Saturday, March 2, 2013

ಈಶಾನ್ಯ ರಾಜ್ಯಗಳ ನಾಡಿಮಿಡಿತಈಶಾನ್ಯ ಭಾರತದ ಮೂರು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷಗಳೇ ಭಾರೀ ಬಹುಮತದಿಂದ ಜಯಶಾಲಿಯಾಗಿದ್ದು, ತ್ರಿಪುರದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ, ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷ, ನಾಗಾಲ್ಯಾಂಡ್‌ನಲ್ಲಿ ಪ್ರಾದೇಶಿಕ ಪಕ್ಷವಾದ ನಾಗ ಪೀಪಲ್ಸ್ ಫ್ರಂಟ್ ಮತ್ತೆ ಅಧಿಕಾರವನ್ನು ವಶಪಡಿಸಿಕೊಂಡಿವೆ. ಇದೇ ರೀತಿ ಅರು  ರಾಜ್ಯಗಳ ಎಂಟು ವಿಧಾನಸಭೆಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರು, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ತಲಾ ಒಂದೊಂದು ಸ್ಥಾನಗಳನ್ನು ಗೆದ್ದುಕೊಂಡಿವೆ. ಉತ್ತರಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಶಿರೋಮಣಿ ಅಕಾಲಿದಳಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿವೆ.
ತ್ರಿಪುರದಲ್ಲಿ ಸತತ ಐದನೆ ಬಾರಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ನೇತೃತ್ವದ ಎಡರಂಗ ಜಯಭೇರಿ ಬಾರಿಸಿವೆ. ವಿಧಾನಸಭೆಯ ಒಟ್ಟು 60 ಸ್ಥಾನಗಳ ಪೈಕಿ 49 ಸ್ಥಾನಗಳನ್ನು ಸಿಪಿಎಂ ಗೆದ್ದುಕೊಂಡಿದೆ. ಎಡರಂಗದ ಪಾಲುದಾರ ಪಕ್ಷವಾದ ಸಿಪಿಐ  ಒಂದು ಸ್ಥಾನವನ್ನು ಗಳಿಸಿದೆ. ಉಳಿದ ಹತ್ತು ಸ್ಥಾನಗಳನ್ನು ಪಡೆದ ಕಾಂಗ್ರೆಸ್ ತೀವ್ರ ಮುಖಭಂಗವನ್ನು ಅನುಭವಿಸಿದೆ. ತ್ರಿಪುರದಲ್ಲಿ 1978ರ ನಂತರ ಸಿಪಿಎಂ ಕಂಡ ಅತ್ಯಂತ ದೊಡ್ಡ ಗೆಲುವು ಇದಾಗಿದೆ.
ತ್ರಿಪುರ ಪುಟ್ಟ ರಾಜ್ಯವಾದರೂ ಅಲ್ಲಿ ಉಗ್ರಗಾಮಿ ಬಂಡು ಕೋರರ ಚಟುವಟಿಕೆಗಳಿಂದಾಗಿ ಜನಪರವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರು ವುದು ಅಷ್ಟು ಸುಲಭಸಾಧ್ಯವಲ್ಲ. ಈ ನಿಟ್ಟಿನಲ್ಲಿ ಸಿಪಿಎಂ ಸಾಧನೆ ಗಮನಾರ್ಹವಾಗಿದೆ.
ಕರ್ನಾಟಕದಂತಹ ರಾಜ್ಯಗಳಲ್ಲಿ ನಡೆಯುವಂತೆ ತ್ರಿಪುರದಂತಹ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಹಣದ ಹೊಳೆ ಹರಿಯುವುದಿಲ್ಲ. ಪ್ರಾಮಾಣಿಕ ಪರಿಶುದ್ಧ ಆಡಳಿತಗಾರರನ್ನು ಅಲ್ಲಿನ ಜನ ಇಷ್ಟಪಟ್ಟು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಕೋಮುವಾದಿ, ಜಾತಿವಾದಿ ರಾಜಕಾರಣಕ್ಕೆ ಅಲ್ಲಿ ಜಾಗವಿಲ್ಲ. ಅಲ್ಲಿ ಅಧಿಕಾರಕ್ಕೆ ಬರುವವರು ಪರಿಶುದ್ಧವಾದ ಹಿನ್ನೆಲೆ ಹೊಂದಿದವರು ಮಾತ್ರ.
ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಒಬ್ಬ ಪಾಲಿಕೆ ಸದಸ್ಯ ಒಮ್ಮೆ ಗೆದ್ದು ಬಂದರೆ ಹತ್ತಾರು ಕೋಟಿ ರೂ. ಆಸ್ತಿ ಮಾಡುತ್ತಾನೆ. ಆದರೆ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಸರಳ ಸಜ್ಜನಿಕೆಗೆ ಹೆಸರಾಗಿದ್ದಾರೆ. ಇಡೀ ದೇಶದಲ್ಲಿ ಸ್ವಂತಕ್ಕೆ ಒಂದು ಮನೆಯನ್ನು ಹೊಂದಿರದ ಸ್ವಂತ ವಾಹನವನ್ನು ಹೊಂದಿರದ ಕೇವಲ 10 ಸಾವಿರದ 8 ನೂರು ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಮಾಣಿಕ್ ಸರ್ಕಾರ್ ಮುಖ್ಯಮಂತ್ರಿ ಹುದ್ದೆಯಿಂದ ಬರುವ 12,500 ರೂ. ಸಂಬಳ, ಭತ್ತೆ ಎಲ್ಲವನ್ನು ಸಿಪಿಎಂ ಪಕ್ಷಕ್ಕೆ ನೀಡಿ, ಪಕ್ಷ ತನ್ನ ವೆಚ್ಚಕ್ಕೆ ನೀಡುವ 5 ಸಾವಿರ ರೂ. ಗೌರವಧನದಲ್ಲಿ ಮಾತ್ರ ತನ್ನ ಜೀವನ ನಡೆಸುತ್ತಾರೆ. ಇಂತಹ ಸರಳತೆ ಮತ್ತು ಪ್ರಾಮಾಣಿಕತೆಯ ಜೊತೆಗೆ ಜನಪರ ನಿಲುವು ಎಡರಂಗದ ಗೆಲುವಿಗೆ ಸೋಪಾನವಾಗಿದೆ.
