Saturday, March 23, 2013

ಬೆಸ್ತರ ಹತ್ಯೆ ಪ್ರಕರಣ: ಭಾರತದ ರಾಜತಾಂತ್ರಿಕ ಸಮರಕ್ಕೆ ಜಯ


ಬೆಸ್ತರ ಹತ್ಯೆ ಪ್ರಕರಣ: ಭಾರತದ ರಾಜತಾಂತ್ರಿಕ ಸಮರಕ್ಕೆ ಜಯ
 ಮಾರ್ಚ್ -23-2013

*ಇಟಲಿ ನಾವಿಕರು ಭಾರತಕ್ಕೆ
ಹೊಸದಿಲ್ಲಿ: ಕೇರಳ ಕರಾವಳಿಯಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯನ್ನೆ ದುರಿಸುತ್ತಿರುವ ಇಟಲಿಯ ಇಬ್ಬರು ಆರೋಪಿ ನಾವಿಕರು ಶುಕ್ರವಾರ ಸಂಜೆ ಭಾರತಕ್ಕೆ ವಾಪಸಾಗಿದ್ದಾರೆ. ಆರೋಪಿ ನಾವಿಕರಾದ ಮ್ಯಾಸಿಮಿಲಿಯಾನೊ  ಲ್ಯಾಟೊರ್ ಹಾಗೂ ಸಲ್ವಾದೊರ್ ಗಿರೋನ್  ವಿಶೇಷ ವಿಮಾನದ ಮೂಲಕ ದಿಲ್ಲಿ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.ತನ್ನ ನಾವಿಕರನ್ನು  ವಾಪಸ್ ಕಳುಹಿಸಲು ನಿರಾಕರಿಸಿದ್ದ ಇಟಲಿಯು ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವುದು ತನಗೆ ದೊರೆತ ರಾಜತಾಂತ್ರಿಕ ಜಯವೆಂದು ಭಾರತ ಬಣ್ಣಿಸಿದೆ.
ಇಟಲಿಯ ಆರೋಪಿ ನಾವಿಕರು ಭಾರತಕ್ಕೆ ಹಿಂದಿರುಗಲಿದ್ದಾರೆಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಶುಕ್ರವಾರ ಸಂಸತ್‌ನಲ್ಲಿ ಹೇಳಿಕೆಯೊಂದರಲ್ಲಿ ಖಚಿತಪಡಿಸಿದ್ದರು. ನಾವಿಕರು ಭಾರತಕ್ಕೆ ವಾಪಾಸಾದ ಕೂಡಲೇ ಅವರನ್ನು ನೇರವಾಗಿ ರಾಯಭಾರಿ ಕಚೇರಿಗೆ ಕರೆದೊಯ್ಯಲಾಯಿತು.
ಏತನ್ಮಧ್ಯೆ ಭಾರತದಲ್ಲಿನ ಇಟಲಿ ರಾಯಭಾರಿ ಕಚೇರಿ ಹೇಳಿಕೆಯೊಂದನ್ನು ನೀಡಿ, ಆರೋಪಿ ನಾವಿಕರು ಸುಪ್ರೀಂ ಕೋರ್ಟ್ ರಚಿಸಿರುವ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವರು ಎಂದು ತಿಳಿಸಿದೆ.ಒಂದು ವೇಳೆ ಆರೋಪಿ ನಾವಿಕರಿಗೆ ಶಿಕ್ಷೆಯಾದಲ್ಲಿ ಅವರಿಗೆ ಇಟಲಿಯಲ್ಲೇ ಜೈಲು ವಾಸವನ್ನು ಅನುಭವಿಸಲು ಅವಕಾಶ ನೀಡುವ ಸಾಧ್ಯತೆಯೂ ಇದೆಯೆಂದು ವರದಿಗಳು ತಿಳಿಸಿವೆ.
ಆದರೆ ನಾವಿಕರ ವಿಚಾರಣೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ತೀರಾ ಕಡಿಮೆಯೆನ್ನಲಾಗಿದೆ. ಭಾರತದಲ್ಲಿ ನಾವಿಕರನ್ನು ಬಂಧನದಲ್ಲಿಡಲು ಭಾರತಕ್ಕಿರುವ ಕಾನೂನು ಅಧಿಕಾರವನ್ನು ಕೂಡಾ ಇಟಲಿ ಪ್ರಶ್ನಿಸುತ್ತಿದೆ.ಬೆಸ್ತರ ಹತ್ಯೆ ಘಟನೆಯು ಭಾರತದ ವ್ಯಾಪ್ತಿಯಲ್ಲಿರುವ ಸಾಗರ ಪ್ರದೇಶದಲ್ಲಿ ನಡೆದಿಲ್ಲವೆಂದು ಇಟಲಿ  ವಾದಿಸುತ್ತಿದೆ.
