Friday, February 1, 2013

ಪತ್ರಕರ್ತ ಸೂರಿಂಜೆಯ ವಿರುದ್ಧ ಸಂಚು ರೂಪಿಸಿದ ಪೊಲೀಸರಿಗೆ ಶಿಕ್ಷೆಯಾಗಲಿಕೊನೆಗೂ ಪತ್ರಕರ್ತ ನವೀನ್ ಸೂರಿಂಜೆಯವರ ಮೇಲಿನ ಪ್ರಕರಣವನ್ನು ಹಿಂದೆಗೆಯಲು ಸರಕಾರ ಮನಸ್ಸು ಮಾಡಿದೆ. ಇದೇನೂ ಪತ್ರಕರ್ತರಿಗೆ ಮಾಡಿದ ಉಪಕಾರವಲ್ಲ. ಸರಕಾರ ತಾನು ಮಾಡಿದ ತಪ್ಪನ್ನು ತಿದ್ದಿಕೊಂಡಿದೆಯಷ್ಟೇ. ಆ ಮೂಲಕ ಇನ್ನೊಂದು ಮುಖಭಂಗವನ್ನು ಸರಕಾರ ತಪ್ಪಿಸಿಕೊಂಡಿದೆಯೆನ್ನಬಹುದು.  ಒಬ್ಬ ಪತ್ರಕರ್ತನ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆಯಲು ಸರಕಾರಕ್ಕೆ ಇಷ್ಟು ಸಮಯ ಹಿಡಿಯಿತು. ಆದರೆ ಈ ಸರಕಾರದ ಇತಿಹಾಸವನ್ನು ಬಿಡಿಸಿದರೆ, ಈ ಹಿಂದೆ ಹಲವು ದುಷ್ಕರ್ಮಿಗಳ ಮೇಲಿನ ಪ್ರಕರಣಗಳನ್ನು ಅತ್ಯಂತ, ಸಂತೋಷ ಹೆಮ್ಮೆಯಿಂದ ಹಿಂದೆಗೆದಿದೆ. ಈ ಹಿಂದೆ, ಕೋಮು ಗಲಭೆಯಲ್ಲಿ ಭಾಗವಹಿಸಿದ ಹಲವು ದುಷ್ಕರ್ಮಿಗಳನ್ನು, ಸಮಾಜ ವಿದ್ರೋಹದಲ್ಲಿ ತೊಡಗಿದ್ದ ಸಂಘಪರಿವಾರದ ಕಾರ್ಯಕರ್ತರನ್ನು ಸ್ವಾತಂತ್ರ ಯೋಧರೋ ಎಂಬ ರೀತಿಯಲ್ಲಿ ಸಂಪುಟ ಅವರ ಮೇಲಿದ್ದ ಪ್ರಕರಣಗಳನ್ನು ತೆಗೆದು ಹಾಕಿತ್ತು. ಇಂದು ಸಮಾಜದಲ್ಲಿ ಕೋಮು ಗಲಭೆ, ಕೋಮು ಪ್ರಚೋದನೆಗಳು ನಡೆದರೆ ಅವರನ್ನು ಪೊಲೀಸರು ಬಂಧಿಸಲು ಹಿಂದೇಟು ಹಾಕುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಕಾರಣ, ಎಲ್ಲ ಸಾಕ್ಷಾಧಾರಗಳೊಂದಿಗೆ ಬಂಧಿಸಿದರೂ ಸಂಪುಟದಲ್ಲಿ ಅವರ ಮೇಲಿನ ಪ್ರಕರಣಗಳನ್ನು ಹಿಂದೆಗೆದು ಕೊಳ್ಳಲಾಗುತ್ತದೆ. ಈ ಮೂಲಕ, ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಮುಖಭಂಗವುಂಟು ಮಾಡಲಾಗುತ್ತಿತ್ತು. ಹೀಗಿರುವಾಗ ಸಂಪುಟದಲ್ಲಿ ಪತ್ರಕರ್ತನ ಮೇಲಿನ ವೊಕದ್ದಮೆ ತೆಗೆದು ಸರಕಾರ ತನ್ನ ಮಾನವನ್ನು ಕಾಪಾಡಿಕೊಂಡಿದೆ ಎಂದಷ್ಟೇ ಹೇಳಬಹುದು.ಪತ್ರಕರ್ತ ನನ್ ಸೂರಿಂಜೆಯ ಪ್ರಕರಣ  ತೀರಾ ಭಿನ್ನವಾದುದು.