ತ್ರಿಪುರಕ್ಕಿಂತ ಪುಟ್ಟ ರಾಜ್ಯವಾದ ಮೇಘಾಲಯ ಮತ್ತೆ ಕಾಂಗ್ರೆಸ್ ವಶವಾಗಿದೆ. ವಿಧಾನಸಭೆಯ 29 ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಪಕ್ಷ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಆದರೂ ಬಹುಮತಕ್ಕೆ 2 ಸ್ಥಾನಗಳ ಕೊರತೆಯಿದೆ. ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 29 ಸ್ಥಾನಗಳನ್ನು ಗೆದ್ದು ಅಲ್ಲಿ ಪ್ರಾಬಲ್ಯ ಮೆರೆದಿದೆ.
ನಾಗಲ್ಯಾಂಡ್ ವಿಧಾನಸಭೆಯ ಫಲಿತಾಂಶ ವಿಭಿನ್ನವಾಗಿದೆ. ತ್ರಿಪುರ ಮತ್ತು ಮೇಘಾಲಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಗೆಲುವು ಸಾಧಿಸಿದ್ದರೆ ನಾಗಾಲ್ಯಾಂಡ್‌ನಲ್ಲಿ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮೂರನೇ ಬಾರಿ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಕಳೆದ ಬಾರಿ ಕೇವಲ 26 ಸ್ಥಾನಗಳನ್ನು ಗೆದ್ದಿದ್ದ ಎನ್‌ಪಿಎಫ್ ಈ ಬಾರಿ ಮತ್ತೆ 12 ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವ ಮೂಲಕ ಅಲ್ಲಿ ಪ್ರಾಬಲ್ಯವನ್ನು ಮೆರೆದಿದೆ.
ಈ ಚುನಾವಣೆಗಳ ಫಲಿತಾಂಶ ಮುಂಬ ರುವ 9 ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ.  ಈಶಾನ್ಯ ರಾಜ್ಯಗಳ ರಾಜಕೀಯ ಪರಿಸ್ಥಿತಿ ದೇಶದ ವಿವಿಧ ರಾಜ್ಯಗಳ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಿಂತ ಸಂಪೂರ್ಣ ಭಿನ್ನವಾಗಿದೆ. ಆದರೂ ಕೇಂದ್ರದ ಯುಪಿಎ ಸರಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಬರಲಿರುವ ದಿನಗಳಲ್ಲಿಯೂ ಪಾಠ ಕಲಿಯುವ ಸೂಚನೆಗಳು ಕಾಣುತ್ತಿಲ್ಲ.
ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಜನರಿಗೆ ಬದಲಾವಣೆ ಬೇಕಾಗಿದೆ. ಯುಪಿಎ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿದೆ. ಆದರೆ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿಯನ್ನು ಒಪ್ಪಿಕೊಳ್ಳಲು ಜನರು ಸಿದ್ಧರಿಲ್ಲ. ಜಾಗತೀಕರಣದ ಆರ್ಥಿಕ ನೀತಿ ಧೋರಣೆ ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಆದರೆ ಕಾಂಗ್ರೆಸ್ ಬಿಜೆಪಿ ಯಂತೆ ಕೋಮುವಾದಿ ಫ್ಯಾಸಿಸ್ಟ್ ಪಕ್ಷವಲ್ಲ. ಭ್ರಷ್ಟಾಚಾರ, ಅನೈತಿಕತೆಯಲ್ಲೂ ಕಾಂಗ್ರೆಸನ್ನು ಮೀರಿಸಿರುವ ಬಿಜೆಪಿಯನ್ನು ಪರ್ಯಾಯ ವಾಗಿ ಒಪ್ಪಿಕೊಳ್ಳಲು ಜನರು ಸಿದ್ಧರಿಲ್ಲ.
ಜನಪರ ರಾಜಕಾರಣದಲ್ಲಿ ನಂಬಿಕೆ ಹೊಂದಿರುವ ಎಡ ಪ್ರಗತಿಪರ ಪಕ್ಷಗಳು, ಅಲ್ಪಸಂಖ್ಯಾತ, ದಲಿತ ಹಿಂದುಳಿದ ಸಂಘಟನೆ ಗಳು ಒಂದುಗೂಡಿದರೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಬಹುದು. ಆದರೆ ರಾಷ್ಟ್ರವ್ಯಾಪಿಯಾಗಿ ಪ್ರಗತಿಪರ ಶಕ್ತಿಗಳನ್ನು ಒಂದುಗೂಡಿಸುವ ಪ್ರಕ್ರಿಯೆ ಕಂಡುಬರುತ್ತಿಲ್ಲ. ಅಂತಲೇ ಜನತೆಗೆ ಅತ್ತ ಧರಿ, ಇತ್ತ ಪುಲಿ ಎಂಬಂತಾಗಿದೆ.

No comments:

Post a Comment