Tuesday, March 19, 2013


ಗುಜರಾತ್ ವಿರುದ್ಧ ಬಿಹಾರ

ಮಂಗಳವಾರ - ಮಾರ್ಚ್ -19-2013

ನರೇಂದ್ರ ಮೋದಿಯವರನ್ನು ಮುಂದಿಟ್ಟು ಕೊಂಡು ಮುಂದಿನ ಮಹಾ ಚುನಾವಣೆಯನ್ನು ಗೆಲ್ಲುವ ಬಿಜೆಪಿಯ ಕನಸು ಮೊಳಕೆಯೊಡೆಯುವ ಮೊದಲೇ ಅದಕ್ಕೆ ಬಿಸಿ ನೀರು ಬಿದ್ದಿದೆ. ಗುಜರಾತ್‌ನ ಸೋಗಲಾಡಿ ಅಭಿವೃದ್ಧಿ ಮಾದರಿಗೆ ಪರ್ಯಾಯವಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರವನ್ನು ಮುಂದೆ ನಿಲ್ಲಿಸಿದ್ದಾರೆ. ನರೇಂದ್ರ ಮೋದಿಯವರ ಪ್ರಧಾನಿ ಹಾದಿಯ ದೊಡ್ಡ ತೊಡಕು ರಾಹುಲ್ ಗಾಂಧಿಯವರಲ್ಲ, ನಿತೀಶ್ ಕುಮಾರ್ ಎನ್ನುವುದು ಆರಂಭದಲ್ಲೇ ಜಾಹೀರಾಗಿ ಬಿಟ್ಟಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎನ್ನುವ ಕೂಗನ್ನು ಇನ್ನಷ್ಟು ಎತ್ತರಿಸಿರುವ ನಿತೀಶ್ ಕುಮಾರ್, ಅತ್ಯಂತ ಪಕ್ವವಾದ ರಾಜಕೀಯ ನಡೆಯನ್ನು ಇಟ್ಟಿದ್ದಾರೆ. ಒಂದೆಡೆ ಯುಪಿಎಯ ಮೂತಿಗೆ ಬೆಲ್ಲ ಸವರಿರುವ ನಿತೀಶ್ ಇನ್ನೊಂದೆಡೆ ಬಿಜೆಪಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಯಾವ ಪಕ್ಷ ಅಧಿಕಾರಕ್ಕೆ ಬರುವುದಿದ್ದರೂ ತನ್ನ ಬೆಂಬಲ ನಿರ್ಣಾಯಕ ಎಂದಿರುವ ನಿತೀಶ್, ಅಗತ್ಯ ಬಿದ್ದರೆ ಬೇರೆ ಮೈತ್ರಿಗೂ ಸಿದ್ಧ ಎಂದಿದ್ದಾರೆ. ಈ ಮೂಲಕ ಬಿಜೆಪಿಯ ಭ್ರಷ್ಟರು ಮತ್ತು ಕ್ರಿಮಿನಲ್‌ಗಳು ಜೊತೆಗೂಡಿ ಕಾಣುತ್ತಿರುವ ಕನಸುಗಳಿಗೆ ಆರಂಭದಲ್ಲೇ ಸಿಡಿಲೆರಗಿದೆ. ಬಿಜೆಪಿಯ ಮಿತ್ರನಿಂದಲೇ ಅದು ಎರಗಿರುವುದು ವಿಪರ್ಯಾಸವೇ ಸರಿ.
ಆದರೆ ನಿತೀಶ್‌ರ ಮಾತುಗಳನ್ನು ಬರೇ ರಾಜಕೀಯದಾಟ ಎಂದು ನಿರ್ಲಕ್ಷಿಸುವಂತಿಲ್ಲ. ಅವರ ಧ್ವನಿಯಲ್ಲಿ ಪಕ್ವತೆಯಿದೆ. ಭಾರತಕ್ಕೆ ಮಾದರಿಯಾಗಬೇಕಾದುದು ಗುಜರಾತ್‌ನ ಅಭಿವೃದ್ಧಿಯಲ್ಲ, ಬಿಹಾರದ ಅಭಿವೃದ್ಧಿ ಎನ್ನುವ ಅವರ ಹೇಳಿಕೆಯಲ್ಲಿ ಸತ್ಯವಿದೆ. ಒಂದಿಷ್ಟು ವಿದೇಶಿ ಉದ್ಯಮಿಗಳನ್ನು ಜೊತೆ ಸೇರಿಸಿ, ಬೃಹತ್ ಕಂಪೆನಿಗಳಿಗೆ ರಾಜಹಾಸನ್ನು ಹಾಸಿದಾಕ್ಷಣ ಗುಜರಾತ್ ಅಭಿವೃದ್ಧಿ ಯಾಯಿತು ಎನ್ನುವುದು ಮೂರ್ಖತನ ಎನ್ನುವ ಧ್ವನಿಯಿದೆ ನಿತೀಶ್‌ರ ಮಾತಿನಲ್ಲಿ. