Wednesday, March 20, 2013

ಮೊದಲು ಆತ್ಮವಿಮರ್ಶೆ ಬಳಿಕ ಪರರ ವಿಮರ್ಶೆ ಮಾರ್ಚ್ -20-2013

ಮಹಾ ಚುನಾವಣೆ ಹತ್ತಿರವಾಗುತ್ತಿರುವ ಹಾಗೆಯೇ ಎಲ್ಲ ಪಕ್ಷಗಳೂ ಅಟ್ಟದಲ್ಲಿ ತುಕ್ಕು ಹಿಡಿಯುತ್ತಿದ್ದ ತಮ್ಮ ತಮ್ಮ ಶಸ್ತ್ರಾಸ್ತ್ರಗಳನ್ನು ಹೊರಗೆಳೆದು ಸಾಣೆ ಮಾಡತೊಡಗಿವೆ.  ಅದರ ಭಾಗವಾಗಿ ಡಿಎಂಕೆ ಶ್ರೀಲಂಕಾ-ತಮಿಳರ ಸಮಸ್ಯೆಗೆ ಮತ್ತೆ ಜೀವ ಕೊಟ್ಟಿದೆ. ಶ್ರೀಲಂಕಾದಲ್ಲಿ ತಮಿಳರು ಬರ್ಬರವಾಗಿ ಹತ್ಯೆಯಾಗುತ್ತಿರುವ ಸಂದರ್ಭದಲ್ಲಿ ಅದನ್ನು ತಡೆಯಲು ಕಿಂಚಿತ್ತೂ ಪ್ರಯತ್ನಿಸದ ತಮಿಳು ನಾಡಿನ ಪಕ್ಷಗಳು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಮಾನವಹಕ್ಕುಗಳ ಕುರಿತಂತೆ ಮಾತನಾಡುತ್ತಿವೆ. ಶ್ರೀಲಂಕಾದಲ್ಲಿ ನಡೆದಿರುವ ತಮಿಳರ ಬರ್ಬರ ಮಾರಣಹೋಮದ ಬಳಿಕ ಅವರ ಅಳಿದುಳಿದ ಎಲುಬುಗಳನ್ನು ಬಳಸಿಕೊಂಡು ಚುನಾವಣೆಯ ಒಲೆಯನ್ನು ಹೊತ್ತಿಸಲು ಹೊರಟಿವೆ.
ಹಾಗೆಂದು ಡಿಎಂಕೆ ಎತ್ತಿದ ಪ್ರಶ್ನೆ ನಿರಾಕರಿಸುವಂತಹದಲ್ಲ. ಶ್ರೀಲಂಕಾದಲ್ಲಿ ತಮಿಳರ ಮೇಲೆ ಬೌದ್ಧರು ನಡೆಸಿದ ಭೀಕರ ಆಕ್ರಮಣ ಮತ್ತು ಅಲ್ಲಿನ ಸರಕಾರ ಅಲ್ಲಿನ ನಾಗರಿಕರನ್ನು ಕೊಂದು ಹಾಕಿದ ಪರಿ ಎದೆ ನಡುಗಿಸುವಂತಹದು. ಇಂದು ಶ್ರೀಲಂಕಾ ಸರಕಾರ ತಾನು ಭಯೋತ್ಪಾದನೆಯ ವಿರುದ್ಧ ನಡೆಸಿದ ಯುದ್ಧ ಅದು ಎಂದು ಹೇಳುತ್ತಿದೆ. ಅದು ಎಂತಹ ಹೃದಯಶೂನ್ಯ ಯುದ್ಧ ಎನ್ನುವುದು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಯಿತು.
ಎಲ್ಟಿಟಿಇ ನಾಯಕ ಪ್ರಭಾಕರನ್‌ರ ಎಳೆಯ ಮಗನೊಬ್ಬನನ್ನು ಬಂಧಿಸಿ, ಬಳಿಕ ಅತಿ ಹತ್ತಿರದಿಂದ ಶ್ರೀಲಂಕಾ ಸೇನೆ ಗುಂಡಿಟ್ಟು ಕೊಂದಿತು. ಇದು ಕೇವಲ ಪ್ರಭಾಕರನ್‌ರ ಮಗುವಿಗೆ ಸಂಬಂಧಿಸಿದ ಪ್ರಶ್ನೆ ಮಾತ್ರವಲ್ಲ, ಎಲ್ಟಿಟಿಇಯನ್ನು ದಮನಿಸುವ ಭಾಗವಾಗಿ ನಡೆದ ಯುದ್ಧದಲ್ಲಿ ಲಕ್ಷಾಂತರ ತಮಿಳು ಮಹಿಳೆಯರು, ಪುಟಾಣಿಗಳನ್ನು ಬರ್ಬರವಾಗಿ ಕೊಂದು ಹಾಕಲಾಯಿತು.   ಅಮಾಯಕರನ್ನು ಕೊಂದು ತಿಂದ ಬಳಿಕ, ತಾನು ಭಯೋತ್ಪಾದನೆಯ ವಿರುದ್ಧ ಯುದ್ಧ ಮಾಡಿ ಗೆದ್ದೆ ಎಂದು ಶ್ರೀಲಂಕಾ ಬೀಗಿತು.
