Tuesday, March 19, 2013

ಸಮ್ಮತಿಯ ಸಮಾಗಮದ ವಯಸ್ಸು 18ಕ್ಕೇರಿಕೆ



ಮಾರ್ಚ್ -19-2013

ಹೊಸದಿಲ್ಲಿ: ಸಮ್ಮತಿಯ ಲೈಂಗಿಕ ಚಟುವಟಿಕೆಯ ಪ್ರಾಯವನ್ನು 18ರಿಂದ 16ಕ್ಕೆ ಇಳಿಸಿದುದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ಎದುರಿಸಿದ ಬಳಿಕ ಕೇಂದ್ರ ಸರಕಾರವು ಅದನ್ನು 18ರಲ್ಲೇ ಸ್ಥಿರಗೊಳಿಸಲು ನಿರ್ಧರಿಸಿದೆ.
ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕಠಿಣ ಶಿಕ್ಷೆ ಒದಗಿಸಲು ಅನುಕೂಲ ಕಲ್ಪಿಸುವ ಈ ಮಸೂದೆಯ ಹಿಂಬಾಲಿಸುವಿಕೆ ಮತ್ತು ಇಣುಕಿ ನೋಡುವಿಕೆಯ ಪ್ರಸ್ತಾಪಗಳನ್ನು ಅದು ಪೇಲವಗೊಳಿಸಿದೆ.
ಈ ವರ್ಷ ಫೆ.3ರಂದು ಸರಕಾರವು ಸಮ್ಮತಿಯ ಲೈಂಗಿಕ ಕ್ರಿಯೆಯ ವಯಸ್ಸನ್ನು ಸುಗ್ರೀವಾಜ್ಞೆಯೊಂದರ ಮೂಲಕ 18ಕ್ಕೆ ಏರಿಸುವ ಮೊದಲು ಐಪಿಸಿಯನ್ವಯ ಅದು 16 ವರ್ಷವಾಗಿತ್ತು.
ಆದರೆ, ಪ್ರಸ್ತಾಪಿತ ಅಪರಾಧ ಕಾಯ್ದೆ (ತಿದ್ದುಪಡಿ)-2013ರಲ್ಲಿ ಅದನ್ನು 16 ವರ್ಷಗಳಿಗೆ ಇಳಿಸಲಾಗಿತ್ತು.
ಸಮ್ಮತಿಯ ಲೈಂಗಿಕ ಚಟುವಟಿಕೆಯ ಪ್ರಾಯ ಮಿತಿಯನ್ನು 18ಕ್ಕೆ ಏರಿಸಬೇಕೆಂದು ಹಲವು ಪಕ್ಷಗಳು ಆಗ್ರಹಿಸಿದ್ದವು.
ಈ ಆಗ್ರಹಕ್ಕೆ ಮಣಿದ ಸರಕಾರ ಕೆಲವು ಶರ್ತಗಳೊಂದಿಗೆ ಸಮ್ಮತಿಯ ಸಮಾಗಮದ ವಯಸ್ಸನ್ನು ಮತ್ತೆ 18ಕ್ಕೇರಿಸಿದೆ.
ಸುಗ್ರೀವಾಜ್ಞೆಯಲ್ಲಿರುವಂತೆ ಸಮ್ಮತಿಯ ಸಮಾಗಮದ ವಯಸ್ಸು 16, ಆಗಿರದೆ 18ಕ್ಕೇರಿಸಬೇಕು. ವಿವಾಹದ ಕನಿಷ್ಠ ವಯಸ್ಸು 18 ಆಗಿರುವುದರಿಂದ ಅದು ಕೂಡ ಅಷ್ಟೇ ಆಗಿರಬೇಕೆಂದು ಬಿಜೆಪಿ, ಎಸ್ಪಿ ಹಾಗೂ ಇತರ ಕೆಲವು ಪಕ್ಷಗಳೂ ಒತ್ತಾಯಿಸಿದ್ದವು.
 ಆದರೆ, ವಿವಾಹ ಪೂರ್ವ ಲೈಂಗಿಕತೆ ಒಂದು ವಾಸ್ತವವಾಗಿರುವುದರಿಂದ ಸಮ್ಮತಿಯ ಸಮಾಗಮದ ವಯಸ್ಸು 16 ಆಗಿರಬೇಕೆಂದು ಎಡಪಕ್ಷಗಳು ಸಹಿತ ಇತರ ಕೆಲವು ಪಕ್ಷಗಳು ಪ್ರತಿಪಾದಿಸಿದ್ದವು.
