Friday, February 22, 2013

ಇದು ಸಾಂಸ್ಕೃತಿಕ ಎಚ್ಚರದ ಸಂಕೇತ


SANATH KUMAR BELAGALI 

ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದೆ. ಈ ನಾಡನ್ನು ಹಿಂದುತ್ವದ ಪ್ರಯೋಗ ಶಾಲೆಯ ನ್ನಾಗಿ ಮಾಡಲು ಆರೆಸ್ಸೆಸ್ ಅವಿರತ ಹುನ್ನಾರ ನಡೆಸಿದೆ. ಈ ನಿಟ್ಟಿನಲ್ಲಿ ಪಠ್ಯ ಪುಸ್ತಕಗಳ ಚಡ್ಡೀಕರಣದ ಯತ್ನವೂ ನಡೆದಿದೆ. ಸಾಮಾಜಿಕ ಜೀವನವನ್ನು ಆಕ್ರಮಿಸಿಕೊಳ್ಳಲು ಕೋಮುವಾದ ಸಜ್ಜಾಗಿ ನಿಂತಿದೆ. ಇಂಥ ಸನ್ನಿವೇಶದಲ್ಲೂ ಪ್ರಜ್ಞಾವಂತರು, ಶಾಂತಿ ಪ್ರಿಯರು ನಿರಾಶರಾಗಬೇಕಿಲ್ಲ ಎಂಬ ಸಂದೇಶವನ್ನು ವಿಜಾಪುರದಲ್ಲಿ ನಡೆದ 79ನೆ ಕನ್ನಡ ಸಾಹಿತ್ಯ ಸಮ್ಮೇಳನ ನೀಡಿದೆ. ಸಮ್ಮೇಳನಾಧ್ಯಕ್ಷ ಕೋ.ಚೆನ್ನಬಸಪ್ಪನವರ ಅಧ್ಯಕ್ಷ ಭಾಷಣದಿಂದ ಹಿಡಿದು ಕೊಟ್ಟಕೊನೆಯ ಗೋಷ್ಠಿಯವರೆಗೂ ಸಹಬಾಳ್ವೆಯ ಸೌಹಾರ್ದ ತೆಯ ತುಡಿತ ಸ್ಪಷ್ಟವಾಗಿ ಕಂಡು ಬಂತು. ನಾಡಿನ ಚಿಂತಕರ ಈ ಆಶಯಕ್ಕೆ ಲಕ್ಷಾಂತರ ಜನರೂ ಸ್ಪಂದಿಸಿದ್ದು ಹೆಮ್ಮೆಯ ಸಂಗತಿ.ನನ್ನ ತವರೂರಲ್ಲಿ ಸಮ್ಮೇಳನ ನಡೆಯುತ್ತಿದೆ ಎಂಬ ಉತ್ಸಾಹದಿಂದಲೇ ವಿಜಾಪುರಕ್ಕೆ ಹೋಗಿದ್ದ ನನಗೆ ನಿರಾಶೆಯಾಗಲಿಲ್ಲ. ಸಮ್ಮೇಳನ ನಡೆದ ಸೈನಿಕ ಶಾಲೆಯ ಮುಂಭಾಗದಲ್ಲಿ ಹಾಗೂ ರಸ್ತೆಗಳಲ್ಲಿ ಸಮ್ಮೇಳನಕ್ಕೆ ಶುಭ ಕೋರುವ ನೆಪದಲ್ಲಿ ಕಟೌಟ್‌ಗಳಾಗಿ ನಿಂತಿದ್ದ ಸ್ಥಳೀಯ ಚಿಲ್ಲರೆ ರಾಜಕಾರಣಿಗಳ ಬಗ್ಗೆ ಕೊಂಚ ಬೇಸರವಾಯಿತು.
