Wednesday, March 27, 2013

ಖಾಕಿ ಬಟ್ಟೆಯೊಳಗಿರುವ ಉಗ್ರರನ್ನು ಗುರುತಿಸಬೇಕಾಗಿದೆ ಮಾರ್ಚ್ -27-2013

ಕಾಶ್ಮೀರ ಇನ್ನಷ್ಟು ನಿಗೂಢವಾಗುತ್ತಿದೆ. ಇನ್ನಷ್ಟು ಅಪರಿಚಿತವಾಗುತ್ತಿದೆ ಅಥವಾ ಕಾಶ್ಮೀರವನ್ನು ನಮ್ಮಿಂದ ಅನ್ಯವಾಗಿಸಲು ಸೇನೆ, ಪೊಲೀಸರು ಶತಾಗತಾಯ ಹೋರಾಡುತ್ತಿದ್ದಾರೆ. ಅದರ ಭಾಗವಾಗಿಯೇ ಲಿಯಾಕತ್ ಅಲಿ ಎಂಬಾತ ನನ್ನು ಉಗ್ರನಾಗಿಸಲು ಹೊರಟು, ಪೊಲೀಸರು ಬಾಲ ಸುಟ್ಟುಕೊಂಡು ಓಡಾಡುತ್ತಿದ್ದಾರೆ. ಭಯೋತ್ಪಾದಕನಾಗಲು ಯಾವ ತರಬೇತಿಯ ಅಗತ್ಯವೂ ಇಲ್ಲ. ಕಾಶ್ಮೀರದ ಸೇನೆಯಲ್ಲಿ, ಪೊಲೀಸರ ಕೈಯಲ್ಲಿ ಒಮ್ಮೆ ಸಿಲುಕಿ ಹಾಕಿ ಕೊಂಡರೆ ಅವನು ತನ್ನ ಹಣೆಯಲ್ಲಿ ಶಾಶ್ವತವಾಗಿ ಭಯೋತ್ಪಾದಕನ ಹಚ್ಚೆ ಹಾಕಿಸಿಕೊಂಡು ಓಡಾಡಬೇಕು. ಅವನನ್ನು ಪೊಲೀಸರು ಯಾವತ್ತೂ ಬಂಧಿಸಬಹುದು. ಈ ದೇಶದ ದೇಶಪ್ರೇಮಿಗಳನ್ನು ರಂಜಿಸಲು, ಚುನಾವಣೆ ಯಲ್ಲಿ ಮತಗಳನ್ನು ಸೃಷ್ಟಿಸಲು, ಕೆಲವು ಹಿತಾಸಕ್ತಿಗಳನ್ನು ತೃಪ್ತಿಪಡಿಸಲು ಅವನನ್ನು ಎತ್ತಿಕೊಂಡು ಬಂದು ವಿಚಾರಣೆಯ ಅಣಕ ವಾಗಿ ಗಲ್ಲಿಗೇರಿಸಲೂ ಬಹುದು. ಅದನ್ನೆಲ್ಲ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ, ಪ್ರಶ್ನಿಸಿದಾತನ ದೇಶಭಕ್ತಿ ಪ್ರಶ್ನಾರ್ಹವಾಗುತ್ತದೆ.
ಹಿಂದೊಮ್ಮೆ, ರಾಷ್ಟ್ರಪದಕವನ್ನು ಪಡೆಯು ವುದಕ್ಕಾಗಿ ಕೃತಕವಾದ, ನಕಲಿ ಯುದ್ಧವನ್ನು ಸೃಷ್ಟಿಸಿ ಇದೇ ಕಾಶ್ಮೀರದಲ್ಲಿ ಕೆಲವು ಸೇನಾಧಿಕಾರಿಗಳು ಸಿಕ್ಕಿ ಬಿದ್ದಿದ್ದರು. ನಕಲಿ ಎನ್‌ಕೌಂಟರ್‌ಗಳು ಕಾಶ್ಮೀರದಲ್ಲಿ ಸಹಜ ಕ್ರಿಯೆಯಾಗಿದೆ. ಅನೇಕ ಸಂದರ್ಭಗಳಲ್ಲಿ ಇದ್ದಕ್ಕಿದ್ದ ಹಾಗೆಯೇ ಭೀಕರ ಉಗ್ರ ಸಂಘಟನೆ ಗಳ ಕಾರ್ಯಕರ್ತರನ್ನು ಹಿಡಿದು ಮಾಧ್ಯಮ ಗಳಲ್ಲಿ ಇಲ್ಲಿನ ಪೊಲೀಸರು ಸುದ್ದಿಯಾಗುತ್ತಾರೆ.
