Friday, March 22, 2013

ಮುಳುಗುವ ಹಡಗಿನ ಹೊಸ ಕಪ್ತಾನ ಮಾರ್ಚ್ -23-2013

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಉಪಮುಖ್ಯಮಂತ್ರಿ ಆರ್.ಅಶೋಕ್, ಸಚಿವ ಗೋವಿಂದ ಕಾರಜೋಳ, ಸಂಸದ ನಳಿನ್ ಕುಮಾರ್ ಕಟೀಲ್ ಈ ನಾಲವರನ್ನು ಮೂಲೆಗೊತ್ತಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಹುಬ್ಬಳ್ಳಿಯ ಪ್ರಹ್ಲಾದ್ ಜೋಷಿ ನೇಮಕ ಗೊಂಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದಾರರಿಂದ ಮುಖಭಂಗಕ್ಕೀಡಾಗಿದ್ದ ಹಾಗೂ ಭ್ರಷ್ಟಾಚಾರದ ಅನೈತಿಕತೆಯ ಕೊಚ್ಚೆಯಲ್ಲಿ ಮುಳುಗಿ ಹೋಗಿರುವ ಬಿಜೆಪಿಯನ್ನು ಮೇಲೆತ್ತಿ ವಿಧಾನ ಸಭೆ ಚುನಾವಣೆಗೆ ಸಜ್ಜುಗೊಳಿಸುವುದು ಜೋಷಿಯವರ ವೊದಲ ಆದ್ಯತೆಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿ ಕೊಳ್ಳಲು ಸದಾನಂದ ಗೌಡರು ತುದಿಗಾಲ ಮೇಲೆ ನಿಂತಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಪಕ್ಷದ ನಾಯಕರು ಮಾತು ಕೊಟ್ಟಂತೆ ಗೌಡರು ಅಧ್ಯಕ್ಷರಾಗಬೇಕಾಗಿತ್ತು.
ಆದರೆ ಹೈಕಮಾಂಡಿನ ಸೂತ್ರಧಾರ ಅನಂತ ಕುಮಾರ್ ಅವರಿಗೆ ಸದಾನಂದ ಗೌಡ ಅಧ್ಯಕ್ಷರಾಗುವುದು ಬೇಕಾಗಿರಲಿಲ್ಲ. ಅದಕ್ಕಾಗಿ ಗೋವಿಂದ ಕಾರಜೋಳ ಹೆಸರನ್ನು ಮುಂದೆ ಮಾಡಿದರು. ಆದರೆ ಆರೆಸ್ಸೆಸ್ ಹಿನ್ನೆಲೆಯಿಲ್ಲದ ಕಾರಜೋಳ ನೇಮಕ ಅಸಾಧ್ಯವೆಂದು ಅವರಿಗೂ ಗೊತ್ತಿತ್ತು. ಆದರೂ ಸದಾನಂದ ಗೌಡ ಮತ್ತು ಕಲ್ಲಡ್ಕ ಪ್ರಭಾಕರ ಭಟ್‌ರ ಕೈಗೊಂಬೆ ನಳಿನ್ ಕುಮಾರ್ ಕಟೀಲ್‌ರನ್ನು ಪಕ್ಕಕ್ಕೆ ಸರಿಸಿ ತನ್ನ ಕೈಗೊಂಬೆಯಾದ ಪ್ರಹ್ಲಾದ್ ಜೋಷಿಯವರನ್ನು ತರಲು ಚಾಣಕ್ಯ ತಂತ್ರ ವನ್ನು  ಅನುಸರಿಸಿದರು. ಆ ನಿಟ್ಟಿನಲ್ಲಿ ಅವರು ಯಶಸ್ಸನ್ನು ಸಾಧಿಸಿದ್ದಾರೆ.
