Friday, March 22, 2013

ಕಾನೂನಿನ ಕೈ ಇನ್ನಷ್ಟು ಉದ್ದವಾಗಲಿ ಮಾರ್ಚ್ -22-2013

ಇಡೀ ದೇಶವನ್ನೇ ನಡುಗಿಸಿದ ಮುಂಬೈ ಸರಣಿ ಸ್ಫೋಟದ ನ್ಯಾಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತನ್ನ ರುಜುವನ್ನು ಹಾಕಿದೆ. ಮುಖ್ಯವಾಗಿ ಮರಣದಂಡನೆ ಶಿಕ್ಷೆಗೊಳ ಪಟ್ಟಂತಹ 10 ಮಂದಿಯ ಮೇಲೆ ಸುಪ್ರೀಂ ಕೋರ್ಟ್ ಮೆದುವಾಗಿದೆ. ಗಲ್ಲಿನ ಬದಲು ಅವರಿಗೆ ಜೀವಾವಧಿಯನ್ನು ಘೋಷಿಸಿದೆ. ಸ್ಫೋಟಕಗಳನ್ನು ದಾಸ್ತಾನಿಡಲು ಇವರ ಮನೆಗಳನ್ನು ಬಳಸಲಾಗಿತ್ತು ಎಂಬುದು 10 ಮಂದಿಯ ಮೇಲಿರುವ ಆರೋಪವಾಗಿತ್ತು. ಈ 10 ಮಂದಿಯೂ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಅವರನ್ನು ವಿದ್ರೋಹ ಕೆಲಸಕ್ಕೆ ಬಲವಂತವಾಗಿ ದೂಡಲಾಗಿದೆಯೆಂಬ ಕಾರಣಕ್ಕಾಗಿ ಗಲ್ಲು ಶಿಕ್ಷೆಯನ್ನು ಹಿಂದೆಗೆದು ಕೊಂಡು, ಜೀವಾವಧಿಯನ್ನು ನೀಡಿದೆ. ಪ್ರಮುಖ ಆರೋಪಿ ಯಾಕೂಬ್ ಮೆಮನ್‌ನ ಮರಣದಂಡನೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಒಂದು ಹಂತಕ್ಕೆ ಮುಂಬೈ ಸ್ಫೋಟಕ್ಕೆ ಸಂಬಂಧ ಪಟ್ಟಂತೆ ನ್ಯಾಯ ಸಿಕ್ಕಿದೆ.
ಆದರೆ ಇದರಲ್ಲಿ ಇನ್ನು ಹಲವು ಮುಖ್ಯಪಾತ್ರಧಾರಿಗಳಿರುವುದರಿಂದ ಮತ್ತು ಅವರಿಗೆ ಶಿಕ್ಷೆಯಾಗುವುದು ಅನುಮಾನ ವಾಗಿರುವುದರಿಂದ ಸದ್ಯಕ್ಕೆ ನಾವು ಈ ತೀರ್ಪಿನಿಂದ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಪ್ರಕರಣದಲ್ಲಿ ಯಾಕೂಬ್ ಮೆಮನ್‌ನ ಪಾತ್ರವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಉಳಿದ ಮೆಮನ್‌ಗಳ ಆರೋಪಕ್ಕೆ ಯಾಕೂಬ್ ತಲೆಕೊಡುವುದು ಅನಿವಾರ್ಯ ಎಂಬ ಸ್ಥಿತಿ ಏರ್ಪಟ್ಟಿದೆ.
ಯಾಕೂಬ್ ಮೆಮನ್ ಪೊಲೀಸರಿಗೆ ಶರಣಗತನಾಗಿದ್ದ ಮತ್ತು ಉಳಿದ ಆರೋಪಿ ಗಳಿಗೆ ಹೋಲಿಸಿದರೆ ಈತ ಪ್ರಕರಣದಿಂದ ಹೊರಗಿದ್ದ ಎಂಬ ವಾದವಿದೆ. ಆದರೆ ಸದ್ಯದ ಸ್ಥಿತಿಯಲ್ಲಿ, ಮೆಮನ್‌ಗಳ ಪ್ರತಿನಿಧಿಯಾಗಿ ಒಬ್ಬನ ತಲೆ ತೆಗೆಯದೇ ಇದ್ದಲ್ಲಿ ನ್ಯಾಯಪೂರ್ತಿಯಾಗುವಂತಿಲ್ಲ. ಆದುದರಿಂದ ಯಾಕೂಬ್ ಮೆಮನ್ ಬಲಿಯಾಗಲೇ ಬೇಕಾದಂತಹ ಸ್ಥಾನದಲ್ಲಿ ನಿಂತಿದ್ದಾನೆ. ಉಳಿದ ಮುಖ್ಯ ಆರೋಪಿಗಳಿಗೆ ಶಿಕ್ಷೆಯಾಗುವುದನ್ನು ಸದ್ಯದ ಸಂದರ್ಭದಲ್ಲಿ ಊಹಿಸುವುದಕ್ಕೂ ಸಾಧ್ಯವಿಲ್ಲ. ಆದುದರಿಂದ, ನಾವು ಆ ಸಂಚಿನಲ್ಲಿ ಅಸ್ತ್ರವಾಗಿ ಬಳಸಲ್ಪಟ್ಟ ಕೂಲಿಯಾಳುಗಳಿಗೆ ಶಿಕ್ಷೆಯನ್ನು ವಿಧಿಸಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಈ ಕುರಿತಂತೆ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ ‘‘ದಾವೂದ್ ಇಬ್ರಾಹೀಂ ಸೇರಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳು ಈ ಸ್ಫೋಟ ಪ್ರಕರಣದಲ್ಲಿ ‘ಬಿಲ್ಲುಗಾರ’ರಾಗಿದ್ದರು. ಉಳಿದ ಆರೋಪಿಗಳು ಕೇವಲ ಅವರ ಕೈಯಲ್ಲಿನ್ದ ‘ಬಾಣ’ವಾಗಿದ್ದರು’’ಇಡೀ ಪ್ರಕರಣದಲ್ಲಿ ದೇಶ ಕುತೂಹಲದಿಂದ ಕಾಯುತ್ತಿದ್ದುದು ಸಂಜಯ ದತ್ತ್ ಕುರಿತಂತೆ ನ್ಯಾಯಾಲಯ ಏನು ಹೇಳುತ್ತದೆ ಎಂಬುದನ್ನು. ತನ್ನ ಹಣ, ಹುಡುಗಾಟಿಕೆ, ಬೇಜವಾಬ್ದ್ದಾರಿ ಇತ್ಯಾದಿ ಕಾರಣಗಳಿಂದ ಬದುಕನ್ನು ಹಲವು ಬಾರಿ ಇಕ್ಕಟ್ಟಿನಲ್ಲಿ ಸಿಲುಕಿಸಿಕೊಂಡವರು ಸಂಜಯ್ ದತ್ತ್. ಒಮ್ಮೆ ಡ್ರಗ್ಸ್ ಹಗರಣದಲ್ಲಿ ಸಿಲುಕಿಕೊಂಡರು.
ಅದರ ಚಟದಿಂದ ಹೊರ ಬರಲಾರದಂತಹ ಸ್ಥಿತಿಯಲ್ಲಿರುವಾಗ ಅವರ ತಂದೆ ಸುನೀಲ್ ದತ್ತ್ ಕಾಳಜಿಯಿಂದ ಹೊಸ ಬದುಕನ್ನು ಪಡೆದರು. ಬಳಿಕ, ಆ ಬದುಕನ್ನು ಸರಣಿ ಸ್ಫೋಟಕ್ಕೆ ತೆತ್ತುಕೊಂಡರು. ತಮ್ಮ ಬೇಜವಾಬ್ದಾರಿಯ ನಡೆಯೇ ಅವರನ್ನು ಮತ್ತೆ ಸರಣಿ ಸ್ಫೋಟದಲ್ಲಿ ಓರ್ವ ಆರೋಪಿಯನ್ನಾಗಿ ಪರಿವರ್ತಿಸಿತು. ಅದರಿಂದ ಹೊರಬರುವ ಅವರ ಪ್ರಯತ್ನ ಈವರೆಗೂ ಮುಂದುವರಿಯುತ್ತಲೇ ಇದೆ. ಅವರ ವಕೀಲರೇ ಹೇಳುವಂತೆ ಸಣ್ಣದೊಂದು ಬಾಗಿಲು ಅವರ ಪಾಲಿಗೆ ತೆರೆದಿದೆ. ಶಿಕ್ಷೆಯಲ್ಲಿ ಒಂದು ವರ್ಷ ಇಳಿಕೆಯಾಗಿರುವುದು ಅವರಿಗೆ ಸಿಕ್ಕಿರುವ ಕೊಡುಗೆಯೆನ್ನಬಹುದು.
ಈಗಾಗಲೇ ಒಂದೂವರೆ ವರ್ಷವನ್ನು ಜೈಲಿನಲ್ಲಿ ಕಳೆದಿರುವುದರಿಂದ, ಸುಪ್ರೀಂ ಕೋರ್ಟಿನ ತೀರ್ಪಿನಂತೆ ಇನ್ನೂ ಮೂರೂವರೆ ವರ್ಷವನ್ನು ಜೈಲಿನಲ್ಲಿ ಕಳೆಯಬೇಕು. ಸಂಜಯ್ ದತ್ತ್ ಮುಂದಿನ ನಡೆ ಏನು ಎನ್ನುವುದು ಕುತೂಹಲಕರವಾಗಿದೆ. ಸಂಜಯ್ ದತ್ತ್ ಪ್ರಕರಣ ಎಲ್ಲ ನಟರಿಗೂ ಒಂದು ಪಾಠವಾಗಬೇಕಾಗಿದೆ. ಹಣ, ಯೌವನ, ಸ್ವೇಚ್ಛೆಗೆ ತೆರಬೇಕಾದ ಬೆಲೆಯೇನು ಎನ್ನುವುದನ್ನು ಅವರು ದತ್ತ್ ಬದುಕಿನಿಂದ ಕಲಿಯಬೇಕಾಗಿದೆ.
