Monday, March 25, 2013

ವಿವಾದ ಸೃಷ್ಟಿಸಿದ ಉಗ್ರನ ಬಂಧನ



ಮಾರ್ಚ್ -25-2013

*ಗೃಹ ಸಚಿವಾಲಯದಿಂದ ತನಿಖೆ ಸಾಧ್ಯತೆ
ಹೊಸದಿಲ್ಲಿ: ಶಂಕಿತ ಹಿಝ್ಬುಲ್ ಮುಜಾಹಿದೀನ್ ಭಯೋತ್ಪಾದಕ ಲಿಯಾಕತ್ ಆಲಿ ಶಾನ ಬಂಧನದ ಬಗ್ಗೆ ದಿಲ್ಲಿ ಪೊಲೀಸ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ, ಆತನ ಬಂಧನಕ್ಕೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆಗೆ ಗೃಹ ಸಚಿವಾಲಯ ಆದೇಶ ಹೊರಡಿಸುವ ಸಾಧ್ಯತೆಯಿದೆ.ಲಿಯಾಕತ್ ಆಲಿ ಶಾಗೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿರುವ ಹೇಳಿಕೆಯನ್ನು ಗೃಹ ಸಚಿವಾಲಯ ಗಣನೆಗೆ ತೆಗೆದುಕೊಂಡಿದೆ ಹಾಗೂ ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಡಿಸಿರುವ ವಾಸ್ತವಾಂಶಗಳನ್ನು ಸಚಿವಾಲಯ ಪರಿಶೀಲಿಸುತ್ತಿದೆ.“ಎರಡೂ ರಾಜ್ಯಗಳ ಪೊಲೀಸರ ಹೇಳಿಕೆಗಳನ್ನು ಪರಿಶೀಲಿಸಿದ ಬಳಿಕ ಈ ಬಗ್ಗೆ ತನಿಖೆ ಅಗತ್ಯವೇ ಎಂಬ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು” ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಹೇಳಿದರು.
ಲಿಯಾಕತ್‌ನ ಬಂಧನದೊಂದಿಗೆ ರಾಜಧಾನಿಯಲ್ಲಿ ನಡೆಯುತ್ತಿದ್ದ ಆತ್ಮಹತ್ಯಾ ದಾಳಿ ಸಂಚನ್ನು ವಿಫಲಗೊಳಿಸಿ ದ್ದೇವೆ ಎಂದು ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ಹೇಳಿ ಕೊಂಡಿತ್ತು. ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದುದಕ್ಕೆ ಪ್ರತೀಕಾರವಾಗಿ ಭಯೋತ್ಪಾದಕ ದಾಳಿ ನಡೆಸಲು ಆತ ಯೋಜನೆ ರೂಪಿಸಿದ್ದನು ಎಂದು ಅವರು ಹೇಳಿದ್ದರು.
ಆದಾಗ್ಯೂ, ಲಿಯಾಕತ್ ಒಬ್ಬ ಮಾಜಿ ಬಂಡುಕೋರ ಹಾಗೂ ಆತ ನೇಪಾಳ ಗಡಿಯ ಸನೌಲಿ ಚೆಕ್‌ಪೋಸ್ಟ್‌ನಲ್ಲಿ ದಿಲ್ಲಿ ಪೊಲೀಸ್‌ನ ವಿಶೇಷ ಘಟಕದ ಮುಂದೆ ಶರಣಾಗಿದ್ದ ಹಾಗೂ ಜಮ್ಮು ಮತ್ತು ಕಾಶ್ಮೀರ ಸರಕಾರದ ಪುನರ್ವಸತಿ ಯೋಜನೆಯ ಭಾಗವಾಗಿ ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಹಿಂದಿರುಗುತ್ತಿದ್ದ ತಂಡದ ಸದಸ್ಯನಾಗಿದ್ದ ಎಂಬ ಲಿಯಾಕತ್ ಕುಟುಂಬದ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅನುಮೋದಿಸಿದ್ದಾರೆ.
ಕಾಲಬದ್ಧ ಕ್ಷಿಪ್ರ ತನಿಖೆಗಾಗಿ ಲಿಯಾಕತ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸುವಂತೆ ಶನಿವಾರ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆಗೆ ಮನವಿ ಮಾಡಿದ್ದರು. 
ಕೃಪೆ:ವಾ.ಭಾರತಿ 

No comments:

Post a Comment