Thursday, March 21, 2013

ಬಾರಿಸಿತು ಚುನಾವಣೆಯ ಗಂಟೆ ಮಾರ್ಚ್ -21-2013

ಕೊನೆಗೂ ಚುನಾವಣೆಯ ಗಂಟೆ ಬಾರಿಸಿದೆ. ಹಲವು ನಾಯಕರಿಗೆ ಇದು ರಾಜಕೀಯ ಮರಣಗಂಟೆಯಂತೆ ಕೇಳಿದರೆ ಆಶ್ಚರ್ಯವಿಲ್ಲ. ಕೆಲವರು ಶಾಲೆಗೆ ಹೊರಡುವ ವಿದ್ಯಾರ್ಥಿ ಗಳಂತೆ, ಅಧಿಕಾರ ಹಿಡಿಯಲು ಹೊಸ ಖಾದಿ, ಟೋಪಿಗಳನ್ನು ಹೊಲಿಸುವುದಕ್ಕೆ ಹಾಕಿದ್ದಾರೆ. ಆದರೆ ಪ್ರಜಾಸತ್ತೆಯೆನ್ನುವುದು ಎಲ್ಲ ಎಣಿಕೆಗಳನ್ನು ಮೀರಿ, ತನ್ನ ಫಲಿತಾಂಶವನ್ನು ಪ್ರಕಟ ಪಡಿಸುತ್ತದೆ. ಆದುದರಿಂದ, ಎಲ್ಲ ಪಕ್ಷಗಳು ಒಂದು ರೀತಿಯಲ್ಲ ಆತಂಕ, ಭಯದ ಜೊತೆಗೇ ಸಿದ್ಧತೆಗಳನ್ನು ನಡೆಸುತ್ತಿವೆ. ಬಿಜೆಪಿ ಯನ್ನು ಹೊರತು ಪಡಿಸಿ, ರಾಜ್ಯದಲ್ಲಿ ಬಹುತೇಕ ಪಕ್ಷಗಳು ಚುನಾವಣೆಗೆ ಸಿದ್ಧ ವಾಗಿಯೇ ನಿಂತಿವೆ. ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಧೃತಿಗೆಟ್ಟಂತಿ ರುವ ಬಿಜೆಪಿ, ಯಾವ ರೀತಿಯಲ್ಲಿ ಪ್ರಚಾರ ವನ್ನು ಆರಂಭಿಸಬೇಕು, ಮತದಾರರೆಡೆಗೆ ಹೆಜ್ಜೆಯಿಡಬೇಕು ಎನ್ನುವುದು ಹೊಳೆಯದೆ ಗೊಂದಲದಲ್ಲಿದೆ.
ಚುನಾವಣೆಯ ದಿನಾಂಕ ಘೋಷಿಸಿರು ವುದು, ಬಿಜೆಪಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡುದೇ, ಅದಕ್ಕೆ ಭವಿಷ್ಯದ ವಿಧಾನಸಭಾ ಚುನಾವಣೆಯ ಶಕುನಗಳನ್ನು ಕಂಡಂತೆ ಅದು ಬೆಚ್ಚಿ, ತಕ್ಷಣ ಇದ್ದ ಮಠ, ಮಂದಿರಗಳಿಗೆ ಇನ್ನಷ್ಟು ಹಣವನ್ನು ಸುರಿದು ಪಾಪ ಕಳೆಯುವುದಕ್ಕೆ ಹವಣಿಸಿತು. ಕಳೆದೆರಡು ದಿನಗಳಲ್ಲಿ ಸಂಪುಟ ಸಭೆಯ ನೆವದಲ್ಲಿ ರಾತ್ರಿ ಹಗಲು, ಸಚಿವರು, ಮುಖ್ಯಮಂತ್ರಿಗಳು ಒಟ್ಟಾಗಿ ಕೂತು, ತಮಗೆ ಬೇಕಾದ ಫೈಲುಗಳಿಗೆ ಮೋಕ್ಷ ಕರುಣಿಸುತ್ತಿದ್ದಾರೆ.
ಆಯೋಗ ಚುನಾವಣಾ ದಿನಾಂಕವನ್ನು ಘೋಷಿಸುವ ವಾಸನೆ ಅದಕ್ಕೆ ಬಡಿದುದರಿಂದಲೇ ಅದು ಇಷ್ಟು ಅವಸರವಸರವಾಗಿ, ಗುಟ್ಟು ಗುಟ್ಟಾಗಿ ಸಭೆಯನ್ನು ನಡೆಸಿದುದು. ಇದೀಗ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಿಗೇ ನೀತಿ ಸಂಹಿತೆಯೂ ಜಾರಿಗೊಂಡಿದೆ. ಈ ಮೂಲಕ, ಅಧಿಕಾರವನ್ನು ತಮ್ಮ ಮೂಗಿನ ನೇರಕ್ಕೆ ದುರುಪಯೋಗ ಪಡಿಸುವುದಕ್ಕೆ ಸಣ್ಣ ಕಡಿವಾಣ ಬಿದ್ದಂತಾಗಿದೆ. ಮುಖ್ಯಮಂತ್ರಿಯ ಕೈಯನ್ನು ಕಟ್ಟಿದಂತಾಗಿದೆ.
