Thursday, February 7, 2013

ಗಂಗೆಗೆ ವಿಷ ಬೆರೆಸ ಹೊರಟವರುಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ಜ. 27ರಿಂದ ಆರಂಭಗೊಂಡಿರುವ ಮಹಾ ಕುಂಭಮೇಳ ಮುಂದಿನ ಮಾರ್ಚ್ 10ವರೆಗೂ ಮುಂದುವರಿಯಲಿದೆ. ಈವರೆಗೆ ಕುಂಭಮೇಳ ಭಾರೀ ಸುದ್ದಿಯಾಗುತ್ತಿದ್ದದ್ದು ಕಾಲ್ತುಳಿತದ ದುರಂತಗಳ ಮೂಲಕ ಮಾತ್ರವಾಗಿತ್ತು. ಕುಂಭಮೇಳದ ಸಂದರ್ಭ ದಲ್ಲಿ ನಡೆದ ಕಾಲ್ತುಳಿತ ದುರಂತದಿಂದ ನೂರಾರು ಜನರು ಪ್ರಾಣವನ್ನು ಕಳೆದು ಕೊಂಡಿದ್ದಾರೆ. ಅಮೃತ ಹನಿಗಳು ಗಂಗಾ- ಯಮುನಾ ಸಂಗಮದಲ್ಲಿ ಹರಿದು ಹೋಗಿದೆ ಎನ್ನುವ ಕಾರಣಕ್ಕಾಗಿಯೇ ಜನರು ಬೇರೆ ಬೇರೆ ಕಾಲಾವಧಿಯಲ್ಲಿ ಈ ಕುಂಭಮೇಳಕ್ಕೆ ಧಾವಿಸಿ ಬರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿಚಿತ್ರ ಸಾಧುಗಳು, ಬೈರಾಗಿಗಳು, ನಾಗಾಗಳಿ ಗಾಗಿಯೇ ಈ ಮೇಳ ಪ್ರಸಿದ್ಧಿ. ಇಲ್ಲಿ ಕಂಡು ಬರುವ ಚಿತ್ರ ವಿಚಿತ್ರ ಜನರು, ಚಿತ್ರ ವಿಚಿತ್ರವಾದ ಆಚರಣೆ, ಭಾರತದ ಚಿತ್ರ ವಿಚಿತ್ರ ಸಂಸ್ಕೃತಿ ನಾಗರಿಕತೆಗಳ ಪಳೆಯುಳಿಕೆ ಗಳಾಗಿಯೂ ನಾವು ಪರಿಗಣಿಸಬಹುದು. ಭಾರತದ ಪಾಲಿಗೆ ಇದಕ್ಕಿಂತ ದೊಡ್ಡ ಸಮ್ಮೇಳನ ಬೇರಿಲ್ಲ. ಅಷ್ಟರಮಟ್ಟಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರೆನಿಸಿಕೊಂಡವರು, ವೀಕ್ಷಕ ರೆನಿಸಿಕೊಂಡವರು, ಪ್ರವಾಸಿಗರು, ಕುತೂಹಲಿಗರು ಇಲ್ಲಿ ನೆರೆಯುತ್ತಾರೆ. ಯಾವುದೇ ಕಾನೂನು, ಪೊಲೀಸ್ ವ್ಯವಸ್ಥೆಗಳಿಗೆ ಈ ಸಮ್ಮೇಳನವನ್ನು ಹದ್ದು ಬಸ್ತಿನಲ್ಲಿಡಲು ಸಾಧ್ಯವಿಲ್ಲ. ಅಂತಹದೊಂದು ಜನಸಮೂಹ ಇಲ್ಲಿ ನೆರೆಯುತ್ತದೆ. ಒಂದು ವೇಳೆ ಯಾವುದೇ ಆಪತ್ತು ಸಂಭವಿಸಿದರೂ ಅದರ ಪರಿಣಾಮ ಭೀಕರವಾಗಬಹು ದಾದಂತಹ ವಾತಾವರಣ ಇಲ್ಲಿದೆ.
