Monday, March 25, 2013

ಜಯಲಲಿತಾ ಎನ್ನುವ ಮೇನಕೆ, ಡಿಎಂಕೆಯೆನ್ನುವ ಶೂರ್ಪನಖಿ- ಮಾರ್ಚ್ -25-2013

ಕಾಕತಾಳೀಯ ನ್ಯಾಯ ಎನ್ನುವುದು ಇದಕ್ಕೇ ಇರಬೇಕು. ಕಾಗೆ ಮರದ ಗೆಲ್ಲಿನ ಮೇಲೆ ಕೂರುವುದೂ ಮತ್ತು ಅದು ಮುರಿಯು ವುದೇ ಒಂದೇ ವೇಳೆ ನಡೆದಿದೆ.  ಯುಪಿಎ ಸರಕಾರಕ್ಕೆ ಡಿಎಂಕೆ ತನ್ನ ಬೆಂಬಲವನ್ನು ಹಿಂದೆಗೆದುಕೊಳ್ಳುವುದು ಮತ್ತು ಸ್ಟಾಲಿನ್ ನಿವಾಸಕ್ಕೆ ಸಿಬಿಐ ದಾಳಿ ನಡೆಯುವುದು ಜೊತೆ ಜೊತೆಯಾಗಿ ನಡೆದಿದೆ.   ಕೆಲವರು ಕಾಗೆಯ ಮೇಲೆ ದೂರು ಹಾಕುತ್ತಿದ್ದಾರೆ. ಇನ್ನು ಕೆಲವರು, ಗೆಲ್ಲು ದುರ್ಬಲವಾಗಿತ್ತು. ಕಾಗೆ ಕೂರುವ ವೊದಲೇ ಗೆಲ್ಲು ಮುರಿದು ಬಿದ್ದಿತು ಎಂದು ಸಮರ್ಥನೆ ನೀಡುತ್ತಿದ್ದಾರೆ. ಯುಪಿಎ ಸರಕಾರಕ್ಕೆ ಬೆಂಬಲ ಹಿಂದೆಗೆದು ಕೊಂಡ ಕಾರಣಕ್ಕಾಗಿ ಸರಕಾರ ನಮ್ಮ ಮೇಲೆ ಸಿಬಿಐ ಛೂ ಬಿಟ್ಟಿದೆ ಎಂದು ಕರುಣಾನಿಧಿ ಆರೋಪಿಸಿದ್ದಾರೆ. ಆದರೆ ಇದೇ ಸಂದರ್ಭ ದಲ್ಲಿ ನಮಗೂ ಸಿಬಿಐ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಯುಪಿಎ ಸರಕಾರ ಹೇಳುತ್ತಿದೆ.
ಆದರೆ ಒಂದಂತೂ ನಿಜ. ಸಿಬಿಐ ದಾಳಿ ಡಿಎಂಕೆಗೆ ಅನಿರೀಕ್ಷಿತವೇನೂ ಅಲ್ಲ. ಯಾವನೋ ಅಮಾಯಕನ ಮೇಲೆ ಈ ದಾಳಿ ನಡೆದಿದ್ದರೆ ಅದನ್ನು ಖಂಡಿಸಬಹು ದಾಗಿದೆ. ಆದರೆ ವಿದೇಶಿ ಕಾರು ತೆರಿಗೆ ವಂಚನೆಯಲ್ಲಿ ಕರುಣಾನಿಧಿ ಪುತ್ರ ಸ್ಟಾಲಿನ್ ಮೇಲೆ ಪ್ರಕರಣ ದಾಖಲಾಗಿದೆ. ಹಾಗೆಯೇ ಇದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಹೀಗಿರುವಾಗ, ತನ್ನ ಮೇಲೆ ಸಿಬಿಐ ದಾಳಿ ನಡೆದಿರುವುದಕ್ಕೆ ಯಾರ ಮೇಲೋ ಗೂಬೆ ಕೂರಿಸುವುದರಲ್ಲಿ ಅರ್ಥವಿಲ್ಲ.
ಆದರೂ ತಕ್ಷಣದಲ್ಲಿ ಕೇಂದ್ರದ ಮೇಲೆ ಕೆಲವು ಅನುಮಾನಗಳು ಸುಳಿದಾಡುತ್ತಿವೆ. ಆದರೆ, ಈ ಕಾರಣದಿಂದಲಾದರೂ ಸಿಬಿಐ ಎನ್ನುವ ಕಾವಲು ನಾಯಿಯ ಹಗ್ಗವನ್ನು ಕೇಂದ್ರ ಬಿಚ್ಚಿ ಬಿಟ್ಟಿತಲ್ಲ, ಅದಕ್ಕಾಗಿ ಯುಪಿಎ ಸರಕಾರವನ್ನು ಅಭಿನಂದಿಸಲೇ ಬೇಕಾಗಿದೆ.ನಾವು ಮೊತ್ತ ಮೊದಲಾಗಿ ತಮಿಳರ ರಕ್ತದ ಮೇಲೆ ಡಿಎಂಕೆ ನಡೆಸುತ್ತಿರುವ ರಾಜಕೀಯ ವನ್ನೇ ಖಂಡಿಸಬೇಕಾಗಿದೆ.
