Saturday, March 30, 2013

ಮೋದಿಯೆಂಬ ಅಮೆರಿಕದ ಆಪ್ತರಕ್ಷಕಮಾರ್ಚ್ -30-2013

ಯಾವುದೇ ಸಾಮ್ರಾಜ್ಯಶಾಹಿ ದೇಶ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಎಂತಹ ನಾಯಕನನ್ನು ಬಯಸುತ್ತದೆ? ಜಗತ್ತಿನ ಹಲವಾರು ದೇಶಗಳ ಉದಾಹರಣೆಗಳನ್ನು ತೆಗೆದುಕೊಂಡರೆ ಸಾಮ್ರಾಜ್ಯಶಾಹಿಗೆ ಸ್ವಹಿತಾಸಕ್ತಿಗಿಂತ ಬೇರೇನೂ ಮುಖ್ಯವಲ್ಲ. ಭಾರತದಂತಹ ದೇಶದಲ್ಲಿ ನರೇಂದ್ರ ಮೋದಿಯವರಂತಹ ಫ್ಯಾಶಿಸ್ಟ್ ಸರ್ವಾಧಿಕಾರಿ ಸಾಮ್ರಾಜ್ಯಶಾಹಿಯೇ ಸಹಜ ಆಯ್ಕೆಯಾಗಿರುತ್ತದೆ. ಗುರುವಾರ ಗುಜರಾತಿಗೆ ಭೇಟಿ ನೀಡಿದ ಅಮೆರಿಕದ ಉದ್ಯಮಿಗಳು ಮತ್ತು ಸಂಸದರ ನಿಯೋಗ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದೆ. ಮಾಧ್ಯಮಗಳಿಗೆ ಪ್ರವೇಶವಿಲ್ಲದ ರಹಸ್ಯ ಸಭೆಯಲ್ಲಿ ಮೋದಿಯವರ ಜೊತೆ ಸಮಾಲೋಚನೆ ನಡೆಸಿದ ಈ ನಿಯೋಗ ಗುಜರಾತ್ ಅಭಿವೃದ್ಧಿ ಮಾದರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.  ಬಂಡವಾಳ ಹೂಡಿಕೆಗೆ ಗುಜರಾತ್‌ನಲ್ಲಿ ಸೂಕ್ತ ವಾತಾವರಣವನ್ನು ಮೋದಿ ಕಲ್ಪಿಸಿದ್ದಾರೆಂದು ಈ ನಿಯೋಗ ಶ್ಲಾಘಿಸಿದೆ.
ಹಿಂದುಳಿದ ದೇಶಗಳ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದನ್ನೇ ಬಂಡವಾಳ ಹೂಡಿಕೆ ಎಂದು ಕರೆಯುವ ಅಮೆರಿಕದ ಸಾಮ್ರಾಜ್ಯಶಾಹಿಗೆ ವೆನೆಝುವೆಲದ ಚಾವೆಝ್‌ರಂತಹ ದಿಟ್ಟ ಹೋರಾಟಗಾರ ಬೇಕಾಗಿಲ್ಲ. ತನ್ನ ದೇಶದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ಚಾವೆಝ್ ಅವಕಾಶ ನೀಡಲಿಲ್ಲ. ಆದರೆ ದೇಶಪ್ರೇಮದ ಸೋಗು ಹಾಕಿ ದೇಶದ ಸಕಲ ಸಂಪತ್ತನ್ನು ದರೋಡೆ ಮಾಡಿಕೊಂಡು ಹೋಗಲು ಅವಕಾಶ ನೀಡುವ ಮೋದಿಯವರಂತಹ ವ್ಯಕ್ತಿ ಪ್ರಧಾನಿಯಾಗುವುದು ಅಮೆರಿಕನ್ ಸಾಮ್ರಾಜ್ಯಶಾಹಿಗೆ ಬೇಕಾಗಿದೆ.
ಗುಜರಾತಿನ ಮೋದಿಯವರ ಸಾಧನೆಯನ್ನು ಶ್ಲಾಘಿಸುವ ಮುನ್ನ ಈ ರಾಜ್ಯದಲ್ಲಿ ಬಡತನ ಸಂಪೂರ್ಣ ನಿವಾರಣೆಯಾಗಿದೆಯೇ? ಸಾಕ್ಷರತೆ ಪ್ರಮಾಣ ಎಷ್ಟಿದೆ? ಪೌಷ್ಟಿಕಾಂಶ ಕೊರತೆಯಿಂದ ಸಾಯುತ್ತಿರುವ ಮಕ್ಕಳ ಸಂಖ್ಯೆ ಯಾಕೆ ಹೆಚ್ಚುತ್ತಿದೆ? ದಲಿತರು, ಹಿಂದುಳಿದವರು, ಆದಿವಾಸಿಗಳ ಮೇಲೆ ಯಾಕೆ ನಿರಂತರವಾದ ದೌರ್ಜನ್ಯ ನಡೆಯುತ್ತದೆ? 2002ರ ಗಲಭೆಯಲ್ಲಿ ಬೀದಿಗೆ ಬಿದ್ದ ಮುಸ್ಲಿಂ ಅಲ್ಪಸಂಖ್ಯಾತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಾಗಿದೆಯೇ? ಮಹಿಳೆಯರು ಅಲ್ಲಿ ನೆಮ್ಮದಿಯಾಗಿದ್ದಾರೆಯೇ? ಈ ಅಂಶಗಳ ಬಗ್ಗೆ ಅಮೆರಿಕ ನಿಯೋಗ ಮಾತನಾಡಿಲ್ಲ. ಅವರಿಗೆ ಬೇಕಾಗಿರುವುದು ‘ಬಂಡವಾಳ ಹೂಡಿಕೆ’.
