Friday, March 8, 2013

ಸರಕಾರಿ ಸಿಬ್ಬಂದಿಗೆ ಸಣ್ಣದೊಂದು ಲಗಾಮು ಇನ್ನೊಬ್ಬರ ಮನೆಗೆ ಬೆಂಕಿ ಬಿದ್ದಾಗ ಗಳ ಹಿರಿಯುವ ಪ್ರವೃತ್ತಿ ಇಂದು ತಾಲೂಕು ಕಚೇರಿ ಸೇರಿದಂತೆ ವಿವಿಧ ಸರಕಾರಿ ವಿಭಾಗಗಳಲ್ಲಿ ಹೆಚ್ಚುತ್ತಿದೆ. ಜನರಿಗೆ ಅತ್ಯಗತ್ಯವಾಗಿರುವ ಪಾಸ್‌ಪೋರ್ಟ್, ಪಿಂಚಣಿ, ಜನನ ಮರಣ ಪತ್ರ ಇತ್ಯಾದಿಗಳಿಗಾಗಿ ಸರಕಾರಿ ಕಚೇರಿಗಳಿಗೆ ಎಡತಾಕಿದಾಗ ಅವರನ್ನು ಅತ್ತಿಂದಿತ್ತ ಅಲೆದಾಡಿಸುವುದು, ಕಾಯಿಸುವುದು ಸಿಬ್ಬಂದಿಗೆ ಬಲು ಪ್ರೀತಿಯ ಕೆಲಸ. ಪಾಸ್‌ಪೋರ್ಟ್‌ನಂತಹ ವಿಷಯಕ್ಕೆ ಸಂಬಂಧಿಸಿ, ಜನಸಾಮಾನ್ಯರಿಗೆ ಸಿಬ್ಬಂದಿಗಳು ನೀಡುವ ಚಿತ್ರಹಿಂಸೆಗೆ ಗಡಿಯೇ ಇಲ್ಲ. ತೀರಾ ಅಗತ್ಯದ ಸಂದರ್ಭದಲ್ಲಿ ಅದೆಷ್ಟೋ ಹಣವನ್ನು ವಿವಿಧ ಇಲಾಖೆಗಳಿಗೆ ಕೊಡಬೇಕಾದಂತಹ ಅನಿವಾರ್ಯ ಸ್ಥಿತಿ ಜನರದು. ಒಂದು ಪಾಸ್‌ಪೋರ್ಟ್ ಪೊಲೀಸ್ ಠಾಣೆಗೆ ಬಂತೆಂದರೆ, ಅಲ್ಲಿನ ಸಿಬ್ಬಂದಿ ಎಷ್ಟು ಸಮಯ ಬೇಕಾದರೂ ಸಂಬಂಧಿತ ಅಭ್ಯರ್ಥಿಯನ್ನು ಅಲೆದಾಡಿಸಬಹುದಾಗಿದೆ. ‘ಪೊಲೀಸ್ ವಿಚಾರಣೆಗೆ ಬಂದಿದೆ’ ಎಂಬ ಸೂಚನೆಯ ಮೇರೆಗೆ ಅಭ್ಯರ್ಥಿ ಠಾಣೆಯ ಮೆಟ್ಟಿಲೇರಿದರೆ, ಅಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೇ ಇಲ್ಲ. ತನ್ನೆಲ್ಲ ಕೆಲಸವನ್ನು ಬಿಟ್ಟು ಬಂದಿದ್ದ ಅಭ್ಯರ್ಥಿ ಅಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ.
ಇಡೀ ದಿನ ಕಾದ ಬಳಿಕ ಸಿಬ್ಬಂದಿಯಿಂದ ಉತ್ತರ ಸಿಗುತ್ತದೆ “ಸಾಹೇಬರು ನಾಳೆ ಬರುತ್ತಾರೆ. ನೀವು ನಾಳೆ ಬನ್ನಿ” ಹೀಗೆ ಇಡೀ ದಿನವನ್ನು ವ್ಯಯಿಸಿದ ಬಳಿಕ, ಆತ ಮರುದಿನ ಬರಬೇಕಾಗುತ್ತದೆ ಮತ್ತು ಹಿಂದಿನಂತೆ ಕಾಯಬೇಕಾಗುತ್ತದೆ. ಪೊಲೀಸರ ಈ ವರ್ತನೆಯನ್ನು ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದ್ದೇ ಆದಲ್ಲಿ, ಪಾಸ್‌ಪೋರ್ಟ್ ಕೈಗೆ ಸಿಗದೆ ಇರುವಂತಹ ಸನ್ನಿವೇಶ ನಿರ್ಮಾಣವಾಗುತ್ತದೆ.
