Thursday, March 28, 2013

ಅಪಾಯಕಾರಿ ತಿರುವು ಪಡೆದ ತಮಿಳು ಈಳಂ ರಾಜಕೀಯ- ಮಾರ್ಚ್ -28-2013

ಚುನಾವಣೆ ಹತ್ತಿರ ಬರುತ್ತಿರುವ ಹಾಗೆಯೇ ತಮಿಳುನಾಡಿನ ರಾಜಕೀಯ ಅಪಾಯಕಾರಿ ಹಂತವನ್ನು ತಲುಪುತ್ತಿದೆ. ತಮಿಳುನಾಡು ಸರಕಾರ ಒಂದೆಡೆ ಶ್ರೀಲಂಕಾ ಕ್ರಿಕೆಟಿಗರಿಗೆ ನಿಷೇಧ ಘೋಷಿಸಿದೆ.ಇದೀಗ ತಮಿಳು ಈಳಂಗೆ ಬೆಂಬಲ ಘೋಷಿಸಿ ನಿರ್ಣಯವನ್ನೂ ಮಂಡಿಸಿದೆ. ಶ್ರೀಲಂಕಾವನ್ನು ಯಾವ ಕಾರಣಕ್ಕೂ ಮಿತ್ರರಾಷ್ಟ್ರವೆಂದು ಪರಿಗಣಿಸಬಾರದೆಂದು ಅದು ನಿರ್ಣಯದಲ್ಲಿ ಹೇಳಿದೆ. ತಮಿಳರ ಕುರಿತಂತೆ ಪ್ರೀತಿ, ಅನುಕಂಪ ಸೂಸುವಲ್ಲಿ ಕರುಣಾನಿಧಿ ಮತ್ತು ಜಯಲಲಿತಾರ ನಡುವೆ ಪೈಪೋಟಿ ನಡೆಯುತ್ತಿದೆ. ಭಾರತದ ಸದ್ಯದ ಸ್ಥಿತಿಯಂತೂ ತೀರಾ ಶೋಚನೀಯವಾಗಿದೆ. ಪಾಕಿಸ್ತಾನ ಹುಟ್ಟುತ್ತಲೇ ಶತ್ರು ದೇಶ. ನೆರೆಯ ಇನ್ನೊಂದು ಬಲಿಷ್ಠ ದೇಶ ಚೀನ ಯಾವತ್ತು ನಮ್ಮ ಮೇಲೆ ಆಕ್ರಮಣಗೈಯುತ್ತದೆಯೋ ಎಂಬ ಆತಂಕ ನಮ್ಮದು. ನೇಪಾಳ ಮಗ್ಗುಲ ಮುಳ್ಳು. ಇದೀಗ ಪಾದದ ಬುಡದಲ್ಲಿರುವ ಶ್ರೀಲಂಕಾವೂ ಶಾಶ್ವತ ಶತ್ರು ರಾಷ್ಟ್ರವಾಗುವಲ್ಲಿ ಮುಂದಡಿಯಿಡುತ್ತಿದೆ.
ತಮಿಳರ ಕುರಿತಂತೆ ಜಯಲಲಿತಾ ಮತ್ತು ಕರುಣಾನಿಧಿಯವರ ನಿಲುವುಗಳಲ್ಲಿ ಒಂದಿಷ್ಟು ಪ್ರಾಮಾಣಿಕತೆಯಿರುತ್ತಿದ್ದರೆ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಹುದಿತ್ತು. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ದೇಶದ ವಿರುದ್ಧ ಯುದ್ಧ ಸಾರಬೇಕೆನ್ನುವ ಹೇಳಿಕೆಯನ್ನು ನೀಡುವುದು ನಿಜಕ್ಕೂ ಅಪಾಯಕಾರಿ. ತಮಿಳರ ಬರ್ಬರ ಹತ್ಯಾಕಾಂಡ ನಡೆಯುತ್ತಿರುವಾಗ, ಕರುಣಾನಿಧಿಯಾಗಲಿ, ಜಯಲಲಿತಾ ಆಗಲಿ ಈ ಪರಿಯ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರೆ ಅದರ ಬಗ್ಗೆ ದೇಶ ಮಾತ್ರವಲ್ಲ, ವಿಶ್ವವೇ ಯೋಚಿಸುವಂತಾಗುತ್ತಿತ್ತು.
ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ, ಕರುಣಾ ಮತ್ತು ಜಯಾ ಇಬ್ಬರೂ ವೊಸಳೆ ಕಣ್ಣೀರು ಸುರಿಸುತ್ತಿದ್ದರೆ, ಅದನ್ನು ಹೇಗೆ ಸ್ವೀಕರಿಸಬೇಕು ಎಂದು ತಿಳಿಯದೆ ದೇಶದ ಜನ ಕಂಗಾಲಾಗಿದ್ದಾರೆ. ಭಾರತದ ವಿದೇಶಾಂಗ ನೀತಿಯೆನ್ನುವುದಂತೂ ರೈಲು ಹಳಿಯಲ್ಲಿ ಓಡುವ ಎತ್ತಿನ ಬಂಡಿಯಂತಾಗಿದೆ. ಈ ದೇಶ ತಮಿಳು ಈಳಂ ಬಗ್ಗೆ ಮೃದು ಧೋರಣೆಯನ್ನು ತಳೆಯಿತು ಎನ್ನೋಣ. ಆಗ ಶ್ರೀಲಂಕಾ, ಪಾಕಿಸ್ತಾನ, ಚೀನಗಳು ಒಂದಾಗಿ ಕಾಶ್ಮೀರ ಸಮಸ್ಯೆಯನ್ನು ಕೈಗೆತ್ತಿಕೊಳ್ಳುತ್ತವೆ.
ಹಾಗೆಂದು ಅಮಾಯಕ ತಮಿಳರ ಬರ್ಬರ ಹತ್ಯಾಕಾಂಡವನ್ನು ಒಪ್ಪಿಕೊಂಡು ಮೌನವಾಗಿ ದ್ದರೆ ಅದು ಭಾರತದ ವರ್ಚಸ್ಸಿಗೆ ಮಾಡುವ ಅವಮಾನವಾಗುತ್ತದೆ. ಶ್ರೀಲಂಕಾದ ಮುಖ್ಯ ಧರ್ಮವಾಗಿರುವ ಬೌದ್ಧಚಿಂತನೆಗಳಿಗೆ ಮಾಡುವ ಅವಮಾನವಾಗುತ್ತದೆ. ಆದುದರಿಂದ ತಮಿಳರ ಸಮಸ್ಯೆಯನ್ನು ಉಗುಳಲೂ ಆಗದೆ ನುಂಗಲೂ ಆಗದೆ ಭಾರತ ಸಂಕಟದಲ್ಲಿದೆ. ಈ  ಸಂಕಟವನ್ನು ಅರಿತುಕೊಂಡೇ ತಮಗೆ ಬೇಕಾದಷ್ಟು ಮೈ ಬೆಚ್ಚಗೆ ಮಾಡಿಕೊಳ್ಳಲು ಜಯಾ ಮತ್ತು ಕರುಣಾನಿಧಿ ಹೊರಟಿದ್ದಾರೆ ಹೊರತು, ಅವರಿಗೆ ತಮಿಳರನ್ನು ಹಿಂಸೆಯಿಂದ ಮುಕ್ತಗೊಳಿಸಿ, ಅವರನ್ನು ಸ್ವತಂತ್ರರನ್ನಾಗಿ ಮಾಡುವ ಯಾವ ದೂರದ ಉದ್ದೇಶವೂ ಇಲ್ಲ.
ಆದುದರಿಂದಲೇ ಜಯಲಲಿತಾರ ರಾಜಕೀಯವೂ ಭಾರತದ ಪಾಲಿಗೆ ಅಪಾಯಕಾರಿ. ಕೇಂದ್ರದ ಮೌನವೂ ಭಾರತದ ಪಾಲಿಗೆ ಅಪಾಯಕಾರಿ.ಕಾಶ್ಮೀರದ ಕುರಿತಂತೆ ಭಾರತ ಪ್ರಾಮಾಣಿಕ ಹೆಜ್ಜೆಗಳನ್ನು ಇಡುತ್ತಾ ಬಂದಿದ್ದರೆ ಇಂದು ಶ್ರೀಲಂಕಾದ ಕುರಿತಂತೆ ಭಾರತ ನಾಲಗೆ ಸುಟ್ಟ ಬೆಕ್ಕಿನಂತಾಡಬೇಕಾಗಿರಲಿಲ್ಲ.  ಶ್ರೀಲಂಕಾವು ಈಳಂ ವಿಷಯದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಎದುರಿಸಬೇಕು ಎನ್ನುವಾಗ, ಅದು ಪರೋಕ್ಷವಾಗಿ ಭಾರತಕ್ಕೂ ಅನ್ವಯವಾಗುತ್ತದೆ ಎನ್ನುವುದು ನಮ್ಮನ್ನಾಳುವ ಸೋಗಲಾಡಿಗಳಿಗೆ ಚೆನ್ನಾಗಿ ಗೊತ್ತಿದೆ.