ಸಾಧಾರಣವಾಗಿ ಅಧಿಕಾರದಲ್ಲಿರುವ ಪಕ್ಷಗಳು ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ನಿಶ್ಚಿಂತೆಯಾಗಿರುತ್ತವೆ. ತಮಗೆ ಬೇಕಾದ ಹಾಗೆ ಎಲ್ಲ ಅಧಿಕಾರಿಗಳನ್ನು ನೇಮಕಗೊಳಿಸಿ, ಸುವ್ಯವಸ್ಥೆಯಿಂದ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತವೆ. ಆದರೆ ಇಲ್ಲಿ ಪರಿಸ್ಥಿತಿ ತಿರುವು ಮುರುವುಗೊಂಡಿದೆ. ಉಳಿದೆಲ್ಲ ಪಕ್ಷಗಳು ಚುನಾವಣೆಗೆ ಸಿದ್ಧ ಗೊಂಡಿದ್ದರೂ ಬಿಜೆಪಿಯ ಪರಿಸ್ಥಿತಿ ಮಾತ್ರ ಅಯೋಮಯವಾಗಿದೆ. ಇನ್ನೂ ಅದು ತನ್ನ ಅಧ್ಯಕ್ಷನನ್ನು ಆಯ್ಕೆ ಮಾಡುವಲ್ಲಿಯೇ ವಿಫಲವಾಗಿದೆ.
ಹೀಗಿರುವಾಗ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅದರ ಪರಿಸ್ಥಿತಿ ಎಷ್ಟು ಭೀಕರವಾಗಿರಬಹುದು? ರಾಜ್ಯಾಧ್ಯಕ್ಷ ಸ್ಥಾನದ ಕುರಿತಂತೆ ಯಾಕೆ ಬಿಜೆಪಿಯಲ್ಲಿ ಗೊಂದಲವಿದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸ ಬೇಕಾಗಿಲ್ಲ. ರಾಜ್ಯಾಧ್ಯಕ್ಷರಾಗಿ ನಳಿನಿಕುಮಾರ್ ಕಟೀಲು ಅವರನ್ನು ಆರಿಸಲು ಆರೆಸ್ಸೆಸ್‌ಗೆ ಇಷ್ಟವಿದೆ. ಸದಾನಂದ ಗೌಡರಿಗೆ ತಾನು ರಾಜ್ಯಾಧ್ಯಕ್ಷನಾಗಿ ಪುನರಾಯ್ಕೆಯಾಗಬೇಕು ಎನ್ನುವ ಆಸೆ.
ಇತ್ತ ಈಶ್ವರಪ್ಪ ರಾಜೀನಾಮೆ ನೀಡಿಯಾಗಿದೆ. ಯಾವುದೇ ಗೊಂದಲ ಬೇಡ, ಈಶ್ವರಪ್ಪನವರನ್ನೇ ಮುಂದು ವರಿಸೋಣ ಎಂದು ತೀರ್ಮಾನ ತೆಗೆದು ಕೊಳ್ಳುವುದಕ್ಕೂ ಅಲ್ಲಿ ಸಾವಿರ ಅಡ್ಡಿ. ಯಾಕೆಂದರೆ, ರಾಜ್ಯಾಧ್ಯಕ್ಷನಾಗಿ ಮುಂದು ವರಿದರೆ, ಸೋಲಿನ ಹೊಣೆಯನ್ನು ಈಶ್ವರಪ್ಪನವರೇ ಹೊತ್ತುಕೊಳ್ಳಬೇಕಾಗುತ್ತದೆ. ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸೋಲಿನ ಹೊಣೆಯನ್ನು ಈಶ್ವರಪ್ಪ ಹಣೆಗೆ ಅಂಟಿಸಲಾಗಿದೆ. ಮುಂದಿನ ಸೋಲನ್ನೂ ತನ್ನ ತಲೆಗೆ ಕಟ್ಟಿದರೆ, ತಾನು ರಾಜಕೀಯವಾಗಿ ಶಾಶ್ವತವಾಗಿ ಇಲ್ಲವಾಗಬೇಕಾದೀತು ಎಂಬ ಭಯ ಈಶ್ವರಪ್ಪನವರದು.