ಬಿಜೆಪಿ ಎಂಬುದು ಸ್ವತಂತ್ರ ರಾಜಕೀಯ ಪಕ್ಷವಲ್ಲ. ಅದು ಆರೆಸ್ಸೆಸ್‌ನ ಒಂದು ರಾಜಕೀಯ ವೇದಿಕೆ. ಬಿಜೆಪಿಗೆ ತೋರಿಕೆಗೆ ಸದಸ್ಯ ಬಲ, ಪದಾಧಿಕಾರಿಗಳು, ರಾಷ್ಟ್ರೀಯ ಕಾರ್ಯಕಾರಿಣಿ ಇವೆಲ್ಲ ಇದ್ದರೂ ಪರೋಕ್ಷ ವಾಗಿ ಪಕ್ಷವನ್ನು ನಿಯಂತ್ರಿಸುವುದು ಆರೆಸ್ಸೆಸ್ ಎಂಬ ಉತ್ತರದಾಯಿ ಇಲ್ಲದ ಸಂಸ್ಥೆ. ಪಕ್ಷದ ಅಯಕಟ್ಟಿನ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬುದು ತೀರ್ಮಾನವಾಗು ವುದು ಬಿಜೆಪಿಯ ಕಚೇರಿಯಲ್ಲಲ್ಲ. ಅದು ಆರೆಸ್ಸೆಸ್ ಕಾರ್ಯಾಲಯದಲ್ಲಿ. ಅಂತಲೇ ಸಂಘಪರಿವಾರಕ್ಕೆ ನಿಷ್ಠರಾಗಿದ್ದ ಪ್ರಹ್ಲಾದ್ಜೋಷಿಯವರ ಹೆಸರನ್ನು ಮುಂದೆ ಮಾಡಿ ಅನಂತಕುಮಾರ್ ತಮ್ಮ ಗುರಿಯನ್ನು ಸಾಧಿಸಿಕೊಂಡಿದ್ದಾರೆ. 
ಪ್ರಹ್ಲಾದ್ ಜೋಷಿ ಆರೆಸ್ಸೆಸ್‌ನ ಕಟ್ಟಾ ಕಾರ್ಯಕರ್ತ. ಪ್ರಣ್ ತೊಗಾಡಿಯಾ, ಪ್ರಮೋದ್ ಮುತಾಲಿಕ್ ಅವರಂತೆ ಅಲ್ಪ ಸಂಖ್ಯಾತರ ವಿರುದ್ಧ ವಿಷ ಕಾರುತ್ತ ಬಂದ  ವ್ಯಕ್ತಿ. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದಕ್ಕೆ ಸೀಮೆ ಎಣ್ಣೆ ಸುರಿದು ಉತ್ತರ ಕರ್ನಾಟಕದಲ್ಲಿ ಕೋಮುದ್ವೇಷದ ದಳ್ಳುರಿಯನ್ನು ಹಬ್ಬಿಸಿದ ಕುಖ್ಯಾತಿ ಈ ಜೋಷಿಯವರಿಗಿದೆ. ಈ ದಳ್ಳುರಿಯಲ್ಲಿ ತನ್ನ ರೊಟ್ಟಿ ಸುಟ್ಟುಕೊಂಡ ಜೋಷಿ ಲೋಕಸಭೆಗೆ ಚುನಾಯಿತರಾದರು. ಎಲ್ಲ ಬಿಜೆಪಿ ನಾಯಕರಂತೆ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳಲ್ಲಿ ರಾರಾಜಿಸಿದರು.
