Tuesday, March 19, 2013

ಭಾರತದಲ್ಲಿ 2011-12ರಲ್ಲಿ ;ಸಿಗರೆಟ್ ಬಳಕೆ ಹೆಚ್ಚಳ



ಮಾರ್ಚ್ -19-2013

ಹೊಸದಿಲ್ಲಿ: ದೇಶದಲ್ಲಿ 2010-11ರಲ್ಲಿ ಕಡಿಮೆಯಾಗಿದ್ದ ಸಿಗರೆಟ್ ಸೇವನೆ 2011-12ರಲ್ಲಿ ಹೆಚ್ಚಾಗಿದೆಯೆಂದು ಸಂಸತ್ತಿಗಿಂದು ತಿಳಿಸಲಾಗಿದೆ.
ಲಭ್ಯ ಮಾಹಿತಿಯನ್ನುಲ್ಲೇಖಿಸಿದ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಡಿ. ಪುರಂದೇಶ್ವರಿ, ಲಿಖಿತ ಉತ್ತರವೊಂದರಲ್ಲಿ, 2010-11ರಲ್ಲಿ ದೇಶದಲ್ಲಿ ಸಿಗರೆಟಿನ ದೇಶೀಯ ಬಳಕೆ 1,11,487 ದಶಲಕ್ಷಗಳಾಗಿತ್ತು. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅದು, ಶೇ.0.33ರಷ್ಟು ಕಡಿಮೆ-ಎಂದರೆ 1, 11,860 ದಶಲಕ್ಷ ಸಿಗರೆಟ್‌ಗಳಾಗಿದ್ದವು ಎಂದು ಲೋಕಸಭೆಗೆ ಮಾಹಿತಿ ನೀಡಿದರು. ಆದರೆ, 2011-12ರಲ್ಲಿ ಸಿಗರೆಟ್‌ಗಳ ದೇಶೀಯ ಬಳಕೆ 1,16,166 ದಶಲಕ್ಷಗಳಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4.19ರಷ್ಟು ಏರಿತ್ತೆಂದು ಅವರು ತಿಳಿಸಿದರು. ಸಿಗರೆಟ್ ಸಹಿತ ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗೂ ರಫ್ತಿಗೆ ನಿಷೇಧ ಹೇರುವ ಯಾವುದೇ ಪ್ರಸ್ತಾಪವಿಲ್ಲವೆಂದು ಪುರಂದೇಶ್ವರಿ ಹೇಳಿದರು.
ಸಿಗರೆಟ್ ಹಾಗೂ ಸಿಗಾರ್ ತಯಾರಿಕೆಗೆ (ತಂಬಾಕು ಬಳಸಿ) ಕಡ್ಡಾಯ ಕೈಗಾರಿಕಾ ಪರವಾನಿಗೆ ಪಡೆಯಬೇಕು. 1999ರ ಬಳಿಕ ಸಿಗರೆಟ್ ಉತ್ಪಾದನೆಗೆ ಯಾವುದೇ ಕೈಗಾರಿಕಾ ಪರವಾನಿಗೆಯನ್ನು ಆರೋಗ್ಯದ ನೆಲೆಯಲ್ಲಿ ನೀಡಿಲ್ಲ. ದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿರುತ್ತೇಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ಅವರು ತಿಳಿಸಿದರು.

ಸರಕಾರವು ಸಿಗರೆಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ, ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಪೂರೈಕೆ ಹಾಗೂ ಹಂಚಿಕೆ ನಿಯಂತ್ರಣ ಕಾಯ್ದೆ (ಕೋಟ್ಪಾ)-2003ರ ಮೂಲಕ ಅವುಗಳ ಬಳಕೆಯನ್ನು ನಿರುತ್ತೇಜಿಸಲು ಪ್ರಯತ್ನಿಸಿದೆ ಎಂದು ಸಚಿವ ವಿವರಿಸಿದರು.
ಕೃಪೆ ವಾ.ಭಾರತಿ 

No comments:

Post a Comment