ಇಂತಹ ವಾತಾವರಣಕ್ಕೆ ಹೆಂಡ ಕುಡಿದ ಕೋತಿಗಳು ಬಂದು ಸೇರಿದರೆ ಅಲ್ಲಿನ ಸ್ಥಿತಿ ಹೇಗಾಗಿ ಬಿಡಬಹುದು? ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕುಂಭಮೇಳ ದಲ್ಲಿ ರಾಜಕಾರಣಿಗಳು ತಮ್ಮ ಹಸ್ತಕ್ಷೇಪವನ್ನು ಮಾಡಲು ತೊಡಗಿದ್ದಾರೆ. ಜನಸಮೂಹದ ಆಚರಣೆಯೊಂದನ್ನು ಹೈಜಾಕ್ ಮಾಡಿ, ತಮ್ಮ ಚುನಾವಣಾ ರಾಜಕಾರಣಕ್ಕೆ ಬಳಸಲು ವಿವಿಧ ಪಕ್ಷಗಳು ಯೋಚಿಸಿದಂತಿದೆ. ಈ ಕಾರಣ ದಿಂದಲೇ ಪ್ರಯಾಗಕ್ಕೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಸಂಘ ಪರಿವಾರದ ಮುಖಂಡರೊಂದಿಗೆ ಆಗಮಿಸಿ ಗಂಗಾ ಸಂಗಮದಲ್ಲಿ ಮಿಂದಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಇತರ ನಾಯಕರು ಗಳೂ ಸಾಲು ಸಾಲಾಗಿ ಆಗಮಿಸಿ ಗಂಗಾ ನದಿಯಲ್ಲಿ ಮೀಯಲಿದ್ದಾರಂತೆ. ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೂ ಈ ಕುಂಭಮೇಳದಲ್ಲಿ ಭಾಗವಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕುಂಭಮೇಳವನ್ನು ರಾಜಕೀಯವಾಗಿ ಬಳಕೆ ಮಾಡುವುದನ್ನು ಉತ್ತರಪ್ರದೇಶ ಸರಕಾರ ಬಲವಾಗಿ ವಿರೋಧಿಸಿದೆ. ಸಮಾಜವಾದಿ ಪಕ್ಷದ ಮುಖಂಡರು ಈ ಬಗ್ಗೆ ಕಠಿಣ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿಯ ನಾಯಕರು ಅಷ್ಟೇ ತೀವ್ರವಾಗಿ ಅದಕ್ಕೆ ಪ್ರತ್ಯುತ್ತರಿಸಿದ್ದಾರೆ.
ಗಂಗಾನದಿಯಲ್ಲಿ ಯಾರೂ ಮೀಯ ಬಹುದು. ಈ ದೇಶದ ಜನರ ರಕ್ತವನ್ನು, ಕಣ್ಣೀರನ್ನು ಮೈಗಂಟಿಸಿಕೊಂಡಿರುವ ಬಿಜೆಪಿಯ ನಾಯಕರಂತೂ ಅತ್ಯವಶ್ಯವಾಗಿ ಗಂಗಾನದಿ ಯಲ್ಲಿ ಮೀಯಬೇಕಾಗಿದೆ, ಪರಿಶುದ್ಧ ರಾಗಬೇಕಾಗಿದೆ. ಆದರೆ ಬಿಜೆಪಿಯ ಉದ್ದೇಶ ಮಿಂದು ಶುಚಿಯಾಗುವುದಲ್ಲ. ಈಗಾಗಲೇ ಪರಿಸರ ಮಾಲಿನ್ಯ, ಕೈಗಾರಿಕಾ ತ್ಯಾಜ್ಯಗಳಿಂದ ಕಳಂಕಿತಳಾಗಿರುವ ಗಂಗೆಯನ್ನು ತಮ್ಮ ರಾಜಕೀಯ ತ್ಯಾಜ್ಯಗಳಿಂದ ಇನ್ನಷ್ಟು ಕೆಡಿಸುವು ದಕ್ಕೆ ಮುಂದಾಗಿದ್ದಾರೆ. ಕುಂಭ ಮೇಳದಲ್ಲಿ ನೆರೆದಿರುವ ಲಕ್ಷಾಂತರ ಜನರು ಅವರಿಗೆ ಭಕ್ತರಾಗಿ ಕಾಣಿಸುತ್ತಿಲ್ಲ. ಮುಂದಿನ ಮಹಾ ಚುನಾವಣೆಯ ಮತಗಳಾಗಿ ಕಾಣಿಸುತ್ತಿದ್ದಾರೆ. ಆದುದರಿಂದ, ಬಿಜೆಪಿ ಮತ್ತು ಸಂಘಪರಿವಾರ ಕುಂಭಮೇಳದತ್ತ ಆಕರ್ಷಿತವಾಗಿದೆ. ಅಲ್ಲಿ ತಮ್ಮ ರಾಜಕೀಯ ವಿಷವನ್ನು ಹರಡುವುದಕ್ಕೆ ಸಂಚು ನಡೆಸುತ್ತಿದೆ. ಅಲ್ಲಿಯ ಸ್ವಾಮೀಜಿಗಳು, ಸಾಧುಗಳ ಜೊತೆಗೆ ಸಭೆ, ಸಮಾವೇಶಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನೂ ರೂಪಿಸಿದೆ. ಇದು ನಿಜಕ್ಕೂ ಅಪಾಯಕಾರಿಯಾದ ಆಟವಾಗಿದೆ.