ಬಂಡವಾಳ ಹೂಡಿಕೆ ಮಾಡಿ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮೋದಿಯೆಂಬ ಚೇಲಾನ ಅಗತ್ಯ ಅಮೆರಿಕಕ್ಕೆ ಇದೆ. ಗುಜರಾತ್ ಹತ್ಯಾಕಾಂಡದ ನಂತರ ಅಮೆರಿಕಕ್ಕೆ ಭೇಟಿ ನೀಡಲು ನರೇಂದ್ರ ಮೋದಿಯವರಿಗೆ ವೀಸಾ ನಿರಾಕರಿಸಲಾಗಿತ್ತು. ಅದನ್ನು ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ ಈ ನಿಯೋಗ ಭರವಸೆ ನೀಡಿದೆ. ಬಿಜೆಪಿಯ ಕಡಲಾಚೆಯ  ಸ್ನೇಹಿತರ ಕೂಟ ಈ ಉದ್ಯಮಿಗಳ ಗುಜರಾತ್ ಭೇಟಿಯನ್ನು ಏರ್ಪಡಿಸಿತ್ತು. ಈ ಬಿಜೆಪಿಯ ಸ್ನೇಹಿತರ ಕೂಟ ಅನಿವಾಸಿ ಭಾರತೀಯ ಬಂಡವಾಳಗಾರರ ಗುಂಪಲ್ಲದೆ ಬೇರೇನೂ ಅಲ್ಲ.
ಇವರಿಗೂ ತಮ್ಮ ಹಿತಾಸಕ್ತಿಗಾಗಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಬೇಕಾಗಿದೆ. ಖಾಸಗಿರಂಗದ ಬಂಡವಾಳಗಾರರ ಸೇವೆ ಮಾಡುವ ಅವರ ತಿಜೋರಿ ತುಂಬಿ ಕಾವಲಿಗೆ ನಿಲ್ಲುವ ನರೇಂದ್ರ ಮೋದಿಯವರ ಮುಖದ ಒಂದು ಭಾಗದಲ್ಲಿ ಹಿಂದುತ್ವ ಫ್ಯಾಶಿಸಂನ ರಕ್ತದ ಕಲೆಗಳಿವೆ. ಇನ್ನೊಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ಬಂಡವಾಳಗಾರರನ್ನು ಓಲೈಸುವ ಬೆಣ್ಣೆ ಮೆತ್ತಿಕೊಂಡಿದೆ. ಸರಕಾರಿ ಉದ್ದಿಮೆರಂಗವನ್ನು ವಿರೋಧಿಸುವ ಮೋದಿ ದೇಶದ ಜನರಿಗೆ ಸೇರಿದ ಎಲ್ಲ ಸಂಪತ್ತು ಕಾರ್ಪೊರೇಟ್ ಬಂಡವಾಳಗಾರರ ಪಾಲಾಗಬೇಕೆಂಬ ನಿಲುವು ಹೊಂದಿದವರು.
