Friday, March 15, 2013

ಸರಕಾರಿ ಕಳ್ಳರುಅತ್ಯಂತ ಆಘಾತಕಾರಿ ವಿದ್ಯಮಾನವೊಂದ ರಲ್ಲಿ, ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಸಹಿತ ಹಿರಿಯ ಸರಕಾರಿ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯನ್ನು ಮುನ್ನಡೆಸಬೇಕಾ ದಂತಹ ಆಡಳಿತ ಯಂತ್ರದ ಬಹುಮುಖ್ಯ ಭಾಗವಾಗಿರುವ ಜಿಲ್ಲಾಧಿಕಾರಿ, ತಹಶೀಲ್ದಾರ್, ರೆವೆನ್ಯೂ ಇನ್ಸ್‌ಪೆಕ್ಟರ್ ವೊದಲಾದವರು ಸರಕಾರಿ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಬಂಧನ ಕ್ಕೊಳಗಾಗಿದ್ದಾರೆ.  ಈ ಮೂಲಕ, ಬೆಂಗಳೂರು ಭಾಗದಲ್ಲಿ ನಡೆಯುತ್ತಿರುವ ಭೂಮಾಫಿಯಾ ಗಳ ಅಕ್ರಮಗಳ ಜೊತೆಗೆ ಸರಕಾರಿ ಅಧಿಕಾರಿಗಳ ಪಾಲುದಾರಿಕೆ ಹೊರ ಬಿದ್ದಿದೆ. ಬೇಲಿಯೇ ಹೊಲ ಮೇಯುತ್ತಿರುವಾಗ, ಈ ನಾಡನ್ನು ಹೊರಗಿನ ಶತ್ರುಗಳಿಂದ ರಕ್ಷಿಸುವವರಾದರೂ ಯಾರು ಎನ್ನುವಂತಹ ಪ್ರಶ್ನೆ ಎದ್ದಿದೆ. ಎಲ್ಲದರ ಜೊತೆಗೆ ಈ ಪ್ರಕರಣದಲ್ಲಿ ಆರೋಪಿಗಳಲ್ಲಿ ಓರ್ವ ಬಿಜೆಪಿ ಶಾಸಕನ ಸಂಬಂಧಿಕನೂ ಆಗಿರುವುದರಿಂದ, ಒಟ್ಟು ಪ್ರಕರಣ ರಾಜಕೀಯ ರೂಪವನ್ನು ಪಡೆಯುವ ಸಾಧ್ಯತೆ ಕಾಣುತ್ತಿದೆ.
ಬೆಂಗಳೂರು ನಗರ ಡಿಸಿಯಾಗಿದ್ದ ಎಂ.ಕೆ.ಅಯ್ಯಪ್ಪ ಮತ್ತು ಇತರ ಬಂಧಿತ ಅಧಿಕಾರಿಗಳು ಯಲಹಂಕ ಬಳಿಯ ಮಾದಪ್ಪನ ಹಳ್ಳಿ ಸರ್ವೇ ನಂ. 62ರ 32 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ನರಸಿಂಹಯ್ಯ ಎಂಬವರಿಗೆ ಮಂಜೂರು ಮಾಡಿದ್ದರೆನ್ನಲಾಗಿದೆ. ಇದೇ ಸಂದರ್ಭದಲ್ಲಿ ನರಸಿಂಹಯ್ಯ ನಾನು ಅಮಾಯಕ ಎನ್ನುತ್ತಿದ್ದಾರೆ. “ನನ್ನ ಹೆಸರಲ್ಲಿ ಮಂಜೂರು ಮಾಡಿರುವುದೇ ನನಗೆ ಗೊತ್ತಿಲ್ಲ. ತಮ್ಮ ಅಕ್ರಮಕ್ಕೆ ನನ್ನನ್ನು ಬಳಸಿಕೊಂಡಿದ್ದಾರೆ” ಎಂದು ಆರೋಪಿಸುತ್ತಿದ್ದಾರೆ. ಅದೇನೇ ಇರಲಿ. ಇಡೀ ಪ್ರಕರಣದಲ್ಲಿ ಜಿಲ್ಲಾಧಿಕಾರಿ ನೇರವಾಗಿ ಪಾತ್ರವಹಿಸಿರುವುದು ಒಟ್ಟು ಆಡಳಿತ ವ್ಯವಸ್ಥೆಗೆ ಭಾರೀ ದೊಡ್ಡ ಕಳಂಕವಾಗಿದೆ. ಲೋಕಾಯುಕ್ತ ತನಿಖೆಯಲ್ಲಿ ಜಿಲ್ಲಾಧಿಕಾರಿಯ ಪಾತ್ರವೂ ಸಾಬೀತಾಗಿದೆ.
