Tuesday, March 26, 2013

ಚುನಾವಣಾ ಅಕ್ರಮ ತಡೆ: ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ ಮಾರ್ಚ್ -26-2013

ವಿಧಾನಸಭೆ ಚುನಾವಣೆಯಲ್ಲಿ ಹಣದ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗದ ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದ ಮಹಾನಿರ್ದೇಶಕ ಪಿ.ಕೆ.ದಾಸ್ ನಿರ್ದೇಶನ ನೀಡಿದ್ದಾರೆ.  ಹಣದ ಸಂಶಯಾಸ್ಪದ ವರ್ಗಾವಣೆ ಮತ್ತು ಸಾಗಣೆಗಳ ಮೇಲೆ ನಿಗಾ ಇಡುವಂತೆ ಅವರು ಸೂಚನೆ ನೀಡಿದ್ದಾರೆ.  ಇದಕ್ಕಾಗಿ ವಿವಿಧ ಬ್ಯಾಂಕ್‌ಗಳು ಮತ್ತು ಆದಾಯ ತೆರಿಗೆ ಅಧಿಕಾರಿಗಳ ನೆರವನ್ನು ಪಡೆಯಬೇಕೆಂದು ಅವರು ಹೇಳಿದ್ದಾರೆ.ಹಣದ ಆಮಿಷವೊಡ್ಡಿ ಮತದಾರರನ್ನು ಓಲೈಕೆ ಮಾಡುವ ಮತ್ತು ಮಾದರಿ  ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುವ ಪ್ರಕರಣಗಳ ಮೇಲೆ ಕಣ್ಣಿಡಲು ಎಲ್ಲ ಜಿಲ್ಲೆಗಳಲ್ಲಿ ಸಂಚಾರಿ ದಳಗಳನ್ನು ರಚಿಸಿ ಎಂದು ದಾಸ್ ಸಲಹೆ ಮಾಡಿದ್ದಾರೆ. ಬ್ಯಾಂಕ್‌ಗಳಿಂದ ಯಾರೇ ಅನುಮಾನಾಸ್ಪದವಾಗಿ ಹಣ ಹಿಂದಕ್ಕೆ ಪಡೆದರೂ ಆ ಕುರಿತು ವಿಚಾರಣೆ ನಡೆಸಬೇಕು.
ಬ್ಯಾಂಕ್ ಖಾತೆಯಿಂದ ಒಂದೇ ಬಾರಿಗೆ 10 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂದಕ್ಕೆ ಪಡೆದರೆ ಅಂತಹವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು. ವಿವರಗಳನ್ನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಬೇಕೆಂದು ಅವರು ಆದೇಶ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆಗೆ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯ ಚಟುವಟಿಕೆಗಳ ಕುರಿತು ವಿಡಿಯೊ ಚಿತ್ರೀಕರಣವನ್ನು ಮಾಡ ಲಾಗುವುದು ಮತ್ತು ಚುನಾವಣಾ ಆಕ್ರಮಗಳನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳ ಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಹೇಳಿದ್ದಾರೆ.
ಚುನಾವಣೆಯಲ್ಲಿ ಹರಿಯುವ ಹಣದ ಹೊಳೆ ಹಾಗೂ ನೀತಿಸಂಹಿತೆಯ ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಆಯೋಗದ ಕಾಳಜಿ ಸ್ವಾಗತಾರ್ಹವಾಗಿದೆ. ಈ ಹಿಂದೆ ಟಿ.ಎನ್.ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಈ ಸಂಬಂಧದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಅಂತಲೇ ೧೦ ಪೈಸೆಗಳನ್ನು ಖರ್ಚು ಮಾಡಲೂ ಅಂದು ರಾಜಕಾರಣಿಗಳು ಹೆದರುತ್ತಿದ್ದರು.
ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಲಂಗುಲಗಾಮಿಲ್ಲದೆ ದುಡ್ಡು ಮಾಡುವ  ನವ ಉದಾರೀಕರಣದ ಈ ಕಾಲದಲ್ಲಿ ಪ್ರಜೆಗಳ ಹೆಸರಿನಲ್ಲಿ ದುಡ್ಡಿನ ಚೀಲಗಳೇ ಪ್ರಭುತ್ವವನ್ನು ನಿಯಂತ್ರಿಸುತ್ತಿವೆ. ಇತ್ತೀಚಿಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ  ಚುನಾವಣೆಗಳಲ್ಲಿ ಹರಿದ ಹಣದ ಹೊಳೆಯ ಪ್ರಮಾಣವನ್ನು ನೋಡಿದರೆ ದಿಗಿಲುಂಟಾಗುತ್ತದೆ. ಕೆಲವು ಕಡೆ ಒಂದು ಓಟಿಗೆ ೨ ಸಾವಿರ ರೂ.ನಂತೆ ವ್ಯವಹಾರವನ್ನು ಕುದುರಿಸಲಾಗಿದೆ. ಯಾವ ಕಾನೂನು ಕೂಡ ಇದನ್ನು ತಡೆಯಲು ಸಾಧ್ಯವಾಗಿಲ್ಲ. ಅಂತಲೇ ರಿಯಲ್ ಎಸ್ಟೇಟ್, ಗಣಿಗಾರಿಕೆ ಮುಂತಾದ ದಂಧೆಗಳಲ್ಲಿ ತೊಡಗಿರುವ ಸಮಾಜ ವಿರೋಧಿ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ಮಿಂಚುತ್ತಿದ್ದಾರೆ.
ವಿಧಾನಸಭೆಯ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ ಚುನಾವಣಾ ಆಯೋಗ 16 ಲಕ್ಷ ರೂ.ಗಳ ವೆಚ್ಚ ಮಿತಿಯನ್ನು ನಿಗದಿ ಮಾಡಿದೆ. ಆದರೆ ಎಷ್ಟು ಮಂದಿ ಅಭ್ಯರ್ಥಿಗಳು ಈ ಮಿತಿಯೊಳಗೆ ಖರ್ಚು ಮಾಡುತ್ತಾರೆ? ನಾಮಪತ್ರ ಸಲ್ಲಿಸುವ ಮುನ್ನವೇ ಗೆಲ್ಲಬಹುದಾದ ಪಕ್ಷಗಳ ಟಿಕೆಟ್ ಪಡೆಯಲು ಆಯಾ ಪಕ್ಷಗಳ ಹಿರಿಯ ನಾಯಕರಿಗೆ ಕೋಟಿ ಕೋಟಿ ರೂಪಾಯಿಗಳ ಕಪ್ಪ ಕಾಣಿಕೆ ಸಲ್ಲಿಸುವ ಸಂಗತಿ ಜನಜನಿತವಾಗಿದೆ. ಇದನ್ನು ಕಾನೂನಿನ ಮೂಲಕವೂ ತಡೆಯಲು ಸಾಧ್ಯವಾಗಿಲ್ಲ. ಚುನಾವಣಾ ಟಿಕೆಟ್ ಪಡೆದ ನಂತರ ನಾಮಪತ್ರ ಸಲ್ಲಿಸುವಾಗಲೇ ಲಕ್ಷಾಂತರ ರೂ. ಖರ್ಚು ಮಾಡಿರುತ್ತಾರೆ.
ಎಲ್ಲ ಪ್ರಕ್ರಿಯೆ ಮುಗಿದು ಚುನಾವಣೆಕಣಕ್ಕಿಳಿದ ನಂತರ ಎದುರಾಳಿಗಳನ್ನು ಹಿಂದಕ್ಕೆಸರಿಸಲು ವ್ಯವಹಾರ ಕುದುರಿಸಲಾಗುತ್ತದೆ. ಚುನಾವಣೆ ನಡೆಯುವುದು  ಅನಿವಾರ್ಯ ಎಂದಾದಾಗ ಒಂದು ಮತಕ್ಷೇತ್ರದಲ್ಲಿ 30ರಿಂದ 40ವಾಹನಗಳನ್ನು ಬಾಡಿಗೆಗೆ ಪಡೆದು ಪ್ರಚಾರ ಕಾರ್ಯಕ್ಕೆ ಬಳಸಲಾಗುತ್ತದೆ. ಇಂತಹ ವಾಹನಗಳಲ್ಲಿ ಓಡಾಡುವ ಕಾರ್ಯಕರ್ತರಿಗೆ ಕೈ ಖರ್ಚಿಗೆ ದಿನಕ್ಕೆ 1ಸಾವಿರಕ್ಕಿಂತ ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ. ಪ್ರತಿ ಮತಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಮತಗಟ್ಟೆಗಳಿರುತ್ತವೆ.
