Thursday, March 21, 2013

ಐವರು ಸೋದರರನ್ನು ವರಿಸಿದ ಕಲಿಯುಗದ ದ್ರೌಪದಿ!




  • 5 ಜನ ಸೋದರರ ವರಿಸಿದ ಆಧುನಿಕ ಪಾಂಚಾಲಿ ರಾಜೋ ವರ್ಮಾ..!

    •  Mar 20, 2013

      ಡೆಹ್ರಾಡೂನ್‌: ಮಹಾಭಾರತದಲ್ಲಿ ದ್ರೌಪದಿ ಪಂಚ ಪಾಂಡವ ಸೋದರರನ್ನು ವರಿಸಿದ್ದ ಕಥೆ ಗೊತ್ತು. ಆದರೆ ಕಲಿಯುಗದಲ್ಲಿ ಇದು ಸಾಧ್ಯವೇ? ಸಾಧ್ಯ ಎಂಬುದಕ್ಕೆ ಉತ್ತರಾಖಂಡದಲ್ಲಿ ಸಾಕ್ಷ್ಯ ಸಿಕ್ಕಿದೆ. ಇಲ್ಲಿನ ರಾಜೋ ವರ್ಮಾ (21) ಎಂಬ ಯುವತಿ 5 ಜನ ಸೋದರರನ್ನು ವರಿಸಿ ಸುಖಮಯ ಸಂಸಾರ ಸಾಗಿಸುತ್ತಿದ್ದಾಳೆ!

      ಹೌದು. ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬವೊಂದರ ಕಥೆಯಿದು. ಹರುಕು ಮುರುಕು ಮನೆ. ಮನೆಯಲ್ಲಿ ಒಂದೇ ಒಂದು ಕೋಣೆ. ಆ ಕೋಣೆಯಲ್ಲೇ 5 ಜನ ಪತಿಯರ ಜೊತೆಗೆ ಜೀವನ. ಆಕೆಗೊಂದು ಮಗು. ಜಗಳವಿಲ್ಲದ ಸುಂದರ ಸಂಸಾರ.

      ಹೀಗೆ ಅಚ್ಚರಿ ಎನ್ನಿಸುವ ಕಥೆ ಆರಂಭವಾಗುವುದು 4 ವರ್ಷಗಳ ಹಿಂದಿನ ಘಟನೆಯೊಂದಿಗೆ. ಆಗಿನ್ನು ರಾಜೋ ವರ್ಮಾಗೆ 17 ವರ್ಷ. ಕಾನೂನು ಪ್ರಕಾರ ಇನ್ನೂ ಮದುವೆ ವಯಸ್ಸು ಬಂದಿಲ್ಲ. ಈ ಹಂತದಲ್ಲೇ ಆಕೆಗೆ ಸಂತ್‌ರಾಮ್‌ ವರ್ಮಾ ಎಂಬಾತನ ಜೊತೆಗೆ ಮದುವೆ ನಿಶ್ಚಯವಾಗುತ್ತದೆ. ಈ ಭಾಗದಲ್ಲಿ ಬಹುಪತಿತ್ವ ಸಾಮಾನ್ಯ. ಹೀಗಾಗಿ ಆಕೆ ಸಂತ್‌ರಾಮ್‌ನ ವರಿಸಿದ ಜೊತೆಜೊತೆಗೇ ಆತನ ಇನ್ನೂ ನಾಲ್ವರ ಸೋದರರನ್ನು ವರಿಸಬೇಕಾಗಿ ಬರುತ್ತದೆ. ಆದರೆ ಪತಿ ಕಡೆಯ ತಮ್ಮನಿಗಿನ್ನೂ 17 ವರ್ಷ. ಹೀಗಾಗಿ ಆಕೆ ಮೊದಲ ನಾಲ್ವರನ್ನು ಮಾತ್ರವೇ ವರಿಸುತ್ತಾಳೆ. ಕಳೆದ ವರ್ಷ ಸಂತ್‌ರಾಮ್‌ನ ಕಡೆಯ ತಮ್ಮ ದಿನೇಶನಿಗೆ 18 ವರ್ಷ ತುಂಬಿದ ಕೂಡಲೇ ಆಕೆ ಆತನನ್ನೂ ವರಿಸುತ್ತಾಳೆ. ಹೀಗಾಗಿ ಆಕೆಗೀಗ 5 ಜನ ಗಂಡಂದಿರು!