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುವುದು ಅಭಿವೃದ್ಧಿಯಲ್ಲ. ಅದು ತಳಮಟ್ಟದಿಂದ ನಡೆಯಬೇಕಾಗಿದೆ. ಎಲ್ಲರನ್ನೂ ತಲುಪ ಬೇಕಾಗಿದೆ. ಬಿಹಾರವನ್ನು ತಾನು ಈ ನಿಟ್ಟಿನಲ್ಲಿ ಸಿದ್ಧಪಡಿಸುತ್ತಿರುವುದಾಗಿ ನಿತೀಶ್ ದೇಶಕ್ಕೆ ತಿಳಿಸಿದ್ದಾರೆ.
ಅದಕ್ಕಾಗಿ ಕೇಂದ್ರ ಸರಕಾರದ ಕುತ್ತಿಗೆಯನ್ನು ಹಿಡಿದಿದ್ದಾರೆ. ಬಿಹಾರದ ಅಭಿವೃದ್ಧಿಯನ್ನು ಈ ಹಿಂದಿನ ಎಲ್ಲ ಸರಕಾರಗಳೂ ನಿರ್ಲಕ್ಷಿಸುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ನಿತೀಶ್ ಅನುಸರಿಸುತ್ತಿರುವ ಬ್ಲಾಕ್‌ಮೇಲ್ ತಂತ್ರ ಅವರ ಹೋರಾಟಕ್ಕೆ ಪೂರಕವಾಗಿಯೇ ಇದೆ. ಯಾರು ಬಿಹಾರದ ಅಭಿವೃದ್ಧಿಯನ್ನು ಬೆಂಬಲಿಸುತ್ತಾರೆಯೋ ಅವರಿಗೆ ತನ್ನ ಬೆಂಬಲ ಎನ್ನುವುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ. ಎರಡನೆಯ ದಾಗಿ, ಮೋದಿಯವರ ಅಭಿವೃದ್ಧಿಯ ಮಾದರಿಯನ್ನೇ ತಿರಸ್ಕರಿಸುವ ಮೂಲಕ, ಮೋದಿ ಪ್ರಧಾನಿಯಾಗುವುದಕ್ಕೆ ಪರೋಕ್ಷ ಅಸಮ್ಮತಿ ಸೂಚಿಸಿದ್ದಾರೆ.
ಬಿಹಾರದ ಅಭಿವೃದ್ಧಿಗಾಗಿ ನಿತೀಶ್ ಅನುಸರಿಸುತ್ತಿರುವ ತಂತ್ರ ನ್ಯಾಯ ಸಮ್ಮತ ವಾಗಿಯೇ ಇದೆ. ಅಷ್ಟು ದೊಡ್ಡ ಬಿಹಾರದಲ್ಲಿ ಇನ್ನೂ ಬಡತನ, ಅನಕ್ಷರತೆ ತಾಂಡವವಾಡುತ್ತಿದ್ದರೆ ಅದರ ಹಿಂದೆ ಕೇಂದ್ರದ ನಿರ್ಲಕ್ಷ ಇದ್ದೇ ಇದೆ. ಇಂದು ಉಳಿದ ರಾಜ್ಯಗಳಿಗೆ ಹೋಲಿಸಿದರೆ, ಬಿಹಾರವನ್ನು ಅಭಿವೃದ್ಧಿಯ ಮುಂಚೂಣಿಗೆ ತಂದು ನಿಲ್ಲಿಸಲು ಪ್ರತ್ಯೇಕ ಸ್ಥಾನಮಾನದ ಅಗತ್ಯವಿದೆ. ಇಷ್ಟಕ್ಕೂ ಬಿಹಾರವೆನ್ನುವುದು ಭಾರತದ ಒಂದು ಭಾಗವೇ ತಾನೇ. ಬಿಹಾರ ಅಭಿವೃದ್ಧಿಯಾದರೆ ಭಾರತ ಅಭಿವೃದ್ಧಿಯಾದಂತೆ.  ಅಪಾರ ಪ್ರಮಾಣದ ಬಡತನ, ಅನಕ್ಷರತೆ ತುಂಬಿರುವ ಬಿಹಾರದ ಅಭಿವೃದ್ಧಿಯೆಂದರೆ, ಅದು ಗುಜರಾತ್‌ನ ಭ್ರಾಮಕ ಅಭಿವೃದ್ಧಿಯಂತಲ್ಲ. ಗಟ್ಟಿ ಅಡಿಪಾಯದ ಮೇಲೆ ನಿಂತ ಅಭಿವೃದ್ಧಿ. ಎಂದೂ ಭಾವನಾತ್ಮಕ ರಾಜಕೀಯವನ್ನು ಮಾಡದ ನಿತೀಶ್‌ರ ಮಾತುಗಳಿಗೆ ಕೇಂದ್ರ ಇಂದು ಕಿವಿಯಾಗಲೇ ಬೇಕಾದಂತಹ ಸನ್ನಿವೇಶ ಬಂದಿದೆ.