ಲೋಕಸಭೆಗೆ ಆರಿಸಿ ಬಂದ ನಂತರವೂ ಜೋಷಿಯ ಮನಸ್ಥಿತಿ ಬದಲಾಗ ಲಿಲ್ಲ. ಉತ್ತರಕರ್ನಾಟಕದಲ್ಲ್ಲಿ ಅದರಲ್ಲೂ ಹುಬ್ಬಳ್ಳಿ ಯಲ್ಲಿ ಕೋಮುದ್ವೇಷದ ವಾತಾವರಣ ನಿರಂತರವಾಗಿ ಕಾಪಾಡಿಕೊಂಡು ಬಂದಿದ್ದಾರೆ.ಇಂತಹ ಜೋಷಿಯನ್ನು ಮುಂದಿಟ್ಟು ಕೊಂಡು ಮುಳುಗುತ್ತಿರುವ ಬಿಜೆಪಿ ಹಡಗನ್ನು ತೇಲಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಲು, ಒಂದು ವೇಳೆ ಬಹುಮತ ಸಿಗದಿದ್ದರೂ ಜೆಡಿಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮುಖ್ಯಮಂತ್ರಿಯಾಗಲು ಅನಂತಕುಮಾರ್ ತಂತ್ರ ರೂಪಿಸಿದ್ದಾರೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಷಿ ಇಬ್ಬರೂ ಉತ್ತರ ಕರ್ನಾಟಕದವರು. ಇವರಿಬ್ಬರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಶೆಟ್ಟರ್ ಲಿಂಗಾಯತರು. ಪ್ರಹ್ಲಾದ್ ಜೋಷಿ ಮಾಧ್ವ ಬ್ರಾಹ್ಮಣ. ಈ ಲಿಂಗಾಯತ-ಬ್ರಾಹ್ಮಣ ಜೋಡಿಯನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯ ಎಂದು ಅನಂತಕುಮಾರ್ ಬಿಜೆಪಿಯ ರಾಷ್ಟ್ರೀಯ ನಾಯಕರ ಮನವೊಲಿಸಿದ್ದಾರೆ. ಹೀಗಾಗಿ ಅನಾಯಾಸವಾಗಿ ಪ್ರಹ್ಲಾದ್ ಜೋಷಿಗೆ ನಾಯಕತ್ವ ಒಲಿದು ಬಂದಿದೆ.
ಆದರೆ ಇದೆಲ್ಲ ಬರಿ ತಿರುಕನ ಕನಸು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತೀರ್ಮಾನ ಏನಾಗಿರುತ್ತದೆ ಎಂದು ಶೇ.30ರಷ್ಟು ಮತದಾರರು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈಗಾಗಲೇ ಸೂಚ್ಯವಾಗಿ ತಿಳಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಉತ್ತರ ಕರ್ನಾಟಕದ ಜನ ಅದರಲ್ಲೂ ಲಿಂಗಾಯತರು ತಮ್ಮ ನಾಯಕ ನೆಂದು ಒಪ್ಪಿಕೊಂಡಿಲ್ಲ.
ಬಿಜೆಪಿಯಲ್ಲಿನ ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಬ್ರಾಹ್ಮಣರು ಪ್ರಹ್ಲಾದ್ ಜೋಷಿಯನ್ನು ಒಪ್ಪಿಕೊಳ್ಳುವುದಿಲ್ಲ. ಇವರಿಬ್ಬರ ನಾಯಕತ್ವದಲ್ಲಿ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಬಿಜೆಪಿ ಸಜ್ಜಾಗಿ ನಿಂತಿದೆ. ಪ್ರಹ್ಲಾದ್ ಜೋಷಿಯವರ ನೇಮಕದಿಂದ ಬಿಜೆಪಿ ತೊರೆದು ಹೋದವರು ವಾಪಸ್ ಬರುವುದು ಒತ್ತಟ್ಟಿಗಿರಲಿ, ಬೊಮ್ಮಾಯಿ, ಕತ್ತಿಯಂಥವರು  ಕೂಡ ಬಿಜೆಪಿಯಲ್ಲಿ ಉಳಿಯುವ ಸೂಚನೆಗಳು ಕಂಡು ಬರುತ್ತಿಲ್ಲ. ಹೀಗಾಗಿ ಬರಲಿರುವ ದಿನಗಳಲ್ಲಿ ಬೇರೆ ಪಕ್ಷಗಳತ್ತ ದೊಡ್ಡದೊಂದು ವಲಸೆ ಬಿಜೆಪಿಯಲ್ಲಿ ನಡೆಯಲಿದೆ. ಆಗ ಬಿಜೆಪಿ ಬ್ರಾಹ್ಮಣರ ಅಗ್ರಹಾರವಾಗಿ ಮಾತ್ರ ಉಳಿಯುತ್ತದೆ. 
ಕೃಪೆ:ವಾ.ಭಾರತಿ 

No comments:

Post a Comment