      ಒಂದೇ ಕೋಣೆ:
      ಈ ಕುಟುಂಬ ಇರುವುದು ಚಿಕ್ಕ ಮನೆಯಲ್ಲಿ. ಮನೆಗೆ ಇರುವುದು ಒಂದೇ ಕೋಣೆ. ಈಕೆ ಒಂದೊಂದು ದಿನ ಒಬ್ಬೊಬ್ಬರ ಜೊತೆ ಮಲಗುತ್ತಾಳೆ. ಆಕೆಯ ಕೈಯಲ್ಲೀಗ 18 ತಿಂಗಳ ಮಗು ಇದೆ. ಆದರೆ ಅದರ ತಂದೆ ಯಾರು ಎಂಬುದು ಕುಟುಂಬದಲ್ಲಿ ಯಾರಿಗೂ ಗೊತ್ತಿಲ್ಲ. ಅದನ್ನು ಪ್ರಶ್ನಿಸುವುದು ಸ್ಥಳೀಯ ಜನರಲ್ಲಿ ನಿಷಿದ್ಧ. ಜೊತೆಗೆ ಹೀಗೆ ಯುವತಿಯೊಬ್ಬಳು ಪತಿಯ ಸೋದರರನ್ನು ವರಿಸಲು ನಿರಾಕರಿಸುವುದು ಎಷ್ಟು ಅಪರಾಧವೋ, ಸೋದರನ ಪತ್ನಿಯನ್ನು ವರಿಸಲು ನಿರಾಕರಿಸುವುದು ಮತ್ತು ಆಕೆಯೊಂದಿಗೆ ಸೇರಲು ನಿರಾಕರಿಸುವುದು ಕೂಡಾ ಪುರುಷರಿಗೆ ನಿಷಿದ್ಧ.

      ಈಗ ಓಕೆ:
      ಮೊದ ಮೊದಲು ಇದು ವಿಚಿತ್ರ ಅನ್ನಿಸುತ್ತಿತ್ತು. ಆದರೆ ಇದೀಗ ಈ ಪದ್ಧತಿಗೆ ಹೊಂದಿಕೊಂಡಿದ್ದೇನೆ. ಏಕೆಂದರೆ ನನ್ನ ತಾಯಿ ಕೂಡಾ ಮೂವರು ಸೋದರರನ್ನು ವರಿಸಿದ್ದಳು ಎನ್ನುತ್ತಾಳೆ ರಾಜೋ ವರ್ಮಾ,

      ಜಮೀನಿಗಾಗಿ ಈ ತಂತ್ರ:
      ಕುಟುಂಬದ ಜಮೀನು ಅಣ್ಣತಮ್ಮಂದಿರ ನಡುವೆ ವಿಭಜನೆಯಾಗದೇ ತಮ್ಮ ಕುಟುಂಬದ ಬಳಿಯೇ ಉಳಿಸಿಕೊಳ್ಳಲು ಮತ್ತು ಅದು ಹಾಳಾಗದಂತೆ ನೋಡಿಕೊಳ್ಳಲು ಈ ಭಾಗದಲ್ಲಿ ಹಿಂದಿನಿಂದಲೂ ಈ ತಂತ್ರ ಜಾರಿಯಲ್ಲಿದೆ ಎನ್ನುತ್ತಾರೆ ಗ್ರಾಮಸ್ಥರು
       ಕೃಪೆ :ಉದಯವಾಣಿ 

No comments:

Post a Comment