Saturday, March 9, 2013

ಬೇಲೆಕೇರಿ ಪ್ರಕರಣ:ರೆಡ್ಡಿ 5 ದಿನ ಸಿಬಿಐ ವಶಕ್ಕೆಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ಮಾ.14 ರವರೆಗೆ (ಐದು ದಿನಗಳ ಕಾಲ) ಸಿಬಿಐ ವಶಕ್ಕೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಹೈದರಾಬಾದ್‌ನ ಚಂಚಲಗುಡ ಜೈಲಿನಿಂದ ಆಂಧ್ರಪ್ರದೇಶದ ಪೊಲೀಸರು ಶುಕ್ರವಾರ ಮುಂಜಾನೆ 3:30ರ ಸುಮಾರಿಗೆ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್‌ರನ್ನು ಬೆಂಗಳೂರಿಗೆ ಕರೆತಂದರು.ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯವು ಜನಾರ್ದನ ರೆಡ್ಡಿ ವಿಚಾರಣೆಗೆ ಸಂಬಂಧಿಸಿದಂತೆ ಕೆಲ ಷರ ತ್ತುಗಳನ್ನು ವಿಧಿಸಿ, ಕರಣಕ್ಕೆ ಸಂಬಂಧಿಸಿದಂತೆ ಅಲಿಖಾನ್, ಖಾರದಪುಡಿ ಮಹೇಶ್ ಸೇರಿದಂತೆ ಒಟ್ಟು ೬ ಮಂದಿಯನ್ನು ಮಾ.೧೪ರವರೆಗೆ ಸಿಬಿಐ ವಶಕ್ಕೆ ನೀಡಿತು. ರೆಡ್ಡಿ ಪರವಾಗಿ ವಕೀಲ ಹನುಮಂತರಾಯ ವಾದ ಮಂಡಿಸಿದರು.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ರೆಡ್ಡಿಯ ನಿಕಟವರ್ತಿಗಳು ಬೆಂಗಳೂರಿನಲ್ಲಿನ ವಿವಿಧ ಬ್ಯಾಂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ಹಣ ಜಮಾ ಮಾಡಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಲು ಜನಾರ್ದನ ರೆಡ್ಡಿಯನ್ನೆ ಖುದ್ದಾಗಿ ವಿಚಾರಣೆಗೊಳಪಡಿಸಬೇಕಾಗಿದೆ. ಆದುದರಿಂದ, ಅವರನ್ನು ಹೈದರಾಬಾದ್‌ನಿಂದ ಬಾಡಿ ವಾರಂಟ್ ಮೇಲೆ ಕರೆತರಲು ಅನುಮತಿ ನೀಡಬೇಕು ಎಂದು ಬೆಂಗಳೂರು ಸಿಬಿಐ ಅಧಿಕಾರಿಗಳು ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.
ಗೊಂದಲ: ಹೈದರಾಬಾದ್‌ನ ಚಂಚಲಗುಡ ಕಾರಾಗೃಹದಿಂದ ಮಾಜಿ ಸಚಿವ ಜನಾರ್ದನರೆಡ್ಡಿಯನ್ನು ಪರಪ್ಪನ ಅಗ್ರಹಾರದ ಜೈಲಿಗೆ ಕರೆತಂದಾಗ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ರೆಡ್ಡಿಯನ್ನು ಜೈಲಿನೊಳಗೆ ಕರೆದುಕೊಂಡು ಹೋಗುವಾಗ ಬಾಡಿ ವಾರಂಟ್ ಇಲ್ಲದಿರುವುದರಿಂದ ಜೈಲಿನೊಳಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಜೈಲಿನ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಭದ್ರತೆ ದೃಷ್ಟಿಯಿಂದ ನಂತರ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಕ್ಷ್ಮಿನಾರಾಯಣ್ ಸ್ಥಳಕ್ಕೆ ಆಗಮಿಸಿ ರೆಡ್ಡಿಯನ್ನು ಠಾಣೆಗೆ ಕರೆದುಕೊಂಡು ಹೋದರು. ನಂತರ ಪೊಲೀಸರು, ಜೈಲಿನ ಅಧಿಕಾರಿಗಳು ಸಮಾಲೋಚನೆ ಮಾಡಿದ ಬಳಿಕ ರೆಡ್ಡಿಯನ್ನು ಜೈಲಿನೊಳಕ್ಕೆ ಕಳುಹಿಸಲಾಯಿತು.

ಠಾಣೆಯ ನಳ್ಳಿ ನೀರಿನಲ್ಲಿಯೇ ಸ್ನಾನ
ಜನಾರ್ದನ ರೆಡ್ಡಿ ಆಗಮನದ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಮಾಹಿತಿ ದೊರಕದ ಕಾರಣ ರೆಡ್ಡಿ ನಿನ್ನೆ ರಾತ್ರಿಯಿಡೀ ಠಾಣೆಯಲ್ಲಿಯೇ ತಂಗಬೇಕಾಯಿತು. ಬೆಳಗ್ಗೆ ಠಾಣೆಯಾಚೆಯ ನಳ್ಳಿ ನೀರಿನಲ್ಲಿಯೇ ಅವರು ಸ್ನಾನ ಮುಗಿಸಿದರು. ಅಷ್ಟರಲ್ಲಿ ಮಕ್ಕಳಾದ ಬ್ರಹ್ಮಿಣಿ ಹಾಗೂ  ಕಿರೀಟ್ ಆಗಮಿಸಿದರು. ಆದರೆ ಭದ್ರತಾ ನೆಪಹೇಳಿ ಪೊಲೀಸರು ಅವರಿಗೆ ರೆಡ್ಡಿಯನ್ನು ಭೇಟಿಯಾಗಲು ಬಿಡಲಿಲ್ಲ. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಕಾದಿದ್ದ ಅವರನ್ನು ಅನಂತರ ಮದನ್ ಪಟೇಲ್, ಶ್ರೀರಾಮುಲು, ಸಂಸದೆ ಶಾಂತಾ ಹಾಗೂ ಶಾಸಕ ಸಣ್ಣಪಕೀರಪ್ಪ ಬಂದ ಆನಂತರ  ಕೋರ್ಟಿನ ಬಳಿ ಜನಾರ್ದನ ರೆಡ್ಡಿ ಜೊತೆ ಭೇಟಿ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸರು  ಕೋರ್ಟ್ ಆವರಣದಲ್ಲಿ ಸಾರ್ವಜನಿಕರನ್ನು ತಡೆದಿದ್ದಲ್ಲದೆ ದೂರದಿಂದ ಚಿತ್ರೀಕರಣ ಮಾಡಲು ಬಂದ ಮಾಧ್ಯಮದವರ ಮೇಲೂ ಹಲ್ಲೆ ನಡೆಸಿದ್ದರೆನ್ನಲಾಗಿದೆ.

No comments:

Post a Comment