Tuesday, February 5, 2013

ಡ್ರಗ್ಸ್ ಮಾಫಿಯಾದ ಬಲೆಯಲ್ಲಿ ಮಂಗಳೂರು


ಡ್ರಗ್ಸ್ ಮಾಫಿಯಾದ ಬಲೆಯಲ್ಲಿ ಮಂಗಳೂರು


 - ಫೆಬ್ರವರಿ -05-2013


ಮಂಗಳೂರು: ಅಭಿವೃದ್ಧಿ ಪಥದತ್ತ  ದಾಪುಗಾಲಿಡುತ್ತಿರುವ ಮಂಗಳೂರು ನಗರವು ಮಾದಕ ದ್ರವ್ಯ ವಹಿವಾಟು ಕೇಂದ್ರವಾಗಿ ಪರಿವರ್ತಿತವಾಗುವ  ಅಪಾಯ ಕಾಡುತ್ತಿದೆ. ಡ್ರಗ್ಸ್ ಮಾಫಿಯಾದ ಅಟ್ಟಹಾಸಕ್ಕೆ  ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಮಾದಕ ದ್ರವ್ಯದ ಜಾಲದಲ್ಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರನ್ನೂ ಸಿಲುಕಿಸಲಾಗು ತ್ತಿದೆ ಎಂಬುದಕ್ಕೆ 17ರ ಹರೆಯದ ಸ್ನೇಹಾಳ ಆತ್ಮಹತ್ಯೆ ಸಾಕ್ಷಿಯಾಗಿದೆ.
ಒಂಬತ್ತನೆ ತರಗತಿಯಲ್ಲಿರುವಾಗಲೇ ಮಾದಕ ವ್ಯಸನಿಯಾಗಿ, ಅದರಿಂದ ಹೊರಬರಲಾಗದೆ ಆತ್ಮಹತ್ಯೆ ಮಾಡಿ ಕೊಂಡ ಪದವಿನಂಗಡಿ ನಿವಾಸಿ ಸ್ನೇಹಾ ಉಪಾಧ್ಯಾಯ, ಡ್ರಗ್ಸ್ ಮಾಫಿಯಾ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಸಾವಿನ ಮನೆಗೆ ನೂಕತೊಡಗಿದೆ ಎಂಬುದಕ್ಕೆ ಸ್ಪಷ್ಟ  ನಿದರ್ಶನವಾಗಿದ್ದಾಳೆ. ಸ್ನೇಹಾಳ ಸಾವು  ಈ ಘೋರ ಪಿಡುಗಿನ ಬಗ್ಗ್ಧೆ  ಸಮಾಜಕ್ಕೆ ಹಾಗೂ ಆಡಳಿತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ನಗರದ ಪದವಿನಂಗಡಿಯ ಗುರುರಾಜ್ ಉಪಾಧ್ಯಾಯರ ಪುತ್ರಿ ಸ್ನೇಹಾ ಶನಿವಾರ ರಾತ್ರಿ ತನ್ನ ಕೊಠಡಿ ಯೊಳಗೆ ನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು. ಸ್ನೇಹಾಳ ಆತ್ಮಹತ್ಯೆಗೆ ಕಾರಣವಾದುದು ಮಾದಕ ದ್ರವ್ಯದ ಹಸಿವು ಎಂಬುದನ್ನು  ಆಕೆಯ ಮನೆಯವರು ಬಹಳ ದುಃಖದಿಂದ ತಿಳಿಸುತ್ತಾರೆ. ಡ್ರಗ್ಸ್ ಖರೀದಿಗೆಂದು ಒಂದೂವರೆ ಸಾವಿರ ರೂ. ಕೊಡುವಂತೆ ಶನಿವಾರ ತಾಯಿಯ ಜತೆ ಜಗಳವಾಡಿ ತನ್ನ ಕೊಠಡಿ ಸೇರಿದ್ದ ಸ್ನೇಹಾ ನಂತರ ಕೊಠಡಿ ಬಾಗಿಲು ತೆರೆದಿರಲಿಲ್ಲ. ರಾತ್ರಿಯಿಡೀ ಈಕೆಯ ಕೊಠಡಿಯಲ್ಲಿ ಲೈಟ್ ಉರಿಯುತ್ತಿತ್ತು ಎಂಬುದು ಆಕೆಯ ಪೋಷಕರು ಪೊಲೀಸರಿಗೆ ನೀಡಿದ ದೂರಿನ ಸಾರಾಂಶ.