ಆದುದರಿಂದ ಉಸಿರು ಬಿಗಿ ಹಿಡಿದು ಅವರಿಂದ ಕೆಲಸ ಮಾಡಿಸಿಕೊಳ್ಳಬೇಕು. ಅವರ ಉದ್ಧಟತನವನ್ನೆಲ್ಲ ಸಹಿಸಬೇಕು. ಕೆಲವೊಮ್ಮೆ ಲಂಚವನ್ನೂ ಕೊಡಬೇಕಾಗುತ್ತದೆ. ಇದು ಕೇವಲ ಪಾಸ್‌ಪೋರ್ಟ್‌ಗೆ ಮಾತ್ರ ಸಂಬಂಧಿಸಿಲ್ಲ. ಪಿಂಚಣಿಯಂತಹ ಸೇವೆಗಳನ್ನು ದಕ್ಕಿಸಿಕೊಳ್ಳಬೇಕಾದರೂ, ಅಧಿಕಾರಿಗಳ, ಸಿಬ್ಬಂದಿಯ ಕೈ ಕಾಲು ಹಿಡಿಯುವ ಸನ್ನಿವೇಶ ಸರಕಾರಿ ಕಚೇರಿಗಳಲ್ಲಿವೆ. ಭೂಮಿಗೆ ಸಂಬಂಧ ಪಟ್ಟ ವ್ಯವಹಾರದಲ್ಲಂತೂ ಇದು ಮಾಮೂಲು. ಒಂದು ಆರ್‌ಟಿಸಿ ಮಾಡಿಸಿಕೊಂಡರೆ, ಒಂದು ಯುದ್ಧವನ್ನು ಗೆದ್ದಂತೆ.
ಇಂತಹ ವಾತಾವರಣದಲ್ಲಿ ಯಾವುದೇ ಸೇವೆಯನ್ನು ಪೌರರಿಗೆ ನಿಗದಿತ ಅವಧಿಯೊಳಗೆ ಒದಗಿಸುವ ಮಹತ್ವದ ವಿಧೇಯಕಕ್ಕೆ ಕೇಂದ್ರ ಸರಕಾರ ಗುರುವಾರ ತನ್ನ ಅನುಮತಿಯನ್ನು ನೀಡಿದೆ.  ಈ ವಿಧೇಯಕ ಅನುಷ್ಠಾನಗೊಂಡರೆ, ಮುಂದಿನ ದಿನಗಳಲ್ಲಿ ದುರಹಂಕಾರಿ, ಸೋಮಾರಿ ಅಧಿಕಾರಿಗಳು ಭಾರೀ ಸಂಕಟವನ್ನು ಅನುಭವಿಸಬೇಕಾಗುತ್ತದೆ. ಯಾವುದೇ ಪಾಸ್‌ ಪೋರ್ಟನ್ನಾಗಲಿ, ಪಿಂಚಣಿಯನ್ನಾಗಲಿ ನಿಗದಿತ ಅವಧಿಯಲ್ಲಿ ನೀಡದೆ ಸತಾಯಿಸಿದ್ದೇ ಆದರೆ ಅಂತಹ ಸಿಬ್ಬಂದಿಗೆ ಸುಮಾರು 50 ಸಾವಿರ ರೂ. ವರೆಗೆ ದಂಡ ವಿಧಿಸುವುದಕ್ಕೆ ವಿಧೇಯಕ ಅವಕಾಶ ನೀಡುತ್ತದೆ.
