂದಿಗೆ ತಲೆಮರೆಸಿಕೊಂಡಿರುವ ಇನ್ನಷ್ಟು ಕೇಸರಿ ಉಗ್ರರು ಸೆರೆಸಿಕ್ಕುವ ಸಾಧ್ಯತೆಗಳು ದಟ್ಟವಾಗಿವೆ.

No comments:

Post a Comment