ಆದುದರಿಂದ, ರಾಜ್ಯಾಧ್ಯಕ್ಷರಾಗಿ ಮುಂದುವರಿಯಲು ಅವರೂ ಹಿಂದೆ ಮುಂದೆ ನೋಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಯ ಗಂಟೆ ಬಾರಿಸಿದೆ.ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿ ಸರಕಾರ ಈ ನಾಡಿಗೆ ಕೊಟ್ಟುದು ಭಿನ್ನಮತ, ಭ್ರಷ್ಟಾಚಾರ, ಅಭದ್ರ ಇತ್ಯಾದಿಗಳನ್ನು ಮಾತ್ರ. ಈ ನಡುವೆ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಅಂತೇನೂ ಇಲ್ಲ. ಆದರೆ ಅವು ಸರಕಾರದ ಮುತುವರ್ಜಿಯಿಂದ ನಡೆದಿರುವುದು ಎನ್ನುವಂತಿಲ್ಲ.
ಯಡಿಯೂರಪ್ಪ, ಸದಾನಂದ ಗೌಡ, ಶೆಟ್ಟರ್ ಈ ಮೂವರಿಗೂ ಸರಿಯಾಗಿ ಆಡಳಿತ ನಡೆಸಲು ಸಮಯವೂ ಇರಲಿಲ್ಲ, ವಾತಾವರಣವೂ ಇರಲಿಲ್ಲ. ಭಿನ್ನಮತವನ್ನು ತಣಿಸುವುದು, ಸರಕಾರವನ್ನು ಉಳಿಸಿಕೊಳ್ಳುವುದು ಇದರ ಕಡೆಗೇ ಅವರ ಗಮನವಿದ್ದುದರಿಂದ, ಆಡಳಿತ ನಡೆಸುವುದು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೂರು ಬಾರಿ ಸರಕಾರ ಇನ್ನೇನು ಬಿದ್ದೇ ಬಿಟ್ಟಿತು ಎನ್ನುವಾಗ, ಅದನ್ನು ತಡೆದುದೇ ಬಿಜೆಪಿ ಸರಕಾರದ ಹೆಗ್ಗಳಿಕೆ. ಈ ಅವಧಿಯಲ್ಲಿ ಹಲವು ಕೆಟ್ಟ ಪರಂಪರೆಗಳಿಗೆ ಬಿಜೆಪಿ ನಾಂದಿ ಹಾಡಿತು. ಅದರಲ್ಲಿ
ಮುಖ್ಯವಾದುದು ಆಪರೇಷನ್ ಕಮಲ. ಎರಡನೆ ಯದು ಸ್ಪೀಕರ್ ದುರುಪಯೋಗ. ಈ ಪರಂಪರೆ ಮುಂದೆ ರಾಜಕೀಯದ ಮೇಲೆ ತೀರಾ ಕೆಟ್ಟ ಪರಿಣಾಮವನ್ನು ಬೀರುವುದರಲ್ಲಿ ಸಂಶಯವಿಲ್ಲ. ಉಳಿದಂತೆ ಬಿಜೆಪಿ ಸರಕಾರದ ಕುರಿತು ಹೇಳುವಂತಹದ್ದೇನಿಲ್ಲ.ಸ್ಥಳೀಯ ಸಂಸ್ಥೆಗಳಲ್ಲಿ ಮಾಡಿದ ಕಾಂಗ್ರೆಸ್‌ನ ಸಾಧನೆ, ವಿಧಾನಸಭಾ ಚುನಾವಣೆಗೆ ಸಹಕಾರಿಯಾಗುವ ಸಾಧ್ಯತೆಯಿದೆ. ಆದುದರಿಂದ ಚುನಾವಣೆ ಘೋಷಣೆ ಯಾಗಿರುವುದು ಅದಕ್ಕೆ ಸಂಭ್ರಮವನ್ನು ತಂದಿದೆ.
ಕೆಜೆಪಿ ಇನ್ನೂ ತನ್ನ ಬೇರನ್ನು ಊರಿಲ್ಲ. ಬಿಜೆಪಿಯ ಸೋಲನ್ನೇ ಅದು ತನ್ನ ಗೆಲುವು ಎಂದು ತಿಳಿದುಕೊಂಡಿರುವುದರಿಂದ, ಅದರ ಬಗ್ಗೆ ಹೇಳುವಂತಹದೇನೂ ಇಲ್ಲ. ಒಟ್ಟಿನಲ್ಲಿ ಮತ್ತೆ ಅಧಿಕಾರ ಜನರ ಕೈಗೆ ಬಂದಿದೆ. ಚುನಾವಣೆಯವರೆಗೆ ಅವನು ರಾಜನಂತೆ ಬಾಳುವ ಅವಕಾಶ. ಈ ಅವಕಾಶವನ್ನು ಮತದಾರರು ಎಷ್ಟರ ಮಟ್ಟಿಗೆ ಸದುಪಯೋಗ ಪಡಿಸಿಕೊಳ್ಳುತ್ತಾನೆ ಎನ್ನುವುದರ ಆಧಾರದಲ್ಲಿ, ನಾಡಿನ ಭವಿಷ್ಯ ನಿಂತಿದೆ.
ಕೃಪೆ ವಾ.ಭಾರತಿ 

No comments:

Post a Comment