ಇಲ್ಲಿ ನವೀನ್ ಸೂರಿಂಜೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಒಂದೇ ಕಾರಣಕ್ಕೆ ಅವರ ಮೇಲೆ ಮೊಕದ್ದಮೆಯನ್ನು ಪೊಲೀಸರು ದಾಖಲಿಸಿದರು. ಒಂದು ರೀತಿಯಲ್ಲಿ, ನವೀನ್ ಸೂರಿಂಜೆಯ ಮೂಲಕ, ಹೋಮ್‌ಸ್ಟೇ ಪ್ರಕರಣದಲ್ಲಿ ತಮ್ಮ ತಪ್ಪು ಬಹಿರಂಗವಾಯಿತು ಎನ್ನುವ ಸೇಡಿಗೋಸ್ಕರ ಪೊಲೀಸರು ಕೇಸುಗಳನ್ನು ದಾಖಲಿಸಿದ್ದರು. ಸೂರಿಂಜೆಯನ್ನು ಎಷ್ಟು ಹೀನಾಯವಾಗಿ ನಡೆಸಿಕೊಂಡರೆಂದರೆ, ಅವರನ್ನು ಹೋಮ್‌ಸ್ಟೇಯ ಇತರ ಆರೋಪಿಗಳ ಪಟ್ಟಿಯಲ್ಲಿ ಸೇರಿಸಿ ಬಿಟ್ಟರು.
ಅಂದರೆ, ಮಹಿಳೆಯರ ಮೇಲೆ ಬರ್ಬರವಾಗಿ ದಾಳಿ ನಡೆಸಿದ ಸಂಘಪರಿವಾರದ ಆರೋಪಿಗಳ ಸಾಲಲ್ಲಿಯೇ ನವೀನ್ ಸೂರಿಂಜೆಯನ್ನೂ ನಿಲ್ಲಿಸಿದರು. ಹೋಮ್‌ಸ್ಟೇ ಪ್ರಕರಣವನ್ನು ತಪ್ಪಿಸುವುದಕ್ಕೆ ಪೊಲೀಸರಿಗೆ ಎಲ್ಲ ರೀತಿಯಲ್ಲೂ ಸಾಧ್ಯವಿತ್ತು. ಆದರೆ ಸಂಘಪರಿವಾರದ ಇಂತಹ ದಾಳಿಗಳು ನಡೆಯುವುದು ಪೊಲೀಸರ ಸಹಕಾರದೊಂದಿಗೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸತ್ಯ. ಹೋಮ್‌ಸ್ಟೇಯಲ್ಲಿ ದಾಳಿ ನಡೆಯುವಾಗ  ಅಲ್ಲಿ ಪೊಲೀಸರು ಉಪಸ್ಥಿತರಿದ್ದರು ಎನ್ನುವುದು ಮಾಧ್ಯಮಗಳ ಮೂಲಕ ಜಗಜ್ಜಾಹೀರಾಯಿತು.
ಹೆಣ್ಣು ಮಕ್ಕಳ ಮೇಲೆ ವಿಕೃತಕಾಮಿಗಳಂತೆ ಸಂಘಪರಿವಾರದ ಕಾರ್ಯಕರ್ತರು ಎರಗಿ ಬೀಳುವುದು ಮತ್ತು ಪೊಲೀಸರು ಆ ಕುರಿತಂತೆ ನಪುಂಸಕರಂತೆ ವರ್ತಿಸಿರುವುದೂ ನನ್ ಸೂರಿಂಜೆಯ ಮೂಲಕವೇ ದೇಶಾದ್ಯಂತ ತಿಳಿಯಿತು. ದುರದೃಷ್ಟವಶಾತ್, ಪೊಲೀಸರು ಈ ಘಟನೆಯನ್ನು ನಾಗರಿಕ ಜಗತ್ತಿನ ಮುಂದೆ ಇಟ್ಟ ಒಂದೇ ಕಾರಣಕ್ಕೆ ಸೂರಿಂಜೆಯ ಮೇಲೆ ಕೇಸು ಜಡಿದರು. ಹೈಕೋರ್ಟ್ ಸೂರಿಂಜೆಯ ಮೇಲೆ ಅನುಕಂಪ ವ್ಯಕ್ತಪಡಿಸಿದರೂ ಪೊಲೀಸರಿಗೆ ಸೂರಿಂಜೆಯನ್ನು ಪ್ರಕರಣದಿಂದ ಕೈಬಿಡುವ ಇಷ್ಟವಿರಲಿಲ್ಲ.
ಇದೇ ಸಂದರ್ಭದಲ್ಲಿ ಸಂಘಪರಿವಾರದ ಮುಖಂಡರೂ ಈ ಪ್ರಕರಣದಲ್ಲಿ ಪೊಲೀಸರ ಜೊತೆಗೆ ಕೈ ಜೋಡಿಸಿದರು. ಎಲ್ಲದರ ಪರಿಣಾಮವಾಗಿ ಸೂರಿಂಜೆ ಐದು ತಿಂಗಳಿಗೂ ಅಧಿಕ ಕಾಲ ಜೈಲಿನಲ್ಲಿರಬೇಕಾಯಿತು. ಪೊಲೀಸ್ ಇಲಾಖೆಗೂ ಸಂಘ ಪರಿವಾರಕ್ಕೂ ಇರುವ ಸಂಬಂಧ ಏನು ಎನ್ನುವುದನ್ನು ಕರಾವಳಿಯಲ್ಲಿ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.
