Sunday, March 24, 2013

ಆರೋಪಿ ಮುಸ್ಲಿಂ ಯುವಜನರಿಗಾಗಿ ವಿಶೇಷ ಕೋರ್ಟ್‌ಗಳ ಸ್ಧಾಪನೆ



 ಮಾರ್ಚ್ -24-2013

ಹೊಸದಿಲ್ಲಿ: ಭಯೋತ್ಪಾದನೆ ಸೇರಿದಂತೆ ವಿವಿಧ ಅಪರಾಧಗಳನ್ನು ಎಸಗಿದ ಆರೋಪಗಳಲ್ಲಿ ಬಂಧಿಸಲ್ಪಟ್ಟಿರುವ ಮುಸ್ಲಿಂ ಯುವಜನರಿಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದೆಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ.ರಹ್ಮಾನ್ ಖಾನ್ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ರವಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ವಿವಿಧ ಆರೋಪಗಳಿಗೆ ಸಂಬಂಧಿಸಿ ಬಂಧಿತರಾಗಿರುವ ಮುಸ್ಲಿಂ ಯುವಜನರ ಪ್ರಕರಣಗಳ ಮರುಪರಾಮರ್ಶೆಯಾಗಬೇಕಿದೆ. ಅವರಿಗಾಗಿ ನಿರ್ದಿಷ್ಟ ನ್ಯಾಯಾಲಯಗಳನ್ನು ಕೂಡಾ ಸ್ಥಾಪಿಸಬೇಕೆಂದು ಕೋರಿ ತನ್ನ ಸಚಿವಾಲಯವು ಗೃಹ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದೆಯೆಂದು ಹೇಳಿದ್ದಾರೆ.
ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಮುಸ್ಲಿಂ ಯುವಜನರ ನ್ಯಾಯಾಂಗ ವಿಚಾರಣೆಯು ತ್ವರಿತವಾಗಿ ನಡೆಸಲು ವಿಶೇಷ ನ್ಯಾಯಾಲಯಗಳನ್ನು ರಚಿಸುವ ಪ್ರಸ್ತಾಪವನ್ನು ಗೃಹ ಸಚಿವಾಲಯವೂ ಬೆಂಬಲಿಸಿದೆ. ಮುಸ್ಲಿಂ ಯುವಜನರ ಮೇಲಿನ ಪ್ರಕರಣಗಳ ತನಿಖೆಗೆ ವಿಶೇಷ ನ್ಯಾಯಾಲಯಗಳನ್ನು ಸದ್ಯದಲ್ಲೇ ರಚಿಸಲಾಗುವುದೆಂದು ಗೃಹಸಚಿವರು ತನಗೆ ಶನಿವಾರ ಮರುಪತ್ರ ಬರೆದಿದ್ದಾರೆಂದು ರಹ್ಮಾನ್‌ಖಾನ್ ಹೇಳಿದರು.
ಅಮಾಯಕ ಮುಸ್ಲಿಮರನ್ನು ಬಂಧನದಲ್ಲಿರಿಸುವುದು ಗಂಭೀರ ಅಪರಾಧವೆಂಬುದು ಗೃಹ ಸಚಿವಾಲಯಕ್ಕೆ ತಿಳಿದಿದೆ.ಇಂತಹ ಪ್ರಕರಣಗಳು ಸಂಭವಿಸುವುದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವ ಬದ್ಧತೆಯನ್ನು ಕೇಂದ್ರ ಸರಕಾರ ಹೊಂದಿದೆ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಖಾತರಿಪಡಿಸಿಕೊಳ್ಳಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆ.
ಸಾಚಾರ್ ಸಮಿತಿಯ ಶಿಫಾರಸಿನಂತೆ ಕೇಂದ್ರ ಸರಕಾರವು ಸಮಾನ ಅವಕಾಶ ಆಯೋಗ ರಚನೆಗೆ ಸಂಬಂಧಿಸಿದ ವಿಧೇಯಕವೊಂದನ್ನು ಸದ್ಯದಲ್ಲೇ ಜಾರಿಗೊಳಿಸಲಾಗುವುದೆಂದು ರಹ್ಮಾನ್ ಖಾನ್ ಹೇಳಿದರು.
‘‘ಸಮಾನ ಅವಕಾಶ ಆಯೋಗದ ರಚನೆಗೆ ಉನ್ನತ ಮಟ್ಟದ ಸಚಿವ ಸಮಿತಿಯು ಅನುಮೋದನೆ ನೀಡಿದೆ. ಆದರೆ ಸಮಾನ ಅವಕಾಶ ಆಯೋಗವನ್ನು ಎಲ್ಲರಿಗಾಗಿ ರಚಿಸಬೇಕೇ ಅಥವಾ ನಿರ್ದಿಷ್ಟವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರ ಜಾರಿಗೊಳಿಸಬೇಕೇ ಎಂಬುದೇ ಈಗ ಸರಕಾರದ ಮುಂದಿರುವ ಪ್ರಶ್ನೆಯಾಗಿದೆಯೆಂದರು.

ಆಸಮಾನ ಅವಕಾಶ ಆಯೋಗವು ಅಲ್ಪಸಂಖ್ಯಾತರಿಗೆ ಮಾತ್ರ ಸಂಬಂಧಿಸಿದ್ದಾಗಿರಬೇಕೆಂದು ಉನ್ನತಮಟ್ಟದ ಸಚಿವ ಸಮಿತಿನಿರ್ಧರಿಸಿದೆ. ಆದರ ಶಿಫಾರಸಿ ನಂತೆ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯು ಈ ವಿಧೇಯಕವನ್ನು ಮಂಡಿಸಲಿದೆ. ಈ ವಿಧೇಯಕವನ್ನು ಕಾನೂನು ಸಚಿವಾಲಯದ ಸಮ್ಮತಿಗಾಗಿ ಕಳುಹಿಸಿಕೊಡಲಾಗಿದೆಯೆಂದು ರಹ್ಮಾನ್ ತಿಳಿಸಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿಸ್ತರಿಸಲು ತನ್ನ ಇಲಾಖೆಯು ಪ್ರಯತ್ನಿಸುತ್ತಿದೆಯೆಂದು ರಹ್ಮಾನ್ ಖಾನ್ ವಿವರಿಸಿದರು. ಸುಮಾರು 67 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ತನ್ನ ಸಚಿವಾಲಯವು 1,249.57 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆಯೆಂದು ಅವರು ಹೇಳಿದರು ಈ ವರ್ಷ ಅಲ್ಪಸಂಖ್ಯಾತ ಮಹಿಳೆಯರಲ್ಲಿ ನಾಯಕತ್ವ ಅಭಿವೃದ್ಧಿ’ ಯೋಜನೆಯಡಿ 12 ರಾಜ್ಯಗಳಲ್ಲಿ ಸುಮಾರು 36,950 ಮಹಿಳೆಯರಿಗೆ 10.45 ಕೋಟಿ ರೂ. ವೆಚ್ಚದಲ್ಲಿ ತರಬೇತಿ ನೀಡಲಾಗುವುದೆಂದು ರಹ್ಮಾನ್ ಖಾನ್ ತಿಳಿಸಿದರು.
ಕೃಪೆ: ವಾ,ಭಾರತಿ 

No comments:

Post a Comment