Monday, March 4, 2013

ದನ-ನಗದಿಗೆ ವಧು ರೆಡಿ!ಭೋಪಾಲ್,: ನಾಣ್ಯ ಮತ್ತು ರೂಪಾಯಿ ಚಾಲ್ತಿಗೆ ಬರುವ ಮುನ್ನ ದೇಶದಲ್ಲಿದ್ದ ವಸ್ತು ವಿನಿಮಯ ಪದ್ಧತಿ (ಬಾರ್ಟರ್ ಸಿಸ್ಟಂ) ಮತ್ತೊಂದು ರೂಪದಲ್ಲಿ ಮಧ್ಯ ಪ್ರದೇಶದಲ್ಲಿ ಮತ್ತೆ ಚಾಲನೆಗೆ ಬಂದಿದೆ.
ಕೆಲ ಸಂದರ್ಭದಲ್ಲಿ ನಗದು ಮತ್ತು ಜಾನುವಾರುಗಳಿಗಾಗಿ ವಧುಗಳನ್ನು ಖರೀದಿಸುವ ದುರಂತಮಯ ವ್ಯವಹಾರ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.
ಮಧ್ಯ ಪ್ರದೇಶದ ಗುಣಾ ಮತ್ತು ಅಶೋಕ್ ನಗರ ಜಿಲ್ಲೆಗಳಲ್ಲಿ ಭ್ರೂಣ ಹತ್ಯೆಯ ಕಾರಣದಿಂದಾಗಿ ಲಿಂಗಾನುಪಾತದಲ್ಲಿ ಏರುಪೇರಾಗಿದೆ. ಇಲ್ಲಿ ಪುರುಷರಿಗಿಂತಲೂ ಮಹಿಳೆಯರ ಪ್ರಮಾಣ ಕಡಿಮೆ ಇದೆ. ಹೀಗಾಗಿ ಹತಾಶಗೊಂಡಿರುವ ಪುರುಷರು ತನಗೊಂದು ಹೆಂಡತಿಯನ್ನು ಆರಿಸಿಕೊಡುವಂತೆ ಮಾನವ ಕಳ್ಳಸಾಗಣೆದಾರರ ಹಿಂದೆ ಬಿದ್ದಿದ್ದಾರೆ.
ಇದಕ್ಕೆ ಬದಲಾಗಿ ಮಧ್ಯವರ್ತಿಗಳು ಭಾರೀ ಹಣವನ್ನೇನೂ ನಿರೀಕ್ಷಿಸುವುದಿಲ್ಲ. ಅವರಿಗೊಂದು ಎಮ್ಮೆ ಅಥವಾ ಅಷ್ಟೇ ಪ್ರಮಾಣದ ನಗದನ್ನು ನೀಡಲು ಒಪ್ಪಿಕೊಂಡರೆ ವಧು ಸಿದ್ಧವಾಗುತ್ತಾಳೆ.
ಮಾನವ ಕಳ್ಳಸಾಗಣೆದಾರರು 14-16 ವರ್ಷದೊಳಗಿನ ವಧುಗಳನ್ನು ಒದಗಿಸುತ್ತಾರೆ. ಅವರಾರೂ ಮಧ್ಯ ಪ್ರದೇಶದವರಲ್ಲ. ಬದಲಿಗೆ ಅಂತರ್ ರಾಜ್ಯ ಗ್ಯಾಂಗ್‌ನವರು ಒದಗಿಸುವ ವಧುಗಳು.
ಕಳೆದ ಫೆ. 20ರಂದು ಮಹಾರಾಷ್ಟ್ರದ ಪೊಲೀಸರು ಮಧ್ಯ ಪ್ರದೇಶದ ಅಶೋಕಗರದ ಜಿಲ್ಲೆಯ ಶದೋರಾ ಗ್ರಾಮದಲ್ಲಿ ಮೂವರು ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಇಂತಹ ಜಾಲದವರಿಂದ ರಕ್ಷಿಸಿದ್ದಾರೆ.

