Monday, March 18, 2013

ವೈವಾಹಿಕ ವಿವಾದ: ದಂಪತಿ ರಾಜಿಯಾದಲ್ಲಿ ಪ್ರಕರಣ ರದ್ದು: ಸುಪ್ರೀಂ ಸಲಹೆ- ಮಾರ್ಚ್ -18-2013

ಹೊಸದಿಲ್ಲಿ: ಜಗಳವಾಡುತ್ತಿರುವ ದಂಪತಿ ನ್ಯಾಯಾಲಯದ ಹೊರಗೆ ಒಪ್ಪಂದಕ್ಕೆ ಬರಲು ಸಿದ್ಧರಾದಲ್ಲಿ, ಮಹಿಳೆಯೊಬ್ಬಳು ತನ್ನ ಗಂಡ ಅಥವಾ ಆತನ ಕುಟುಂಬಿಕರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಹಿಂಸಾ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಇತ್ತೀಚಿನ ದಿನಗಳಲ್ಲಿ ವೈವಾಹಿಕ ವಿವಾದ ಪ್ರಕರಣಗಳು ಅಗಾಧ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಕಾರಣ, ಅವುಗಳನ್ನು ನ್ಯಾಯಾಲಯದ ಹೊರಗೆ ತೀರ್ಮಾನಿಸಲು ಉತ್ತೇಜನ ನೀಡಬೇಕೆಂದು ಅದು ಅಭಿಪ್ರಾಯಿಸಿದೆ.
ನ್ಯಾಯಾಲಯದಲ್ಲಿ ಹೋರಾಡುವ ಬದಲು ಕಕ್ಷಿಗಳು ತಮ್ಮ ತಪ್ಪನ್ನು ಸರಿಪಡಿಸಿ, ಪರಸ್ಪರ ಒಪ್ಪಂದದ ಮೂಲಕ ರಾಜಿಯಲ್ಲಿ ಇತ್ಯರ್ಥಗೊಳಿಸಲು ಬಯಸಿದಲ್ಲಿ, ವೈವಾಹಿಕ ವಿವಾದಗಳಿಗೆ ಸಂಪೂರ್ಣ ನ್ಯಾಯ ಒದಗಿಸುವ ದೃಷ್ಟಿಯಿಂದ ನ್ಯಾಯಾಲಯಗಳು ತಮ್ಮ ವಿಶೇಷ ನ್ಯಾಯಾಂಗ ಅಧಿಕಾರ ಚಲಾಯಿಸಲು ಹಿಂದೆಗೆಯಲು ಬಾರದೆಂದು ನ್ಯಾಯಮೂರ್ತಿ ಪಿ.ಸದಾಶಿವನ್ ನೇತೃತ್ವದ ಪೀಠವೊಂದು ಹೇಳಿದೆ.
ಕಕ್ಷಿಗಳು ರಾಜಿಗೆ ಬಂದರೆ, ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವ ದಂಡ ಪ್ರಕ್ರಿಯಾ ಸಂಹಿತೆಯ 482ನೆ ಪರಿಚ್ಛೇದ ನೀಡಿರುವ ಅಧಿಕಾರವನ್ನು ಹೈಕೋರ್ಟ್‌ಗಳು ಬಳಸಿಕೊಳ್ಳಬೇಕೆಂದು ಅದು ಸಲಹೆ ನೀಡಿದೆ.

No comments:

Post a Comment