Friday, March 1, 2013

ಕಾರ್ಪೊರೇಟ್ ಪರ ಮುಂಗಡ ಪತ್ರಮುಂಗಡ ಪತ್ರಕ್ಕೆ ಪೂರ್ವಭಾವಿಯಾಗಿ ಬುಧವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಈ ವರ್ಷದ ಬಜೆಟ್ ಹೇಗಿರುತ್ತದೆ ಎಂಬುದಕ್ಕೆ ಮುನ್ಸೂಚನೆ ನೀಡಿತ್ತು. ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆ ನಿರಾಶಾದಾಯಕವಾಗಿದೆ. ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದರು. ಶ್ರೀಮಂತರಿಗೆ ಅಂದರೆ ಬಾರೀ ಕಾರ್ಪೊರೇಟ್ ಕಂಪೆನಿಗಳಿಗೆ ಹೆಚ್ಚು ತೆರಿಗೆಯನ್ನು ವಿಧಿಸುವುದು ಬೇಡ. ಸಬ್ಸಿಡಿಗಳ ಮೇಲಿನ ವೆಚ್ಚ ಕಡಿತಗೊಳಿಸಬೇಕು.  ಡೀಸೆಲ್ ಹಾಗೂ ಎಲ್ಪಿಜಿ ದರವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಮಾನವಾಗಿ ಏರಿಸಬೇಕೆಂದು ಸಮೀಕ್ಷೆಯಲ್ಲಿ ವಿಶ್ಲೇಷಿಸಲಾಗಿತ್ತು.
೯ ರಾಜ್ಯಗಳ ವಿಧಾನಸಭಾ ಚುನಾವಣೆ ಗಳನ್ನು ಮುಂದಿಟ್ಟುಕೊಂಡು ಬರುವ  ವರ್ಷದ ಲೋಕಸಭಾ ಚುನಾವಣೆಯನ್ನು ಎದುರಿಟ್ಟುಕೊಂಡು ಜನಸಾಮಾನ್ಯರಿಗೆ ನೇರವಾಗಿ ಬರೆ ಹಾಕುವ ಬಜೆಟ್‌ನ್ನು ಯಾವ ಸರಕಾರವೂ ಮಂಡಿಸುವುದಿಲ್ಲ. ಅಂತಲೇ ಗುರುವಾರ ಚಿದಂಬರಂ ಮಂಡಿಸಿದ ಮುಂಗಡ ಪತ್ರದಲ್ಲಿ ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿ ನೀಡುವ ಜೊತೆಗೆ ಬಡವರು, ಮಹಿಳೆಯರು ಮತ್ತು ಹಿಂದುಳಿದವರಿಗೆ ಸಿಹಿ ಬೆರೆಸಿದ ಮಾತ್ರೆಗಳನ್ನು ನೀಡಲಾಗಿದೆ. ನಿರೀಕ್ಷಿಸಿದಂತೆ ಸಿಗರೇಟು, ತಂಬಾಕು ಉತ್ಪನ್ನಗಳು, ವಿದೇಶಿ ಕಾರುಗಳು, ವೊಬೈಲ್, ಕಾರುಗಳು, ಬೈಕ್, ಟಿವಿ ಸೆಟ್ ಬಾಕ್ಸ್‌ಗಳು ದುಬಾರಿಯಾಗಲಿವೆ. ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿಯನ್ನು ಕಾಪಾಡಿ ಕೊಳ್ಳಲಾಗಿದೆ. ೨ರಿಂದ ೫ ಲಕ್ಷ ರೂ. ವರೆಗಿನ ಆದಾಯಕ್ಕೆ ೨ ಸಾವಿರ ರೂಪಾಯಿಯಷ್ಟು ವಿನಾಯಿತಿಯನ್ನು ನೀಡಲಾಗಿದೆ.
