Thursday, March 14, 2013

ಅತ್ಯಾಚಾರ ತಡೆ ಮಸೂದೆ: ವಯೋಮಿತಿ 16ಕ್ಕೆ ಇಳಿಕೆ: ಸಚಿವ ಸಮಿತಿ ಸಭೆ ನಿರ್ಧಾರ



ಹೊಸದಿಲ್ಲಿ: ಪರಸ್ಪರ ಒಪ್ಪಿಗೆಯೊಂದಿಗೆ ಲೈಂಗಿಕ ಕ್ರಿಯೆಯನ್ನು ನಡೆಸಬಹುದಾದ ವಯೋಮಿತಿಯನ್ನು 16 ವರ್ಷಕ್ಕೆ ಇಳಿಸಲು ಸಚಿವ ಸಮಿತಿ ನಿರ್ಧರಿಸಿದೆ.
ಬುಧವಾರ ಹೊಸದಿಲ್ಲಿಯಲ್ಲಿ ನಡೆದ ಸಚಿವ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ಮೊದಲು ಪರಸ್ಪರ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆಯನ್ನು ನಡೆಸಬಹುದಾದ ವಯೋಮಿತಿಯು 18 ವರ್ಷಗಳಾಗಿತ್ತು.
ಅತ್ಯಾಚಾರ ತಡೆ ಕಾಯ್ದೆಯ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿ ಇಂದು ಹೊಸದಿಲ್ಲಿಯಲ್ಲಿ ನಡೆದ ಸಚಿವ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.
 
ಈ ವಿಧೇಯಕದ ಒಂದು ಅಂಶವಾದ ಪರಸ್ಪರ ಸಮ್ಮತಿಯಿಂದ ಲೈಂಗಿಕ ಕ್ರಿಯೆಯನ್ನು ನಡೆಸಬಹುದಾದ ವಯೋಮಿತಿಯನ್ನು ಇಳಿಸುವ ಬಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ಭಿನ್ನಾಭಿಪ್ರಾಯವುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಂಪುಟವು ವಿಧೇಯಕವನ್ನು ಮಂಗಳವಾರ ಸಚಿವ ಸಮಿತಿಯ ಪರಿಶೀಲನೆಗಾಗಿ ಒಪ್ಪಿಸಿತ್ತು.
ಪರಸ್ಪರ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸಬಹುದಾದ ವಯೋಮಿತಿಯನ್ನು ಇಳಿಸುವ ಬಗ್ಗೆ ಸಚಿವ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳಿದ್ದವಾದವಾದರೂ, ಇಂದಿನ ಸಭೆಯಲ್ಲಿ ಅದನ್ನು ಮಾತುಕತೆಯ ಬಗೆಹರಿಸಲಾಯಿತೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸಚಿವ ಸಮಿತಿಯ ಈ ನಿರ್ಧಾರದೊಂದಿಗೆ, ಗುರುವಾರ ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ಕ್ರಿಮಿನಲ್ ಕಾನೂನು (ತಿದ್ದುಪಡಿ) ವಿಧೇಯಕವು ಪರಿಶೀಲನೆಗೆ ಬರುವ ಸಾಧ್ಯತೆಗಳಿವೆ.
ಇಂದು ಸಚಿವ ಸಮಿತಿಯ ಸಭೆಯ ಬಳಿಕ ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಸುದ್ದಿಗಾರರ ಜೊತೆ ಮಾತನಾಡುತ್ತಾ ‘‘ಪ್ರಸ್ತಾಪಿತ ವಿಧೇಯಕದ ಪ್ರತಿಯೊಂದು ಕಾನೂನುಗಳನ್ನು ನಾವು ಪರಿಶೀಲಿಸಿದ್ದೇವೆ ಹಾಗೂ ಎಲ್ಲಾ ರೀತಿಯ ವಿವಾದಗಳನ್ನು ಬಗೆಹರಿಸಲಾಗಿದೆ. ಇದೀಗ ಈ ವಿದೇಯಕವು ನಾಳೆ ನಡೆಯಲಿರುವ ಸಂಪುಟ ಸಭೆಯ ಪರಿಶೀಲನೆಗೆ ಬರಲಿದೆ. ಅದಕ್ಕೆ ನಾಳೆಯೇ ಅನುಮೋದನೆ ದೊರೆಯುವುದೆಂಬ ಭರವಸೆಯಿದೆ’’ಎಂದು ತಿಳಿಸಿದರು.
ಕೇಂದ್ರ ಸಂಪುಟ ಸಭೆಯ ಅನುಮೋದನೆ ದೊರೆತ ಕ್ರಿಮಿನಲ್ ಕಾನೂನು(ತಿದ್ದುಪಡಿ) ವಿಧೇಯ ವಿಧೇಯಕವನ್ನು ಸಂಸತ್‌ನಲ್ಲಿ ಮಂಡನೆಯಾಗಲಿದೆ.
ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆಗೆ ವಯೋಮಿತಿಯನ್ನು 18 ರಿಂದ 16 ವರ್ಷಗಳಿಗೆ ಇಳಿಸುವುದನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಕೃಷ್ಣಾ ತೀರ್ಥ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇಂದು ನಡೆದ ಸಚಿವ ಸಮಿತಿಯ ಸಭೆಯನ್ನು ಹಣಕಾಸು ಸಚಿವ ಪಿ.ಚಿದಂಬರಂ ವಹಿಸಿದ್ದರು. ನಿರಂತರವಾಗಿ ಒಬ್ಬ ವ್ಯಕ್ತಿಯನ್ನು ಕದ್ದುಮುಚ್ಚಿ ಹಿಂಬಾಲಿಸುವುದನ್ನು ಜಾಮೀನು ನೀಡಲಾಗದ ಅಪರಾಧವೆಂದು ಪರಿಗಣಿಸುವಂತೆಯೂ ಇಂದಿನ ಸಚಿವ ಸಮಿತಿ ಸಭೆಯಲ್ಲಿ ಶಿಫಾರಸು ಮಾಡಲಾಯಿತು.
ಅಸಭ್ಯವಾದ ರೀತಿಯಲ್ಲಿ ವರ್ತಿಸುವುದು, ಅನುಚಿತವಾಗಿ ಸ್ಪರ್ಶಿಸುವ ಹಾಗೂ ಅಶ್ಲೀಲ ಮಾತುಗಳನ್ನು ಆಡುವಂತಹ ಅಪರಾಧಗಳನ್ನು ಪದೇ ಪದೇ ನಡೆಸುವುದನ್ನು ಜಾಮೀನು ನೀಡಲಾಗ ಅಪರಾಧವೆಂದು ಪರಿಗಣಿಸಲು ಸಭೆಯು ನಿರ್ಧರಿಸಿದೆ.

No comments:

Post a Comment