9ನೇ ತರಗತಿವರೆಗೂ ಕಲಿಯುವಿಕೆಯಲ್ಲಿ ಮುಂದಿದ್ದ ಸ್ನೇಹಾ ಎಸೆಸೆಲ್ಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಳು. ಆಗಲೇ ಈಕೆಯ ವರ್ತನೆಯಲ್ಲಿ ವ್ಯತ್ಯಾಸವಾಗಿದ್ದು ಹೆತ್ತವರ ಗಮನಕ್ಕೆ ಬಂದಿತ್ತು. ಅನುಮಾನದ ಬೆನ್ನು ಹಿಡಿದಾಗ ಸ್ನೇಹಾ ಮಾರಕವಾದ ಮಾದಕದ್ರವ್ಯ ಚಟಕ್ಕೆ ದಾಸಳಾಗಿದ್ದು ಬೆಳಕಿಗೆ ಬಂದಿತ್ತು. ಸ್ನೇಹಾ ಯೂನಿರಂ ಧರಿಸಿ ಕಾಲೇಜಿಗೆ ಹೊರಟರೂ, ತರಗತಿಗೆ ಹೋಗದೆ ತನ್ನದೇ ಪ್ರತ್ಯೇಕ ಸ್ನೇಹಿತರ ಕೂಟದಲ್ಲಿರುತ್ತಿದ್ದಳು. ಹಿಂದೊಮ್ಮೆ ನಿಗೂಢ ನಾಪತ್ತೆಯಾಗಿದ್ದ ಸ್ನೇಹಾ ಮಣಿಪಾಲದ ಎಂಡ್‌ಪಾಯಿಂಟ್ ಬಳಿ ಅಮಲು ಪದಾರ್ಥ ಸೇವಿಸಿದ ಸ್ಥಿತಿಯಲ್ಲಿ ಕೆಲವರ ಜತೆ ಕಾಣಸಿಕ್ಕಿದ್ದಳು ಎಂದು ಆಕೆಯ ತಂದೆ ಗುರುರಾಜ್ ಉಪಾಧ್ಯಾಯ ನೋವಿನಿಂದ ನೆನಪಿಸಿಕೊಳ್ಳುತ್ತಾರೆ.
ಇದನ್ನೆಲ್ಲ ಗಮನಿಸುವಾಗ ತಡವಾಗಿತ್ತು. ಪೊಲೀಸರಿಗೂ ದೂರು ನೀಡಲಾಗಿತ್ತು. ಆದರೆ ಪ್ರಯೋಜನವಾಗಿರಲಿಲ್ಲ. ಮಗಳನ್ನು ವಿಷಜಾಲದ ಹಿಡಿತದಿಂದ ಮುಕ್ತಗೊಳಿಸಲು ಪೊಲೀಸರು ತವ್ಮೊಂದಿಗೆ ಸಹಕರಿಸಲೇ ಇಲ್ಲ ಎಂದು ಸ್ನೇಹಾಳ ತಾಯಿ ರೋದಿಸುತ್ತಾರೆ.ಮಗಳನ್ನು ಡ್ರಗ್ಸ್ ಬಲೆಯಿಂದ ಪಾರು ಮಾಡಲು ಉಪಾಧ್ಯಾಯ ದಂಪತಿ ಸಾಕಷ್ಟು ಹಣ ಖರ್ಚು ಮಾಡಿದ್ದರು. 2012ರ ಬ್ರವರಿಯಲ್ಲಿ ಬೆಂಗಳೂರಿನ ಸ್ಪಂದನ ಆಸ್ಪತ್ರೆಗೆ ದಾಖಲಿಸಿ 70ಸಾವಿರ ರೂ. ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಶೇ.60ರಷ್ಟು ಚೇತರಿಸಿದ್ದ ಸ್ನೇಹಾಳನ್ನು ಮೂರು ತಿಂಗಳ ಹಿಂದೆಯಷ್ಟೆ ಮಂಗಳೂರಿಗೆ ಕರೆ ತಂದಿದ್ದರು.
