Saturday, February 9, 2013

ಅಫ್ಝಲ್ ಗುರು: ಸಂಸತ್ ದಾಳಿಯಿಂದ ಗಲ್ಲಿನವರೆಗೆ...



ಹೊಸದಿಲ್ಲಿ: ಸಂಸತ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಯಾಗಿದ್ದ ಜೈಷೆ ಮುಹಮ್ಮದ್‌ನ ಉಗ್ರ ಅಫ್ಝಲ್ ಗುರುವಿಗೆ ಇಂದು ಬೆಳಗ್ಗೆ ಗಲ್ಲಿಗೇರಿಸಲಾಗಿದೆ. ಆತನನ್ನು ಗಲ್ಲಿಗೇರಿಸಬೇಕೆಂದು ಕೇಂದ್ರ ಸರಕಾರ ಕಳುಹಿಸಿದ್ದ ಶಿಫಾರಸಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಫೆ. 3ರಂದು ಅಂಕಿತ ಹಾಕಿದ್ದರು ಎಂದು ಕೇಂದ್ರದ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ತಿಳಿಸಿದ್ದಾರೆ.
ಸಂಸತ್ ಮೇಲಿನ ದಾಳಿಯ ನಂತರದಿಂದ ಉಗ್ರ ಅಫ್ಝಲ್ ಗುರು ಗಲ್ಲು ಕಂಬದ ವರೆಗೆ ಸಾಗಿಬಂದ ರೀತಿ ಇಲ್ಲಿದೆ.
ಡಿ. 13. 2001: ಸಂಸತ್ ಭವನದ ಆವರಣವನ್ನು ಪ್ರವೇಶಿಸಿದ 5 ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದರಿಂದ 9 ಭದ್ರತಾ ಸಿಬ್ಬಂದಿ ಬಲಿಯಾಗಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಡಿ. 15. 2001: ದಿಲ್ಲಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದಿಂದ ಜೈಷೆ ಮುಹಮ್ಮದ್ ಉಗ್ರ ಸಂಘಟನೆಯ ಅಫ್ಝಲ್ ಗುರು ಮತ್ತು ದಿಲ್ಲಿ ವಿವಿಯ ಝಕೀರ್ ಹುಸೇನ್ ಕಾಲೇಜಿನ ಎಸ್‌ಎಆರ್ ಗೀಲಾನಿರನ್ನು ವಿಚಾರಣೆಗೆ ಕರೆ ತಂದು ನಂತರ ಬಂಧಿಸಿದರು. ಆನಂತರ ಅಫ್ಸನ್ ಗುರು ಮತ್ತು ಆಕೆಯ ಪತಿ ಶೌಕತ್ ಹುಸೇನ್ ಗುರುವನ್ನು ವಿಚಾರಣೆಗೆ ಕರೆ ತಂದರು.
ಡಿ. 29. 2001: ಅಫ್ಝಲ್ ಗುರುವನ್ನು 10ದಿನಗಳ ಕಾಲ ಪೊಲೀಸ್ ವಶಕ್ಕೆ ವಿಚಾರಣಾ ನ್ಯಾಯಾಲಯ ನೀಡಿತು.
ಜೂನ್ 4. 2002: ಅಫ್ಝಲ್ ಗುರು, ಎಸ್‌ಎಎಸ್ ಗೀಲಾನಿ, ಶವಕತ್ ಹುಸೇನ್ ಗುರು ಮತ್ತು ಅಫ್ಸನ್ ಗುರು ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ.
ಡಿ, 18. 2002: ಸಂಸತ್ ದಾಳಿಯ ಮೇಲಿನ ಪಿತೂರಿಯಲ್ಲಿ ದೋಷಿಗಳೆಂದು ಪರಿಗಣಿಸಲ್ಪಟ್ಟ ಅಫ್ಝಲ್ ಗುರು, ಗೀಲಾನಿ ಮತ್ತು ಶೌಕತ್ ಹುಸೇನ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿದ ದಿಲ್ಲಿ ನ್ಯಾಯಾಲಯವು ಅಫ್ಸಾನ್ ಗುರುವನ್ನು ಖುಲಾಸೆಗೊಳಿಸಿತು.
ಆಗಸ್ಟ್ 30. 2003: ಶ್ರೀನಗರದಲ್ಲಿ ಬಿಎಸ್‌ಎಫ್ ಮತ್ತು ಜೈಷೆ ಉಗ್ರರ ನಡುವೆ 10 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಜೈಷೆ ನಾಯಕ ಘಝಿ ಬಾಬಾ ಸೇರಿ ನಾಲ್ವರ ಬಲಿ.
ಅಕ್ಟೋಬರ್ 29. 2003: ಅಫ್ಝಲ್ ಗುರುವಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್‌ನಿಂದ ಗೀಲಾನಿ ಖುಲಾಸೆ.