ಆರೋಪಿ ನಾವಿಕರನ್ನು ಭಾರತಕ್ಕೆ ಮರಳಿ ಕಳುಹಿಸಿಕೊಡುವ ಇಟಲಿಯ ನಿರ್ಧಾರದ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಬಿಜೆಪಿಯು ಪ್ರತಿಪಕ್ಷ, ಸರಕಾರ ಹಾಗೂ ಸುಪ್ರೀಂ ಕೋರ್ಟ್ ಜಂಟಿ ಪ್ರಯತ್ನ ದಿಂದಾಗಿ ಇದು ಸಾಧ್ಯವಾಗಿದೆಯೆಂದು ಹೇಳಿದೆ. ಇಟಲಿ ನಾವಿಕ ರನ್ನು ವಾಪಸ್ ಕರೆಸಿಕೊಳ್ಳುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ತಾಳಿದ ಕಠಿಣ ನಿಲುವು ಸಾಕಷ್ಟು ಪರಿಣಾಮ ಬೀರಿದೆಯೆಂದು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಢಿ ತಿಳಿಸಿದ್ದಾರೆ.
ಆರೋಪಿ ನಾವಿಕರು ಭಾರತಕ್ಕೆ ಶುಕ್ರವಾರ ವಾಪಸಾಗಲಿ ದ್ದಾರೆಂದು ಇಟಲಿ ಸರಕಾರ ಗುರುವಾರ ತಡರಾತ್ರಿ ಪ್ರಕಟಿಸಿತ್ತು. ನಾವಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹಾಗೂ ಅವರನ್ನು ಯೋಗ್ಯರೀತಿಯಲ್ಲಿ ನಡೆಸಿಕೊಳ್ಳುವ ಬಗ್ಗೆ ಭಾರತ ಸರಕಾರದಿಂದ ಲಿಖಿತ ಭರವಸೆಯನ್ನು ಕೂಡಾ ಪಡೆದುಕೊಂಡಿರುವುದಾಗಿ ಇಟಲಿ ಸರಕಾರದ ಹೇಳಿಕೆಯೊಂದು ತಿಳಿಸಿದೆ.
ಆರೋಪಿ ನಾವಿಕರನ್ನು ಭಾರತಕ್ಕೆ ವಾಪಸ್ ಕಳುಹಿಸದಿರಲು ಇಟಲಿಯ ನಿರ್ಧಾರವು ಈ ತಿಂಗಳ ಆರಂಭದಲ್ಲಿ ಭಾರೀ ದೊಡ್ಡ ಮಟ್ಟದ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಇಟಲಿಯ ಈ ನಿರ್ಧಾರವು ಭಾರತ ಸರಕಾರವನ್ನು ಕೆರಳಿಸಿತ್ತು. ಇಟಲಿ ತನ್ನ ನಿರ್ಧಾರವನ್ನು ಬದಲಾಯಿಸದಿದ್ದಲ್ಲಿ  ತಾನು ಕಠಿಣ ನಿಲುವನ್ನು ಕೈಗೊಳ್ಳಬೇಕಾದೀ ತೆಂದು ಭಾರತವು ಎಚ್ಚರಿಕೆ ನೀಡಿತ್ತು. ಸುಪ್ರೀಂಕೋರ್ಟ್ ಕೂಡಾ ತನ್ನ ನಿಲುವನ್ನು ಬಿಗಿಗೊಳಿಸಿ, ಇಟಲಿಯ ರಾಯಭಾರಿ ಡೇನಿಯಲ್ ಮ್ಯಾನ್ಸಿಯವರಿಗೆ ಭಾರತದಿಂದ ಹೊರಹೋಗುವುದನ್ನು ನಿಷೇಧಿಸಿತ್ತು.
ಇಟಲಿಯ ಮಹಾಚುನಾವಣೆಯಲ್ಲಿ ಮತಚಲಾಯಿಸಲು ಅವಕಾಶ ನೀಡುವ ಉದ್ದೇಶದಿಂದ ಸುಪ್ರೀಂಕೋರ್ಟ್ ಆರೋಪಿ ನಾವಿಕರಾದ ಮ್ಯಾಸಿಮಿಲಿಯಾನೊ  ಲ್ಯಾಟೊರ್ ಹಾಗೂ ಸಲ್ವಾದೊರ್ ಗಿರೋನ್ ಅವರಿಗೆ ನಾಲ್ಕು ವಾರಗಳ ಅವಧಿಗೆ ಇಟಲಿಗೆ ತೆರಳಲು ಫೆ.23ರಂದು ಅನುಮತಿ ನೀಡಿತ್ತು.ನಿಗದಿತ ಗಡುವಿನೊಳಗೆ ನಾವಿಕರು ಭಾರತಕ್ಕೆ ವಾಪಾಸಗುವರೆಂಬ ಬಗ್ಗೆ ಅದು ಇಟಲಿ ರಾಯಭಾರಿ ಮ್ಯಾನ್ಸಿನಿಯವರಿಂದ ಮುಚ್ಚಳಿಕೆಯನ್ನು ಕೂಡಾ ಪಡೆದುಕೊಂಡಿತ್ತು. ಆದರೆ ಆನಂತರ ಇಟಲಿಯು ನಾವಿಕರನ್ನು ವಿಚಾರಣೆಯು ಭಾರತದ ಕಾನೂನು ವ್ಯಾಪ್ತಿಗೊಳಪಡುವು ದಿಲ್ಲವೆಂದು ವಾದಿಸಿ ಅವರನ್ನು ವಾಪಸ್ ಕಳುಹಿಸಲು ನಿರಾಕರಿಸಿತ್ತು. 