ಈ ಅಸಹ್ಯ ಮುಖಗಳ ಬದಲಾಗಿ ನಗರವನ್ನು ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಬಸವಣ್ಣ, ನಿಸಾರ್, ಶರೀಫ್ ಸಾಹೇಬ್, ಕಿಟೆಲ್‌ರಂಥ ನಾಡಿನ ಹೆಮ್ಮೆಯ ಕಣ್ಮಣಿಗಳ ಭಾವಚಿತ್ರಗಳಿಂದ ಅಲಂಕರಿಸಿದ್ದರೆ ಚೆನ್ನಾಗಿರುತ್ತಿತ್ತು. ಇನ್ನು ಮುಂದಾದರೂ ಇಂಥ ಅಸಹ್ಯಗಳಿಗೆ ಸಾಹಿತ್ಯ ಪರಿಷತ್ತು ಕಡಿವಾಣ ಹಾಕಬೇಕಾಗಿದೆ.ಅದೇನೇ ಇರಲಿ ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಭಿನ್ನವಾಗಿತ್ತು. ‘ಇದು ಬಂಡಾಯ ಸಮ್ಮೇಳನದ ನೆನಪನ್ನು ತರುತ್ತಿದೆ’ ಎಂದು ರಹಮತ್ ತರೀಕೆರೆ ನನ್ನೆದುರು ಹೇಳಿದ ಮಾತು ಅತಿಶಯೋಕ್ತಿ ಯೆನಿಸಲಿಲ್ಲ. 
ಸಮಾಜ ಜೀವನದ ಎಲ್ಲವನ್ನು ಹಿಂದುತ್ವಮಯಗೊಳಿಸುವ ಸಂಘಪರಿವಾರದ ಹುನ್ನಾರ ಇಲ್ಲೂ ನಡೆಯಿತು. ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ಕುಬುಸದ ಖಣ, ಅರಿಸಿನ ಕುಂಕುಮ ಒಳಗೊಂಡ ಉಡಿ ತುಂಬುವ ಕಾರ್ಯಕ್ರಮವೊಂದನ್ನು ಆರೆಸ್ಸೆಸ್ ಪ್ರೇರಿತ ಮಹಿಳೆಯರ ಗುಂಪೊಂದು ಅಯೋಜಿಸಿತ್ತು. ಸಮ್ಮೇಳನದ ಸ್ವಾಗತ ಸಮಿತಿಯೂ ಅದಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅದಕ್ಕೆ ಅವಕಾಶ ನೀಡಲಿಲ್ಲ. ‘ಇಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಖಡಕ್ ಆಗಿ ಹೇಳಿಬಿಟ್ಟರು.
ಸಮ್ಮೇಳನದ ಆರಂಭದ ದಿನ ಈ ಮಹಿಳೆಯರು ಪ್ರತಿಭಟಿಸಿದಾಗಲೂ ಹಾಲಂಬಿ ಮಣಿಯಲಿಲ್ಲ. “ಬೇಕಿದ್ದರೆ ಪುಸ್ತಕಗಳನ್ನು ಹಂಚಿ ಯಾವುದೇ ಧರ್ಮದ ಕಾರ್ಯಕ್ರಮಕ್ಕೆ ನಾನು ಅವಕಾಶ ಕೊಡುವುದಿಲ್ಲ” ಎಂದು ಬಿಟ್ಟರು. ಅಲ್ಲಿಗೆ ಕೇಸರಿ ಪಡೆಗಳು ಮತ್ತೆ ಬಾಲ ಬಿಚ್ಚಲಿಲ್ಲ. ಇನ್ನು ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದ ಕೋ.ಚೆನ್ನಬಸಪ್ಪನವರು ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವ ವಿಶ್ವವಿದ್ಯಾಲಯಕ್ಕೆ ಟಿಪ್ಪುಸುಲ್ತಾನ್ ಹೆಸರಿಡುವುದಕ್ಕೆ ವಿರೋಧಿಸುವವರನ್ನು ತರಾಟೆಗೆ ತೆಗೆದುಕೊಂಡರು. ಮತಾಂತರದ ಬಗ್ಗೆ ಮಾತಾಡಿದ ಅವರು, “ಯಾವುದೇ ವ್ಯಕ್ತಿ ತನಗೆ ಬೇಕಾದ ಧರ್ಮವನ್ನು ಸೇರಬಹುದು. ಅದು ಸಂವಿಧಾನಾತ್ಮಕ ಹಕ್ಕು” ಎಂದು ಬಿಟ್ಟರು. ಅಲ್ಲಿಗೆ ಚಡ್ಡಿಗಳಿಗೆ ಮತ್ತೆ ಮುಖಭಂಗವಾಯಿತು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಡವಾಗಿ ಆಗಮಿಸಿ ಸರಕಾರದ ಸಾಧನೆಗಳ ಪಟ್ಟಿ ಮಾಡಿ ಹೇಳಿದರು. ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತಾಡಿದಂತೆ ಅವರು ಮಾತಾಡಿದರು. ಆಗ ಅದೇ ವೇದಿಕೆಯಲ್ಲಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಪರಿಷತ್ತಿನ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತಾಡಿ, “ಸಾಹಿತ್ಯ  ಸಮ್ಮೇಳನದ ವೇದಿಕೆ ಅಂದರೆ ಸರಕಾರದ ಪರವಾಗಿ ಶಂಕ ಊದುವ ವೇದಿಕೆಯಲ್ಲ.  ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ವೇದಿಕೆಯೂ ಅಲ್ಲ. ರಾಜಕಾರಣಿಗಳು ಸಮ್ಮೇಳನಕ್ಕೆ ಬಂದರೆ ಸಾಹಿತ್ಯ, ಸಂಸ್ಕೃತಿ, ನಾಡು ನುಡಿಯ ಕುರಿತು ಮಾತ್ರ ಮಾತಾಡಬೇಕು” ಎಂದು ಎಚ್ಚರಿಕೆ ನೀಡಿದರು.
