Friday, March 15, 2013

ಖಾಸಗಿ ಬ್ಯಾಂಕ್‌ಗಳಿಂದ ಕಪ್ಪು ಹಣ ಬಿಳುಪು: ಕೋಬ್ರಾಪೋಸ್ಟ್ ರಹಸ್ಯ ಕಾರ್ಯಾಚರಣೆ ಬಹಿರಂಗ; ತನಿಖೆಗೆ ಸಿಬಿಡಿಟಿ ಆದೇಶ



ಹೊಸದಿಲ್ಲಿ: ಕೆಲವು ಖಾಸಗಿ ಬ್ಯಾಂಕ್‌ಗಳ ಉದ್ಯೋಗಿಗಳು ಕಪ್ಪು ಹಣವನ್ನು ಬಿಳುಪು ಮಾಡುವ ದಂಧೆಯಲ್ಲಿ ತೊಡಗಿರುವುದನ್ನು ಆನ್‌ಲೈನ್ ಪತ್ರಿಕೆಯೊಂದು ನಡೆಸಿದ ಮಾರುವೇಷದ ಕಾರ್ಯಾಚರಣೆಯು ಬಯಲು ಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ತನಿಖೆಗೆ ಆಜ್ಞಾಪಿಸಿದೆ.
ಎಚ್‌ಡಿಎಫ್‌ಸಿ ಸೇರಿದಂತೆ ಕೆಲವು ಖಾಸಗಿ ಹಣಕಾಸು ಸಂಸ್ಥೆಗಳ ವಿವಿಧ ಶಾಖೆಗಳಲ್ಲಿ ‘ಕೋಬ್ರಾಪೋಸ್’್ಟ ಆನ್‌ಲೈನ್ ಪತ್ರಿಕೆಯು ಮಾರುವೇಷದ ಕಾರ್ಯಾಚರಣೆಯನ್ನು ನಡೆಸಿ, ಅವುಗಳ ಉದ್ಯೋಗಿಗಳು ತಮ್ಮ ಗ್ರಾಹಕರಿಂದ ಕಪ್ಪು ಹಣವನ್ನು ಪಡೆದು, ಅದನ್ನು ಸಕ್ರಮ ಹಣವಾಗಿ ಪರಿವರ್ತಿಸುವ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಬಹಿರಂಗಪಡಿಸಿತ್ತು.
ತಮ್ಮ ಕಪ್ಪು ಹಣವನ್ನು ಬಿಳುಪುಗೊಳಿಸಲಿಚ್ಛಿಸುವ ಸಾಮಾನ್ಯ ಬ್ಯಾಂಕ್ ಗ್ರಾಹಕರಿಗೂ,ಬ್ಯಾಂಕ್ ಉದ್ಯೋಗಿಗಳು ಈ ‘ಸೌಲಭ್ಯ’ದ ಕೊಡುಗೆಯನ್ನು ಮುಕ್ತವಾಗಿ ನೀಡುತ್ತಿರುವುದನ್ನು ಈ ಕಾರ್ಯಾಚರಣೆಯು ಬಹಿರಂಗಪಡಿಸಿದೆ. ಕೋಬ್ರಾ ಪೋಸ್ಟ್‌ನ ಮಾರುವೇಷದ ಕಾರ್ಯಾಚರಣೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಅದಕ್ಕೆ ಸಂಬಂಧಿಸಿದ ವಿಮಾಸಂಸ್ಥೆಗಳು ಇಂತಹ ಅಕ್ರಮಗಳಲ್ಲಿ ತೊಡಗಿರುವುದನ್ನು ತೋರಿಸಿದೆ. ಆದರೆ ಇತರ ಅನೇಕ ಖಾಸಗಿ ಬ್ಯಾಂಕ್‌ಗಳು ಕೂಡಾ ಈ ಅವ್ಯವಹಾರದಲ್ಲಿ ನಿರತವಾಗಿದೆಯೆಂದು ಕೋಬ್ರಾ ಪೋಸ್ಟ್ ವರದಿ ಮಾಡಿದೆ.
ಬ್ಯಾಂಕ್‌ಗಳ ಉನ್ನತ ಮ್ಯಾನೇಜ್‌ಮೆಂಟ್ ಕೂಡಾ ಈ ಅವ್ಯಹಾರದಲ್ಲಿ ಶಾಮೀಲಾಗಿದೆಯೆಂದು ಕೋಬ್ರಾ ಪೋಸ್ಟ್ ಆಪಾದಿಸಿದೆ. ಎಚ್‌ಡಿಎಫ್‌ಸಿ, ಐಸಿಸಿಐ ಬ್ಯಾಂಕ್ ಹಾಗೂ ಆ್ಯಕ್ಸಿಸ್ ಬ್ಯಾಂಕ್‌ಗಳು ಕೋಬ್ರಾ ಪೋಸ್ಟ್ ನ ವರದಿಗಾರರಿಗೆ ಕಪ್ಪು ಹಣವನ್ನು ಬಿಳುಪುಗೊಳಿಸುವ ಕೊಡುಗೆಯನ್ನು ಮುಂದಿಟ್ಟಿದ್ದರು. ಈ ಬ್ಯಾಂಕ್‌ಗಳ ಹಿರಿಯ ಮ್ಯಾನೇಜ್‌ಮೆಂಟ್ ಸಕ್ರಿಯ ಸಮ್ಮತಿಯೊಂದಿಗೆ ಇದು ನಡೆಯುತ್ತಿದೆಯೆಂದು ಕೋಬ್ರಾಪೋಸ್ಟ್‌ನ ಸಂಪಾದಕ ಅನಿರುದ್ಧ್ ಬಹಾಲ್ ತಿಳಿಸಿದ್ದಾರೆ.

No comments:

Post a Comment