Tuesday, March 26, 2013

ಕೇಬಲ್ ಆಪರೇಟರ್‌ಗೆ ರಿವಾಲ್ವರ್ ತೋರಿಸಿ ಬೆದರಿಸಿದ ಶಾಸಕ ಮಾರ್ಚ್ -26-2013

ಮುಂಬೈ: ಕೇಬಲ್ ಆಪರೇಟರೊಬ್ಬರಿಗೆ ರಿವಾಲ್ವರ್‌ನಿಂದ ಬೆದರಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಮಹಾರಾಷ್ಟ್ರದ ಪಕ್ಷೇತರ ಶಾಸಕ ಗಣ್‌ಪತ್ ಗಾಯಕ್‌ವಾಡ್, ಅವರ ಸಹೋದರ ಅಭಿಮನ್ಯು ಗಾಯಕ್‌ವಾಡ್ ಹಾಗೂ ಇತರರ ವಿರುದ್ಧ ಕಲ್ಯಾಣ್‌ನ ಕೋಲ್ಸೆವಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗಣ್‌ಪತ್ ಗಾಯಕ್‌ವಾಡ್ ಒಡೆತನದ ಕೇಬಲ್ ನೆಟ್‌ವರ್ಕ್‌ಗಿಂತ ಕಡಿಮೆ ದರದಲ್ಲಿ ಸೆಟ್‌ಟಾಪ್ ಬಾಕ್ಸ್‌ಗಳನ್ನು ಮಾರಾಟ ಮಾಡಿರುವುದಕ್ಕಾಗಿ ಬೆದರಿಕೆ ಮತ್ತು ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಅಭಿಮನ್ಯು ಕಲ್ಯಾಣ್‌ನ ಎನ್‌ಸಿಪಿ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಗಣ್‌ಪತ್‌ರ ಚಾಲಕ ಉಮೇಶ್, ಶ್ಯಾಮ್ ಶೆಲ್ಕೆ, ಮನೋಜ್ ಮಾಲಿ, ದತ್ತಾ ಗಾಯಕ್‌ವಾಡ್ ಮತ್ತು 20-25 ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಪರಿಚ್ಛೇದಗಳನ್ವಯ ಮೊಕದ್ದಮೆ ದಾಖಲಿಸಲಾಗಿದೆ.
ಕಲ್ಯಾಣ್ (ಪೂರ್ವ)ನ ತೀಸ್‌ಗಾಂವ್ ಪ್ರದೇಶದಲ್ಲಿ ವಾಸಿಸುತ್ತಿರುವ ಕಿರಣ್ ನಿಸಾಲ್ (29) ಎಂಬವರು ಶನಿವಾರ ರಾತ್ರಿ ನೀಡಿದ ದೂರಿನ ಆಧಾರದಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.
ಗಣಪತ್‌ರ ಕೇಬಲ್ ನೆಟ್‌ವರ್ಕ್‌ಗಿಂತ ಕಡಿಮೆ ದರದಲ್ಲಿ ಸೆಟ್‌ಟಾಪ್ ಬಾಕ್ಸ್‌ಗಳನ್ನು ಮಾರಿದ್ದಕ್ಕೆ ತನಗೆ ಬಂದೂಕಿನಿಂದ ಬೆದರಿಕೆಯೊಡ್ಡಲಾಗಿದೆ ಹಾಗೂ ಹಲ್ಲೆ ನಡೆಸಲಾಗಿದೆ ಎಂದು ತನ್ನ ದೂರಿನಲ್ಲಿ ಕಿರಣ್ ಹೇಳಿದ್ದಾರೆ.
ತಾನು ವಾಸಿಸುತ್ತಿರುವ ಕಟ್ಟಡ ‘ಆಶಾಪುರ್’ಗೆ ಐದು ವಾಹನಗಳಲ್ಲಿ ಆಗಮಿಸಿದ ಶಾಸಕ ಮತ್ತು ಇತರರು ಫ್ಲಾಟ್‌ನಿಂದ ಹೊರಗೆ ಬರುವಂತೆ ಕರೆದರು ಎಂದು ಕಿರಣ್ ಹೇಳಿದರು.
ಸೆಟ್ ಟಾಪ್ ಬಾಕ್ಸ್‌ಗಳನ್ನು ಕಡಿಮೆ ದರದಲ್ಲಿ ಮಾರಿದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಗುಂಪು ಎಚ್ಚರಿಸಿತು ಹಾಗೂ ಗುಂಪಿನಲ್ಲಿದ್ದ ದತ್ತಾ ಗಾಯಕ್‌ವಾಡ್ ಎಂಬಾತ ತನ್ನ ಕೆನ್ನೆಗೆ ಬಾರಿಸಿದನು ಎಂದು ಅವರು ತಿಳಿಸಿದರು.
‘‘ಶಾಸಕ ಗಣಪತ್ ಗಾಯಕ್‌ವಾಡ್ ಸೇರಿದಂತೆ ದೂರಿನಲ್ಲಿ ತಿಳಿಸಲಾದ ವ್ಯಕ್ತಿಗಳ ವಿರುದ್ಧ ನಾವು ಮೊದಲ ಮಾಹಿತಿ ವರದಿ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ’’ ಎಂದು ಕೋಲ್ಸೆವಾಡಿ ಸಬ್ ಇನ್ಸ್‌ಪೆಕ್ಟರ್ ಆರ್.ಪಿ. ದೇಶ್‌ಮುಖ್ ಹೇಳಿದರು.
 ‘‘ಸೆಟ್ ಟಾಪ್ ಬಾಕ್ಸ್ ವಿಷಯವಾಗಿ ನಿಸಾಲ್‌ರನ್ನು ಭೇಟಿಯಾದದ್ದು ಹೌದು ಹಾಗೂ ಆ ಬಗ್ಗೆ ವಾದ ವಿವಾದವಾಗಿದ್ದೂ ಹೌದು. ಆದರೆ, ನಿಸಾಲ್‌ರಿಗೆ ಹಲ್ಲೆ ನಡೆಸಿಲ್ಲ ಹಾಗೂ ಪಿಸ್ತೂಲ್‌ನಿಂದ ಬೆದರಿಸಿಲ್ಲ’’ ಎಂದು ಶಾಸಕರು ಹೇಳಿದರು

No comments:

Post a Comment