ಪೊಲೀಸರು, ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮದ ಉದ್ಘಾಟನೆಯನ್ನೇ ಇಲ್ಲಿ ಸಂಘಪರಿವಾರದ ಮುಖಂಡ ಪ್ರಭಾಕರ ಭಟ್ ಮಾಡುತ್ತಾರೆಂದ ಮೇಲೆ, ಸಂಘ ಪರಿವಾರದ ಹಿಂಬಾಲಕರ ಕೃತ್ಯಗಳನ್ನು ನಮ್ಮ ಪೊಲೀಸರು ಸಮರ್ಥಿಸಿಕೊಳ್ಳದೇ ಇರು ತ್ತಾರೆಯೇ? ಸೂರಿಂಜೆಯ ಬಿಡುಗಡೆಯಿಂದ ಪ್ರಕರಣ ಮುಗಿದಂತಾಗುವುದಿಲ್ಲ. ಸೂರಿಂಜೆ ಪ್ರಕರಣದಲ್ಲಿ ಪೊಲೀಸರ ವರ್ತನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. 
ದೇಶದ ಎಲ್ಲ ಮಾಧ್ಯಮಗಳಲ್ಲೂ ಈ ಪ್ರಕರಣ ಚರ್ಚೆಗೊಳಗಾಗಿತ್ತು. ಕರ್ನಾಟಕ ತನ್ನ ಸಾಚಾತನವನ್ನು ಸಾಬೀತು ಮಾಡಬೇಕಾದರೆ, ಸೂರಿಂಜೆಯ ವಿರುದ್ಧ ಸುಳ್ಳು ಕೇಸು ದಾಖಲಿಸಿದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಾಗೆಯೇ ಹೋಮ್ ಸ್ಟೇ ಪ್ರಕರಣದಲ್ಲಿ ಆರೋಪಿಗಳ ಮೇಲೆ ತೆಗೆದುಕೊಂಡ ಕ್ರಮ ಏನನ್ನುವುದು ವಿಚಾರಣೆಗೆ ಒಳಪಡಬೇಕಾಗಿದೆ.
ಹೋಮ್‌ಸ್ಟೇ ಪ್ರಕರಣದಲ್ಲಿ ಮಹಿಳೆಯರು ಕೇವಲ ಹಲ್ಲೆಗೀಡಾದದ್ದು ಮಾತ್ರವಲ್ಲ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆದುದರಿಂದ, ಆರೋಪಿಗಳ ಮೇಲೆ ಬಲವಾದ ಮೊಕದ್ದಮೆಯನ್ನು ಹೂಡಬೇಕಾಗಿದೆ. ಕನಿಷ್ಠ ಜೀವಾವಧಿ ಶಿಕ್ಷೆಯಾದರೂ ಅವರಿಗೆ ದೊರಕಬೇಕಾಗಿದೆ.  ಹಾಗೆಯೇ ನವೀನ್ ಸೂರಿಂಜೆಯ ಪ್ರಕರಣ ಮತ್ತೊಮ್ಮೆ ಮರುಕಳಿಸದಂತೆ ಸರಕಾರ ಎಚ್ಚೆತ್ತುಕೊಳ್ಳಬೇಕು.
ಮಾಧ್ಯಮಗಳ ಬಾಯಿ ಮುಚ್ಚಿಸುವ ಪೊಲೀಸರ ಕೃತ್ಯಕ್ಕೆ ಕಡಿವಾಣ ಹಾಕಬೇಕು ಮಾತ್ರವಲ್ಲ, ಕರಾವಳಿಯಲ್ಲಿ ಪೊಲೀಸರಿಗೂ ಸಂಘಪರಿವಾರಕ್ಕೂ ಇರುವ ಸಂಬಂಧ ತನಿಖೆಗೊಳಗಾಗಬೇಕು. ದುಷ್ಕರ್ಮಿಗಳೊಂದಿಗೆ ಕೈಜೋಡಿಸುವ ಪೊಲೀಸರನ್ನು ಸರಿಪಡಿಸುವ ಕಡೆಗೆ ಮೊದಲು ಮನಮಾಡಬೇಕು. ಬಳಿಕವಷ್ಟೇ ನಾವು ಕರಾವಳಿಯ ಉಳಿದ ಅನೈತಿಕ ಕೃತ್ಯಗಳನ್ನು ತಡೆಯುವ ಬಗ್ಗೆ ಯೋಚಿಸಬಹುದಾಗಿದೆ.

No comments:

Post a Comment