ಶ್ರೀಲಂಕಾದಲ್ಲಿ ತಮಿಳರ ಮಾರಣಹೋಮ ನಡೆಯುತ್ತಿರು ವಾಗ ತೆಪ್ಪಗಿದ್ದ ಡಿಎಂಕೆ, ಇದೀಗ ಅಧಿಕಾರದ ಕೊನೆಯ ದಿನಗಳಲ್ಲಿ ಬೆಂಬಲ ಹಿಂದೆಗೆತ ಮಾಡಿದಂತೆ ನಟಿಸುವುದು ಅಮಾಯಕ ತಮಿಳರ ದೌರ್ಭಾಗ್ಯವಾಗಿದೆ. ತನ್ನ ಬೆಂಬಲ ಹಿಂದೆಗೆತದಿಂದ ಸರಕಾರಕ್ಕೆ ಏನೂ ಸಂಭವಿಸುವುದಿಲ್ಲ ಎನ್ನುವುದು ಡಿಎಂಕೆಗೆ ಚೆನ್ನಾಗಿಯೇ ಅರಿವಿತ್ತು. ಚುನಾವಣೆಯ ಸಂದರ್ಭದಲ್ಲಿ ತಮಿಳರಿಗೆ ಉತ್ತರಿಸಬೇಕಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಡಿಎಂಕೆ ಇಂದು ಯುಪಿಎಯ ಜೊತೆಗೆ ಜಗಳಕ್ಕಿಳಿದಿದೆ.
ಆದರೆ ಡಿಎಂಕೆಯ ನಿಜವಾದ ಅಸಮಾಧಾನ ಕೇವಲ ತಮಿಳರಿಗಾಗಿ ಮಾತ್ರ ಆಗಿರಲಿಲ್ಲ. ಸ್ಟಾಲಿನ್ ಮೇಲೆ ಸಿಬಿಐ ದಾಳಿ ನಡೆಯುವುದು ಕರುಣಾನಿಧಿಗೆ ಅರಿವಿತ್ತು. ಅದನ್ನು ತಡೆಯಲು ಕೊನೆಯ ಕ್ಷಣದವರೆಗೂ ಅವರು ಪ್ರಯತ್ನಿಸಿದ್ದಾರೆ. ಸರಕಾರದೊಂದಿಗೆ ‘ಡೀಲ್’ ಮಾಡಲು ಇಳಿದಿದ್ದಾರೆ. ಸರಕಾರ ವನ್ನು ಬ್ಲಾಕ್‌ಮೇಲ್ ಮಾಡುವುದ ಕ್ಕೋಸ್ಕರವೇ, ಸಿಬಿಐ ದಾಳಿಯ ವಿರುದ್ಧ ತಮಿಳು ಹತ್ಯಾಕಾಂಡ ಪ್ರಕರಣವನ್ನು ಗುರಾಣಿ ಯಾಗಿ ಬಳಸಿತ್ತು. ಆದರೆ ಸಿಬಿಐ ದಾಳಿ ನಡೆಸುವುದು ಅನಿವಾರ್ಯವಾಗಿತ್ತು.
ಆದಾಗಲೇ ಹತ್ತು ಕಡೆಗಳಲ್ಲಿ ದಾಳಿ ನಡೆಸಲು ಸಿಬಿಐ ನಿರ್ಧರಿಸಿರುವುದರಿಂದ, ಸರಕಾರವೂ ಈ ಕುರಿತಂತೆ ಅಸಹಾಯಕವಾಗಿತ್ತು. ಡಿಎಂಕೆ ಬೆಂಬಲ ಹಿಂದೆಗೆದುಕೊಳ್ಳದೇ ಬೇರೆ ವಿಧಿಯೇ ಇರಲಿಲ್ಲ. ಆ ಮೂಲಕ ಒಂದು ಕಲ್ಲಲ್ಲಿ ಎರಡು ಹಕ್ಕಿಯನ್ನು ಉದುರಿಸಿದೆ. ಮೊದಲನೆಯದಾಗಿ, ತಮಿಳರ ಹತ್ಯಾಕಾಂಡವನ್ನು ಖಂಡಿಸಿ ಸರಕಾರಕ್ಕೆ ಬೆಂಬಲ ಹಿಂದೆಗೆದ ಹೆಗ್ಗಳಿಕೆ. ಇದೇ ಸಂದರ್ಭದಲ್ಲಿ ಸಿಬಿಐ ದಾಳಿಯನ್ನು ‘ಸೇಡಿನ ರಾಜಕಾರಣ’ ಎಂದು ಕರೆದು, ಅವಮಾನ ವನ್ನೂ ತಪ್ಪಿಸಿಕೊಳ್ಳಬಹುದು.
