Saturday, February 23, 2013

ಫೇಸ್‌ಬುಕ್, ಮೊಬೈಲ್‌ಗೆ ನಿರ್ಬಂಧ ಹೇರಿ; ಧರ್ಮಾಧಿಕಾರಿ ಸಮಿತಿ ಶಿಫಾರಸು; ಹೆಣ್ಣು ಮಕ್ಕಳ ರಕ್ಷಣೆ



ಮುಂಬೈ: ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ತಾಣಗಳು ಮತ್ತು ಮೊಬೈಲ್‌ಗಳು ಹದಿಹರೆಯದವರನ್ನು ನೈತಿಕವಾಗಿ ಭ್ರಷ್ಟಗೊಳಿಸುವುದರಿಂದ ಅವುಗಳ ಮೇಲೆ ನಿರ್ಬಂಧ ವಿಧಿಸಬೇಕೆಂದು ನ್ಯಾಯಮೂರ್ತಿ ಧರ್ಮಾಧಿಕಾರಿ ಸಮಿತಿಯು ರಾಜ್ಯ ಸರಕಾರಕ್ಕೆ ನೀಡಿರುವ ತನ್ನ ಮೂರನೆ ಮಧ್ಯಾಂತರ ವರದಿಯಲ್ಲಿ ಸಲಹೆ ನೀಡಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳಲು ಅಗತ್ಯ ಶಿಫಾರಸುಗಳ ವರದಿಯೊಂದನ್ನು ನೀಡಲು ಮಹಾರಾಷ್ಟ್ರ ಸರಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್ ಧರ್ಮಾಧಿಕಾರಿ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು.
2013ರ ಜ. 16ರಂದು ಸಮಿತಿ ನೀಡಿದ್ದ ಮೂರು ಮಧ್ಯಾಂತರ ವರದಿಗಳ ಜತೆಗೆ ಅದರ 31 ಶಿಫಾರಸುಗಳನ್ನು ರಾಜ್ಯ ಸರಕಾರವು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ಮತ್ತು ನ್ಯಾಯಮೂರ್ತಿ ಅನೂಪ್ ಮೆಹ್ತಾರಿದ್ದ ವಿಭಾಗೀಯ ಪೀಠಕ್ಕೆ ಇಂದು ಸಲ್ಲಿಸಿತು.
ಮಹಿಳಾ ರಕ್ಷಣೆಗೆ ಸಂಬಂಧಿಸಿದಂತೆ ಜಿಮ್ ಮತ್ತಿತರೆಡೆ ಮಹಿಳೆಯರಿಗೆ ತರಬೇತಿ ನೀಡಲು ಪುರುಷರ ಬದಲು ಮಹಿಳೆಯರನ್ನೇ ನೇಮಕ ಮಾಡುವುದರತ್ತ ಗಂಭೀರವಾದ ಚಿಂತನೆ ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ.
ಮರಾಠಿ ಭಾಷೆಯಲ್ಲಿರುವ ನ್ಯಾ. ಧರ್ಮಾಧಿಕಾರಿ ವರದಿಯು, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ತಾಣಗಳಲ್ಲಿ ಮತ್ತು ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ಮತ್ತು ಅಸಭ್ಯ ಸಂಭಾಷಣೆ, ಎಸ್ಸೆಮ್ಮೆಸ್ ಹಾಗೂ ಛಾಯಾಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಬೇಕೆಂದು ಹೇಳಲಾಗಿದೆ.
ನೈತಿಕವಾಗಿ ಅಧಃಪತನಗೊಳ್ಳುವ ಪ್ರವೃತ್ತಿ ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಎಂಬುದು ಇತ್ತೀಚಿನ ವರದಿಗಳಿಂದ ಸಾಬೀತಾಗಿರುವುದರಿಂದ ಇಂತಹ ನಿರ್ಬಂಧಗಳು ಅಗತ್ಯವಾಗಿದೆ ಎಂದು ವರದಿ ಹೇಳಿದೆ.
ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ನ್ಯಾಯಾಲಯಗಳಿಂದ ಶಿಕ್ಷೆಗೊಳಗಾದವರ ಹೆಸರು ಮತ್ತು ಅವರು ಮಾಡಿದ ಅಪರಾಧದ ವಿವರವನ್ನು ಪ್ರಕಟಿಸಬೇಕು ಮತ್ತು ಅವುಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮಹಿಳಾ ದೌರ್ಜನ್ಯದ ಶಿಕ್ಷಗೊಳಗಾಗುವವರ ಹೆಸರು ಮತ್ತು ವಿವರಗಳನ್ನು ಸ್ವತಂತ್ರವಾದ ವೆಬ್‌ಸೈಟ್, ಫೆಸ್‌ಬುಕ್ ಮತ್ತು ಟ್ವಿಟ್ಟರ್‌ನಂತಹ ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುವುದರಿಂದ ಇಂತಹ ಅಪರಾಧಗಳನ್ನು ತಡೆಗಟ್ಟಬಹುದು ಮತ್ತು ಮಹಿಳೆಯರಲ್ಲಿ ಈ ಕುರಿತು ಜಾಗೃತಿ ಮೂಡಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವಾಗ ಅದನ್ನು ನೋಡುತ್ತಾ ನಿಂತು ಸುಮ್ಮನಾಗುವ ಸಾಕ್ಷಗಳಿಗೂ ಶಿಕ್ಷೆ ನೀಡಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಮಹಿಳಾ ದೌರ್ಜನ್ಯದ ಘಟನೆಗಳು ನಡೆಯುವಾಗ ಸ್ಥಳದಲ್ಲಿರುವವರು ಕನಿಷ್ಠ ಪೊಲೀಸರಿಗಾಗಲೀ ಅಥವಾ ಸಹಾಯವಾಣಿಗಾಗಲೀ ಮಾಹಿತಿಯನ್ನು ನೀಡುವುದಿಲ್ಲ, ಅವರು ಕೇವಲ ಮೂಕ ಪ್ರೇಕ್ಷಕರಾಗಿರುತ್ತಾರೆ. ಇದು ಅಪರಾಧಿಗಳಿಗೆ ಸಹಾಯವಾಗುತ್ತದೆ. ಕಾನೂನಿನ ಪ್ರಕಾರ ಮೂಕ ಪ್ರೇಕ್ಷಕನಾಗಿರುವುದು ಕೂಡಾ ಅಪರಾಧವಾಗಿದೆ. ಅಂತಹ ವ್ಯಕ್ತಿಗಳನ್ನು ಕೂಡಾ ಅಪರಾಧಿಗಳೆಂದು ಪರಿಗಣಿಸಬೇಕು ಮತ್ತು ಅದಕ್ಕಾಗಿ ಕಾನೂನಿನಲ್ಲಿ ಅವಕಾಶ ಮಾಡಿಕೊಳ್ಳಬೇಕು ಎಂದು ಅದು ಹೇಳಿದೆ.
ಜಾಹೀರಾತುಗಳಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಪ್ರದರ್ಶಿಸುತ್ತಿರುವುದನ್ನು ನಿಷೇಧಿಸಬೇಕು. ಪಾಶ್ವಾತ್ಯ ದೇಶಗಳಲ್ಲಿದ್ದ ಈ ಪಿಡುಗು ನಮ್ಮ ದೇಶಕ್ಕೂ ಈಗ ಬಂದಿದೆ. ಅಲ್ಲದೆ, ಪುರುಷರನ್ನು ಕೂಡಾ ಅರೆನಗ್ನರನ್ನಾಗಿ ತೋರಿಸಲಾಗುತ್ತಿದೆ. ಇವುಗಳನ್ನು ನಿಷೇಧಿಸಲು ಕಾನೂನಿನಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಬೇಕಿದೆ ಎಂದು ಸಮಿತಿ ತನ್ನ ಮೂರನೆ ಮಧ್ಯಾಂತರ ವರದಿಯಲ್ಲಿ ಶಿಫಾರಸು ಮಾಡಿದೆ.

No comments:

Post a Comment