 
ಲಕ್ಷಾಂತರ ಜನ ನೆರೆದಿರುವ ಕುಂಭಮೇಳ ದಲ್ಲಿ ಬಿಜೆಪಿ ತನ್ನ ರಾಜಕೀಯ ವಿಷವನ್ನು ಹರಡಲು ಮುಂದಾದರೆ ಅದು ಭೀಕರ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ. ಒಂದು ಸಣ್ಣ ಲಾಠಿಚಾರ್ಜ್ ಆದರೂ ಕಾಲ್ತುಳಿತದಿಂದ ನೂರಾರು ಜನರು ಸಾಯಬಹುದಾದ ಸ್ಥಳದಲ್ಲಿ ರಾಜಕೀಯ ನಡೆಸುವುದು ನಿಜಕ್ಕೂ ಅಪಾಯಕಾರಿ. ನಾಳೆ ಕುಂಭಮೇಳದಲ್ಲಿ ಯಾವುದಾದರೂ ದುರ್ಘಟನೆ ಸಂಭವಿಸಿದರೆ ಅದು ರಾಜಕೀಯ ಗೊಂಡು, ದೇಶದಲ್ಲಿ ಅರಾಜಕತೆಯುಂಟಾಗ ಬಹುದು. ಈ ಕಾರಣದಿಂದಲೇ, ಬಿಜೆಪಿ ಯಾವ ಕಾರಣಕ್ಕೂ ಕುಂಭಮೇಳದಲ್ಲಿ ತನ್ನ ರಾಜಕೀಯ ವಿಷವನ್ನು ಬೆರೆಸಲು ಮುಂದಾಗಬಾರದು. ಕುಂಭಮೇಳಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ದೇವತೆಗಳು ಮತ್ತು ರಾಕ್ಷಸರು ಅಮೃತ ಮಥನ ನಡೆಸಿದ ಹಿನ್ನೆಲೆ ಈ ಕ್ಷೇತ್ರಗಳಿದೆ. ಅಮೃತಕ್ಕಾಗಿ ದೇವತೆಗಳು ಮತ್ತು ರಾಕ್ಷಸರೊಡನೆ ಕಾಳಗ ನಡೆದಾಗ ಅಮೃತದ ಹನಿಗಳು ಈ ಪ್ರದೇಶದಲ್ಲಿ ಬಿದ್ದವಂತೆ. ಇಂತಹ ಸ್ಥಳದಲ್ಲಿ ಬಿಜೆಪಿ ಯಾವ ಕಾರಣಕ್ಕೂ ತನ್ನ ರಾಜಕೀಯ ವಿಷವನ್ನು ಬಿತ್ತುವ ಪ್ರಯತ್ನ ಮಾಡಬಾರದು. ಅದನ್ನು ಅಲ್ಲಿನ ಸರಕಾರ ಸರ್ವರೀತಿಯಲ್ಲೂ ತಡೆಯಬೇಕಾಗಿದೆ. ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಮತವೆನ್ನುವ ಅಮೃತಕ್ಕಾಗಿ ರಾಕ್ಷಸರು ಎಂತಹ ಕೃತ್ಯವನ್ನು ಮಾಡಲೂ ಸಿದ್ಧರಿರುತ್ತಾರೆ. ಈ ಹಿನ್ನೆಲೆಯಲ್ಲಿ ಸರಕಾರ, ಗಂಗಾನದಿಯಂತಹ ಜನರ ಮನದಲ್ಲಿ ವಿಷದ ಹನಿಗಳು ಉದುರದಂತೆ ಜಾಗೃತಿಯನ್ನು ವಹಿಸುವುದು ಅತ್ಯಗತ್ಯವಾಗಿದೆ.

No comments:

Post a Comment