Wednesday, March 20, 2013

'ವಿಶ್ವಾಸದ್ರೋಹ 'ಇಟಲಿ ವಿರುದ್ಧ ಸೋನಿಯಾ ಆಕ್ರೋಶ:ಮೌನ ಮುರಿದ ಕಾಂಗ್ರೆಸ್ ನಾಯಕಿ



 ಮಾರ್ಚ್ -20-2013


ಹೊಸದಿಲ್ಲಿ, : ಭಾರತೀಯ ಮೀನುಗಾರರ ಹತ್ಯೆ ಪ್ರಕರಣದ ಆರೋಪಿಗಳಾದ ಇಟಲಿಯ ಇಬ್ಬರು ನಾವಿಕರನ್ನು ಭಾರತಕ್ಕೆ ಹಿಂದೆ ಕಳುಹಿಸಲು  ನಿರಾಕರಿಸಿರುವ ಇಟಲಿಯ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದು,  ಭಾರತವನ್ನು ಲಘುವಾಗಿ ಪರಿಗಣಿಸಲು ಯಾವುದೇ ದೇಶಕ್ಕೂ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.ಹೊಸದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು “ಇಬ್ಬರು ನಾವಿಕರ ಹಸ್ತಾಂತರ ವಿಷಯದಲ್ಲಿ ಇಟಲಿ ಸರಕಾರದ ಉದ್ಧಟತನ ಹಾಗೂ ನಮ್ಮ  ಸುಪ್ರೀಂಕೋರ್ಟ್‌ಗೆ ಅದು ವಿಶ್ವಾಸದ್ರೋಹವೆಸಗಿರುವುದನ್ನು  ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ.
ಇಟಲಿ ಸರಕಾರವು ಸುಪ್ರೀಂಕೋರ್ಟ್‌ನ ಆದೇಶಕ್ಕೆ ಬದ್ಧತೆ ತೋರುವಂತೆ ಮಾಡಲು ಎಲ್ಲ ರೀತಿಯ  ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಸೋನಿಯಾ ಸಿಪಿಪಿ ಸಭೆಯಲ್ಲಿ ತನ್ನ  ನಾಲ್ಕು ಪುಟಗಳ ಭಾಷಣದಲ್ಲಿ ತಿಳಿಸಿದ್ದಾರೆ.ನಾವಿಕರ ಪ್ರಕರಣದ ಜೊತೆ ತನ್ನ ಇಟಲಿ ಮೂಲವನ್ನು ಪ್ರತಿಪಕ್ಷಗಳು ಥಳಕುಹಾಕುತ್ತಿರುವ ಹಿನ್ನೆಲೆಯಲ್ಲಿ ಸೋನಿಯಾರ ಈ ಹೇಳಿಕೆಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಬೊಫೋರ್ಸ್ ಹಗರಣದಿಂದ ಹಿಡಿದು ಅನೇಕ ಪ್ರಕರಣಗಳಲ್ಲಿ ಇಟಲಿ ಮೂಲದ ಆರೋಪಿಗಳು ಭಾರತದ ಕಾನೂನಿನ ಕೈಯಿಂದ  ತಪ್ಪಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿಪಕ್ಷಗಳು ಸರಕಾರವನ್ನು ಟೀಕಿಸಿದ್ದವು. ಕಳೆದ ವರ್ಷ ಕೇರಳದ ಸಾಗರ ಪ್ರದೇಶದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಕಡಲುಗಳ್ಳರೆಂದು ಶಂಕಿಸಿ ಹತ್ಯೆಗೈದ ಪ್ರಕರಣದಲ್ಲಿ ಇಟಲಿ ಮೂಲದ ಇಬ್ಬರು ನಾವಿಕರಾದ ಸಲ್ವಾದೊರ್ ಗಿಲೊನ್ ಹಾಗೂ ಮ್ಯಾಸಿಮಿಲಿಯಾನೊ ಲ್ಯಾಟೊರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. 
ಆದರೆ ಸುಪ್ರೀಂಕೋರ್ಟ್ ಫೆಬ್ರವರಿ 22ರಂದು ಆದೇಶವೊಂದನ್ನು ನೀಡಿ, ಇಬ್ಬರೂ ಆರೋಪಿಗಳಿಗೆ  ಇಟಲಿ ಚುನಾವಣೆಯಲ್ಲಿ ಮತಚಲಾಯಿಸಲು ಅವಕಾಶ ನೀಡುವ ಉದ್ದೇಶದಿಂದ ಅವರು ನಾಲ್ಕು ವಾರಗಳ ಅವಧಿಗೆ ತಾಯ್ನಾಡಿಗೆ ತೆರಳಲು ಅನುಮತಿ ನೀಡಿತ್ತು. ಆನಂತರ ಈ ಇಬ್ಬರು ನಾವಿಕರನ್ನು ಭಾರತಕ್ಕೆ ಹಸ್ತಾಂತರಿಸಲು ಇಟಲಿ ನಿರಾಕರಿಸಿತ್ತು. 
ಕೃಪೆ : ವಾ.ಭಾರತಿ 
 

No comments:

Post a Comment