Monday, March 11, 2013

ಅಡ್ವಾಣಿ ದೇಶಕ್ಕೆ ಕೊಟ್ಟ ಕರೆಅಡ್ವಾಣಿಯವರಿಗೆ ಬೇಡವಾದ ಬಿಜೆಪಿ ಈ ದೇಶದ ಜನರಿಗೆ ಬೇಕೇ? ಎಂಬ ಪ್ರಶ್ನೆ ಉದ್ಭವವಾಗಿದೆ. ಹೌದು, ಅಡ್ವಾಣಿಯವರಿಗೆ ಬಿಜೆಪಿಯ ಕುರಿತಂತೆ ತೀವ್ರ ಭ್ರಮ ನಿರಸನವಾಗಿದೆ. ಹೀಗೆಂದು ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ವೇದನೆಯನ್ನು ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸಿದ,  ಬಿಜೆಪಿಯ ರಥದ ಸಾರಥಿ ಇಂದು ಸುಸ್ತಾಗಿದ್ದಾರೆ. ಬಹುಶಃ ಅವರೇ ಬಿಜೆಪಿಯನ್ನು ಅಧಿಕಾರದಿಂದ ದೂರಕ್ಕೆ ಒಯ್ಯುತ್ತಾರೆಯೇ? ಎನ್ನುವುದನ್ನು ಕಾದು ನೋಡಬೇಕು.ಇತ್ತೀಚೆಗೆ ನಡೆದ ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಎಲ್ಲರೂ ನರೇಂದ್ರ ಮೋದಿಯವರ ಸುತ್ತ ಕುಣಿಯುತ್ತಿದ್ದರು. ಇನ್ನೇನು ನರೇಂದ್ರ ಮೋದಿ ಈ ದೇಶದ ಪ್ರಧಾನಿಯೇ ಆಗಿ ಬಿಟ್ಟರು ಎಂಬಂತೆ ರಾಜ್‌ನಾಥ್ ಸಿಂಗ್ ಕೂಡ ಸಂಭ್ರಮಿಸುತ್ತಿದ್ದರು. ಆದರೆ ಅದೇ ವೇದಿಕೆಯಲ್ಲಿ ಅಡ್ವಾಣಿ ಒಬ್ಬಂಟಿಯಾಗಿ ಕುಳಿತಿದ್ದರು. ಅದೆಷ್ಟು ಜನರು ವೇದಿಕೆಯಲ್ಲಿದ್ದರೂ ಅವರು ಅಲ್ಲಿ ಕೇಂದ್ರ ಪಾತ್ರವನ್ನು ವಹಿಸಿರಲಿಲ್ಲ. ವಹಿಸುವುದು ಯಾರಿಗೂ ಬೇಕಾಗಿಯೂ ಇರಲಿಲ್ಲ. ನೋಡುವವರಿಗೆ ಹೃದಯ ಕರಗುವಂತಿತ್ತು ಅಡ್ವಾಣಿಯವರ ಸ್ಥಿತಿ. ಬದುಕಿನುದ್ದಕ್ಕೂ ಕೌರವನಿಗಾಗಿ ಮಣ್ಣು ಹೊತ್ತು, ಸ್ವತಃ ದುರ್ಯೋಧನನಿಂದಲೇ ಅವಮಾನಕ್ಕೀಡಾದ ಭೀಷ್ಮನಂತಿತ್ತು ಅಡ್ವಾಣಿಯವರ ಪರಿಸ್ಥಿತಿ.
ರಾಜ್‌ನಾಥ್ ಸಿಂಗ್ ದುರ್ಯೋಧನನ ಪಾತ್ರ ವಹಿಸಿದ್ದರೆ, ಇಡೀ ಸಭೆ ದುಶ್ಶಾಸನನಿಗೆ ಉಘೇ ಎನ್ನುತ್ತಿತ್ತು. ‘ಇನ್ನು ಶರಶಯ್ಯೆಯಲ್ಲದೆ ಬೇರೆ ಗತಿಯಿಲ್ಲ’ ಎನ್ನುವುದು ಅಡ್ವಾಣಿಯವರಿಗೆ ಸ್ಪಷ್ಟವಾಗಿ ಅರ್ಥ ಮಾಡಿಸಿಕೊಟ್ಟ ಸಮಾವೇಶ ಅದು. ವರ್ತಮಾನದ ವಿಪರ್ಯಾಸ ಅಡ್ವಾಣಿಯವರಿಗೆ ಕಣ್ಣಿಗೆ ರಾಚುವಂತಿತ್ತು. ಇಂದು ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಗಟ್ಟಿಯಾಗಿ ಬೇರೂರಿ ನಿಂತಿದ್ದರೆ, ಅದಕ್ಕೆ ಅಡ್ವಾಣಿ ತನ್ನ ವರ್ಚಸ್ಸು, ಆಯಸ್ಸು, ಆರೋಗ್ಯ ಎಲ್ಲವನ್ನೂ ಬಲಿಕೊಟ್ಟಿದ್ದಾರೆ. ಅಡ್ವಾಣಿಯವರ ರಥಯಾತ್ರೆ ಬಿಜೆಪಿಯನ್ನು ಅಧಿಕಾರಕ್ಕೆ ಕೊಂಡೊಯ್ಯಿತು. ಆದರೆ ಆ ರಥಯಾತ್ರೆಯ ಕಾವು ಮುಗಿದಿದೆ. ಈಗ ಹೊಸ ರಕ್ತ, ಹೊಸ ಆವೇಶ ಬೇಕಾಗಿದೆ.