ಇದು ಬರೇ 32 ಎಕರೆ ಸರಕಾರಿ ಭೂಮಿಗೆ ಸಂಬಂಧಿಸಿದ ವಿಷಯವಲ್ಲ. ಇಂದು ಇಂತಹ ಅಕ್ರಮಗಳು ಅರ್ಧಕ್ಕರ್ಧ ಬೆಂಗಳೂರನ್ನು ತಿಂದು ಹಾಕಿದೆ. ಗೂಂಡಾಗಳು, ರೌಡಿಗಳು ಈ ಭೂಮಾಫಿಯವನ್ನು ನಿಯಂತ್ರಿಸುತ್ತಿದ್ದಾರೆ. ರಾಜಕಾರಣಿಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅಧಿಕಾರಿಗಳು, ಹಣದಾಸೆಗಾಗಿ ಈ ವ್ಯವಸ್ಥೆಗೆ ತಲೆಬಾಗಿದ್ದಾರೆ. ಸರಕಾರಿ ಭೂಮಿ ರಕ್ಷಣೆ ಕಾರ್ಯಪಡೆ ನೀಡಿರುವ ವರದಿಯ ಪ್ರಕಾರ ಒಂದು ಲಕ್ಷದ 95 ಸಾವಿರ ಕೋಟಿ ರೂ. ಬೆಲೆ ಬಾಳುವ ಸಾವಿರಾರು ಎಕರೆ ಭೂಮಿ ಕಂಡವರ ಪಾಲಾಗಿದೆ. ಹೀಗೆ ಕಂಡವರ ಪಾಲಾಗುವುದು ಅಷ್ಟು ಸುಲಭವಲ್ಲ.
ಎಲ್ಲೋ ನಕಲಿ ದಾಖಲೆಗಳನ್ನು ತಯಾರಿಸಿ ಇದನ್ನು ತಮ್ಮದೆಂದು ಹೇಳುವು ದಕ್ಕೆ ಸಾಧ್ಯವಿಲ್ಲ. ತಹಶೀಲ್ದಾರರಂತಹ ಅಧಿಕಾರಿಗಳು ಇದರಲ್ಲಿ ಭಾಗಿಯಾಗದೇ ಇದ್ದಿದ್ದರೆ ದಾಖಲೆಗಳನ್ನು ತಯಾರಿಸಲು ಸಾಧ್ಯವಾಗುತ್ತಿರಲಿಲ್ಲ. ಈ 32 ಎಕರೆ ಭೂಮಿಯ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಇಬ್ಬರು ದೂರನ್ನು ನೀಡದೇ ಇದ್ದಿದ್ದರೆ ತನಿಖೆಯೂ ನಡೆಯುತ್ತಿರಲಿಲ್ಲ. ಮಾಮೂಲಿ ದೂರುಗಳನ್ನು ನುಂಗಿ ಹಾಕಲು ಜಿಲ್ಲಾಧಿಕಾರಿಗೆ ಸಾಧ್ಯವಿತ್ತು. ಆದರೆ ಲೋಕಾಯುಕ್ತ ತನಿಖೆ ಯಿಂದಾಗಿ ಜಿಲ್ಲಾಧಿಕಾರಿಯ ಕೊರಳಿಗೆ ಉರುಳು ಬೀಳುವುದಕ್ಕೆ ಕಾರಣವಾಯಿತು.
ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಲ್ಲಿ ಇಂತಹ ಅಕ್ರಮಗಳೂ ಸಾಕಷ್ಟು ನಡೆಯುತ್ತಿವೆ. ಯಾರದೋ ಭೂಮಿಯನ್ನು ಇನ್ನಾರದೋ ಹೆಸರಿಗೆ ಮಾಡಿಕೊಡುವ, ನಕಲಿ ದಾಖಲೆ ಸೃಷ್ಟಿಸುವ, ಅದನ್ನು ಮತ್ಯಾರಿಗೋ ಮಾರುವ ದಂಧೆ ವ್ಯಾಪಕವಾಗಿದೆ. ಪರೋಕ್ಷವಾಗಿ ಅಧಿಕಾರಿಗಳು, ಪೊಲೀಸರು ಕೂಡ ಇದಕ್ಕೆ ಸಹಕರಿಸುತ್ತಿರುವ ಆರೋಪಗಳಿವೆ. ವಿಧಾನ ಸೌಧದಿಂದಲೇ ಇವರನ್ನೆಲ್ಲ ರಾಜಕಾರಣಿಗಳು ಕುಣಿಸುತ್ತಿದ್ದಾರೆ. ಇಂದು ಅಕ್ರಮ ಪರಭಾರೆ ಯಾಗಿರುವ ಸರಕಾರಿ ಭೂಮಿಯ ಹಿಂದೆ ಯಾರ‍್ಯಾರಿದ್ದಾರೆ ಎಂದು ತನಿಖೆ ನಡೆಸಿದರೆ ಹಲವು ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಜೈಲು ಸೇರಬೇಕಾದಂತಹ ಸ್ಥಿತಿ ನಿರ್ಮಾಣ ವಾಗಬಹುದು. ಇದು ಕೇವಲ ಬೆಂಗಳೂರಿ ನಂತಹ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ.
ಗ್ರಾಮೀಣ ಪ್ರದೇಶಗಳಲ್ಲೂ ಕಂದಾಯ ಇಲಾಖೆ ಜನ ಸಾಮಾನ್ಯರನ್ನು ನಕ್ಷತ್ರಿಕನಂತೆ ಕಾಡುತ್ತಿದೆ. ತಾಲೂಕು ಕಚೇರಿಯೆನ್ನುವುದು ಹಲವು ತಲೆಹಿಡುಕರ ಅಡ್ಡೆಯಾಗಿದೆ. ಬ್ರೋಕರ್‌ಗಳಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಆರ್‌ಟಿಸಿಯಲ್ಲಿ ಹೆಸರು ಬದಲಾವಣೆ ಮಾಡಿ ವಂಚಿಸುವ ಪ್ರಕರಣ ಹೆಚ್ಚುತ್ತಿವೆ. ಸರ್ವೇ ಇಲಾಖೆಗೆ ಸಂಬಂಧಿಸಿ ಈಗಾಗಲೇ ಹಲವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರಾದರೂ, ಗ್ರಾಮೀಣ ಪ್ರದೇಶದ ಜನರ ಅನಕ್ಷರತೆಯನ್ನು ಉಪಯೋಗಿಸಿ ಅವರನ್ನು ಶೋಷಿಸುವ ಜಾಲ ಅಧಿಕಾರಿ ವಲಯದಲ್ಲಿ ಹೆಚ್ಚಿದೆ.
ಕೇವಲ ಗಣಕೀಕರಣದಿಂದಷ್ಟೇ ಅಕ್ರಮ ಗಳನ್ನು ತಡೆಯಬಹುದು ಎಂಬ ನಂಬಿಕೆ ಹುಸಿಯಾಗಿದೆ. ಸರಕಾರ ಗಣಕದೊಳಗೆ ನುಗ್ಗಿದರೆ, ಅಧಿಕಾರಿಗಳು, ಸಿಬ್ಬಂದಿ ವರ್ಗ ಮೌಸ್‌ನೊಳಗೆ ನುಸುಳುವಷ್ಟು ಚಾಣಕ್ಷರಿ ದ್ದಾರೆ. ಆದುದರಿಂದ ಇಂತಹ ಪ್ರಕರಣಗಳನ್ನು ಸ್ವಯಂ ಗುರುತಿಸಿ ಲೋಕಾಯುಕ್ತ ತನಿಖೆ ನಡೆಸಬೇಕಾಗಿದೆ. ಇನ್ನಷ್ಟು ಹೆಗ್ಗಣಗಳು ಲೋಕಾಯುಕ್ತ ಬೋನಿಗೆ ಸಿಲುಕಬೇಕಾಗಿದೆ. ಈ ನೆಲ ಕೃಷಿಕರದ್ದು. ದುಡಿಯುವವರದ್ದು. ಅದು ಭೂಮಾಫಿಯಾದ, ರಿಯಲ್‌ಎಸ್ಟೇಟ್‌ನ ಪಾಲಾಗಬಾರದು. ಕಳ್ಳರ, ಸುಳ್ಳರ ಕೈವಶವಾಗಿರುವ ಭೂಮಿಯನ್ನು ಕಿತ್ತುಕೊಂಡು ಮತ್ತೆ ಅದರ ನಿಜವಾದ ವಾರಸುದಾರರ ಕೈಗೆ ನೀಡಬೇಕಾಗಿದೆ.                                                                                

No comments:

Post a Comment