ಆಗಸ್ಟ್ 4. 2005: ಅಫ್ಝಲ್ ಗುರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ 2 ವರ್ಷದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ವಜಾ. ಶೌಕತ್ ಹುಸೇನ್ ಗುರುಗೆ ನೀಡಿದ್ದ ಗಲ್ಲು ಶಿಕ್ಷೆ 10 ವರ್ಷ ಕಠಿಣ ಶಿಕ್ಷೆಗೆ ಮಾರ್ಪಾಡು.
ಅಕ್ಟೋಬರ್ 3. 2006: ಅಫ್ಝಲ್ ಗುರು ಪತ್ನಿ ತಬಸುಂ ಗುರುವಿಂದ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರಿಗೆ ದಯಾ ಭಿಕ್ಷೆ ಅರ್ಜಿ ಸಲ್ಲಿಕೆ.
ಅಕ್ಟೋಬರ್ 20. 2006: ಅಫ್ಝಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಲು ನಿಗದಿಪಡಿಸಿದ್ದ ದಿನಾಂಕ. ಆತನ ಪತ್ನಿ ರಾಷ್ಟ್ರಪತಿಗೆ ದಯಾ ಭಿಕ್ಷೆ ಅರ್ಜಿ ಸಲ್ಲಿಸಿದ್ದರಿಂದ ಗಲ್ಲು ವಿಧಿಸುವುದಕ್ಕೆ ತಡೆ.
ಜನವರಿ 12. 2007: ತನಗೆ ವಿಧಿಸಿರುವ ಗಲ್ಲು ಶಿಕ್ಷೆಯ ಆದೇಶ ಮರುಪರಿಶೀಲಿಸಲು ಅಫ್ಝಲ್ ಗುರು ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಅರ್ಹತೆಗಳಿಲ್ಲ ಎಂಬ ಕಾರಣ ನೀಡಿ ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ.
ಮೇ 19. 2010: ದಿಲ್ಲಿ ಸರಕಾರದಿಂದ ಅಫ್ಝಲ್ ಗುರು ದಯಾ ಭಿಕ್ಷೆ ಅರ್ಜಿ ವಜಾ. ಸುಪ್ರೀಂ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಗೆ ಅನುಮೋದನೆ.
ಡಿಸೆಂಬರ್ 30. 2010: ದಿಲ್ಲಿಯ ತಿಹಾರ್ ಜೈಲಿನಿಂದ ಶೌಕತ್ ಹುಸೇನ್ ಗುರು ಬಿಡುಗಡೆ.
ಆಗಸ್ಟ್ 2011: ಕೇಂದ್ರ ಗೃಹ ಸಚಿವಾಲಯದಿಂದ ಅಫ್ಝಲ್ ಗುರು ದಯಾ ಭಿಕ್ಷೆ ಅರ್ಜಿ ರಾಷ್ಟ್ರಪತಿಗೆ ಶಿಫಾರಸು.
ಡಿಸೆಂಬರ್ 10. 2012: ಸಂಸತ್‌ನ ಚಳಿಗಾಲದ ಅಧಿವೇಶನ ಮುಗಿದ ನಂತರ ಅಫ್ಝಲ್ ಗುರುವಿನ ಕಡತ ಪರಿಶೀಲಿಸುವುದಾಗಿ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ ಹೇಳಿಕೆ.
ಜನವರಿ 21. 2013: ಅಫ್ಝಲ್ ಗುರುವನ್ನು ಗಲ್ಲಿಗೇರಿಸಲು ಗೃಹ ಸಚಿವಾಲಯದಿಂದ ರಾಷ್ಟ್ರಪತಿಗೆ ಶಿಫಾರಸು.
ಫೆಬ್ರವರಿ 3. 2013: ಶಿಫಾರಸಿಗೆ ರಾಷ್ಟ್ರಪತಿ ಅಂಕಿತ ಮತ್ತು ಗಲ್ಲು ಶಿಕ್ಷೆ ವಿಧಿಸಲು ಒಪ್ಪಿಗೆ.
ಫೆ. 4. 2013: ರಾಷ್ಟ್ರಪತಿ ಕಳುಹಿಸಿದ ಕಡತಕ್ಕೆ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ ಸಹಿ.
ಫೆ 8: ಗಲ್ಲು ಶಿಕ್ಷೆ ವಿಧಿಸುವ ದಿನಾಂಕ ನಿಗದಿ.
ಫೆ 9: ತಿಹಾರ್ ಜೈಲಿನಲ್ಲಿ ಬೆಳಗ್ಗೆ 8 ಗಂಟೆಗೆ ಅಫ್ಝಲ್ ಗುರು ಗಲ್ಲಿಗೆ

No comments:

Post a Comment