ಬಿಜೆಪಿ ಅಡ್ವಾಣಿಯವರನ್ನು ಬದಿಗೆ ಸರಿಸಿ, ಮೋದಿಯನ್ನು ಅನಿವಾರ್ಯವೆಂಬಂತೆ ಆರಿಸಿಕೊಂಡಿದೆ. ಈ ದೇಶದ ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ ಕೊಚ್ಚಿ ಹಾಕಿದ್ದು ಏನೇನೂ ಇಲ್ಲ. ಬಿಜೆಪಿಯೊಳಗೆ ಆಗಾಗ ಸೆಕ್ಯೂಲರ್ ಪದಗಳನ್ನು ಉದುರಿಸುತ್ತಾ, ಕವಿತೆಗಳನ್ನು ವಾಚಿಸುತ್ತಾ, ಅಪ್ಪಟ ಬ್ರಾಹ್ಮಣ್ಯ ರಾಜಕಾರಣ ನಡೆಸುತ್ತಾ ಬಂದವರು ವಾಜಪೇಯಿ. ಅಡ್ವಾಣಿ ಕಟ್ಟಿ ನಿಲ್ಲಿಸಿದ ಮನೆಯ ಯಜಮಾನನಾಗಿ ಅಟಲ್ ಅಧಿಕಾರ ಸ್ವೀಕರಿಸಿದರು. ಒಂದು ಕೋಮುವಾದಿ ಪಕ್ಷದೊಳಗೆ ಒಬ್ಬ ನಾಯಕ ಜಾತ್ಯತೀತನಂತೆ ಕಂಗೊಳಿಸತೊಡಗಿದರೆ ಅದರ ಆಕರ್ಷಣೆ ಹೆಚ್ಚು. ಉಭಯ ಗುಂಪುಗಳಿಗೆ ಅಟಲ್ ಸಲ್ಲುವಂತಾದರು. ಅವರಿರುವವರೆಗೆ ಅಡ್ವಾಣಿ ಪ್ರಧಾನಿಯಾಗುವ ಅವಕಾಶ ಒದಗಲಿಲ್ಲ. ಕೊನೆಯ ಕ್ಷಣದಲ್ಲಿ ಉಪಪ್ರಧಾನಿ ಪಟ್ಟವನ್ನಷ್ಟೇ ಅಡ್ವಾಣಿಯವರಿಗೆ ಪ್ರಸಾದವಾಗಿ ನೀಡಲಾಯಿತು.
ಅಡ್ವಾಣಿಯವರನ್ನು ಬಿಜೆಪಿ ಉಕ್ಕಿನ ಮನುಷ್ಯ ಎಂದು ಕರೆಯುತ್ತಿತ್ತು. ಆದರೆ ಅಂತಹ ಉಕ್ಕನ್ನು ತನ್ನ ತೋಳಿನಿಂದ ಬಗ್ಗಿಸಿದವರು ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಇದು ಅಡ್ವಾಣಿಯವರ ಪಾಲಿಗೆ ತೀರದ ಅವಮಾನವಾಯಿತು. ಎರಡನೆ ಪೆಟ್ಟು ಬಿದ್ದುದು ಗುಜರಾತಿನ ಮೋದಿಯವರಿಂದ. ಅದು ಬುಡಕ್ಕೆ ಬಿದ್ದ ಪೆಟ್ಟು. ಅಡ್ವಾಣಿ ಬಿಜೆಪಿಗಾಗಿ ಮಾಡಿದ ತ್ಯಾಗ, ಪಾಲಿಸಿದ ಆದರ್ಶ ಆರೆಸ್ಸೆಸ್‌ಗೂ ನಗಣ್ಯವಾಯಿತು. ಮೂಲತಃ ಭ್ರಷ್ಟರಾಗಿದ್ದ ನಿತಿನ್ ಗಡ್ಕರಿ ಬಿಜೆಪಿಯನ್ನು ಪತನದ ದಾರಿಗೆ ಕೊಂಡೊಯ್ಯುತ್ತಿದ್ದಾಗ, ಅದರ ಜೊತೆಗೆ ತಾನೂ ಪತನದ ಹಾದಿ ಹಿಡಿಯಲು ಅಡ್ವಾಣಿಗೆ ಇಷ್ಟವಿರಲಿಲ್ಲ. ಆದುದರಿಂದ ಅವರು ಆ ದಿನಗಳಲ್ಲಿ ತನಗೆ ಸಾಧ್ಯವಿದ್ದಷ್ಟು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು.