ಗಲ್ಲು ತಪ್ಪಿಸುವುದೇ ವಿವಾದದ  ಉದ್ದೇಶವಾಗಿತ್ತು: ಇಟಲಿ
 ಭಾರತೀಯ ಬೆಸ್ತರ ಹತ್ಯೆ ಪ್ರಕರಣದ ಆರೋಪಿ ನಾವಿಕರಿಗೆ ಮರಣದಂಡನೆ ನೀಡಬಾರದೆಂಬ ಉದ್ದೇಶದಿಂದ ಭಾರತದ ಜೊತೆ ತಾನು ರಾಜತಾಂತ್ರಿಕ ವಿವಾದದಲ್ಲಿ ತೊಡಗಬೇಕಾಯಿತೆಂದು ಇಟಲಿಯು  ಶುಕ್ರವಾರ ಸ್ಪಷ್ಟಪಡಿಸಿದೆ.ಇಟಲಿಯ ಪ್ರಧಾನಿ ಗಿಯುಲಿಯೊ ತೆರ್ಝಿ, ರೋಮ್‌ನಲ್ಲಿ  ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ. “ಇಟಲಿಯ ನಾವಿಕರಿಗೆ ಮರಣದಂಡನೆ ನೀಡದಿರುವುದನ್ನು ಖಾತರಿಪಡಿಸಲು ಹಾಗೂ ಅವರ ದೈನಂದಿನ ಬದುಕಿಗೆ  ಉತ್ತಮ ಪರಿಸ್ಥಿತಿಯನ್ನು ಒದಗಿಸುವ ಉದ್ದೇಶದಿಂದ ಭಾರತದ ಜೊತೆ ನಾವು ರಾಜತಾಂತ್ರಿಕ ವಿವಾದದಲ್ಲಿ ತೊಡಗ ಬೇಕಾಯಿತು” ಎಂದವರು ಹೇಳಿದ್ದಾರೆ.
ಏತನ್ಮಧ್ಯೆ ಇಟಲಿಯ ಉಪವಿದೇಶಾಂಗ ಸಚಿವ ಸ್ಟಾಫಾನ್ ಡಿ ಮಿಸ್ತುರಾ ಶುಕ್ರವಾರ ಹೊಸದಿಲ್ಲಿಯಲ್ಲಿ ಹೇಳಿಕೆಯೊಂದನ್ನು ನೀಡಿ, ಆರೋಪಿ ನಾವಿಕರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಮೂಲಕ ರಾಜತಾಂತ್ರಿಕ ಬಿಕ್ಕಟ್ಟೊಂದು ಸಂಭವಿಸುವುದನ್ನು ಇಟಲಿ ಸರಕಾರವು ತಪ್ಪಿಸಿದೆಯೆಂದು ಹೇಳಿದ್ದಾರೆ. ಆರೋಪಿ ನಾವಿಕರಿಗೆ ಮರಣದಂಡನೆ ವಿಧಿಸುವುದಿಲ್ಲವೆಂದು ತಮಗೆ ಭಾರತವು ಖಾತರಿ ನೀಡಿದೆಯೆಂದು ಅವರು ತಿಳಿಸಿದ್ದಾರೆ. ನಾವಿಕರನ್ನು ಇಟಲಿಯಲ್ಲಿಯೇ ವಿಚಾರಣೆಗೆ ಒಳಪಡಿಸಬೇಕೆಂದು ತಾವು ಈಗಲೂ ಪ್ರತಿಪಾದಿಸುವುದಾಗಿ ಮಿಸ್ತುರಾ ತಿಳಿಸಿದ್ದಾರೆ.
ಶೀಘ್ರದಲ್ಲೇ  ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯವೊಂದನ್ನು ಸ್ಥಾಪಿಸುವಂತೆ ಭಾರತ ಸರಕಾರವನ್ನು ಅವರು ಕೋರಿದ್ದಾರೆ.ಇಟಲಿಯ ಉಪವಿದೇಶಾಂಗ ಸಚಿವ ಸ್ಟಾಫಾನ್ ಡಿ ಮಿಸ್ತುರಾ  ಮೀನುಗಾರ ಹತ್ಯೆ ಪ್ರಕರಣದ ಆರೋಪಿ ನಾವಿಕರ ಜೊತೆಗೆ ಇಂದು ಹೊಸದಿಲ್ಲಿಗೆ ಆಗಮಿಸಿದ್ದರು.
ವಾ.ಭಾರತಿ 

No comments:

Post a Comment