ಈ ಬಾರಿ ಬಜೆಟ್‌ನಲ್ಲಿ ಎಲ್ಲಕ್ಕಿಂತ ಹೆಚ್ಚು ಅನುದಾನವನ್ನು ರಕ್ಷಣೆಗೆ ನೀಡಲಾಗಿದೆ. ೨.೨೦ ಲಕ್ಷ ಕೋಟಿ ರೂ.ವೊತ್ತವನ್ನು ರಕ್ಷಣೆ ಇಲಾಖೆಯ ಅಧುನೀಕರಣಕ್ಕೆ ವಿನಿಯೋಗಿ ಸಲು ನೀಡಲಾಗಿದೆ. ನಕ್ಸಲ್ ಮತ್ತು ಭಯೋತ್ಪಾದನಾ ಚಟುವಟಿಕೆ ದಮನಕ್ಕೆ ರಕ್ಷಣೆ ಇಲಾಖೆಯನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿರುವ ಚಿದಂಬರಂ ಶಿಕ್ಷಣ, ಅರೋಗ್ಯ ಮೂಲಸೌಕರ್ಯಕ್ಕಿಂತ ರಕ್ಷಣಾ ವಲಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿದ್ದಾರೆ. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ರಾಮೀಣ ಪ್ರದೇಶ ಗಳತ್ತ ಒಲವು ತೋರಿಸಿದ್ದಾರೆ.
ಜಾಗತೀಕರಣದ ಬಲೆಗೆ ದೇಶ ಸಿಲುಕಿದ ನಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಂಡಿಸುತ್ತಿರುವ ಮುಂಗಡ ಪತ್ರಗಳಿಗಿಂತ ಈ ಸಲದ ಮುಂಗಡ ಪತ್ರಗಳೇನೂ ಭಿನ್ನವಾಗಿಲ್ಲ. ಆದರೆ ಈ ಬಾರಿ ಆರ್ಥಿಕ ಅಂಶಗಳಿಗಿಂತ ರಾಜಕೀಯ ಲೆಕ್ಕಾಚಾರಗಳು ಆಯವ್ಯಯದಲ್ಲಿ ಪ್ರಭಾವ ಬೀರಿದಂತೆ ಕಾಣುತ್ತದೆ. ಮೇಲ್ನೋಟಕ್ಕೆ ಇದು ಜನಪರ ಎಂದು ಅನ್ನಿಸಿದರೂ ಮುಂಬರುವ ವರ್ಷಗಳಲ್ಲಿ ಭಾರತೀಯರು ಇನ್ನಷ್ಟು ಯಾತನೆಯನ್ನು ಅನುಭವಿಸಲು ತಯಾರಾಗಲಿ ಎಂಬ ಸೂಕ್ಷ್ಮ ವಾದ ಸೂಚನೆಗಳು ಈ ಆಯವ್ಯಯದಲ್ಲಿವೆ.
ಒಂದು ದೇಶದ ಆಯವ್ಯಯವೆಂದರೆ ಅದು ಆ ದೇಶದ ಸಮಗ್ರವಾದ ಆರ್ಥಿಕವಾದ ಕಾರ್ಯಕ್ರಮವಾಗಿರಬೇಕು. ಬರೀ ಆದಾಯ ಮತ್ತು ಖರ್ಚು ಮಾಡುವ ಪಟ್ಟಿಯು ಮುಂಗಡಪತ್ರ ಎನ್ನಿಸಿಕೊಳ್ಳುವುದಿಲ್ಲ. ದೇಶದ ಸಮಗ್ರ ಅಭಿವೃದ್ಧಿ ನೀಲನಕ್ಷೆಯನ್ನು ಬಜೆಟ್ ಬಿಡಿಸಿಡಬೇಕು. ರಾಷ್ಟ್ರದ ಸಂಪತ್ತು ವೃದ್ಧಿಯಾಗಬೇಕು. ಸಂಪತ್ತು ಎಂದರೆ ಬರೀ ಆರ್ಥಿಕ ಸಂಪತ್ತಲ್ಲ. ಮಾನವ ಸಂಪತ್ತಿಗೂ ಅದ್ಯತೆ ನೀಡಬೇಕು. ಇದು ಸಾಧ್ಯವಾಗ ಬೇಕಾದರೆ ನಮ್ಮ ಕೃಷಿ ಮತ್ತು ಕೈಗಾರಿಕಾ ವಲಯ ಅಭಿವೃದ್ಧಿಯಾಗಬೇಕು. ಆದರೆ ಹಣಕಾಸು ಸಚಿವ ಸಮೀಕ್ಷೆ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರವು ಶೇ.೫ಕ್ಕೆ ಕುಸಿಯಲಿದೆ. ಇಂತಹ ಸ್ಥಿತಿ ಯಲ್ಲೂ ಆರ್ಥಿಕವಾಗಿ ಚೇತರಿಸಲಿದೆ ಎಂಬ ಭವಿಷ್ಯವನ್ನು ಚಿದಂಬರಂ ಅವರು ನುಡಿದಿದ್ದಾರೆ.
