Wednesday, March 20, 2013

ಮೇ 5 ರಂದು ಕರ್ನಾಟಕ ವಿಧಾನಸಭೆ ಚುನಾವಣೆ

  ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಮೇ 5ರ ಭಾನುವಾರದಂದು ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು. ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಜೊತೆಗಿನ ಸಭೆಯ ಬಳಿಕ ಬುಧವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್, ತಕ್ಷಣದಿಂದಲೇ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ, ಮೇ 5ರ ಭಾನುವಾರದಂದು 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ, ಮೇ 8ರ ಬುಧವಾರ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದರು. ಏ.10ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳಲಿದೆ, ಏ.17ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಏ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.20ರೊಳಗೆ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುವುದು ಎಂದು ತಿಳಿಸಿದರು. ಮೇ 5ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮತದಾನಕ್ಕಾಗಿ 50,446 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು. ರಾಜ್ಯದಲ್ಲಿ ಒಟ್ಟು 4.18 ಕೋಟಿ ಮತದಾರರಿದ್ದಾರೆ. 98.37 ಜನರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಣೆ ಮಾಡಲಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು 1950 ನಂಬರ್ ಗೆ ಉಚಿತವಾಗಿ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಹಾಲಿ ಸರ್ಕಾರದ ಅವಧಿ ಜೂನ್ 3ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಚುನಾವಣೆ ನಡೆಸಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ವೇಳಾಪಟ್ಟಿ ರೂಪಿಸಲಾಗಿದೆ ಎಂದು ತಿಳಿಸಿದರು. ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸರ್ಕಾರ ಕುಡಿಯುವ ನೀರು ಮತ್ತು ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಾತ್ರ ಅನುದಾನ ಬಿಡುಗಡೆ ಮಾಡಬಹುದಾಗಿದೆ. ಚುನಾವಣಾ ಪ್ರಕ್ರಿಯೆಗಳು... ಏ.10 ಅಧಿಸೂಚನೆ ಪ್ರಕಟ ಏ.17 ನಾಮಪತ್ರ ಸಲ್ಲಿಸಲು ಕೊನೆಯ ದಿನ ಏ.18 ನಾಮಪತ್ರಗಳ ಪರಿಶೀಲನೆ ಏ.20 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಮೇ 5ರಂದು ಚುನಾವಣೆ ಮೇ 8ರಂದು ಮತ ಎಣಿಕೆ

one India 

No comments:

Post a Comment