ಹಿಂಬಾಲಿಸುವಿಕೆ ಹಾಗೂ ಇಣುಕಿನೋಡುವಿಕೆಯ ಕುರಿತ ಪ್ರಸ್ತಾಪಗಳನ್ನು ದುರ್ಬಲಗೊಳಿಸಲು ಒಪ್ಪಿರುವ ಸರಕಾರವು ಈ ಕೃತ್ಯಗಳ ಆರೋಪಿಯ ಮೇಲೆಯೇ ತನ್ನ ನಿರಪರಾಧಿತ್ವ ಸಾಬೀತುಗೊಳಿಸುವ ಸಂಪೂರ್ಣ ಹೊಣೆಯನ್ನು ಹೊರಿಸಬಾರದೆಂಬ ತಿದ್ದುಪಡಿ ಮಾಡಿದೆ.
ಹಿಂಬಾಲಿಸುವಿಕೆ ಹಾಗೂ ಇಣುಕುವಿಕೆಯ ಪ್ರಸ್ತಾಪಗಳ ದುರುಪಯೋಗ ತಡೆಯಲು ಅವುಗಳನ್ನು ಇನ್ನಷ್ಟು ಸಡಿಲಗೊಳಿಸಬೇಕೆಂದು ಹೆಚ್ಚಿನ ಪಕ್ಷಗಳ ಅಭಿಪ್ರಾಯವಾಗಿದೆ.
ರಾಜಕೀಯ ವಿರೋಧಿಗಳು ಹಾಗೂ ಸೇಡು ತೀರಿಸ ಬಯಸುವವರು ಸುಳ್ಳು ದೂರುಗಳನ್ನು ದಾಖಲಿಸದಂತೆ ರಕ್ಷಣೆಯಿರಬೇಕೆಂಬುದು ಅವುಗಳ ಅಭಿಪ್ರಾಯವಾಗಿದೆಯೆಂದು ಮೂಲಗಳು ತಿಳಿಸಿವೆ.
ದುರ್ಬಳಕೆಯ ತಡೆಗೆ ಕಾಯ್ದೆಯಲ್ಲಿ ಪ್ರಸ್ತಾಪಗಳಿದ್ದವು. ಆದರೆ, ಮಸೂದೆ ಪರಿಶೀಲಿಸಿದ ಸಚಿವ ಸಮಿತಿ ಅವುಗಳನ್ನು ಕೈಬಿಡಲು ನಿರ್ಧರಿಸಿತ್ತು. ಹಾಗೂ ಈಗಿರುವ ಐಪಿಸಿಯ ಪರಿಚ್ಛೇದಗಳೇ ಸಾಕಷ್ಟು ರಕ್ಷಣೆ ನೀಡುತ್ತವೆಂದು ಅಭಿಪ್ರಾಯಿಸಿತ್ತು.
ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಈ ಕಾಯ್ದೆ ದುರುಪಯೋಗವಾಗುವ ಸಾಧ್ಯತೆಯ ಬಗ್ಗೆ ಕೆಲವು ರಾಜಕೀಯ ನಾಯಕರು ಶಂಕಿಸಿದರು. ಅವರು ರಕ್ಷಣಾ ಪ್ರಸ್ತಾಪಗಳನ್ನು ನಿರ್ದಿಷ್ಟ ಪಡಿಸಬೇಕೆಂದು ಆಗ್ರಹಿಸಿದರೆಂದು ಸಭೆಯಲ್ಲಿ ಭಾಗವಹಿಸಿದ್ದ ಸಚಿವರೊಬ್ಬರು ತಿಳಿಸಿದರು.
ಡಿ.16ರ ದಿಲ್ಲಿ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ತಲೆ ಬಾಗಿದ ಸರಕಾರ ಫೆ.3ರಂದು ರಾಷ್ಟ್ರಪತಿ ಆದೇಶದ ಮೂಲಕ ಅತ್ಯಾಚಾರ ತಡೆ ಕಾಯ್ದೆಯನ್ನು ಹೆಚ್ಚು ಕಠಿಣಗೊಳಿಸುವ ಅಪರಾಧ ಕಾಯ್ದೆ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.
ಈ ಸುಗ್ರೀವಾಜ್ಞೆ ಎ.4ಕ್ಕೆ ಮುಗಿಯಲಿದ್ದು, ಮಾ.22ರಂದು ಬಜೆಟ್ ಅಧಿವೇಶನ ಮುಗಿಯುವ ಮೊದಲು ಮಸೂದೆಯನ್ನು ಮಂಜೂರುಗೊಳಿಸಬೇಕೆಂದು ಹೆಚ್ಚಿನ ರಾಜಕೀಯ ಪಕ್ಷಗಳ ಅಭಿಪ್ರಾಯವಾಗಿದೆ.
ಕೃಪೆ ವಾ.ಭಾರತಿ 

No comments:

Post a Comment