Saturday, March 2, 2013

ಬೃಹತ್ ಪ್ರಮಾಣದ ಗ್ರಾಹಕರಿಗೆ ಡೀಸೆಲ್ ದರದಲ್ಲಿ 1 ರೂ. ಏರಿಕೆ;ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 37.50 ರೂ. ಕಡಿತಹೊಸದಿಲ್ಲಿ,: ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಸೇನೆ, ರೈಲ್ವೆ ಮತ್ತಿತರ ಬೃಹತ್ ಪ್ರಮಾಣದ ಗ್ರಾಹಕರಿಗೆ ಮಾರಾಟ ಮಾಡುವ ಡೀಸೆಲ್ ದರದಲ್ಲಿ ಶನಿವಾರ ಲೀಟರ್‌ಗೆ ಸುಮಾರು 1 ರೂ.ನಷ್ಟು ಏರಿಕೆ ಮಾಡಿವೆ.ಆದರೆ ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಪ್ರತಿ ಸಿಲಿಂಡರ್‌ಗೆ 37.50 ರೂ.ಗಳಷ್ಟು ಕಡಿತ ಮಾಡುವ ಮೂಲಕ ಶ್ರೀಸಾಮಾನ್ಯನಿಗೆ ತುಸು ಸಮಾಧಾನ ನೀಡಿವೆ.

ಏತನ್ಮಧ್ಯೆ ಪೆಟ್ರೋಲ್ ಪಂಪ್‌ಗಳಲ್ಲಿ ಮಾರಾಟ ಮಾಡುವ ಡೀಸೆಲ್ ಹಾಗೂ ಸಬ್ಸಿಡಿದರದಲ್ಲಿ ಮಾರಾಟವಾಗುವ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲವೆಂದು ಪೆಟ್ರೋಲಿಯಂ ಇಲಾಖೆ ಸ್ಪಷ್ಟಪಡಿಸಿದೆ.

ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ತೈಲ ಕಂಪೆನಿಗಳು ಸೇನೆ, ರೈಲ್ವೆ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಗಳಂತಹ ಬೃಹತ್ ಪ್ರಮಾಣದ ಗ್ರಾಹಕರಿಗೆ ಡೀಸೆಲ್‌ನ್ನು ಪ್ರತಿ ಲೀಟರ್‌ಗೆ 58.58 ರೂ.ಗೆ ಮಾರಾಟ ಮಾಡಲಿವೆ. ಆದರೆ ದಿಲ್ಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 48.16 ರೂ.ಗೆ ಮಾರಾಟವಾಗುತ್ತಿದೆ.

ವಾಸ್ತವವಾಗಿ ತೈಲ ಕಂಪೆನಿಗಳು ಶುಕ್ರವಾರದಂದು ಬೃಹತ್ ಪ್ರಮಾಣದ ಗ್ರಾಹಕರಿಗೆ ಡೀಸೆಲ್ ಮಾರಾಟ ಬೆಲೆಯಲ್ಲಿ 94 ಪೈಸೆಯಷ್ಟು ಏರಿಕೆ ಮಾಡಿತ್ತು. ಆದರೆ ವ್ಯಾಟ್ ಹಾಗೂ ಮಾರಾಟ ತೆರಿಗೆಗಳನ್ನು ಸೇರಿಸಿದಲ್ಲಿ ಡೀಸೆಲ್ ದರದಲ್ಲಿ 1.25 ರೂ. ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಹೆಚ್ಚಳ ಅನಿವಾರ್ಯವಾಗಿದೆಯೆಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತಿಳಿಸಿವೆ.

ಏತನ್ಮಧ್ಯೆ ಶ್ರೀಸಾಮಾನ್ಯರಿಗೆ ತುಸು ನೆಮ್ಮದಿ ನೀಡುವ ಕ್ರಮವಾಗಿ ತೈಲ ಕಂಪೆನಿಗಳು ವರ್ಷಕ್ಕೆ ಸಬ್ಸಿಡಿ ದರದಲ್ಲಿ ನೀಡಲಾಗುವ 9 ಎಲ್‌ಪಿಜಿ ಸಿಲಿಂಡರ್‌ಗಳ ಬಳಿಕ ಗ್ರಾಹಕರು ಖರೀದಿಸುವ ಪ್ರತಿ ಸಿಲಿಂಡರ್‌ನ ದರದಲ್ಲಿ 37.50 ರೂ.ನಷ್ಟು ಕಡಿತ ಮಾಡಿದೆ. ಇದರಿಂದಾಗಿ ಈ ಮೊದಲು 942 ರೂ.ಗಳಿಷ್ಟಿದ್ದ ಪ್ರತಿ 14.2 ಕೆ.ಜಿ. ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್‌ನ ದರವು ಇದೀಗ 904.50 ರೂ.ಗೆ ಇಳಿದಿದೆ.

ನಿನ್ನೆಯಷ್ಟೇ ತೈಲ ಕಂಪೆನಿಗಳು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 1.40 ರೂ.ನಷ್ಟು ಏರಿಕೆ ಮಾಡಿದ್ದವು. ಫೆಬ್ರವರಿ 16ರಂದು ಪೆಟ್ರೋಲ್ ದರದಲ್ಲಿ 1.50 ರೂ. ಏರಿಕೆ ಮಾಡಲಾಗಿತ್ತು. ಹೀಗಾಗಿ ಕೇವಲ ಎರಡು ವಾರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಒಟ್ಟು 3 ರೂ.ನಷ್ಟು ಏರಿಕೆಯಾದಂತಾಗಿದೆ

No comments:

Post a Comment