ಅಮೆರಿಕಾ ಎನ್ನುವ ದೇಶ ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಏನು ಮಾಡಿತೋ ಅದನ್ನೇ ಶ್ರೀಲಂಕಾ ತಮಿಳರ ವಿರುದ್ಧ ಮಾಡಿತು. ಇದೀಗ ಎಲ್ಲ ಮುಗಿದ ಬಳಿಕ ಡಿಎಂಕೆ ಮಾನವ ಹಕ್ಕುಗಳ ಕುರಿತಂತೆ ಮಾತನಾಡು ತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಲಂಕಾದ ಕುರಿತಂತೆ ಭಾರತ ತನ್ನ ನಿರ್ಧಾರವನ್ನು ಬದಲಿಸಬೇಕು ಎನ್ನುತ್ತಿದೆ. ಇದೇ ಸಂದರ್ಭದಲ್ಲಿ, ನಮ್ಮ ಆಂತರಿಕ ವಿಚಾರದಲ್ಲಿ ತಲೆಯಿಕ್ಕಬೇಡಿ ಎನ್ನುತ್ತಿದೆ ಶ್ರೀಲಂಕಾ ಸರಕಾರ.
ಶ್ರೀಲಂಕಾದ ತಮಿಳರ ಮಾನವ ಹಕ್ಕುಗಳ ಬಗ್ಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಮಾತನಾಡಲು ಎಷ್ಟರ ಮಟ್ಟಿಗೆ ನೈತಿಕವಾಗಿ ಹಕ್ಕಿದೆ ಎನ್ನುವುದನ್ನು ಡಿಎಂಕೆ ಒಂದು ಕ್ಷಣ ಯೋಚಿಸಬೇಕು. ತನ್ನದೇ ನೆಲದ ತಮಿಳರನ್ನು ಕೊಂದು ಹಾಕಲು ಒಂದಾನೊಂದು ಕಾಲದಲ್ಲಿ ‘ಶಾಂತಿ ಸೇನೆ’ಯನ್ನು ಕಳುಹಿಸಿದುದು ಕಾಂಗ್ರೆಸ್ ಸರಕಾರ. ಆ ತಪ್ಪಿಗಾಗಿ ಮುಂದೆ ರಾಜೀವ್‌ಗಾಂಧಿ ತನ್ನ ಪ್ರಾಣವನ್ನೇ ಬಲಿ ನೀಡಬೇಕಾಯಿತು. ಅಂದರೆ, ಪರೋಕ್ಷವಾಗಿ ಶ್ರೀಲಂಕಾ ಸರಕಾರ ನಡೆಸಿದ ಯುದ್ಧವನ್ನು ಕಾಂಗ್ರೆಸ್ ಆಳದಲ್ಲಿ ಬೆಂಬಲಿಸುತ್ತಿದೆ. ಇಂದಿಗೂ ತನ್ನ ಹಿಂದಿನ ನಿಲುವಿನ ಕುರಿತಂತೆ ಕಾಂಗ್ರೆಸ್ ಪಶ್ಚಾತ್ತಾಪ ಪಟ್ಟಿಲ್ಲ.
ಇದಿಷ್ಟೇ ಅಲ್ಲ. ಶ್ರೀಲಂಕಾ ಸರಕಾರ ತಮಿಳರ ಮೇಲೆ ಯಾವ ರೀತಿಯ ದೌರ್ಜನ್ಯವನ್ನು ಎಸಗಿತೋ, ಅದರ ರಿಹರ್ಸಲ್ ಭಾರತದಲ್ಲಿ ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ನಡೆಯುತ್ತಿದೆ. ಕಾಶ್ಮೀರದ ವಿಷಯ ಬಂದಾಗ ಪ್ರತಿ ಬಾರಿ ಭಾರತ ‘ಇದು ನನ್ನ ಆಂತರಿಕ ವಿಷಯ’ ಎಂದು ಗರ್ಜಿಸುತ್ತದೆ. ಹೀಗಿರುವಾಗ, ಶ್ರೀಲಂಕಾದ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ಭಾರತಕ್ಕೆ ನೈತಿಕ ಹಕ್ಕು ಇರುತ್ತದೆಯೇ? ಒಂದೆಡೆ ತಮಿಳರ ಮಾನವಹಕ್ಕನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಲು ಭಾರತ ಪ್ರಯತ್ನಿಸುತ್ತದೆ.