ಅದೇ ರೀತಿಯಲ್ಲಿ ಲಿಯಾಕತ್ ಎನ್ನುವ ಉಗ್ರನನ್ನು ಬಂಧಿಸಿ ಇದೀಗ ದಿಲ್ಲಿ ಪೊಲೀಸರು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಈ ಉಗ್ರನನ್ನು ಬಂಧಿಸುವ ಮೂಲಕ, ದಿಲ್ಲಿಯಲ್ಲಿ ನಡೆಯಲಿದ್ದ ಭಾರೀ ಸ್ಫೋಟವೊಂದನ್ನು ತಾವು ತಪ್ಪಿಸಿದ್ದೇವೆ ಎಂದು ಮೀಸೆ ತಿರುಗಿಸಿದ್ದಾರೆ ಬೇರೆ. ಆದರೆ ಹೀಗೆಂದು ಮಾಧ್ಯಮಗಳಲ್ಲಿ ಮಿಂಚಿದ ಕೆಲವೇ ದಿನಗಳಲ್ಲಿ ಅವರ ಮಾತುಗಳು ಸಂಶಯಕ್ಕೆ ಎಡೆ ಮಾಡಿಕೊಟ್ಟಿವೆ.
ಸ್ಫೋಟಗಳು ಸಂಭವಿಸಿದ ಮರುಕ್ಷಣವೇ ಆ ಸ್ಫೋಟವನ್ನು ಯಾವುದೋ ವಿದೇಶಿ ಉಗ್ರಸಂಘಟನೆಗಳ ತಲೆಗೆ ಕಟ್ಟಿ ಕೈ ತೊಳೆದು ಕೊಳ್ಳುವ ಪೊಲೀಸರು ಇದೀಗ ಸುಲಭ ಮಾರ್ಗದಲ್ಲಿ ಸ್ಫೋಟಗಳನ್ನು ತಡೆಯುವುದು ಹೇಗೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಶರಣಾಗತರಾಗಿರುವ ಉಗ್ರರನ್ನು ಬಂಧಿಸಿ, ಅವನ ತಲೆಯ ಮೇಲೆ ಆರೋಪಗಳನ್ನು ಹೊರಿಸಿದರೆ ಸಾಕು, ಪೊಲೀಸರಿಗೆ ಉಗ್ರರನ್ನು ಹಿಡಿದ ಮತ್ತು ಸ್ಫೋಟಗಳನ್ನು ತಡೆದ ಎರಡು ಕಿರೀಟಗಳು ದೊರಕುತ್ತವೆ.
ಲಿಯಾಕತನ್‌ನನ್ನು ಬಂಧಿಸಿ ರುವ ಪೊಲೀಸರು ಇದೇ ರೀತಿ ಕಟ್ಟಿದ ಕತೆ ಇದೀಗ ಪ್ರಶ್ನಾರ್ಹವಾಗಿದೆ. ತನ್ನ ಮಕ್ಕಳು, ಪತ್ನಿಯ ಜೊತೆಗೆ ಶಾಪಿಂಗ್‌ಗೆ ಹೋದವನನ್ನು ಬಂಧಿಸಿದ ಪೊಲೀಸರು, ಅಲ್ಲಿ ಹಿಡಿದೆವು, ಇಲ್ಲಿ ಹಿಡಿದೆವು ಎಂದು ಕತೆ ಕಟ್ಟಿ ಇದೀಗ ಕೈ ಕೈ ಹಿಸುಕುತ್ತಿದ್ದಾರೆ. ಜಮ್ಮುಕಾಶ್ಮೀರ ಪೊಲೀಸರು ಒಂದು ಹೇಳುತ್ತಿದ್ದರೆ ದಿಲ್ಲಿ ಪೊಲೀಸರು ಇನ್ನೊಂದು ಹೇಳುತ್ತಿದ್ದಾರೆ.
