Wednesday, March 20, 2013

ಡಿಎಂಕೆ ಬೆಂಬಲ ಹಿಂದೆಗೆತ ಸರಕಾರಕ್ಕೆ ಯಾವುದೇ ಧಕ್ಕೆಯಿಲ್ಲ: ಯುಪಿಎ


 ಮಾರ್ಚ್ -20-2013

ಚೆನ್ನೈ: ಮಂಗಳವಾರ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ  ಆಡ ಳಿತಾರೂಢ ಯುಪಿಎ ಒಕ್ಕೂಟದ  ಪ್ರಮುಖ ಅಂಗಪಕ್ಷವಾಗಿದ್ದ ಡಿಎಂಕೆ ಕೇಂದ್ರ ಸರಕಾರದಿಂದ ಬೆಂಬಲ ಹಿಂದೆಗೆದು ಕೊಂಡಿದೆ. ಶ್ರೀಲಂಕಾ ತಮಿಳರ ಸಮಸ್ಯೆಯ ಬಗ್ಗೆ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಯ ನಿರ್ಣಯಕ್ಕೆ ಸಂಬಂಧಿಸಿ ಯುಪಿಎ ಒಕ್ಕೂಟದ ಧೋರಣೆಯನ್ನು ಪ್ರತಿಭಟಿಸಿ ತಾನು ಕೇಂದ್ರ ಸರಕಾರದಿಂದ ಬೆಂಬಲ ಹಿಂದೆ ಪಡೆಯುತ್ತಿರುವುದಾಗಿ ಡಿಎಂಕೆ ಹೇಳಿದೆ. ಈ ನಿರ್ಧಾರದಿಂದ ಯುಪಿಎ ಸರಕಾರಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಕೇಂದ್ರ ಸಚಿವ ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.ಚೆನ್ನೈಯಲ್ಲಿರುವ  ಡಿಎಂಕೆಯ ಪ್ರಧಾನ ಕಾರ್ಯಾಲಯ ‘ಅಣ್ಣಾ ಅರಿವಾಲಯಂ’ನಲ್ಲಿ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ ಹೇಳಿಕೆ ಯೊಂದನ್ನು ನೀಡಿ ತನ್ನ ಪಕ್ಷವು ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂದೆ ಪಡೆದಿರು ವುದನ್ನು ಘೋಷಿಸಿದರು.
“ಅಮೆರಿಕವು ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಯ ಸಭೆಯಲ್ಲಿ ಮಂಡಿಸಿದ ನಿರ್ಣಯಕ್ಕೆ ತಿದ್ದುಪಡಿಯನ್ನು ಮಾಡಬೇಕೆಂಬ ಡಿಎಂಕೆಯ ಪ್ರಸ್ತಾಪವನ್ನು ಕೇಂದ್ರ ಸರಕಾರವು  ಪರಿಗಣಿಸಲೇ ಇಲ್ಲ.  ಯುಪಿಎ ಸರಕಾರದಿಂದ ಈಳಂ ತಮಿಳರಿಗೆ ಯಾವುದೇ ರೀತಿಯ ಪ್ರಯೋಜನವಾಗದು ಎಂಬಂತಹ ಸ್ಥಿತಿ ಉದ್ಭವವಾಗಿದೆ. ಇಂತಹ ಸನ್ನಿವೇಶದಲ್ಲಿ ಡಿಎಂಕೆಯು ಕೇಂದ್ರ ಸರಕಾರದಲ್ಲಿ ಮುಂದುವರಿದರೆ, ಅದೊಂದು ಘೋರ ಅನ್ಯಾಯವಾದೀತು. ಹೀಗಾಗಿ ಡಿಎಂಕೆಯು ಕೇಂದ್ರ ಸರಕಾರ ಹಾಗೂ ಯುಪಿಎ ಒಕ್ಕೂಟದಿಂದ ಹೊರಬರಲು ನಿರ್ಧರಿಸಿತು” ಎಂದು ಕರುಣಾ ನಿಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಪಿಎ ಒಕ್ಕೂಟದಿಂದ ನಿರ್ಗಮಿಸುವ ಡಿಎಂಕೆಯ ನಿರ್ಧಾರವು ಪ್ರಕಟವಾಗುತ್ತಿದ್ದಂತೆಯೇ, ಚೆನ್ನೈಯಲ್ಲಿರುವ ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಬೆಂಬಲ ವ್ಯಕ್ತಪಡಿಸಿದರು. ಕರುಣಾನಿಧಿಯವರ ಪುತ್ರ ಹಾಗೂ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಸೇರಿದಂತೆ ಯುಪಿಎ ಸರಕಾರದಲ್ಲಿರುವ   ಡಿಎಂಕೆಯ ಐವರು ಸಚಿವರು ತಮ್ಮ ಹುದ್ದೆಗಳಿಗೆ ಶೀಘ್ರವೇ ರಾಜೀನಾಮೆ ನೀಡಲಿದ್ದಾರೆಂದು ಕರುಣಾನಿಧಿ ತಿಳಿಸಿದ್ದಾರೆ.
ಆದರೆ ಒಂದು ವೇಳೆ ಯುಪಿಎ ಸರಕಾರವು ತನ್ನ ಬೇಡಿಕೆಗೆ ಮಣಿದು, ಯುದ್ಧಾಪರಾಧ ಹಾಗೂ ಜನಾಂಗೀಯ ಹತ್ಯೆಗೈದ ಆರೋಪಗಳಿಗೆ ಸಂಬಂಧಿಸಿ ಶ್ರೀಲಂಕಾ ಸರಕಾರದ ವಿರುದ್ಧ ಹಕ್ಕುಚ್ಯುತಿಯ ನಿರ್ಣಯವನ್ನು ಮಂಡಿಸಿದಲ್ಲಿ,ಬೆಂಬಲ ಹಿಂದೆಗೆಯುವ ತನ್ನ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ಡಿಎಂಕೆ ಸ್ಪಷ್ಟಪಡಿಸಿದೆ.
ಶ್ರೀಲಂಕಾದಲ್ಲಿ ತಮಿಳರ ಜನಾಂಗೀಯ ಹತ್ಯೆ ಹಾಗೂ ಯುದ್ಘಪರಾಧಗಳಿಗಾಗಿ ಶ್ರೀಲಂಕಾ ಸರಕಾರದ ವಿರುದ್ಧ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ತನಿಖೆ ನಡೆಯಬೇಕೆಂಬ  ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ನಿರ್ಣಯ (ಯುಎನ್‌ಎಚ್‌ಆರ್‌ಸಿ)ವನ್ನು ಭಾರತವು ಬೆಂಬಲಿಸುವ ವಿಷಯದಲ್ಲಿ ಸಹಮತವನ್ನು ರೂಪಿಸಲು ಕೇಂದ್ರಸಚಿವರಾದ ಎ.ಕೆ. ಆಂಟನಿ, ಪಿ.ಚಿದಂಬರಂ ಹಾಗೂ ಗುಲಾಂ ನಬಿ ಆಝಾದ್ ಅವರು  ಕರುಣಾನಿಧಿ ಜೊತೆ  ಸೋಮವಾರ ನಡೆಸಿದ ಸಂಧಾನ ಮಾತುಕತೆಗಳು ವಿಫಲಗೊಂಡಿದ್ದವು. 
ಬದಲಾದ ಸಂಖ್ಯಾಬಲ
ಲೋಕಸಭೆಯಲ್ಲಿ ಪ್ರಸ್ತುತ ೫೩೯ ಸದಸ್ಯರಿದ್ದು, ನಾಲ್ಕು ಸ್ಥಾನಗಳು ಖಾಲಿಬಿದ್ದಿವೆ. ಡಿಎಂಕೆ ೧೮ ಸದಸ್ಯರನ್ನು ಹೊಂದಿದೆ. ಸರಕಾರಕ್ಕೆ ಬಹುಮತಕ್ಕೆ ೨೭೦ ಸ್ಥಾನಗಳ ಅಗತ್ಯವಿದೆ. ಆಡಳಿತಾರೂಢ ಯುಪಿಎ ಸರಕಾರವು ಈವರೆಗೆ ಡಿಎಂಕೆ ಸೇರಿದಂತೆ ೨೯೯ ಸದಸ್ಯರ ಬೆಂಬಲವನ್ನು ಪಡೆದಿತ್ತು.ಈ ಪೈಕಿ ಎಸ್ಪಿ (೨೨), ಬಿಎಸ್ಪಿ (೨೧), ಆರ್‌ಜೆಡಿ (೩) ಹಾಗೂ ಜೆಡಿಎಸ್ (೩) ಪಕ್ಷಗಳು ಸರಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡುತ್ತಿವೆ.ಇದೀಗ ಡಿಎಂಕೆ ಬೆಂಬಲ ಹಿಂತೆಗೆಯುವು ದರೊಂದಿಗೆ ಯುಪಿಎ ಸರಕಾರದ  ಒಟ್ಟು ಬಲ ೨೮೧ಕ್ಕೆ ಕುಸಿದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ಪಕ್ಷಗಳಾದ ಎಸ್ಪಿ ಹಾಗೂ ಬಿಎಸ್ಪಿಯನ್ನು ಅತಿಯಾಗಿ ಅವಲಂಬಿಸುವುದು ಅನಿವಾರ್ಯವಾಗುತ್ತದೆ. 