ಚುನಾವಣೆಯ ದಿನ ಅಲ್ಲಿ ನಿಯೋಜನೆ ಮಾಡುವ ಕಾರ್ಯಕರ್ತರಿಗೆ ಪ್ರತಿ ಮತಗಟ್ಟೆಗೆ 50 ಸಾವಿರ ರೂ. ನೀಡ ಬೇಕಾಗುತ್ತದೆ. ಇನ್ನು ಬೀದಿಯಲ್ಲಿ ಆರತಿ ಬೆಳಗುವ ಮಹಿಳೆಯರಿಗೆ ತಟ್ಟೆಗೆ 2 ಸಾವಿರ ರೂ.ಗಿಂತ ಕಡಿಮೆ ಯಾರೂ ನೀಡುವುದಿಲ್ಲ. ಪ್ರತಿಸ್ಪರ್ಧಿ ಇನ್ನೂ ಹೆಚ್ಚು ಹಣವನ್ನು ನೀಡಿ ದರೆ ಅಲ್ಲಿ ಪೈಪೋಟಿಗೆ ಇಳಿಯಬೇಕಾಗುತ್ತದೆ.
ಇನ್ನು ಸ್ತ್ರೀ ಶಕ್ತಿ ಸಂಘಗಳ ಬಗ್ಗೆ ನೋವಿನಿಂದ ಒಂದು ಮಾತು ಹೇಳಬೇಕಾಗಿದೆ. ಮಹಿಳೆಯರು ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಪ್ರಭುತ್ವದ ನೆರವಿನೊಂದಿಗೆ ಬಂದ ಈ ಸಂಘಗಳು ಇಂದು ಓಟುಗಳ ಸಗಟು ಮಾರಾಟದ ಕೇಂದ್ರಗಳಾಗಿವೆ. “ನಮ್ಮಲ್ಲಿ ಇಷ್ಟು ಓಟು ಇದೆ, ಎಷ್ಟು ಕೊಡ್ತೀರಿ?” ಎಂದು ಅನೇಕ ಕಡೆ ಚೌಕಾಸಿ ನಡೆಯುತ್ತದೆ. ಇದೆಲ್ಲವನ್ನು ಪರಿಗಣಿಸಿದರೆ ಚುನಾವಣಾ ಆಯೋಗ ನಿಗದಿಪಡಿಸಿದ 16 ಲಕ್ಷ ರೂ. ವೆಚ್ಚ ಕೇವಲ ಕಾಗದದಲ್ಲಿ ಉಳಿಯುತ್ತದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5ರಿಂದ 10 ಕೋಟಿ ರೂಪಾಯಿಯನ್ನು ಖರ್ಚು ಮಾಡಲು ಈಗಾಗಲೇ ತಯಾರಿ ನಡೆದಿದೆ. ಎಪ್ರಿಲ್ ಮೇ ತಿಂಗಳಲ್ಲಿ ಕಾಂಚಾಣದ ಹೊಳೆ ಹರಿಯಲಿದೆ. ಅಕ್ರಮ ಕಪ್ಪು ಹಣ ಚುನಾವಣಾ ಪ್ರಚಾರಕ್ಕೆ ಬಳಕೆಯಾಗಲಿದೆ. ಈ ಅಕ್ರಮವನ್ನು ತಡೆಯಲು ಭಾರೀ ಕಾನೂನು ಕ್ರಮಗಳಿಂದ ಸಾಧ್ಯವಿಲ್ಲ. ಜನರಲ್ಲಿ ಜಾಗೃತಿ ಮೂಡಬೇಕಾಗಿದೆ. ತಮ್ಮ ಹಳ್ಳಿಗಳಿಗೆ, ಬಡಾವಣೆಗಳಿಗೆ ಹಣ ಕೊಡಲು ಬರುವ ಖದೀಮರನ್ನು ಜನ ಓಡಿಸಬೇಕಾಗಿದೆ. 
ಕೃಪೆ:ವಾ.ಭಾರತಿ 

No comments:

Post a Comment