ಈ ವಿಧೇಯಕದ ಅನುಸಾರ, ಪ್ರತಿಯೊಂದು ಸಾರ್ವಜನಿಕ ಇಲಾಖೆಯೂ ಪೌರರ ವಿಶೇಷಾಧಿಕಾರದ ಸನದನ್ನು ಪ್ರಕಟಿಸುವ ಬಾಧ್ಯತೆಗೆ ಒಳಗಾಗಬೇಕಾಗುತ್ತದೆ. ನಿರ್ದಿಷ್ಟ ಸರಕುಗಳನ್ನು ಹಾಗೂ ಸೇವೆಗಳನ್ನು ನಿಗದಿತ ಸಮಯಾವಧಿಯಲ್ಲಿ ಪೌರರಿಗೆ ಒದಗಿಸುವ ಕುರಿತ ಸನದನ್ನು ಅದು ಪ್ರಕಟಿಸಬೇಕಾಗುತ್ತದೆ. ಈ ಮೂಲಕ ಅಧಿಕಾರಿಗಳ, ಸಿಬ್ಬಂದಿಯ ಸೊಕ್ಕಿಗೆ, ಉದ್ಧಟತನಕ್ಕೆ ನೇರ ಕತ್ತರಿ ಬಿದ್ದಂತಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಸತಾಯಿಸುವಿಕೆಯೆನ್ನುವುದು ಕೇವಲ ಹಣ ಅಥವಾ ಸೋಮಾರಿತನಕ್ಕೆ ಸೀಮಿತವಾಗಿರುವುದಿಲ್ಲ. ಅಲ್ಲಿ ಜಾತಿ ಧರ್ಮವೂ ಕೆಲಸ ಮಾಡುವುದಿದೆ. ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರು ಅತಿ ಹೆಚ್ಚು ತೊಂದರೆಗೆ ಈಡಾಗುತ್ತಾರೆ. ಅನ್ಯಥಾ ಅವರನ್ನು ಸಿಬ್ಬಂದಿ ಕಾಡುತ್ತಾರೆ. ತುರ್ತಾಗಿ ಪಾಸ್‌ಪೋರ್ಟ್ ಬೇಕಾದ ಸಂದರ್ಭದಲ್ಲಿ ಇವರಿಂದ ತಮಗೆ ಬೇಕಾದಷ್ಟು ದುಡ್ಡನ್ನೂ ಕೀಳುತ್ತಾರೆ.
ಹಾಗೆಯೇ ದಲಿತರು, ಬಡವರು ಸರಕಾರಿ ಕಚೇರಿಗಳಿಗೆ ಕಾಲಿಟ್ಟಾಗ, ತಕ್ಷಣ ಅವರ ಕೆಲಸ ಮಾಡಿಕೊಟ್ಟದ್ದೇ ಆದಲ್ಲಿ ಅದು ತಮ್ಮ ಹುದ್ದೆಗೆ ಅವಮಾನ ಎಂದು ತಿಳಿದುಕೊಳ್ಳುವ ಎಷ್ಟೋ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ. ಅವರೆಲ್ಲರಿಗೂ ಪಾಠ ಕಲಿಸಬೇಕಾದಲ್ಲಿ ಈ ವಿಧೇಯಕ ಶೀಘ್ರದಲ್ಲಿ ಜಾರಿಗೆ ಬರಬೇಕಾಗಿದೆ.ಈ ವಿಧೇಯಕದ ನಿಯಮಾವಳಿಯ ಪ್ರಕಾರ, ಯಾವುದೇ ಸಾರ್ವಜನಿಕ ಇಲಾಖೆಯ ನಿರ್ಧಾರದಿಂದ ಸಂತ್ರಸ್ತನಾದ ಶ್ರೀ ಸಾಮಾನ್ಯ, ಕೇಂದ್ರ ಸರಕಾರದ ಮಟ್ಟದಲ್ಲಿ ಲೋಕಪಾಲ ಹಾಗೂ ರಾಜ್ಯ ಸರಕಾರದ ಮಟ್ಟದಲ್ಲಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಬಹುದಾಗಿದೆ. ಆಡಳಿತ ವರ್ಗದ ನಿರಂಕುಶತೆಗೆ ಈ ವಿಧೇಯಕ ಸಣ್ಣ ಮಟ್ಟಿನ ಲಗಾಮನ್ನು ಹಾಕುವುದರಲ್ಲಿ ಸಂಶಯವಿಲ್ಲ.
ಇದೇ ಸಂದರ್ಭದಲ್ಲಿ ಕಾನೂನು ಚಾಪೆಯಡಿಗೆ ನುಗ್ಗಿದರೆ, ಸರಕಾರಿ ಸಿಬ್ಬಂದಿ ರಂಗೋಲಿಯಡಿಗೆ ನುಗ್ಗುತ್ತಾರೆ. ಈ ಹಿನ್ನೆಲೆಯಲ್ಲಿ ಕಾಯ್ದೆ ಹೆಸರಿಗಷ್ಟೇ ಇರದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾಗಿದೆ. ಅದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಿ, ಜಾರಿಗೆ ಬರುವಂತೆ ನೋಡಿಕೊಳ್ಳುವುದು ನಮ್ಮನ್ನಾಳುವವರ ಕರ್ತವ್ಯ. ಆದಷ್ಟು ಬೇಗ ಈ ಕೆಲಸ ನಡೆಯಲಿ ಎನ್ನುವುದು ಜನಸಾಮಾನ್ಯರ ಹಾರೈಕೆ.

No comments:

Post a Comment