Thursday, February 7, 2013

ಬಾಬರಿ ಮಸೀದಿ ಧ್ವಂಸ ಪ್ರಕರಣ;ಸುಪ್ರೀಂನಿಂದ ಸಿಬಿಐ ತರಾಟೆಗೆ



ಹೊಸದಿಲ್ಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಇತರರು ‘ರಾಷ್ಟ್ರೀಯ ಅಪರಾಧ’ದ ತಪ್ಪೆಸಗಿದ್ದಾರೆಂದು ಸಿಬಿಐನ ಹೇಳಿಕೆ ಸಲ್ಲಿಕೆಗೆ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಪ್ರಕರಣವನ್ನು ನ್ಯಾಯಾಲಯಗಳು ತೀರ್ಮಾನಿಸುವವರೆಗೂ ಇಂತಹ ಭಾಷೆಗಳನ್ನು ಬಳಕೆ ಮಾಡಬಾರದು ಎಂದು ಸಿಬಿಐನ್ನು ತರಾಟೆಗೆ ತೆಗೆದುಕೊಂಡಿದೆ.
ಇದೊಂದು ರಾಷ್ಟ್ರೀಯ ಅಪರಾಧ ಅಥವಾ ರಾಷ್ಟ್ರೀಯ ಮಹತ್ವದ ವಿಚಾರವಾಗಿದೆ ಎಂದು ದಯವಿಟ್ಟು ಹೇಳಬೇಡಿ. ಅದನ್ನು ನಾವಿನ್ನೂ ನಿರ್ಧರಿಸಬೇಕಿದೆ. ನಾವು ಅಥವಾ ಇತರೆ ವಿಚಾರಣಾ ನ್ಯಾಯಾಲಯಗಳು ಇದನ್ನೋ ಅಥವಾ ಬೇರೆಯದ್ದನ್ನೋ ನಿರ್ಧರಿಸಬಹುದು. ಅಲ್ಲಿಯವರೆಗೂ ನೀವು ಇಂತಹ ಹೇಳಿಕೆಗಳನ್ನು ಸಲ್ಲಿಸಬಾರದು ಎಂದು ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಪೀಠ ಸಿಬಿಐಗೆ ಎಚ್ಚಿರಿಸಿತು.
ಬಾಬರಿ ಮಸೀದಿ ಧ್ವಂಸ ಪ್ರಕರಣದ ಪಿತೂರಿಯ ಹಿಂದೆ ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಮುರಳಿ ಮನೋಹರ್ ಜೋಷಿಯವರ ಮೇಲೆ ಹೊರಿಸಿದ್ದ ಆರೋಪಗಳನ್ನು ವಿಶೇಷ ಸಿಬಿಐ ನ್ಯಾಯಾಲಯ ಮತ್ತು ಅಲಹಾಬಾದ್ ಹೈಕೋರ್ಟ್ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಿಬಿಐ ಪರ ವಕೀಲ ಪಿ.ಪಿ.ರಾವ್ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ರಾಮ ರಥ ಯಾತ್ರೆಯ ಪ್ರತಿಬಿಂಬದ ಧ್ವಂಸ ಪ್ರಕರಣದ ಪಿತೂರಿಯ ಹಿಂದೆ ಬಿಜೆಪಿ ಮತ್ತು ವಿಎಚ್‌ಪಿ ನಾಯಕರಿದ್ದು, ಇದೊಂದು ರಾಷ್ಟ್ರೀಯ ಅಪರಾಧದ ಪ್ರಕರಣ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.
ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬ ಮಾಡಿದ್ದಕ್ಕೆ ಮತ್ತು ಎರಡೂ ನ್ಯಾಯಾಲಯಗಳ ಆದೇಶದ ವಿರುದ್ಧ ವಿಳಂಬವಾಗಿ ಅರ್ಜಿ ಸಲ್ಲಿಸಿದ್ದಕ್ಕೆ ಪೀಠ ವಿಚಾರಣೆಯ ವೇಳೆ ಸಿಬಿಐನ್ನು ತರಾಟೆಗೆ ತೆಗೆದುಕೊಂಡಿತು.
ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಕರಣವಾಗಿದೆ ಎಂದು ನೀವು ಹೇಳಿದ್ದೀರಿ. ಹಾಗಿದ್ದ ಮೇಲೆ ಕೋರ್ಟ್ ದಾಖಲೆಗಳ ತರ್ಜುಮೆಗೆ ಸಾಕಷ್ಟು ದಿನಗಳನ್ನು ತೆಗೆದುಕೊಂಡಿದ್ದು ಮತ್ತು ಮೂರು ತಿಂಗಳ ನಂತರ ಎರಡೂ ನ್ಯಾಯಾಲಯಗಳ ಆದೇಶಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುವುದು ಕೂಡಾ ಪ್ರಾಮುಖ್ಯವಾಗಿದೆ ಎಂದು ನೀವು ಹೇಳುತ್ತೀರಾ ಎಂದು ಪೀಠ ಪ್ರಶ್ನಿಸಿತು.
 ತನ್ನ ನಿಲುವನ್ನು ವಿವರಿಸಲು ಹೊಸ ಅಫಿದವಿತ್ ಸಲ್ಲಿಸಲು ಅವಕಾಶ ನೀಡಬೇಕೆಂಬ ಸಿಬಿಐ ಮನವಿಯನ್ನು ತಿರಸ್ಕರಿಸಿದ ಪೀಠ, ಯಾವುದೇ ಅಫಿದವಿತ್ ಅಥವಾ ಪೂರಕ ಅಂಶಗಳನ್ನು ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿತು.

No comments:

Post a Comment