Friday, March 22, 2013

1993ರ ಸ್ಫೋಟ ಆರೋಪಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ: ಸುಪ್ರೀಂ ಕೋರ್ಟ್



ಮಾರ್ಚ್ -22-2013

ಹೊಸದಿಲ್ಲಿ, : 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಆರೋಪಿಗಳಿಗೆ ತರಬೇತಿ ನೀಡುವಲ್ಲಿ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್‌ಐ ಪ್ರಮುಖ ಪಾತ್ರ ವಹಿಸಿದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಭಾರತದ ವಾಣಿಜ್ಯ ರಾಜಧಾನಿಯ ಮೇಲೆ ದಾಳಿ ನಡೆಸುವ ಪಿತೂರಿಯನ್ನು ದಾವೂದ್ ಇಬ್ರಾಹಿಂ, ಟೈಗರ್ ಮೆಮನ್ ಮತ್ತು ಇತರರು ನಡೆಸಿದರು ಹಾಗೂ ಪಾಕಿಸ್ತಾನಿ ಅಧಿಕಾರಿಗಳ ನೆರವಿನಿಂದ ಅದನ್ನು ಕಾರ್ಯಗತಗೊಳಿಸಲಾಯಿತು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
ದಾವೂದ್ ಇಬ್ರಾಹಿಂ ಹಾಗೂ ಯಾಕೂಬ್ ಮೆಮನ್ ಸೇರಿದಂತೆ ತಲೆತಪ್ಪಿಸಿಕೊಂಡಿರುವ ಇತರ ಆರೋಪಿಗಳು ಬಿಲ್ಲುಗಾರರು ಹಾಗೂ ಇತರ ಆರೋಪಿಗಳು ಅವರ ಕೈಯಲ್ಲಿನ ಬಾಣಗಳಾಗಿದ್ದರು ಎಂದು ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ಬಿ.ಎಸ್. ಚೌಹಾನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.
ಆರೋಪಿಗಳಿಗೆ ಪಾಕಿಸ್ತಾನದಲ್ಲಿ ತಡೆರಹಿತ ಸವಲತ್ತುಗಳನ್ನು ಒದಗಿಸಲಾಯಿತು ಎಂದು ಹೇಳಿದ ನ್ಯಾಯಾಲಯ, ಅವರು ದುಬೈ ಮೂಲಕ ಪಾಕಿಸ್ತಾನ ಪ್ರವೇಶಿಸಿದರು ಹಾಗೂ ಐಎಸ್‌ಐಯಿಂದ ತರಬೇತಿ ಪಡೆದರು ಎಂದಿತು. ಯಾವುದೇ ವಲಸೆ ನಿಯಮಗಳು ಅನ್ವಯಿಸದಂತೆ ಐಎಸ್‌ಐ ಅವರನ್ನು ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ದಿತು ಎಂದು ನ್ಯಾಯಾಲಯ ಹೇಳಿತು.
ಆರ್‌ಡಿಎಕ್ಸ್ ತಯಾರಿಕೆ ಹಾಗೂ ಎಕೆ 56 ರೈಫಲ್‌ಳು ಮತ್ತು ಕೈಬಾಂಬ್‌ಗಳ ಬಳಕೆಯಲ್ಲಿ ದೋಷಿಗಳು ಮತ್ತು ತಲೆತಪ್ಪಿಸಿಕೊಂಡಿರುವ ಆರೋಪಿಗಳಿಗೆ ಐಎಸ್‌ಐ ತರಬೇತಿ ನೀಡಿತು ಎಂದು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಹೇಳಿತು.
ತರಬೇತಿಯ ನಿಯಂತ್ರಣ ದಾವೂದ್ ಇಬ್ರಾಹಿಂ ಮತ್ತು ಇತರರ ಕೈಯಲ್ಲಿತ್ತು ಎಂಬುದನ್ನು ಆರೋಪಿಗಳು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳು ಸಾಬೀತುಪಡಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ದುರದೃಷ್ಟವಶಾತ್ ಸ್ಫೋಟಕಗಳ ಕಳ್ಳಸಾಗಣೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಸಕ್ರಿಯವಾಗಿ ಶಾಮೀಲಾದರು ಎಂದು ಅದು ಅಭಿಪ್ರಾಯಪಟ್ಟಿತು.
ಕೃಪೆ ವಾ.ಭಾರತಿ 

No comments:

Post a Comment