Friday, March 29, 2013

ಭಾರತದಲ್ಲಿ ಲಿಂಗ ತಾರತಮ್ಯ ಗರ್ಭದಲ್ಲೇ ಆರಂಭ: ಅಮೆರಿಕನ್ ಸಂಶೋಧಕರ ಅಧ್ಯಯನ



ಮಾರ್ಚ್ -29-2013

ವಾಶಿಂಗ್ಟನ್: ಭಾರತದಲ್ಲಿ ಮಹಿಳೆಯರು ಗಂಡು ಮಗುವನ್ನು ಗರ್ಭದಲ್ಲಿ ಹೊತ್ತಿದ್ದಾಗಲೇ ಹೆಚ್ಚಿನ ಆರೈಕೆಗೆ ಒಳಗಾಗುತ್ತಾರೆ ಎಂದು ಅಧ್ಯಯನವೊಂದು ಹೇಳುತ್ತದೆ. ಇದು ಪುರುಷ ಪ್ರಧಾನ ಭಾರತೀಯ ಸಮಾಜದಲ್ಲಿ ಮಹಿಳೆಯರ ಆರೋಗ್ಯ ಮತ್ತು ಬದುಕಿನ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಭಾರತದಂಥ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗ ತಾರತಮ್ಯ ಗರ್ಭದಿಂದಲೇ ಆರಂಭಗೊಳ್ಳುತ್ತದೆ ಎಂದು ಮಿಶಿಗನ್ ಸ್ಟೇಟ್ ವಿಶ್ವವಿದ್ಯಾನಿಲಯದ ಲೇ ಲಕ್ಡಾವಾಲ ಮತ್ತು ಸ್ಯಾನ್ ಡೀಗೊದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಪ್ರಶಾಂತ್ ಭಾರದ್ವಾಜ್ ನಡೆಸಿದ ಅಧ್ಯಯನ ಹೇಳುತ್ತದೆ.
‘‘ಭಾರತದಲ್ಲಿ ಏನು ನಡೆಯುತ್ತಿದೆ ಎಂಬ ಕುರಿತ ನಿಖರ ಚಿತ್ರಣವನ್ನು ಅದು ನೀಡುತ್ತದೆ’’ ಎಂದು ಮಿಶಿಗನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಸಹಾಯಕ ಪ್ರೊಫೆಸರ್ ಲಕ್ಡಾವಾಲ ಹೇಳಿದರು.
ಭಾರತದಲ್ಲಿ ಗರ್ಭದಲ್ಲಿರುವ ಮಗುವಿನ ಲಿಂಗವನ್ನು ವೈದ್ಯರು ಹೇಳುವಂತಿಲ್ಲ ಹಾಗೂ ಮಗುವಿನ ಲಿಂಗದ ಆಧಾರದಲ್ಲಿ ಮಹಿಳೆ ಗರ್ಭಪಾತ ನಡೆಸುವಂತಿಲ್ಲ. ಆದರೆ, ಭಾರತದಲ್ಲಿ ಇವೆರಡೂ ಸಾಮಾನ್ಯವೆಂಬಂತೆ ನಡೆಯುತ್ತಿದೆ ಎಂದು ಲಕ್ಡಾವಾಲ ಹೇಳುತ್ತಾರೆ.
ಅಲ್ಟ್ರಾಸೌಂಡ್ ಮೂಲಕ ಗರ್ಭದಲ್ಲಿರುವಾಗಲೇ ಮಗುವಿನ ಲಿಂಗ ಪತ್ತೆಯಾದರೆ, ಹಲವು ಸಂದರ್ಭಗಳಲ್ಲಿ ಅಂಥ ಗರ್ಭಗಳ ವಿರುದ್ಧ ತಾರತಮ್ಯ ಮಾಡಲಾಗುತ್ತದೆ ಎಂದು ಆಕೆ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಸಂಶೋಧಕರು 30,000ಕ್ಕಿಂತಲೂ ಅಧಿಕ ಭಾರತೀಯರ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಅಂಕಿಸಂಖ್ಯೆಗಳನ್ನು ಅಧ್ಯಯನ ಮಾಡಿದ್ದಾರೆ. ಗರ್ಭದಲ್ಲಿ ಗಂಡು ಮಗುವನ್ನು ಹೊತ್ತಿರುವ ಮಹಿಳೆಯರು ಉತ್ತಮ ಪ್ರಸವ ಪೂರ್ವ ಸೌಲಭ್ಯಗಳನ್ನು ಪಡೆದುಕೊಳ್ಳುವ, ಕಬ್ಬಿಣ ಸತ್ವದ ಪೂರಕ ಆಹಾರವನ್ನು ತೆಗೆದುಕೊಳ್ಳುವ ಹಾಗೂ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಹೆಚ್ಚು.

ಮನೆಯಲ್ಲೇ ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ ಮಕ್ಕಳಿಗೆ ಟೆಟನಸ್ ತಗಲುವ ಸಂಭವನೀಯತೆ ಹೆಚ್ಚು. ಭಾರತದಲ್ಲಿ ನವಜಾತ ಶಿಶುಗಳ ಸಾವಿಗೆ ಪ್ರಮುಖ ಕಾರಣ ಟೆಟನಸ್ ಆಗಿದೆ. ಅಧ್ಯಯನವೊಂದರ ಪ್ರಕಾರ, ತಾಯಂದಿರು ಟೆಟನಸ್ ಚುಚ್ಚು ಮದ್ದನ್ನು ತೆಗೆದುಕೊಂಡಿರದಿದ್ದರೆ ಅವರಿಗೆ ಕಡಿಮೆ ತೂಕದ ಮಕ್ಕಳು ಹುಟ್ಟುತ್ತಾರೆ ಹಾಗೂ ಹುಟ್ಟಿದ ಸ್ವಲ್ಪವೇ ಸಮಯದಲ್ಲಿ ಸಾಯುತ್ತಾರೆ.
ಇತರ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಿರುವ ದೇಶಗಳಲ್ಲೂ ಸಂಶೋಧಕರು ಇಂಥದೇ ಅಧ್ಯಯನ ನಡೆಸಿದ್ದಾರೆ.
ಚೀನಾ, ಬಾಂಗ್ಲ್ಲಾದೇಶ ಮತ್ತು ಪಾಕಿಸ್ತಾನಗಳಲ್ಲೂ ಲಿಂಗ ತಾರತಮ್ಯ ಗರ್ಭದಿಂದಲೇ ಆರಂಭವಾಗುವುದು ಅಲ್ಲಿಯೂ ಕಂಡುಬಂದಿದೆ. ಆದರೆ, ಪುರುಷ ಪ್ರಧಾನವೆಂದು ಪರಿಗಣಿಸಲ್ಪಡದ ಶ್ರೀಲಂಕಾ, ಥಾಯ್‌ಲ್ಯಾಂಡ್, ಘಾನಗಳಲ್ಲಿ ಈ ಪ್ರವೃತ್ತಿ ಕಂಡುಬರುತ್ತಿಲ್ಲ.

No comments:

Post a Comment