ನಿರ್ಣಯ ಮಂಡನೆಗೆ ಸಿದ್ಧ: ಕೇಂದ್ರ
ಹೊಸದಿಲ್ಲಿ, ಮಾ.19: ಯುಪಿಎ ಒಕ್ಕೂಟ ದಿಂದ ಹೊರಬಂದಿರುವ ಡಿಎಂಕೆಯನ್ನು ಓಲೈಸುವ ಯತ್ನವಾಗಿ ಕೇಂದ್ರ ಸರಕಾರವು ಶ್ರೀಲಂ ಕಾದಲ್ಲಿ ತಮಿಳರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಸಂಸತ್‌ನಲ್ಲಿ ನಿರ್ಣಯ ಮಂಡಿಸಲು ಮಂಗಳವಾರ ನಿರ್ಧರಿಸಿದೆ. ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಯ ಸಭೆ ಅಂಗೀಕರಿಸಿದ ನಿರ್ಣಯವನ್ನು ಬೆಂಬಲಿಸುವ  ಗೊತ್ತುವಳಿಯೊಂದನ್ನು ಸಂಸತ್‌ನಲ್ಲಿ ಮಂಡಿಸಬೇಕೆಂಬುದೇ ಡಿಎಂಕೆಯ ಬೇಡಿಕೆಯಾಗಿತ್ತು.ಯುಪಿಎ ಸರಕಾರಕ್ಕೆ ಬೆಂಬಲ ಹಿಂತೆಗೆಯುವ ನಿರ್ಧಾರವನ್ನು ಡಿಎಂಕೆ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ವರಿಷ್ಠ ಸಮಿತಿಯು ಸಭೆ ಸೇರಿ  ಸಂಸತ್‌ನಲ್ಲಿ ಶ್ರೀಲಂಕಾ ತಮಿಳರ ಸಮಸ್ಯೆಯ ಬಗ್ಗೆ ನಿರ್ಣಯವೊಂದನ್ನು ಮಂಡಿಸಲು ನಿರ್ಧರಿಸಿತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಬೆಂಬಲಿಸುವ ಗೊತ್ತುವಳಿಯನ್ನು  ಸಂಸತ್‌ನಲ್ಲಿ ಅಂಗೀಕರಿಸಿದಲ್ಲಿ ಸರಕಾರಕ್ಕೆ ಬೆಂಬಲ ವಾಪಸ್ ಪಡೆಯುವ ತನ್ನ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ  ಡಿಎಂಕೆ ಸ್ಪಷ್ಟಪಡಿಸಿತ್ತು.

No comments:

Post a Comment