Wednesday, February 6, 2013

ಫೇಸ್‌ಬುಕ್‌ನಲ್ಲಿ ಪ್ರಧಾನಿ, ಸಿಬಲ್ ವ್ಯಂಗ್ಯಚಿತ್ರ: ವ್ಯಕ್ತಿ ಬಂಧನ



 ಫೆಬ್ರವರಿ -06-2013

ಲಕ್ನೊ: ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕೆಂದ್ರದ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಮತ್ತು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್‌ರನ್ನು ಗುರಿಯಾಗಿಸಿಕೊಂಡು ಕೋಮು ಭಾವನೆ ಕದಡುವ ಮತ್ತು ಅವಹೇಳನಕಾರಿಯಾದ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಹರಿದಾಡಿಸಿದ್ದಕ್ಕೆ ಸಂಬಂಧಿಸಿದಂತೆ ಆಗ್ರಾ ಮೂಲಕ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಚೌಧರಿ ಎಂಬಾತನನ್ನು ಬಂಧಿಸಿ, ಆತನಿಂದ ಲ್ಯಾಪ್‌ಟಾಪ್, ಸಿಮ್ ಕಾರ್ಡ್, ಡಾಟಾ ಕಾರ್ಡ್‌ಗಳನ್ನು ವಶಪಡಿಸಿಕೊಳ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವರ ವಿರುದ್ಧ ಪ್ರಕರಣ ದಾಖಲಿಸುವುದು ಮತ್ತು ಬಂಧಿಸುವುದು ವಾಕ್ ಸ್ವಾತಂತ್ರದ ಹರಣ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ. ಆದರೆ ಸಂಜಯ್ ಚೌಧರಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್‌ರ ವಿರುದ್ಧ ಮಾಡಿರವ ಟೀಕೆ ಹಾಗೂ ಕೋಮು ಭಾವನೆ ಕದಡುವ ಮತ್ತು ಅವಹೇಳನಾತ್ಮಕವಾದ ಅಂಶಗಳನ್ನು ಆತ ಫೇಸ್‌ಬುಕ್ ಮೂಲಕ ರವಾನಿಸಿರುವುದು ಅತಿಸೂಕ್ಷ್ಮವಾಗಿದೆ ಎಂದು ಆಗ್ರಾದ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್‌ಚಂದ್ರ ದುಬೆ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕ್ರಮ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇಡೀ ಪ್ರಕರಣವನ್ನು ನಾವು ರಾಜಕೀಯ ದೃಷ್ಟಿಯಿಂದ ನೋಡಿಲ್ಲ. ಈ ವ್ಯಕ್ತಿ ಕೋಮು ಸಾಮರಸ್ಯ ಕದಡುವ ಮತ್ತು ಅವಹೇಳನಾತ್ಮಕವಾದ ಟೀಕೆಗಳನ್ನು ಫೇಸ್‌ಬುಕ್‌ನಲ್ಲಿ ಮಾಡಿರುವುದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುವುದನ್ನು ತಡೆಯಲು ನಾವು ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಶಾಲೆಯೊಂದರ ಅಧ್ಯಕ್ಷ ಹಾಗೂ ಸಿವಿಲ್ ಎಂಜಿನಿಯರ್ ಆಗಿರುವ ಸಂಜಯ್ ಚೌಧರಿ ತನ್ನ ಫೇಸ್‌ಬುಕ್‌ನಲ್ಲಿ ಪ್ರಧಾನಿ, ಕಪಿಲ್ ಸಿಬಲ್ ಮತ್ತು ಮುಲಾಯಂ ಸಿಂಗ್ ಯಾದವ್‌ರ ವ್ಯಂಗ್ಯಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಆತನನ್ನು ಬಂಧಿಸಲಾಗಿತ್ತು. ನಂತರ ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

No comments:

Post a Comment