ನಿತಿನ್‌ರ ಭ್ರಷ್ಟಾಚಾರ, ಕರ್ನಾಟಕದಲ್ಲಿ ರೆಡ್ಡಿ ದೊರೆಗಳಿಂದ ಯಡಿಯೂರಪ್ಪ, ಸುಶ್ಮಾ, ನಿತಿನ್ ಮೊದಲಾದವರು ದೋಚಿರುವ ಹಣದ ಬಗ್ಗೆ ಅಡ್ವಾಣಿಯವರಿಗೆ ಸ್ಪಷ್ಟ ಅರಿವಿತ್ತು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲೇಬೇಕು ಎಂಬ ಗಟ್ಟಿ ನಿಲುವಿಗೆ ಬರಲು ಇದೂ ಒಂದು ಕಾರಣ. ಜೊತೆಗೆ ಅನಂತಕುಮಾರ್ ಎಂಬ ಜನಿವಾರವನ್ನು ಸೊಂಟದಲ್ಲಿ ಕಟ್ಟಿಕೊಂಡದ್ದಕ್ಕೆ ಅಡ್ವಾಣಿ ಬಹಳಷ್ಟು ಬೆಲೆ ತೆರಬೇಕಾಯಿತು.
ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗುವ ಒಂದೇ ಉದ್ದೇಶವನ್ನಿಟ್ಟುಕೊಂಡು ಅನಂತಕುಮಾರ್ ಅಡ್ವಾಣಿಯವರ ಹಿಂದೆ ಅಲೆಯುತ್ತಿದ್ದರು.ಈತನ ನಯ ವಿನಯಕ್ಕೆ ಮನ ಸೋತು ಅನಂತಕುಮಾರ್‌ಗೆ ಪಟ್ಟಕಟ್ಟಲು ಅಡ್ವಾಣಿ ಸಾಕಷ್ಟು ಹೆಣಗಿದ್ದರು. ಆದರೆ ಅದರಲ್ಲೂ ವಿಫಲರಾದರು. ಇದೀಗ ಅನಂತಕುಮಾರ್ ನಿಧಾನಕ್ಕೆ ತನ್ನ ಪಕ್ಷ ಬದಲಿಸುತ್ತಿದ್ದಾರೆ. ಅಡ್ವಾಣಿ ನಿಜಕ್ಕೂ ಒಂಟಿಯೇ ಆಗಿ ಬಿಟ್ಟಿದ್ದಾರೆ.
ಆದುದರಿಂದಲೇ ಅವರು ಬಿಜೆಪಿಯ ಕುರಿತಂತೆ ಬಹಿರಂಗ ಹೇಳಿಕೆ ನೀಡಿ, ಅದರ ನಾಯಕರಿಗೆ ಮುಜುಗರ ಸೃಷ್ಟಿಸಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವುದನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಒಂದೆಡೆ ಮೋದಿ ಕಾಂಗ್ರೆಸ್‌ನ ನಾಯಕರ ಮೇಲೆ ಅವಾಚ್ಯ ಮಾತುಗಳನ್ನಾಡುತ್ತಿದ್ದಾಗ, ಪರೋಕ್ಷವಾಗಿ ಕಾಂಗ್ರೆಸ್‌ನ ನೆರವಿಗೆ ಬಂದಿದ್ದಾರೆ ಅಡ್ವಾಣಿ. ಇದರಲ್ಲಿ ಅವರ ರಾಜಕೀಯ ಹತಾಶೆಯೂ ಇದೆ. ಹಾಗೆಯೇ ಅವರ ಹಿರಿತನವೂ ಕೆಲಸ ಮಾಡಿದೆ. ಕಾರಣ ಏನೇ ಇರಲಿ. ಅಡ್ವಾಣಿ ಹೇಳಿದ ಮಾತಿನಲ್ಲಿ ನಿಜ ಇದೆ.  ಈ ದೇಶಕ್ಕೆ ಕಾಂಗ್ರೆಸ್-ಬಿಜೆಪಿ ಅಲ್ಲದ ತೃತೀಯ ಶಕ್ತಿಯ ಅಗತ್ಯವನ್ನು ಅವರ ಮಾತು ಒತ್ತಿ ಹೇಳಿದೆ. ಕಾಂಗ್ರೆಸ್-ಬಿಜೆಪಿಯನ್ನು ಕೈ ಬಿಟ್ಟು ಹೊಸತೊಂದು ಶಕ್ತಿಯನ್ನು ಕಟ್ಟಿ ನಿಲ್ಲಿಸುವ ಅಗತ್ಯವನ್ನು ದೇಶಕ್ಕೆ ತಿಳಿಸಿದ್ದಾರೆ. ಅದಕ್ಕೆ ನಾವು ಕಿವಿಯಾಗಲೇ ಬೇಕಾಗಿದೆ

No comments:

Post a Comment