ಇದೀಗ ಎನಿಸಿದಂತೆಯೇ ಆಗಿದೆ. ಸ್ಟಾಲಿನ್ ಮೇಲೆ ನಡೆದ ಸಿಬಿಐ ದಾಳಿಯ ಹೊಣೆಯನ್ನು ಯುಪಿಎ ಸರಕಾರ ಹೊತ್ತುಕೊಳ್ಳಬೇಕಾಗಿದೆ. ಬೆಂಬಲ ಹಿಂದೆಗೆದುಕೊಂಡದ್ದಕ್ಕಾಗಿ ಸೇಡಿನ ರಾಜಕೀಯ ನಡೆಸಿದೆ ಎಂಬ ಆರೋಪವನ್ನೂ ಯುಪಿಎ ಸರಕಾರ ಎದುರಿಸಬೇಕಾಗಿದೆ. ಸ್ಟಾಲಿನ್ ವಿರುದ್ಧ ಆರೋಪದ ತನಿಖೆ ನಿಧಾನಗತಿಯಲ್ಲಿ ಸಾಗುವುದಕ್ಕೆ ಕಾರಣವೇ ಯುಪಿಎ ಸರಕಾರ. ಇದೀಗ ಅನಿವಾರ್ಯ ಎನ್ನುವ ಸಂದರ್ಭದಲ್ಲಿ ಡಿಎಂಕೆಯಿಂದ ಕೇಂದ್ರ ಹೆಗಲು ಕೊಡವಿಕೊಂಡಿದೆ.
ಹಾಗೆಯೇ, ಕರುಣಾನಿಧಿ ತಂಡ ಯಾವ ರೀತಿಯಲ್ಲೂ ಅಮಾಯಕತೆಯನ್ನು ಪ್ರದರ್ಶಿಸುವಂತಿಲ್ಲ. ಇಂತಹದೊಂದು ದಾಳಿಗೆ ಡಿಎಂಕೆ ಸರ್ವ ರೀತಿಯಲ್ಲೂ ಅರ್ಹವಾಗಿದೆ. ಈಗಾಗಲೇ ಹಲವು ಅಕ್ರಮಿ ಸಂತಾನಗಳನ್ನು ತನ್ನ ಪಕ್ಷದೊಳಗೆ ಬಚ್ಚಿಕೊಂಡಿರುವ ಡಿಎಂಕೆ, ತಮಿಳರ ವಿರುದ್ಧ ಸುರಿಸುತ್ತಿರುವ ಮೊಸಳೆ ಕಣ್ಣೀರೂ ಅಕ್ಷಮ್ಯದ ಪರಮಾವಧಿಯಾಗಿದೆ. ತಮಿಳರ ಅನುಕಂಪದ ಬಲದಿಂದಲೇ ಅಧಿಕಾರಕ್ಕೇರಿದ ಡಿಎಂಕೆಯ ನಿಷ್ಕರುಣಿ ರಾಜಕಾರಣ ದ್ರಾವಿಡ ಸಂಸ್ಕೃತಿಗೆ ಒಪ್ಪುವಂತಹದಲ್ಲ. ಒಟ್ಟಿನಲ್ಲಿ ಜಯಲಲಿತಾ ಎನ್ನುವ ಮೇನಕೆಗಿಂತ ಡಿಎಂಕೆ ಎನ್ನುವ ಶೂರ್ಪನಖಿಯೇ ವಾಸಿ ಎಂಬಂತಹ ಸ್ಥಿತಿಯಲ್ಲಿ ತಮಿಳರಿದ್ದಾರೆ. ಒಟ್ಟಿನಲ್ಲಿ ಈ ಎರಡು ಅಡಕತ್ತರಿಯಲ್ಲಿ ತಮಿಳು ಜನರು ಸೊರಗುತ್ತಿದ್ದಾರೆ, ಕೊರಗುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. 
ಕೃಪೆ:ವಾ.ಭಾರತಿ 

No comments:

Post a Comment