ಇದರಲ್ಲಿ ಒಬ್ಬಾಕೆ 50,000 ರೂ. ಮತ್ತು ಎಮ್ಮೆಯೊಂದಕ್ಕೆ ಮಾರಾಟವಾಗಿದ್ದಳು. ಮತ್ತೊಬ್ಬಳನ್ನು 35,000 ರೂ.ಗೆ ಮಗದೊಬ್ಬಳನ್ನು 30,000 ರೂ.ಗೆ ಮಾರಾಟ ಮಾಡಲಾಗಿತ್ತು. ಮೂರನೆಯವಳು ತನ್ನನ್ನು ಖರೀದಿಸಿದಾತ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣ ನೀಡಿ ಏಜೆಂಟ್‌ನ ಬಳಿಗೆ ಮರಳಿದ್ದಳು. ಆಕೆಯನ್ನು ಶರೋದಾ ಗ್ರಾಮದಲ್ಲಿಯೇ 35,000 ರೂ.ಗೆ ಮರು ಮಾರಾಟ ಮಾಡಲಾಗಿತ್ತು. ಈ ಮೂವರೂ ಬಾಲಕಿಯರು ಮಹಾರಾಷ್ಟ್ರ ಜಿಲ್ಲೆಯ ಚಂದ್ರಾಪುರ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ಬಹುತೇಕ ಬಾಲಕಿಯರು ಮತ್ತು ಯುವತಿಯರು ಬಡತನದಿಂದ ಬದುಕುತ್ತಿರುತ್ತಾರೆ ಅಥವಾ ಕೊಳೆಗೇರಿಯಿಂದ ಬಂದಿರುವವರಾಗಿರುತ್ತಾರೆ. ಅವರನ್ನು ಖರೀದಿಸುವವರು ಮದುವೆಯಾಗುವುದರಿಂದ ಯಾರೂ ದೂರು ನೀಡಲು ಮುಂದಾಗದ ಕಾರಣ ನಾವು ಇಂತಹ ಅಪರಾಧಗಳನ್ನು ಪತ್ತೆ ಮಾಡುವುದು ಕಷ್ಟಕರವಾಗಿದೆ ಎಂದು ಪೊಲೀಸರು ಹೇಳುತ್ತಾರೆ.

ರಾಜ್ಯದಲ್ಲಿ ಲಿಂಗಾನುಪಾತದ ಕೊರತೆಯಿಂದಾಗಿ ಬೇರೆ ರಾಜ್ಯಗಳ ವಧುಗಳನ್ನು ಮದುವೆಯಾಗುವುದು ಸಾಮಾನ್ಯವಾಗಿದೆ.ಕೆಲ ಸಂದರ್ಭಗಳಲ್ಲಿ ಭಾಷಾ ಸಮಸ್ಯೆಯಿಂದಾಗಿ ಕೆಲ ಗೊಂದಲಗಳಾಗಿವೆ. ಇಲ್ಲಿನ ನಿವಾಸಿಯೊಬ್ಬ ಒಡಿಶಾದ ಹೆಣ್ಣನ್ನು ಮದುವೆಯಾಗಿದ್ದು, ಭಾಷಾ ಸಮಸ್ಯೆಯಿಂದಾಗಿ ಒಬ್ಬಾಕೆ ವಾಪಸು ತವರಿಗೆ ಹೋಗಲು ನಿರ್ಧರಿಸಿದಳು. ಆಕೆಯನ್ನು ನಾವೇ ಬಿಟ್ಟು ಬಂದಿದ್ದೇವೆ. ಒಡಿಶಾದ ಅನೇಕ ಹೆಣ್ಣುಗಳು ಇಲ್ಲಿನವರನ್ನು ಮದುವೆಯಾಗಿ ಹಿಂದಿಯನ್ನು ಕಲಿತು ಸಂತೋಷವಾಗಿದ್ದಾರೆ. ಇದನ್ನು ನಾವು ಮಾನವ ಕಳ್ಳಸಾಗಣೆ ಪ್ರಕರಣವೆಂದು ಪರಿಗಣಿಸಲು ಹೇಗೆ ಸಾಧ್ಯವೆಂದು ಅಶೋಕ್ ನಗರದ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

No comments:

Post a Comment