ಇತ್ತೀಚೆಗೆ ಗಲ್ಲಿಗೇರಿಸಲ್ಪಟ್ಟ ಅಫ್ಝಲ್‌ಗುರು ವಿನ ಕುರಿತಂತೆಯೂ ಇಂತಹದೇ ಆರೋಪ ಗಳಿವೆ. ಆತನೂ ಮಾಜಿ ಪ್ರತ್ಯೇಕತಾವಾದಿ ಯಾಗಿದ್ದ. ಒಮ್ಮೆ ಪೊಲೀಸರಿಗೆ ಶರಣಾದ ಬಳಿಕ, ಪ್ರತಿಬಾರಿ ಪೊಲೀಸರಿಂದ ಚಿತ್ರಹಿಂಸೆ ಗೊಳಗಾಗುತ್ತಿದ್ದ. ಯಾವುದೇ ಹಿಂಸೆ ನಡೆಯಲಿ, ಈತನನ್ನು ಕರೆದು ವಿಚಾರಣೆ ನಡೆಸಲಾಗುತ್ತಿತ್ತು. ‘‘ನಿನಗೇನು ಮಾಹಿತಿ ಗೊತ್ತಿದೆ ಹೇಳು’’ ಎಂದು ಚಿತ್ರಹಿಂಸೆ ನೀಡಲಾಗುತ್ತಿತ್ತು. ಇದನ್ನು ಆತ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾನೆ. ಹಾಗೆಯೇ, ಸಂಸತ್ ಮೇಲಿನ ದಾಳಿಯಲ್ಲಿ ಈ ಕುರಿಯನ್ನು ಪೊಲೀಸರು ಬಲಿ ಕೊಟ್ಟರೇ ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ.
ನ್ಯಾಯಾಲಯದಲ್ಲಿ ಈತನ ವಿಚಾರಣೆ ಸರಿಯಾಗಿ ನಡೆಯಲೇ ಇಲ್ಲ ಎಂಬ ಆರೋಪವೂ ಇದೆ. ಇಂದು ಯಾವುದೇ ಸ್ಫೋಟ ಪ್ರಕರಣಗಳಲ್ಲಿ ಆರೋಪಿಗಳು ಸಿಗದೇ ಇದ್ದರೆ, ಲಿಯಾಕತ್‌ನಂತಹ ನೂರಾರು ಕುರಿಗಳು ಬಲಿಗೆಂದೇ ಸಿದ್ಧಗೊಳಿಸಲ್ಪಟ್ಟಿವೆ. ಇದು ಕೇವಲ ಕಾಶ್ಮೀರಿಗಳಿಗೆ ಮಾತ್ರ ಸಂಬಂಧಿಸಿದುದಲ್ಲ. ಈಶಾನ್ಯದಲ್ಲಿ ಮಾಜಿ ನಕ್ಸಲೀಯರ ಸ್ಥಿತಿಯೂ ಇದೇ ಆಗಿದೆ. ಈ ಮೂಲಕ ನಮ್ಮ ಪೊಲೀಸ್ ವ್ಯವಸ್ಥೆ ಮತ್ತು ಸೇನೆ ಎಂತಹ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿವೆ ಎಂದರೆ, ಪರೋಕ್ಷವಾಗಿ ಅವುಗಳೇ ಉಗ್ರರಿಗೆ ನೆರವಾಗುವಂತಿದೆ.
