Friday, March 22, 2013

ಎಂಡೋ ಸಂತ್ರಸ್ತರ ನಿರಾಹಾರ ಸತ್ಯಾಗ್ರಹ: ಮುಖ್ಯಮಂತ್ರಿಯೊಂದಿಗಿನ ಮಾತುಕತೆ ವಿಫಲ; ಮುಷ್ಕರ ಮುಂದುವರಿಸಲು ನಿರ್ಧಾರ



 ಮಾರ್ಚ್ -22-2013

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ಕಳೆದ 33 ದಿನಗಳಿಂದ ನಡೆಸುತ್ತಿರುವ ಉಪವಾಸ ಧರಣಿ ಇತ್ಯರ್ಥಗೊಳಿಸಲು ಗುರುವಾರ ಸಂಜೆ ತಿರುವನಂತಪುರದಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೇತೃತ್ವದಲ್ಲಿ ನಡೆದ ಸಭೆ ವಿಫಲಗೊಂಡಿದೆ.
ಒಕ್ಕೂಟವು ಮುಂದಿಟ್ಟಿರುವ ಬೇಡಿಕೆಗಳ ಈಡೇರಿಕೆ ಕುರಿತಂತೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿರುವುದರಿಂದ ಮುಷ್ಕರ ಮುಂದುವರಿಸಲು ಒಕ್ಕೂಟ ತೀರ್ಮಾನಿಸಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಕೃಷಿ ಸಚಿವ ಕೆ.ಪಿ. ಮೋಹನನ್, ಎಂಡೋ ಸಂತ್ರಸ್ತರ ಕುರಿತಂತೆ ಸೋಮವಾರ ಸರಕಾರದ ತೀರ್ಮಾನ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಒಕ್ಕೂಟವು ಮುಂದಿ ಟ್ಟಿರುವ ಎಲ್ಲಾ ಬೇಡಿಕೆಗಳ ಕುರಿತು ಮಾ.25ರಂದು ಇನ್ನೊಂದು ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು. ಇಂದಿನ ಸಭೆಯಲ್ಲಿ ಒಕ್ಕೂಟದ ಸಂಚಾಲಕ ಅಂಬಲತ್ತರ ಕುಂಞಿಕೃಷ್ಣನ್ ನೇತೃತ್ವದ ಐವರು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಒಕ್ಕೂಟವು ಸರಕಾರದ ಮುಂದಿಟ್ಟ ಒಂಬತ್ತು ಬೇಡಿಕೆಗಳ ಪೈಕಿ ಒಂದರ ಈಡೇರಿಕೆಗೆ ಮಾತ್ರ ಸರಕಾರ ಸಮ್ಮತಿಸಿದ್ದು, ಉಳಿದ ಎಂಟು ಬೇಡಿಕೆಗಳನ್ನು ಈಡೇರಿಸಲು ಕಾಲಾವಕಾಶ ಕೋರಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆ ಈಡೇರುವ ತನಕ ಮುಷ್ಕರ ಮುಂದುವರಿಸಲು ನಿರ್ಧರಿಸಿರುವುದಾಗಿ ಅಂಬಲತ್ತರ ಕುಂಞಿಕೃಷ್ಣನ್ ಸಭೆಯ ಬಳಿಕ ತಿಳಿಸಿದರು.
ಈತನ್ಮಧ್ಯೆ ಪರಿಸರ ಹೋರಾಟಗಾರ ಎ.ಮೋಹನ್ ಕುಮಾರ್ ಕಾಸರಗೋಡು ಆಸ್ಪತ್ರೆಯಲ್ಲಿ ನಿರಾಹಾರ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.
ಕೃಪೆ ವಾ.ಭಾರತಿ 

No comments:

Post a Comment