ಈಳಂ-ಕಾಶ್ಮೀರ ಇವರೆಡರ ಜನಗಳ ಭಾಷೆ ಬೇರೆ ಬೇರೆಯಾಗಿರಬಹುದು. ಆದರೆ ಸ್ವಾತಂತ್ರ, ಮಾನವ ಹಕ್ಕುಗಳಿಗ ಯಾವುದೇ ಭಾಷೆ, ಧರ್ಮಗಳಿರುವುದಿಲ್ಲ. ಇಕ್ಕಡೆಯ ಜನರೂ ನೆಮ್ಮದಿಯ ಬದುಕನ್ನು ಬಯಸು ತ್ತಿದ್ದಾರೆ. ಅದನ್ನು ಉಭಯ ಸರಕಾರಗಳು ನೀಡಬೇಕಾಗಿದೆ. ಈಳಂನ ಜನರಿಗೆ ನ್ಯಾಯ ನೀಡಿ ಎಂದು ಹೇಳುವ ಭಾರತ, ಮೊತ್ತ ಮೊದಲು ತನ್ನ ಜನರಿಗೆ ನ್ಯಾಯವನ್ನು ನೀಡಬೇಕಾಗುತ್ತದೆ. ತನ್ನ ಜನರ ಮಾನವ ಹಕ್ಕಿನ ಅಹವಾಲನ್ನು ಕೇಳಬೇಕಾಗುತ್ತದೆ. ಆದುದರಿಂದಲೇ ಕೇಂದ್ರ ಸರಕಾರ ಶ್ರೀಲಂಕಾದ ವಿಷಯದಲ್ಲಿ ಕಲ್ಲು ನುಂಗಿದ ಕೋಳಿಯಂತಾ ಡುತ್ತಿದೆ. ಜಯಾ-ಕರುಣಾರಿಗೂ ಇದೇ ಬೇಕಾಗಿರುವುದು.
ತಮಿಳರ ಸಮಸ್ಯೆ ಹೊತ್ತಿ ಉರಿಯುತ್ತಿದ್ದರೆ ಮಾತ್ರ, ಆ ಬೆಂಕಿಯಲ್ಲಿ ತಮ್ಮ ತಮ್ಮ ಬೇಳೆಗಳನ್ನು ಬೇಯಿಸಿ ರಾಜಕೀಯದ ಅಡುಗೆ ಮಾಡಿ ಉಣ್ಣಬಹುದು. ಸದ್ಯಕ್ಕೆ ಇಬ್ಬರೂ ಅದನ್ನೇ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಕ್ರೀಡಾಳುಗಳಿಗೆ ಬಹಿಷ್ಕಾರ ವಿಧಿಸಿರುವ ಜಯಲಲಿತಾರ ಕ್ರಮ ಯಾವ ರೀತಿಯಲ್ಲೂ ಒಪ್ಪುವಂತಹದಲ್ಲ. ಕ್ರೀಡೆ ರಾಜಕೀಯೇತರವಾದುದು. ಮನುಷ್ಯರ ನಡುವೆ ಸೇತುವೆಯನ್ನು ಬೆಸೆಯುವ ಕೆಲಸವನ್ನು ಕ್ರೀಡಾಳುಗಳು ಮಾಡುತ್ತಿದ್ದಾರೆ.
ಎಲ್ಲ ಜಾತಿ, ಧರ್ಮ, ಗಡಿಗಳನ್ನು ಮೀರಿ ಕ್ರೀಡೆ ವಿಸ್ತರಿಸಿಕೊಳ್ಳುತ್ತಿರುವ ದಿನಗಳಲ್ಲಿ ಅದಕ್ಕೂ ನಾವು ಬೇಲಿ ಹಾಕಿ ಕೂತರೆ, ವಿಶ್ವ ಎಲ್ಲ ಭರವಸೆಯನ್ನು ಕಳೆದುಕೊಳ್ಳಬೇಕಾಗು ತ್ತದೆ. ಮನುಷ್ಯ ಹೃದಯಗಳನ್ನು ಬೆಸೆಯು ವುದಕ್ಕೆ ಅಳಿದುಳಿದಿರುವ ಬೆರಳೆಣಿಕೆಯ ಮಾಧ್ಯಮಗಳಲ್ಲಿ ಕ್ರೀಡೆಯೂ ಒಂದು. ಹೀಗಿರುವಾಗ ಕ್ರೀಡಾಳುಗಳನ್ನೂ ರಾಜಕೀಯ ಕಣ್ಣಿನಿಂದ ನೋಡಿದರೆ, ಈ ವಿಶ್ವದ ಎಲ್ಲ ದೇಶಗಳೂ ಪ್ರತ್ಯೇಕ ಪ್ರತ್ಯೇಕ ದ್ವೀಪಗಳಾಗಿ ಬದುಕಬೇಕಾಗುತ್ತದೆ. ಈ ಎಚ್ಚರಿಕೆ ನಮ್ಮೆಲ್ಲರಲ್ಲೂ ಇರಬೇಕಾಗಿದೆ
ಕೃಪೆ:ವಾ.ಭಾರತಿ 

No comments:

Post a Comment