Thursday, March 28, 2013

ಸೆಟ್-ಟಾಪ್ ಬಾಕ್ಸ್ ಅಳವಡಿಸದಿದ್ದರೆ ಸೋಮವಾರದಿಂದ 38 ನಗರಗಳಲ್ಲಿ ಟಿವಿ ಪರದೆ ಖಾಲಿಮಾರ್ಚ್ -28-2013

ಹೊಸದಿಲ್ಲಿ: ಎರಡನೆ ಹಂತದ ಡಿಜಿಟೈಸೇಶನ್ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ತರಲಾಗಿರುವ 38 ನಗರಗಳಲ್ಲಿ ಸೆಟ್-ಟಾಪ್ ಬಾಕ್ಸ್ ಇಲ್ಲದ ಟೆಲಿವಿಶನ್ ಪರದೆಗಳು ಸೋಮವಾರದಿಂದ ಖಾಲಿಯಾಗಿರುತ್ತವೆ ಎಂದು ಭಾರತೀಯ ಪ್ರಸಾರ ಪ್ರತಿಷ್ಠಾನ ಎಚ್ಚರಿಸಿದೆ.
ಈ ನಗರಗಳಲ್ಲಿ 67 ಶೇ. ಮನೆಗಳಲ್ಲಿ ಸೆಟ್ ಟಾಪ್ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ ಎಂದು ಸರಕಾರ ಹೇಳಿದೆ.
ರವಿವಾರ ಮಧ್ಯರಾತ್ರಿಯಿಂದ ಟಿವಿ ಪ್ರಸಾರಕರು ಅನಾಲಾಗ್ ಸಿಗ್ನಲ್‌ಗಳ ಪ್ರಸಾರವನ್ನು ನಿಲ್ಲಿಸುತ್ತಾರೆ ಎಂದು ಹೇಳಿಕೆಯೊಂದರಲ್ಲಿ ಪ್ರತಿಷ್ಠಾನ ತಿಳಿಸಿದೆ.
ಅನಾಲಾಗ್ ವ್ಯವಸ್ಥೆಯಿಂದ ಡಿಜಿಟಲ್ ಕೇಬಲ್ ಟಿವಿಗೆ ಸುಗಮ ಪರಿವರ್ತನೆಗೆ ಇಂಥ ಕ್ರಮವೊಂದು ಅನಿವಾರ್ಯವಾಗಿದೆ ಎಂದು ಮಾರ್ಚ್ 19ರಂದು ನಡೆದ ಸಭೆಯಲ್ಲಿ ಪ್ರತಿಷ್ಠಾನ ಅಭಿಪ್ರಾಯಪಟ್ಟಿದೆ.
14 ರಾಜ್ಯಗಳ 38 ನಗರಗಳು ಇಂತಿವೆ: ಆಗ್ರಾ, ಅಹ್ಮದಾಬಾದ್, ಅಲಹಾಬಾದ್, ಅಮೃತಸರ, ಔರಂಗಾಬಾದ್, ಬೆಂಗಳೂರು, ಭೋಪಾಲ್, ಚಂಡೀಗಢ, ಕೊಯಂಬತ್ತೋರ್, ಫರೀದಾಬಾದ್, ಘಾಝಿಯಾಬಾದ್, ಹೌರಾ, ಹೈದರಾಬಾದ್, ಇಂದೋರ್, ಜಬಲ್ಪುರ್, ಜೈಪುರ, ಜೋಧ್‌ಪುರ, ಕಲ್ಯಾಣ್-ದೊಂಬಿವಿಲಿ, ಕಾನ್ಪುರ, ಲಕ್ನೋ, ಲುಧಿಯಾನ, ಮೀರತ್, ಮೈಸೂರು, ನಾಗಪುರ, ನಾಸಿಕ್, ನವಿ ಮುಂಬೈ, ಪಾಟ್ನಾ, ಪಿಂಪ್ರಿಚಿಂಚಿವಾಡ್, ಪುಣೆ, ರಾಜ್‌ಕೋಟ್, ರಾಂಚಿ, ಶೋಲಾಪುರ, ಶ್ರೀನಗರ, ಸೂರತ್, ಥಾಣೆ, ವಡೋದರ, ವಾರಣಾಸಿ ಮತ್ತು ವಿಶಾಖಪಟ್ಟಣಂ.
ಎರಡನೆ ಹಂತದಲ್ಲಿನ ಪ್ರಗತಿಯನ್ನು ಸಚಿವ ಮನೀಶ್ ತಿವಾರಿ ಪ್ರತಿದಿನ ಪರಿಶೀಲಿಸುತ್ತಿದ್ದಾರೆ ಹಾಗೂ 38 ನಗರಗಳಲ್ಲಿ ಗುರಿಯ 67 ಶೇ.ವನ್ನು ಸಾಧಿಸಲಾಗಿದೆ ಎಂದು ಪ್ರತ್ಯೇಕ ಹೇಳಿಕೆಯೊಂದರಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.
ಕೃಪೆ:ವಾ.ಭಾರತಿ 

No comments:

Post a Comment