ಮಗದೊಂದೆಡೆ ತನ್ನದೇ ದೇಶದ ಕಾಶ್ಮೀರ, ಮಣಿಪುರದಂತಹ ದೇಶಗಳ ಜನರ ಮಾನವ ಹಕ್ಕುಗಳ ಕುರಿತಂತೆ ದಿವ್ಯ ಮೌನವನ್ನು ತಾಳುತ್ತದೆ. ಇತರರು ಈ ಕುರಿತಂತೆ ಮಾತನಾಡಿದರೆ, ಇದು ತನ್ನ ಆಂತರಿಕ ವಿಷಯ ಎಂದು ಅವರ ಬಾಯಿ ಮುಚ್ಚಿಸಲು ಹವಣಿಸುತ್ತದೆ. ಈ ದ್ವಂದ್ವವನ್ನು ಇಟ್ಟುಕೊಂಡು ಭಾರತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮಿಳರ ಪರವಾಗಿ ಧ್ವನಿಯೆತ್ತಲು ಹೇಗೆ ಸಾಧ್ಯವಾದೀತು?ಕಾಟಾಚಾರಕ್ಕಾಗಿ ತಮಿಳರ ಪರವಾಗಿ ಧ್ವನಿಯೆತ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೀಡಾಗುವ ಮೊದಲು, ಭಾರತ ತನ್ನೊಳಗನ್ನು ತಿದ್ದಿಕೊಳ್ಳಬೇಕಾಗಿದೆ. ಕನಿಷ್ಠ ಕಾಶ್ಮೀರ ಮತ್ತು ಈಶಾನ್ಯ ಭಾರತದ ಜನರ ಬದುಕುವ ಹಕ್ಕನ್ನಾದರೂ ಗೌರವಿಸಬೇಕಾಗಿದೆ.
ಅದರ ಭಾಗವಾಗಿ, ಅಲ್ಲಿನ ಸೇನೆಯ ವಿಶೇಷಾಧಿಕಾರವನ್ನು ಹಿಂದಕ್ಕೆ ಪಡೆದು ಆ ಜನರು ನಿಟ್ಟುಸಿರು ಬಿಟ್ಟು ಬದುಕುವುದಕ್ಕೆ ಅವಕಾಶ ನೀಡಬೇಕು. ಡಿಎಂಕೆ ಇಂದು ತಮಿಳರ ವಿರುದ್ಧ ಧ್ವನಿಯೆತ್ತುತ್ತಿರುವುದು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು. ಚುನಾವಣೆ ಮುಗಿದಾಕ್ಷಣ, ತಮಿಳರ ಕುರಿತ ಅದರ ಮೊಸಳೆ ಕಣ್ಣೀರು ಒಣಗಿ ಬಿಡುತ್ತದೆ. ಆದರೆ, ಮಾನಯತೆ, ಅಹಿಂಸೆಯ ಕುರಿತಂತೆ ವಿಶ್ವಕ್ಕೆ ಬೋಧನೆ ಮಾಡುತ್ತಾ ಬಂದಿರುವ ಭಾರತ ಯಾವ ಕಾರಣಕ್ಕೂ ಅಮಾಯಕರ ಪ್ರಾಣವನ್ನು ರಾಜಕೀಯ ಕಣ್ಣಿನಿಂದ ನೋಡಬಾರದು. ತನ್ನ ನೆಲದ ಜನರ ಹಕ್ಕಿನ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮಾಯಕರ ಮೇಲೆ ನಡೆಯುತ್ತಿರುವ ಎಲ್ಲ ದೌರ್ಜನ್ಯವನ್ನು ಪ್ರತಿಭಟಿಸುವ ಶಕ್ತಿಯನ್ನು ಮರಳಿ ಭಾರತ ಗಳಿಸಿಕೊಳ್ಳಬೇಕಾಗಿದೆ. 
ಕೃಪೆ : ವಾ.ಭಾರತಿ 

No comments:

Post a Comment