Saturday, March 2, 2013

ಅಪಘಾತ, ಅತ್ಯಾಚಾರ ಸಂತ್ರಸ್ತರನ್ನು ಖಾಸಗಿ ಆಸ್ಪತ್ರೆಗಳು ಕಡೆಗಣಿಸುವಂತಿಲ್ಲ



ಹೊಸದಿಲ್ಲಿ: ಅಪಘಾತ ಮತ್ತು ಅತ್ಯಾಚಾರಕ್ಕೊಳಗಾದ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ನಿರಾಕರಣೆ ಮಾಡಬಾರದು ಎಂಬ ತನ್ನ ಈ ಹಿಂದಿನ ಆದೇಶದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ದಿಲ್ಲಿ ಮಹಾನಗರದ ಪೊಲೀಸರಿಗೆ ಮತ್ತು ದಿಲ್ಲಿ ಸರಕಾರಕ್ಕೆ ದಿಲ್ಲಿ ಹೈಕೋರ್ಟ್ ಆದೇಶಿಸಿದೆ.
ತನ್ನ ಈ ಹಿಂದಿನ ಆದೇಶದ ಕುರಿತು ಜನರಲಿ ಜಾಗೃತಿ ಮೂಡಿಸಲು ಒಂದು ವಾರದೊಳಗೆ ಈ ಸಂಬಂಧ ಪ್ರಕಟನೆಯನ್ನು ಹೊರಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ. ಮುರುಗನ್ ಮತ್ತು ವಿ.ಕೆ. ಜೈನ್‌ರಿದ್ದ ವಿಭಾಗೀಯ ಪೀಠವು ದಿಲ್ಲಿ ಪೊಲೀಸರು ಮತ್ತು ರಾಜ್ಯ ಸರಕಾರಕ್ಕೆ ನಿರ್ದೇಶನವನ್ನು ನೀಡಿತ್ತು.
ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶದ ಕುರಿತು ರಾಜ್ಯದ ಎಲ್ಲಾ ಖಾಸಗಿ ಅಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ ಎಂಬ ರಾಜ್ಯ ಸರಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು ಈ ನಿರ್ದೇಶನವನ್ನು ನೀಡಿದೆ.

ವಿಭಾಗೀಯ ಪೀಠವು ಈ ಹಿಂದೆ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ರಸ್ತೆ ಅಪಘಾತದ ಸಂತ್ರಸ್ತರು ಮತ್ತು ಅತ್ಯಾಚಾರಕ್ಕೊಳಗಾದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವುದನ್ನು ನಿರಾಕರಿಸದಂತೆ ರಾಜ್ಯ ಸರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಕಳೆದ ಫೆ. 21ರಂದು ನೋಟಿಸ್ ನೀಡಿದೆ. ಆದರೆ ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರಕಾರ ಮತ್ತು ದಿಲ್ಲಿ ಪೊಲೀಸರು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ತನ್ನ ಈ ಹಿಂದಿನ ಆದೇಶಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ ಪೀಠವು, ದಿಲ್ಲಿ ಸರಕಾರ ಮತ್ತು ದಿಲ್ಲಿ ಪೊಲೀಸ್ ಆಯುಕ್ತರು ಸಲ್ಲಿಸಿದ ಅಫಿದಾವಿತ್ ಪರಿಶೀಲಿಸಿ, ಅಪಘಾತದ ಮತ್ತು ಅತ್ಯಾಚಾರದ ಸಂತ್ರಸ್ತರನ್ನು ಕೂಡಲೇ ಹತ್ತಿರದ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವಂತೆ ದಿಲ್ಲಿ ನಗರ ಪೊಲೀಸ್ ಆಯುಕ್ತರು ಎಲ್ಲಾ ಪೊಲೀಸ್ ಠಾಣೆಗಳಿಗೆ ನೋಟಿಸ್ ಜಾರಿ ಮಾಡಿದೆ.ಸಂತ್ರಸ್ತರಿಗೆ ನೀಡಿದ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಕೇಂದ್ರ ಮತ್ತು ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದು ಅದು ತನ್ನ ಆದೇಶದಲ್ಲಿ ಹೇಳಿದೆ.
ದಿಲ್ಲಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ನಿರ್ಭಯಾಳ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ದಿಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಸ್ವಯಂಪ್ರೇರಿತವಾಗಿ ಅರ್ಜಿಯ ವಿಚಾರಣೆಯೊಂದನ್ನು ನಡೆಸಿ ಎಲ್ಲಾ ಖಾಸಗಿ ಅಸ್ಪತ್ರೆಗಳೂ ಅತ್ಯಚಾರಕ್ಕೊಳಗಾದ ಮತ್ತು ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ಸೂಕ್ತವಾದ ಪ್ರಾಥಮಿಕ ಚಿಕಿತ್ಸೆಯನ್ನು ನೀಡಬೇಕು ಎಂದು ಆದೇಶಿಸಿತ್ತು.

No comments:

Post a Comment