ತಪ್ಪು ಬಂಧನಗಳು, ಸುಳ್ಳು ಆರೋಪಗಳಿಂದ ಲಾಭ ಪಡೆಯುವವರು ನಿಜವಾದ ಉಗ್ರರು. ಈ ದೇಶವನ್ನು ಛಿದ್ರಗೊಳಿಸಲು ಹವಣಿಸುವ ವಿದೇಶಿ ಉಗ್ರರು ಹಾಗೂ ಸ್ವದೇಶಿ ಕೇಸರಿ ಉಗ್ರರು ಇದರ ಲಾಭವನ್ನು ಪಡೆದುಕೊಳ್ಳು ತ್ತಾರೆ. ನಿಜವಾದ ಉಗ್ರರ ಬಂಧನವಾದಾ ಗಲೂ ಜನರು ಅನುಮಾನದ ಕಣ್ಣಿನಿಂದ ನೋಡುತ್ತಾರೆ. ಇದಿಷ್ಟೇ ಅಲ್ಲ, ಉಗ್ರವಾದ ದಿಂದ ಬೇಸತ್ತು ಹೊರ ಬರುವವರನ್ನೂ ಪರೋಕ್ಷವಾಗಿ ಪೊಲೀಸರೇ ತಡೆದಂತಾಗು ತ್ತದೆ. ಉಗ್ರವಾದದಿಂದ ಹೊರ ನಡೆದರೂ ನೆಮ್ಮದಿಯಿಲ್ಲ ಎನ್ನುವುದು ಅರಿತಾಗ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕುರಿತಂತೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.
ಜೊತೆಗೆ ಅಮಾಯಕರನ್ನು ಬಂಧಿಸುವುದರಿಂದ, ಉಗ್ರವಾದಿಗಳನ್ನು ಪೊಲೀಸರೇ ಸಮರ್ಥಿಸಿ ದಂತಾಗುತ್ತದೆ. ಪೊಲೀಸರಿಂದ ಬಂಧಿಸಲ್ಪಟ್ಟ ಅಮಾಯಕರು, ಅವರ ಕುಟುಂಬಿಕರು ಉಗ್ರವಾದವನ್ನು ಪರೋಕ್ಷವಾಗಿ ಬೆಂಬಲಿಸ ತೊಡಗುತ್ತಾರೆ. ಈಶಾನ್ಯ ಭಾರತ ಇಂದು ಉಗ್ರರ ನೆಲೆವೀಡಾಗಿರುವುದು ಸೇನೆ ಮತ್ತು ಪೊಲೀಸರ ಈ ಹೃದಯಹೀನ ಕೃತ್ಯಗಳಿಂದ. ಆದುದರಿಂದ ಸರಕಾರ ಇದನ್ನು ತಡೆಯುವು ದಕ್ಕೆ ಮೊದಲು ಕ್ರಮ ತೆಗೆದುಕೊಳ್ಳಬೇಕಾಗಿದೆ.ಲಿಯಾಕತ್ ಅಮಾಯಕನೋ, ಆರೋಪಿಯೋ ಎನ್ನುವುದು ತನಿಖೆಯಿಂದ ಬಯಲಾಗಬೇಕು.
ಪೊಲೀಸರು ಸುಳ್ಳು ಆರೋಪ ಮಾಡಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಜೈಲಲ್ಲಿ ಕೊಳೆಯುತ್ತಿರುವ ನೂರಾರು ಅಮಾಯಕ ಲಿಯಾಕತ್‌ಗಳ ಕುರಿತಂತೆಯೂ ತನಿಖೆ ನಡೆಸಿ ಅವರ ಬಿಡುಗಡೆಗೆ ಮುಂದಾಗಬೇಕು. ಖಾಕಿ ವೇಷದಲ್ಲಿರುವ ಉಗ್ರರನ್ನು ಗುರುತಿಸಿ ಮಟ್ಟ ಹಾಕದೆ ಇದ್ದರೆ, ನಾಗರಿಕರೆಲ್ಲ ನಿಧಾನಕ್ಕೆ ಉಗ್ರರಾಗಿ ಬದಲಾಗುವ ದಿನಗಳು ಬರಬಹುದು.
ಕೃಪೆ ವಾ.ಭಾರತಿ 

No comments:

Post a Comment