ಆರೋಪಿಗಳಿಗೆ ನೀಡುವ ಶಿಕ್ಷೆ ಅವರು ಮಾಡಿರುವ ತಪ್ಪುಗಳಿಗಾಗಿ ಮಾತ್ರವಲ್ಲ, ಮುಂದೆ ಅಂತಹ ತಪ್ಪುಗಳು ಯಾರಿಂದಲೂ ನಡೆಯ ಬಾರದು ಎನ್ನುವ ಕಾರಣಕ್ಕಾಗಿ. ಈ ಹಿನ್ನೆಲೆಯಲ್ಲಿ, ಮುಂಬೈ ಸರಣಿ ಸ್ಫೋಟವನ್ನು ತಡೆಯಲು ಈ ತೀರ್ಪು ಸಹಾಯಕವಾಗಬಹುದೆ ಎನ್ನುವುದನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಮುಂಬೈ ಸರಣಿ ಸ್ಫೋಟ ಕೇವಲ ಒಂದು ಭಯೋತ್ಪಾದನೆಯ ಕೃತ್ಯ ಎಂದು ಹೇಳಿ ಮುಗಿಸಿ ಬಿಡುವುದಕ್ಕಾಗುವುದಿಲ್ಲ. ಅದು ಉಳಿದ ಸ್ಫೋಟಗಳಂತೆ ಅಜ್ಞಾತ ಶಕ್ತಿಗಳಿಂದ ನಡೆದಿರುವುದಲ್ಲ.
ಮುಂಬೈಯ ಪ್ರಮುಖ ವ್ಯಕ್ತಿಗಳ ನೇರ ಭಾಗಿದಾರಿಕೆಯೊಂದಿಗೆ ನಡೆದಿರುವ ಕೃತ್ಯ ಅದು. ಶ್ರೀ ಕೃಷ್ಣ ಆಯೋಗದ ವರದಿ ಹೇಳುವಂತೆ, 1992-93ರ ಭೀಕರ ಕೋಮುಗಲಭೆ ಮುಂದೆ ಮುಂಬೈ ಸ್ಫೋಟಕ್ಕೆ ಕಾರಣವಾಯಿತು. ಮುಂಬೈ ಕೋಮು ಗಲಭೆಯ ಸಂತ್ರಸ್ತರು ನೇರವಾಗಿ ಸ್ಫೋಟದಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ, ಮುಂಬೈ ಕೋಮುಗಲಭೆಯಂತಹ ಭೀಕರ ಹಿಂಸಾಚಾರವನ್ನು ತಡೆಯಲು ವಿಫಲವಾದ ಕಾರಣದಿಂದಲೇ ಮುಂಬೈಯಲ್ಲಿ ಸರಣಿ ಸ್ಫೋಟ ನಡೆಯಲು ಕಾರಣವಾಯಿತು. ಒಂದನ್ನು ತಿಳಿದುಕೊಳ್ಳಬೇಕು.
ಮುಂಬೈ ಸ್ಫೋಟದಲ್ಲಿ ಭಾಗವಹಿಸಿದ ಆರೋಪಿಗಳಿಗೆ ಶಿಕ್ಷೆಯಾಯಿತು. ಆದರೆ ಮುಂಬೈ ಕೋಮುಗಲಭೆಯಲ್ಲಿ ಭಾಗವಹಿಸಿದ ಮುಖ್ಯ ಆರೋಪಿಗಳಿಗೆ ಈವರೆಗೆ ಶಿಕ್ಷೆಯಾಗಿಲ್ಲ. ನ್ಯಾಯದಲ್ಲಿ ಈ ತರಹದ ದ್ವಂದ್ವ, ಮಲತಾಯಿ ಧೋರಣೆಗಳು ಜನರಲ್ಲಿ ಪೂರ್ವಾಗ್ರಹಗಳನ್ನು ಬಿತ್ತುತ್ತವೆ. ಆದುದರಿಂದ, ಸರಣಿ ಸ್ಫೋಟ ಮತ್ತು ಮುಂಬೈ ಕೋಮುಗಲಭೆಯನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದು ಪರಿಗಣಿಸಿ, ಕೋಮುಗಲಭೆಗೆ ಕಾರಣ ರಾದವರಿಗೂ ಕಠಿಣ ಶಿಕ್ಷೆಯನ್ನು ನೀಡುವುದು ನ್ಯಾಯಾಲಯದ ಕರ್ತವ್ಯ. ಆಗ ಮಾತ್ರ ಸರಣಿ ಸ್ಫೋಟ ಪ್ರಕರಣದ ವಿಚಾರಣೆ ತಾರ್ಕಿಕ ಅಂತ್ಯ ಕಾಣುತ್ತದೆ.
ಕೃಪೆ ವಾ.ಭಾರತಿ 

No comments:

Post a Comment