ದೇಶದಲ್ಲಿ ನವ ಉದಾರೀಕರಣ ಶೆಖೆ ಆರಂಭವಾದ ನಂತರ ಕೃಷಿ ಕ್ಷೇತ್ರ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಒಟ್ಟು ಉತ್ಪಾದನೆಯಲ್ಲಿ ಕೃಷಿರಂಗದ ಪಾಲು ಶೇ.೩೨ರಿಂದ ಶೆ.೧೬ಕ್ಕೆ ಕುಸಿದಿದೆ. ಕೃಷಿ ಕ್ಷೇತ್ರವನ್ನು ರೈತರಿಂದ ಕಿತ್ತುಕೊಂಡು ಕಾರ್ಪೊರೇಟ್ ಕಂಪೆನಿಗಳಿಗೆ ಹಸ್ತಾಂತರ ಮಾಡುವ ಹುನ್ನಾರ ನಡೆದಿದೆ. ಭೂಮಿ ಕಳೆದುಕೊಂಡ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ರಂಗದ ಈ ಸಮಸ್ಯೆಗೆ ಚಿದಂಬರಂ ಅವರ ಮುಂಗಡ ಪತ್ರದಲ್ಲಿ ಯಾವುದೇ ಪರಿಹಾರವಿಲ್ಲ.
ಭಾರತದ ಜನಹಿತವನ್ನು ಬಲಿಗೊಟ್ಟು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಅನುಕೂಲ ಕಲ್ಪಿಸುವುದು ನವ ಉದಾರವಾದದ ನೀತಿಯಾಗಿದೆ. ಚಿದಂಬರಂ ಅವರ ಮುಂಗಡ ಪತ್ರ ಈ ನೀತಿಯನ್ನಲ್ಲದೆ ಬೇರೆ ಇನ್ನೇನನ್ನೂ ಪ್ರತಿನಿಧಿಸುವುದಿಲ್ಲ.
ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಗೆ ಅವಕಾಶ ನೀಡಿ ಬ್ಯಾಂಕಿಂಗ್ ಮತ್ತು ವಿಮೆ ಕ್ಷೇತ್ರಗಳನ್ನು ವಿದೇಶಿ ಕಂಪೆನಿಗಳಿಗೆ ಮುಕ್ತಗೊಳಿಸಿದ ಯಾವುದೇ ಸರಕಾರ ಇದಕ್ಕಿಂತ ಭಿನ್ನವಾದ ಮುಂಗಡಪತ್ರವನ್ನು ಮಂಡಿಸಲು ಸಾಧ್ಯವಿಲ್ಲ.
ಕಳೆದ ಹತ್ತು ವರ್ಷಗಳಿಂದ ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂಗಡ ಪತ್ರಗಳು ಜಾಗತಿಕ ಹಣಕಾಸು ಸಂಸ್ಥೆಗಳ ನಿರ್ದೇಶನದಂತೆ ರೂಪುಗೊಳ್ಳುತ್ತವೆ ಎಂಬ ಆರೋಪವನ್ನು ಚಿದಂಬರಂ ಅವರು ನೀಡಿರುವ ಮುಂಗಡ ಪತ್ರವು ಮತ್ತೊಮ್ಮೆ ಸಾಬೀತುಪಡಿಸಿದೆ.

No comments:

Post a Comment