Sunday, March 3, 2013

ಅಫ್ಝಲ್ ಕುರಿತ ಆರ್‌ಟಿಐ ಮಾಹಿತಿ: ತಿಹಾರ್ ಅಧಿಕಾರಿಗಳ ನಕಾರ



ಲಕ್ನೋ: ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿನ ದೋಷಿ ಅಫ್ಝಲ್‌ಗುರುವನ್ನು ಗಲ್ಲಿಗೇರಿಸಿದಕ್ಕೆ ಸಂಬಂಧಿಸಿದ ಕೆಲ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲು ತಿಹಾರ್ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ.ಗಲ್ಲಿಗೇರಿಸಲ್ಪಟ್ಟ ಅಫ್ಜಲ್ ಗುರು ಕುರಿತ ಮಾಹಿತಿಗಳನ್ನು ನೀಡುವುದು ದೇಶದ ಸಾರ್ವ ಭೌಮತೆ, ಭದ್ರತೆ ಮತ್ತು ಏಕತೆಗೆ  ಧಕ್ಕೆಯನ್ನುಂಟು ಮಾಡುತ್ತದೆ ಮತ್ತು ವಿದೇಶಾಂಗ ಸಂಬಂಧಗಳಿಗೂ ಹಾನಿಯನ್ನುಂಟುಮಾಡುತ್ತದೆ ಎಂದು ಉತ್ತರ ಪ್ರದೇಶದ ಲಕ್ನೋ ಮೂಲದ ಊರ್ವಶಿ ಶರ್ಮಾರಿಗೆ ನೀಡಿರುವ ಮಾಹಿತಿ ಹಕ್ಕು ಕಾಯ್ದೆಯ ಹಿಂಬರಹದಲ್ಲಿ ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.ಅಫ್ಝಲ್‌ಗುರುವನ್ನು ಗಲ್ಲಿಗೇರಿಸುವುದಕ್ಕೆ ಸಂಬಂಧಿಸಿ ದಂತೆ ಆತನ ವಿರುದ್ಧ ನೀಡಲಾದ ಬ್ಲಾಕ್ ವಾರೆಂಟ್, ಆತನ ದಯಾಭಿಕ್ಷೆ ಅರ್ಜಿಯ ಕುರಿತಂತೆ ಗೃಹ ಸಚಿವಾಲಯ ತೆಗೆದುಕೊಂಡ ನಿರ್ಣಯಗಳು, ಗೃಹ ಸಚಿವಾಲಯ ಜೈಲಿಗೆ ಕಳುಹಿಸಿದ ಪತ್ರಗಳು, ಆತನಿಗೆ ಮಾಡಿದ ವೆಚ್ಚ ಮೊದಲಾದವುಗಳ ನಕಲು ಪ್ರತಿಗಳು ಮತ್ತು ವಿವರಗಳನ್ನು ನೀಡುವುದು ಭಾರತ ಇತರೆ ದೇಶಗಳೊಂದಿಗೆ ಹೊಂದಿರುವ ಒಪ್ಪಂದಗಳಿಗೆ ಧಕ್ಕೆಯನ್ನುಂಟುಮಾಡುತ್ತದೆ ಎಂದು ತಿಹಾರ್ ಜೈಲಿನ ಮಹಾ ನಿರ್ದೇಶಕರ ಕಾರ್ಯಾಲಯ ತನ್ನ ಹಿಂಬರಹದಲ್ಲಿ ತಿಳಿಸಿದೆ.
ಅಫ್ಝಲ್ ಗುರುವಿನ ಅಂತ್ಯ ಸಂಸ್ಕಾರ ಮಾಡುವ ಸ್ಥಳವನ್ನು ನಿಗದಿಪಡಿಸುವುದಕ್ಕೆ ತೆಗೆದುಕೊಂಡ ನಿರ್ಧಾರ ಮತ್ತು ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಪತ್ರಗಳ ನಕಲು ಪ್ರತಿಯನ್ನು ನೀಡುವಂತೆಯೂ ಊರ್ವಶಿ ಶರ್ಮಾ ಆರ್‌ಟಿಐ ಮೂಲಕ ಕೋರಿದ್ದರು.
ಮಾಹಿತಿ ಹಕ್ಕು ಕಾಯ್ದೆಯಡಿ ನಾನು ಕೇಳಿದ ವಿವರಗಳನ್ನು ತಿಹಾರ್ ಜೈಲಿನ ಅಧಿಕಾರಿಗಳು ಧನಾತ್ಮಕವಾದ ರೀತಿಯಲ್ಲಿ ನೀಡಿದ್ದರೆ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಹಲವಾರು ಪಿತೂರಿ ಸಿದ್ಧಾಂತಗಳು ಹೊರಬರುತ್ತಿತ್ತು ಎಂದು ಊರ್ವಶಿ ಶರ್ಮಾ ತಿಳಿಸಿದ್ದಾರೆ.
ಅಫ್ಝಲ್ ಗುರುವನ್ನು ರಹಸ್ಯವಾಗಿ ಗಲ್ಲಿಗೇರಿಸಿದ್ದು ಮತ್ತು ಅಂತ್ಯ ಸಂಸ್ಕಾರ ನಡೆಸಿದ್ದಕ್ಕೆ ವ್ಯಾಪಕವಾದ ಪ್ರತಿಭಟನೆಗಳು ನಡೆದಿವೆ. ಈ ವಿಚಾರದಲ್ಲಿ ಕೇಂದ್ರ ಸರಕಾರ ಮತ್ತು ತಿಹಾರ್ ಜೈಲಿನ ಆಡಳಿತ ಶುದ್ಧವಾಗಿ ಹೊರಬರಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ

No comments:

Post a Comment