ಈ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಗಳಲ್ಲಿ ಮಾತಾಡಿದವರೂ ನಕಲಿ ಸಂಸ್ಕೃತಿ ರಕ್ಷಕರ ವಿರುದ್ಧ ಕೆಂಡಗಾರಿದರು. ‘ವರ್ತಮಾನದ ತಲ್ಲಣಗಳು’ ಎಂಬ ಗೋಷ್ಠಿಯಲ್ಲಿ ಮಾತಾಡಿದ ನಮ್ಮ ನಡುವಿನ ಅಪರೂಪದ ಚಿಂತಕ ಬಂಜಗೇರಿ ಜಯಪ್ರಕಾಶ್ “ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದು ಕುವೆಂಪು ಹೇಳಿದರೆ ಕರಾವಳಿ ಜಿಲ್ಲೆಗಳಲ್ಲಿ ನೈತಿಕ ಪೊಲೀಸರು ಪಬ್‌ಗಳಲ್ಲಿ ಕುಳಿತ, ಕಾರುಗಳಲ್ಲಿ ಓಡಾಡುವ ಜೋಡಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಬೇರೆ ಕೋಮಿನವರೊಂದಿಗೆ ಹಿಂದೂ ಹೆಣ್ಣು ಮಕ್ಕಳಿದ್ದರೆ ಥಳಿಸುವ ಹೀನಕೃತ್ಯಕ್ಕಿಳಿದಿದ್ದಾರೆ. ಈ ಕಪಟ ಸಂಸ್ಕೃತಿ ರಕ್ಷಕರ ವಿರುದ್ಧ ಸಾಹಿತ್ಯ ಸಮ್ಮೇಳನ ಧ್ವನಿ ಎತ್ತಬೇಕಾಗಿದೆ” ಎಂದರು.
ಇದೇ ಗೋಷ್ಠಿಯಲ್ಲಿ ಮಾತಾಡಿದ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಕೆ.ನೀಲಾ, 1925ರಲ್ಲಿ ಜನ್ಮ ತಾಳಿದ ಆರೆಸ್ಸೆಸ್ ಸನಾತನ ಪಾಳೆಗಾರಿಕೆ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗುವ ಹುನ್ನಾರ ನಡೆಸಿದೆ. ಜನಸಾಮಾನ್ಯರು ನೆಮ್ಮದಿಯಿಂದ ಬದುಕುಲಾಗದಂಥ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಮಹಿಳೆಯ ಮೇಲೆ ಅತ್ಯಾಚಾರಕ್ಕೆ  ಮಹಿಳೆಯೇ ಕಾರಣ ಎಂದು ಇವರ ನಾಯಕ ಭಾಗವತ್ ಹೇಳುತ್ತಿದ್ದಾನೆ” ಎಂದು ತರಾಟೆಗೆ ತೆಗೆದುಕೊಂಡರು.