ಬಳಿಕ ಮನೆಯಲ್ಲಿಯೇ ಇದ್ದ ಈಕೆ ಜ.11ರಂದು ರಕ್ತದೊತ್ತಡ ಕಾಯಿಲೆಯ  ನಿಯಂತ್ರಣದ 30ಮಾತ್ರೆ ಸೇವಿಸಿ ಅಸ್ವಸ್ಥಳಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಯ ಹೊರತೂ ಈಕೆಗೆ ಅಮಲು ಪದಾರ್ಥದ ಚಟ ಬಿಟ್ಟಿರಲಿಲ್ಲ. ಸ್ನೇಹಾಳಂತೆ ಮಾದಕ ದ್ರವ್ಯದ ಜಾಲದಲ್ಲಿ ಸಿಲುಕಿರುವ ಅದೆಷ್ಟು ಬಾಲಕಿಯರು ಮಂಗಳೂರು ನಗರದಲ್ಲಿ ಇರಬಹುದು.
ಮಗಳ ಸ್ಥಿತಿ ಇನ್ಯಾರಿಗೂ ಬರಲು ಬಿಡೊಲ್ಲ, ಮಾದಕದ್ರವ್ಯ ಪಿಡುಗಿನ ವಿರುದ್ಧ ಹೋರಾಡುವುದಾಗಿ ತಂದೆ ಗುರುರಾಜ ಉಪಾಧ್ಯಾಯ ಹೇಳಿದ್ದಾರೆ. ಈ ಪಿಡುಗಿಗೆ ಇನ್ನಷ್ಟು ಜೀವಗಳು ಬಲಿಯಾಗುವ ಮೊದಲು ಸಾರ್ವಜನಿಕರು ಆಡಳಿತಗಾರರಿಗೆ ಬಿಸಿ ಮುಟ್ಟಿಸಬೇಕಿದೆ.
 ಗಸ್ತು ಪಡೆ ಏನು ಮಾಡುತ್ತಿದೆ?
ಒಂದೂವರೆ ವರ್ಷದ ಹಿಂದೆ ಮಾದಕ ದ್ರವ್ಯ ಜಾಲಕ್ಕೆ ಸಿಲುಕಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಅಸ್ವಸ್ಥ ಸ್ಥಿತಿಯಲ್ಲಿ  ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸಿಕ್ಕಿದ್ದಳು. ಈ ಘಟನೆಯ ಬಳಿಕ ಪ್ರತಿ ಕಾಲೇಜು ಆವರಣದಲ್ಲಿ ಸಿವಿಲ್ ಡ್ರೆಸ್‌ನಲ್ಲಿ ಪೊಲೀಸ್ ಕಾವಲು ಪಡೆ ನಿಯೋಜಿಸಲಾಗುತ್ತದೆ ಎಂದು ಆಗಿನ ಪೊಲೀಸ್ ಕಮೀಷನರ್ ಸಿಮಂತ್ ಕುಮಾರ್ ಸಿಂಗ್ ತಿಳಿಸಿದ್ದರು. ಹಾಗಾದರೆ ನಿಜಕ್ಕೂ ಅವರ ಗಸ್ತು ಪಡೆ ಏನು ಮಾಡುತ್ತಿದೆ? ನಗರದಲ್ಲಿ ಮೂರ‍್ನಾಲ್ಕು ವರ್ಷಗಳಿಂದೀಚೆಗೆ ಡ್ರಗ್ಸ್ ಮಾಫಿಯಾ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ನಗರದ ಪ್ರಮುಖ ಕಾಲೇಜುಗಳು, ಕಾಲೇಜು ಪರಿಸರದ ಗೂಡಂಗಡಿಗಳು, ಕದ್ರಿ ಪಾರ್ಕ್, ಬಾವುಟಗುಡ್ಡೆ ಪಾರ್ಕ್ ಸುತ್ತಮುತ್ತಲಿನ ಪ್ರದೇಶ, ಬಂದರ್ ಪ್ರದೇಶ, ಹತ್ತಿರದ ಕಾಟಿಪಳ್ಳ, ಕೃಷ್ಣಾಪುರ ಹಾಗೂ ಬೆಂಗ್ರೆಯಲ್ಲಿ ಅಕ್ರಮ ಮಾದಕ ದ್ರವ್ಯ ವ್ಯವಹಾರದ ಕೇಂದ್ರಗಳಿವೆ ಎಂಬ ಮಾಹಿತಿಯನ್ನು ಆಫ್ ದಿ ರಿಕಾರ್ಡ್ ಪೊಲೀಸರೇ ಕೊಡುತ್ತಾರೆ.