ಹಾಗೆ ನೋಡಿದರೆ ಇಂದು ಪ್ರಧಾನಿ ಪದವಿಗೆ ಪೈಪೋಟಿ ಇರುವುದು ನಿತೀಶ್ ಕುಮಾರ್ ಮತ್ತು ರಾಹುಲ್ ಗಾಂಧಿಯವರ ನಡುವೆ. ಎನ್‌ಡಿಎ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿಯವರ ಪ್ರಧಾನಿ ಅಭ್ಯರ್ಥಿ ಸ್ಥಾನದ ಕನಸು ಭಗ್ನವಾದಂತೆಯೇ ಸರಿ. ಎಲ್.ಕೆ.ಅಡ್ವಾಣಿ ಈಗಾಗಲೇ ಮೋದಿಯವರ ವಿರುದ್ಧ ತನ್ನ ಅಸ್ತ್ರವನ್ನು ಝಳಪಿಸಿದ್ದಾರೆ. ಹಾಗೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಎರಡರ ಬಗ್ಗೆಯೂ ಜನರು ಭ್ರಮನಿರಸನ ಹೊಂದಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಇದರ ಅರ್ಥ, ಬಿಜೆಪಿ ಮತ್ತು ಕಾಂಗ್ರೆಸ್ ಅಲ್ಲದ ಮೂರನೆ ಅಭ್ಯರ್ಥಿ ಪ್ರಧಾನಿಯಾಗಬೇಕು ಎನ್ನುವುದಾಗಿದೆ. ಅಡ್ವಾಣಿಯವರ ಮನಸ್ಸಿನಲ್ಲಿ ಯಾರಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೋದಿಯ ವಿರುದ್ಧ ಸ್ವತಃ ಅಡ್ವಾಣಿಯವರೇ ನಿತೀಶ್ ಕುಮಾರ್‌ರನ್ನು ಛೂ ಬಿಟ್ಟಿದ್ದಾರೆ. ಮೋದಿ ಪ್ರಧಾನಿ ಅಭ್ಯರ್ಥಿಯಾಗಲು ನಿತೀಶ್ ಆಸ್ಪದ ನೀಡುವುದಿಲ್ಲ.  ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿದರೆ ಬಿಜೆಪಿ ಅಧಿಕಾರ ರಹಿತವಾಗಿ ವಿರೋಧಪಕ್ಷದಲ್ಲಿ ಹುಲ್ಲು ತಿಂದುಕೊಂಡು ಬಿದ್ದಿರಬೇಕಾಗುತ್ತದೆ.
ಈಗಾಗಲೇ ಅದರಲ್ಲಿರುವ ಹಲವು ಜಾನುವಾರುಗಳು ಅಧಿಕಾರದ ರುಚಿಯಿಲ್ಲದೆ ಸೊರಗಿವೆ. ಆದುದರಿಂದ, ನಿತೀಶ್‌ರನ್ನು ಮುಂದಿಟ್ಟು ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಮೋದಿಯವರನ್ನು ಪ್ರಧಾನಿ ಮಾಡುವುದಾಗಿ ಅದು ಹಟ ಹಿಡಿದಲ್ಲಿ, ನಿತೀಶ್ ಯುಪಿಎಗೆ ತನ್ನ ಬೆಂಬಲವನ್ನು ನೀಡಿ, ಬಿಹಾರಕ್ಕೆ ಬೇಕಾದ ಪ್ಯಾಕೇಜ್‌ಗಳನ್ನು ತನ್ನದಾಗಿಸಿಕೊಳ್ಳಬಹುದು.
ಒಟ್ಟಿನಲ್ಲಿ ನಮಗೆ ಯಾವ ತರಹದ ಅಭಿವೃದ್ಧಿ ಬೇಕು ಎನ್ನುವುದನ್ನು ದೇಶ ತೀರ್ಮಾನಿಸುವ ಸಂದರ್ಭ ಬಂದಿದೆ. ಗುಜರಾತ್‌ನ ಕ್ರಿಮಿನಲ್ ಅಭಿವೃದ್ಧಿ ಬೇಕೋ ಅಥವಾ ಬಿಹಾರದ ಸಾಮಾಜಿಕವಾದ ಅಭಿವೃದ್ಧಿ ಬೇಕೋ ಎನ್ನುವುದು ಈ ಬಾರಿಯ ಚುನಾವಣೆಯ ಮುಖ್ಯ ಪ್ರಣಾಳಿಕೆ ಯಾಗಲಿದೆ.

No comments:

Post a Comment