‘ವರ್ತಮಾನದ ಆರ್ಥಿಕ ಚಲನೆ’ಯ ಕುರಿತು ಮಾತಾಡಿದ ಕರ್ನಾಟಕ ಜನಶಕ್ತಿಯ ಡಾ. ವಾಸು, ‘ನಮ್ಮ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳನ್ನು ಜಾಗತಿಕ ಮಾರುಕಟ್ಟೆ ಶಕ್ತಿಗಳು ನಿಯಂತ್ರಿಸುತ್ತಿವೆ’ ಎಂದರು. ನಾಡಿನ ಖ್ಯಾತ ವಿಮರ್ಶಕ ನಟರಾಜ್ ಹುಳಿಯಾರ್ ಮಾತಾಡಿ, ‘ಇಂದು ಧರ್ಮ ಕೂಡ ಮಾರುಕಟ್ಟೆಯ ಸರಕಾಗಿದೆ’ ಎಂದರು. ಇನ್ನೊಂದು ಗೋಷ್ಠಿಯಲ್ಲಿ ಮಾತಾಡಿದ ಸಾಹಿತಿ ಬಸವರಾಜ ಸಬರದ ಅವರು, ಗೋಹತ್ಯೆ ನಿಷೇಧ ಮಾಡಬೇಕೆನ್ನುವ ರಾಜ್ಯ ಸರಕಾರದ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಸಮುದಾಯದ ಆಹಾರ ಪದ್ಧತಿಯಲ್ಲಿ ಅಣಕಿಸುವ ಅಧಿಕಾರ ಯಾರಿಗೂ ಇಲ್ಲ ಎಂದರು.
ಸಮ್ಮೇಳನದ ಕೊನೆಯ ದಿನ ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರು ಮಾತಾಡಿ, ‘ಬಿಜೆಪಿ ಸರಕಾರದ ಮುಜರಾಯಿ ಸಚಿವರು ಗಂಗಾಜಲವನ್ನು ತರಿಸಿ ನಮ್ಮ ದೇವಾಲಯಗಳಲ್ಲಿ ಹಂಚಿಸಿದರು. ಗಂಗಾಜಲವೇ ಏಕೆ ಪವಿತ್ರ? ನಮ್ಮ ಊರಿನ ಹಳ್ಳದ ನೀರು ಅದಕ್ಕಿಂತ ಪವಿತ್ರ ಎಂಬ ಭಾವನೆ ನಮ್ಮಲ್ಲಿ ಬರಬೇಕು’ ಸ್ಪಷ್ಟವಾಗಿ ಹೇಳಿದರು. ಇದೇ ಗೋಷ್ಠಿಯಲ್ಲಿ ಮಾತಾಡಿದ ಗದುಗಿನ ತೋಂಟದಾರ್ಯ ಶ್ರೀಗಳು ಬಿಜಾಪುರದ ಆದಿಲಶಾಹಿಗಳ ಸೌಹಾರ್ದ ಕಾಳಜಿಯನ್ನು ನೆನಪಿಸಿದರು.
ಸಮ್ಮೇಳನದ ಮೂರು ದಿನಗಳ ಗೋಷ್ಠಿಗಳಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಉಪನ್ಯಾಸಕರ ಭಾಷಣಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದರು. ಆದರೆ ಕೋ.ಚೆ, ಬರಗೂರು, ಬಂಜಗೆರೆ, ಡಾ.ಸಿದ್ದನಗೌಡ ಪಾಟೀಲ, ಕೆ.ನೀಲಾ ಅಂಥ ಕೆಲವರ ಭಾಷಣಗಳಿಗೆ ಮಾತ್ರ ಚಪ್ಪಾಳೆಯ ಪ್ರತಿಕ್ರಿಯೆ ಬರುತ್ತಿತ್ತು. ಕೆಲವರು ತುಂಬ ಅಭ್ಯಾಸಪೂರ್ಣವಾಗಿ ಮಾತಾಡಿದರೂ ಇವರ ಮಾತುಗಳು ಜನರನ್ನು ತಲುಪಲಿಲ್ಲ. ತಲುಪಿಸುವ ಪ್ರಯತ್ನವನ್ನು ಉಪನ್ಯಾಸಕರೂ ಮಾಡಲಿಲ್ಲ. ಜನ ಚಳವಳಿಯ ನಡುವಿನಿಂದ ಬಂದವರಿಗೆ ಸಹಜವಾಗಿ ಸಂವಹನ ಕಲೆ ಸಿದ್ಧಸಿರುತ್ತದೆ ಎಂಬುದಕ್ಕೆ ಈ ಗೋಷ್ಠಿಗಳು ಸಾಕ್ಷಿಗಳಾಗಿದ್ದವು.

No comments:

Post a Comment