ಆದರೆ ವ್ಯವಹಾರಕ್ಕೆ ಕಡಿವಾಣ ಹಾಕಿದ್ದು ಕಂಡು ಬರುವುದಿಲ್ಲ. ಎಲ್ಲೋ ಅಪರೂಪಕ್ಕೊಮ್ಮೆ ಕಾರ್ಯಾಚರಣೆ ನಡೆಸಿದ್ದು ವರದಿಯಾಗುತ್ತದೆ ಅಷ್ಟೇ. ಮಾದಕ ದ್ರವ್ಯ ಜಾಲದ ಮೂಲ ಭೇದಿಸುವುದು ಪೊಲೀಸ್ ವ್ಯವಸ್ಥೆಗೆ ಈ ವರೆಗೂ ಸಾಧ್ಯವೇ ಆಗಿಲ್ಲ. ಕನಿಷ್ಠ ನಿಯಂತ್ರಣದ ಮಾರ್ಗೋಪಾಯದತ್ತಲೂ ಪೊಲೀಸ್ ಅಧಿಕಾರಿಗಳು ಜಾಗೃತ ಹೆಜ್ಜೆ ಇಟ್ಟಿಲ್ಲ ಎಂಬುದಕ್ಕೆ ಸ್ನೇಹಾಳ ಸಾವು ಸಾಕ್ಷಿಯಾಗುತ್ತದೆ.
ಇಲಾಖೆಗೆ ಬರುವ ಮಾಮೂಲಿ ಡ್ರಗ್ಸ್ ಮಾಫಿಯಾ ನಗರದಲ್ಲಿ ಆಳವಾಗಿ ಬೇರೂರಲು ಬಲವಾದ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.ವಿದ್ಯಾರ್ಥಿಗಳು ಡ್ರಗ್ಸ್ ಜಾಲಕ್ಕೆ ಸಿಲುಕದಂತೆ ತಡೆಯುವಲ್ಲಿ ಪೊಲೀಸರಷ್ಟೇ ಹೊಣೆಗಾರಿಕೆ  ಪೋಷಕರು ಮತ್ತು ವಿದ್ಯಾಸಂಸ್ಥೆಗಳದ್ದೂ ಆಗಿದೆ. ಇವರ ಹೊಣೆಗಾರಿಕೆ ಇನ್ನೂ ಹೆಚ್ಚಿನದು. ನಗರದ ಶಂಕಿತ ಡ್ರಗ್ಸ್ ಕೇಂದ್ರಗಳಿಗೆ ನಿರಂತರ ಪೊಲೀಸ್ ದಾಳಿ ನಡೆದಲ್ಲಿ ಈ ಪಿಡುಗು ಕನಿಷ್ಠ ನಿಯಂತ್ರಣಕ್ಕೆ ಬರಬಹುದು.
ಶಂಕಿತ ಪಬ್, ಮಾಲ್‌ಗಳತ್ತಲೂ ಪೊಲೀಸರು ಗಮನ ಹರಿಸಿದ್ದಾದರೆ ಡ್ರಗ್ಸ್ ಮಾಫಿಯಾವನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯ. ಪೊಲೀಸ್ ಇಲಾಖೆಯಲ್ಲಿ ಮಾದಕ ದ್ರವ್ಯ ವ್ಯವಹಾರದ ನಿಯಂತ್ರಣಕ್ಕಾಗಿಯೇ ಪ್ರತ್ಯೇಕ ಘಟಕ ಇದೆ. ಆದರೆ ಅದಕ್ಕೆ ಶಕ್ತಿ ತುಂಬುವ ಪ್ರಾಮಾಣಿಕ ಕೆಲಸ ಆಗಬೇಕಷ್ಟೇ. ಸ್ನೇಹಾಳಂತೆ ಇನ್ನಷ್ಟು ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ಬರುವುದನ್ನು ತಪ್ಪಿಸಲು ಪೊಲೀಸರಿಂದ, ಆಡಳಿತಗಾರರಿಂದ ಸಾಧ್ಯವಿಲ್ಲ ಎಂದಾದರೆ ಜನಸಾಮನ್ಯರ ಪಾಡು ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ

No comments:

Post a Comment