ಅಂತಲೇ ರೈಲು, ಸಾರಿಗೆ ಸೇವೆಯನ್ನು ಕೂಡ ಖಾಸಗಿ ರಂಗಕ್ಕೆ ಬಿಟ್ಟುಕೊಡಬೇಕೆಂದು ಅವರು ಇತ್ತೀಚೆಗೆ ಹೇಳಿದ್ದರು. ನರೇಂದ್ರ ಮೋದಿಯವರಂತಹ ಆಡಳಿತಗಾರರನ್ನು ಹೊಂದಿರುವ ದೇಶಗಳಲ್ಲಿ ಅಮೆರಿಕ ಹೇಗೆ ಕೊಳ್ಳೆ ಹೊಡೆದಿದೆ ಎಂಬುದಕ್ಕೆ ಚಿಲಿ, ಇಂಡೋನೇಶ್ಯ, ಸುಡಾನ್, ಇಥಿಯೋಪಿಯಾ ಹೀಗೆ ಅನೇಕ ದೇಶಗಳ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಭಾರತದ ಈಗಿನ ಪ್ರಧಾನಿ ಮನಮೋಹನ್ ಸಿಂಗ ಕೂಡ ಅಮೆರಿಕದ ಹಿತಾಸಕ್ತಿಯ ರಕ್ಷಕರಾಗಿದ್ದಾರೆ. ಆದರೆ ಮನಮೋಹನ್ ಸಿಂಗ್‌ರ ನಡಿಗೆಯ ವೇಗ   ಅಮೆರಿಕದ ಕಾರ್ಪೊರೇಟ್ ಧಣಿಗಳಿಗೆ ಸಮಾಧಾನವನ್ನು ತಂದಿಲ್ಲ. ಅಂತಲೇ  ಈ ವೇಗವನ್ನು ಹೆಚ್ಚಿಸಲು ನರೇಂದ್ರ ಮೋದಿಯವರಂತಹ ವ್ಯಕ್ತಿ ಪ್ರಧಾನಿಯಾಗುವುದು ಅಮೆರಿಕಕ್ಕೆ ಬೇಕಾಗಿದೆ. ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರಿಗೂ ಮೋದಿಯವರ ಬಗ್ಗೆ ಒಲವಿದೆ.
ಆದರೆ ಭಾರತದಲ್ಲಿ ಯಾರು ಪ್ರಧಾನಿಯಾಗಬೇಕೆಂಬುದನ್ನು ಅಮೆರಿಕ ಇಲ್ಲವೇ ಭಾರತದ ಯಾವುದೇ ಕಾರ್ಪೊರೇಟ್ ಕಂಪೆನಿಗಳ ಮಾಲಕರು ನಿರ್ಧರಿಸಬೇಕಾಗಿಲ್ಲ. ಈ ದೇಶದ 70ಕೋಟಿಗೂ ಮಿಕ್ಕಿದ ಮತದಾರರು ತಮ್ಮ ಹಿತಾಸಕ್ತಿ ರಕ್ಷಿಸುವ ವ್ಯಕ್ತಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡ ಬಯಸುತ್ತಾರೆ. ಆದರೆ ಹೀಗೆ ಆಯ್ಕೆ ಮಾಡುವ ಜನರನ್ನೇ ಹಿಂದು, ಮುಸ್ಲಿಮ್, ಕ್ರೈಸ್ತ ಎಂದು ವಿಭಜಿಸಿದರೆ ಜನರ ನಿಜವಾದ ಆಯ್ಕೆಗೆ ಬದಲಾಗಿ ಸಾಮ್ರಾಜ್ಯಶಾಹಿ ಶಕ್ತಿಗಳು ಬಯಸುವ ಸೂತ್ರದ ಗೊಂಬೆ ಪ್ರಧಾನಿಯಾಗಬೇಕಿದೆ.
ಅಂತಲೇ ಜನರನ್ನು ಕೋಮು, ಜಾತಿ ಆಧಾರದಲ್ಲಿ ವಿಭಜಿಸಿ ಆ ಮೂಲಕ ತನ್ನ ರಹಸ್ಯ ಕಾರ್ಯಸೂಚಿಯನ್ನು ಜಾರಿಗೆ ತರಲು ಸಂಘಪರಿವಾರದಂತಹ ಸಂಘಟನೆ, ನರೇಂದ್ರ ಮೋದಿಯವರಂತಹ  ಆಪ್ತರಕ್ಷಕ ಅಮೆರಿಕಕ್ಕೆ ಬೇಕಾಗಿದೆ. ಈ ಕಾರಣದಿಂದಲೇ ಅಮೆರಿಕದ ಉದ್ಯಮಿಗಳು ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಭಾರತದ ಕಾರ್ಪೊರೇಟ್ ಬಂಡವಾಳಗಾರರಿಗೆ ಮೋದಿ ಪ್ರಧಾನಿಯಾಗುವುದು ಬೇಕಾಗಿರಬಹುದು.
ಆದರೆ ಭಾರತದ ಕೋಟ್ಯಂತರ ಜನರ ಆಯ್ಕೆ ಮೋದಿಯವರಲ್ಲ. ಅಂತಲೇ ಮೋದಿಯವರ ಮೋಡಿ ಗುಜರಾತಿಗೆ ಮಾತ್ರ ಸೀಮಿತವಾಗಿದೆ. ಆದರೆ ಭಾರತವೆಂದರೆ ಗುಜರಾತ್ ಅಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ದೇಶದ ಕೋಟಿ ಕೋಟಿ ಜನ ಮೋದಿಯವರಂತಹ ವ್ಯಕ್ತಿ ಪ್ರಧಾನಿಯಾಗುವುದನ್ನು ಬಯಸುವುದಿಲ್ಲ ಎಂಬುದನ್ನು ಮರೆಯಬಾರದು. 
ಕೃಪೆ:ವಾ.ಭಾರತಿ 

No comments:

Post a Comment