Thursday, March 21, 2013

ಪಾಸ್‌ಪೋರ್ಟ್ ಕಚೇರಿಯಲ್ಲಿ ಇಲ್ಲದ ನಿಯಮ ಹೇರುತ್ತಿರುವ ಪೊಲೀಸರು: ಖಾದರ್ ಆರೋಪ ಮಾರ್ಚ್ -21-2013

ಮಂಗಳೂರು,: ಪಾಸ್‌ಪೋರ್ಟ್ ಅರ್ಜಿದಾರರು ವಾಸದ ಮನೆ ಎದುರು ನಿಂತು ಪೊಟೊ ತೆಗೆಯಬೇಕು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಸಹಿ ಹಾಕಿದ ಸಾಕ್ಷಿದಾರರೇ ಪೊಲೀಸ್ ವಿಚಾರಣೆಯ ಸಂದರ್ಭದಲ್ಲೂ ಠಾಣೆಗೆ ಹಾಜರಾಗಬೇಕು ಎಂದು ಪೊಲೀಸರು ಒತ್ತಾಯಿ ಸುತ್ತಿದ್ದಾರೆ. ಆದರೆ ಇಂತಹ ಯಾವುದೇ ನಿಯಮ ನಿರ್ದೇಶನ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳು ನೀಡಿಲ್ಲ. ಪೊಲೀಸರೇ ಇಂತಹ ನಿಯಮ ರೂಪಿಸಿ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದಾರೆೆ ಎಂದು ಶಾಸಕ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದರು.
ಪೊಲೀಸರೇ ಅರ್ಜಿದಾರರ ಮನೆಗೆ ಬಂದು ವಿಚಾರಣೆ ನಡೆಸಬೇಕಿರುವುದು ನಿಯಮ. ಆದರೆ ಅವರು ಸರಿಯಾಗಿ ಕೆಲಸ ಮಾಡದೆ ಅರ್ಜಿದಾರರಿಗೆ ತೊಂದರೆ ಕೊಡುತ್ತಿದ್ದಾರೆ. ಪಾಸ್‌ಪೋರ್ಟ್ ಅರ್ಜಿದಾರರಿಗೆ ಅನಗತ್ಯ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಖಾದರ್ ಪೊಲೀಸ್ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.
ವಿದ್ಯುತ್ ಅಭಾವ: ದೂರದೃಷ್ಟಿಯ ಕೊರತೆ:
ಬಿಜೆಪಿ ಸರಕಾರದ ದೂರದೃಷ್ಟಿಯ ಕೊರತೆಯಿಂದಾಗಿ ಇಂದು ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಅಭಾವ ಗೊತ್ತಿದ್ದೂ ಮೊದಲೇ ಖರೀದಿಸುವುದು ಬಿಟ್ಟು ಈಗ ತಡಕಾಡುತ್ತಿದ್ದಾರೆ. ವಿದ್ಯುತ್ ಉತ್ಪಾದಕರು ಈಗ ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದಾರೆ. ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿಗಳು, ಉದ್ಯಮಿಗಳು ಸೇರಿದಂತೆ ಜನಸಾಮಾನ್ಯರೂ ಕೂಡ ಸಂಕಟ ಪಡುವಂತಾಗಿದೆ. ಕಾಂಗ್ರೆಸ್ ಸರಕಾರ ಇರುವಾಗ ಇಂತಹ ಸಮಸ್ಯೆಗಳು ಉದ್ಭವಿಸು ತ್ತಿರಲಿಲ್ಲ. ಕಾಂಗ್ರೆಸ್ ಸರಕಾರ ಮಾಡಿಕೊಟ್ಟ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ವಹಣೆಯೂ ಬಿಜೆಪಿ ಆಡಳಿತಗಾರರಿಂದ ಸಾಧ್ಯವಾಗಿಲ್ಲ ಎಂದು ಖಾದರ್ ಆರೋಪಿಸಿದರು.
ಅಧಿಕಾರ ಇದ್ದಾಗ ಮಾಡದವರು...: ನಾಲ್ಕು ವರ್ಷ ಎಂಟು ತಿಂಗಳು ಅಧಿಕಾರ ಇದ್ದಾಗ ಜನರಿಗಾಗಿ ಏನು ಮಾಡದೆ ಇದ್ದವರು, ಚುನಾವಣೆ ಘೋಷಣೆಯಾಗುವ ಸಮಯದಲ್ಲಿ ತರಾತುರಿಯಲ್ಲಿ ಯೋಜನೆಗಳನು ಪ್ರಕಟಿಸುತ್ತಿದ್ದಾರೆ. ಅನುಷ್ಠಾನ ಗೊಳಿಸುವ ಅಧಿಕಾರ ಇಲ್ಲದಿರುವಾಗ ಯೋಜನೆ ಪ್ರಕಟಿಸಿ ಏನು ಪ್ರಯೋಜನ? ಯೋಜನೆ ರೂಪಿಸುವುದು ಮುಂದೆ ಬರುವ ಸರಕಾರದ ಹೊಣೆಗಾರಿಕೆ, ಅಧಿಕಾರ ಬಿಡುತ್ತಿರುವವರು ಹೊಸ ಸರಕಾರದ ಮೇಲಿನ ಹೊರೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರಷ್ಟೇ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸದಸ್ಯ ಎನ್.ಎಸ್.ಕರೀಂ, ತಾಪಂ ಸದಸ್ಯರಾದ ಮುಸ್ತಫಾ, ಕ್ಲೆಡಾ ಕುವೆಲ್ಲೊ, ಎಪಿಎಂಸಿ ಸದಸ್ಯ ಸಂತೋಷಕುಮಾರ್ ಶೆಟ್ಟಿ, ಡಿಸಿಸಿ ಕಾರ್ಯದರ್ಶಿ ಟಿ.ಕೆ.ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
ಕೃಪೆ ವಾ.ಭಾರತಿ 

No comments:

Post a Comment