Sunday, March 17, 2013

ಜಾಗರೂಕರಾಗಿರಲು ಇಟಲಿ ಪ್ರಜೆಗಳಿಗೆ ರಾಯಭಾರಿ ಸೂಚನೆ;ಭಾರತದಲ್ಲಿ ಪ್ರತೀಕಾರದ ಭೀತಿ
ಹೊಸದಿಲ್ಲಿ,: ಇಬ್ಬರು ಭಾರತೀಯ ಬೆಸ್ತರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ತನ್ನ ಇಬ್ಬರು ನಾವಿಕರನ್ನು ಭಾರತಕ್ಕೆ ವಾಪಸ್ ಕಳುಹಿಸಲು ತಾನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕೇರಳದಲ್ಲಿ ಪ್ರತೀಕಾರ ದಾಳಿಗಳು ನಡೆಯುವ ಸಾಧ್ಯತೆಯಿರುವುದರಿಂದ ಅತ್ಯಂತ ಜಾಗರೂಕ ರಾಗಿರಬೇಕೆಂದು ಇಟಲಿ ಶನಿವಾರ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.
 ಮೀನುಗಾರರ ಹತ್ಯೆಯ ಆರೋಪ ಎದುರಿಸುತ್ತಿರುವ ತನ್ನ ಇಬ್ಬರು ನಾವಿಕರನ್ನು ಭಾರತಕ್ಕೆ ವಾಪಸ್ ಕಳುಹಿಸದಿರುವ ತನ್ನ ನಿರ್ಧಾರವನ್ನು ಇಟಲಿ ಘೋಷಿಸಿದ ಎರಡು ದಿನಗಳ ಬಳಿಕ ಅದು ತನ್ನ ಪ್ರಜೆಗಳಿಗೆ ಈ ಎಚ್ಚರಿಕೆಯನ್ನು ನೀಡಿದೆ. ಭಾರತದಲ್ಲಿ ಜನಜಂಗುಳಿಯಿರುವ ಪ್ರದೇಶಗಳಿಂದ ದೂರವಿರುವಂತೆಯೂ ಇಟಲಿಯು ತನ್ನ ಪ್ರಜೆಗಳಿಗೂ ಮುನ್ನೆಚ್ಚರಿಕೆ ನೀಡಿದೆ.
 
ಇಬ್ಬರು ನಾವಿಕರನ್ನು ಭಾರತಕ್ಕೆ ವಾಪಸ್ ಕಳುಹಿಸಲು ನಿರಾಕರಿಸಿದ ಇಟಲಿ ಸರಕಾರದ ನಿರ್ಧಾರದಿಂದಾಗಿ ಅಸಮಾಧಾನಗೊಂಡಿರುವ ಸುಪ್ರೀಂಕೋರ್ಟ್, ಇಟಲಿ ರಾಯಭಾರಿ ಡೇನಿಯಲ್ ಮ್ಯಾನ್ಸಿನಿ ತನ್ನ ಅನುಮತಿಯಿಲ್ಲದೆ ಭಾರತದಿಂದ ಹೊರಹೋಗಕೂಡದೆಂದು ತಾಕೀತು ಮಾಡಿದೆ.

ಇಟಲಿಯ ಚುನಾವಣೆಯಲ್ಲಿ ಮತಚಲಾಯಿಸಲು ಅವಕಾಶ ನೀಡುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಇಬ್ಬರು ಆರೋಪಿ ನಾವಿಕರಿಗೆ ನಾಲ್ಕು ವಾರಗಳ ಅವಧಿಗೆ ತಾಯ್ನಡಿಗೆ ತೆರಳಲು ಅನುಮತಿ ನೀಡಿತ್ತು. ಆರೋಪಿ ನಾವಿಕರು ಭಾರತಕ್ಕೆ ವಾಪಸಾಗುವ ಬಗ್ಗೆ ಅದು ಇಟಲಿ ರಾಯಭಾರಿ ಡೇನಿಯಲ್ ಮ್ಯಾನ್ಸಿನಿಯವರಿಂದ ವಾಗ್ದಾನವನ್ನು ಕೂಡಾ ಪಡೆದುಕೊಂಡಿತ್ತು.

ಪ್ರಕರಣದ ಬಗ್ಗೆ ರಾಯಭಾರಿ ಮ್ಯಾನ್ಸಿನಿ ಹಾಗೂ ಆರೋಪಿ ನಾವಿಕರಾದ ಮ್ಯಾಸಿಮಿಲಿಯಾನೊ ಲಾಟೊರ್ ಹಾಗೂ ಸಲ್ವದೋರ್ ಗಿರೊನ್ ಸೋಮವಾರದೊಳಗೆ ಉತ್ತರಿಸುವಂತೆಯೂ ಅಲ್ತಮಶ್ ಕಬೀರ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ನೋಟಿಸ್ ಜಾರಿಗೊಳಿಸಿದೆ.
ಕೃಪೆ:ವಾ.ಭಾರತಿ

No comments:

Post a Comment